ಶನಿವಾರ, ಆಗಸ್ಟ್ 17, 2019
24 °C
‍ಪಿಯು ಕಾಲೇಜುಗಳಲ್ಲಿ ನೀಗದ ಉಪನ್ಯಾಸಕರ ಕೊರತೆ

‘ಅತಿಥಿ’ಗಳೂ ಇಲ್ಲದೇ ವಿದ್ಯಾರ್ಥಿಗಳಿಗೆ ತೊಂದರೆ

Published:
Updated:

ಬೆಳಗಾವಿ: ಪಿಯು ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆಗಳು ಖಾಲಿ ಇರುವುದನ್ನು ಸರಿದೂಗಿಸುವ ಉದ್ದೇಶದಿಂದ ‘ಅತಿಥಿ ಉಪನ್ಯಾಸಕ’ರನ್ನು ನೇಮಿಸಿಕೊಳ್ಳಲು ಸರ್ಕಾರ ಈವರೆಗೂ ಆದೇಶ ಹೊರಡಿಸದಿರುವುದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 145 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 182 ಪಿಯು ಕಾಲೇಜುಗಳಿವೆ. ಬೆಳಗಾವಿಯಲ್ಲಿ ವಿವಿಧ ವಿಷಯಗಳ 97 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 125 ಹುದ್ದೆಗಳು ಖಾಲಿ ಇವೆ. ಗಡಿ ಜಿಲ್ಲೆಯಾದ ಇಲ್ಲಿ ಕನ್ನಡ ವಿಷಯದ ಉಪನ್ಯಾಸಕರ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇವೆ. ನಂತರದ ಸ್ಥಾನದಲ್ಲಿ ಇತಿಹಾಸ, ವ್ಯವಹಾರ ಅಧ್ಯಯನ ಹಾಗೂ ರಾಜ್ಯಶಾಸ್ತ್ರ ವಿಷಯಗಳಿವೆ. ಕಲಾ ವಿಭಾಗದಲ್ಲಿ ಕೊರತೆಯ ಪ್ರಮಾಣ ಜಾಸ್ತಿ ಇದೆ. ಇದು ಗ್ರಾಮಾಂತರ ಭಾಗದ ವಿದ್ಯಾರ್ಥಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಪ್ರತಿ ವರ್ಷವೂ ಇಲ್ಲಿ ‘ಅತಿಥಿ’ ಉಪನ್ಯಾಸರ ಮೊರೆ ಹೋಗುವುದು ತ‍ಪ್ಪುತ್ತಿಲ್ಲ. ಆದರೆ, ಈ ಬಾರಿ ಇನ್ನೂ ನೇಮಕ ಪ್ರಕ್ರಿಯೆಯೇ ನಡೆದಿಲ್ಲ.

ಭವಿಷ್ಯದೊಂದಿಗೆ ಚೆಲ್ಲಾಟ: ಕನ್ನಡ, ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ವ್ಯವಹಾರ ಅಧ್ಯಯನ, ಸಮಾಜ ವಿಜ್ಞಾನ, ರಾಜ್ಯಶಾಸ್ತ್ರ, ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ ವಿಜ್ಞಾನ, ಜೀವವಿಜ್ಞಾನ, ಕಂಪ್ಯೂಟರ್ ಸೈನ್ಸ್, ಹಿಂದಿ, ಮರಾಠಿ, ಶಿಕ್ಷಣ ವಿಷಯ ಹೀಗೆ... ಎಲ್ಲದರಲ್ಲೂ ಮಂಜೂರಾದ ಎಲ್ಲ ಹುದ್ದೆಗಳೂ ಸಂಪೂರ್ಣವಾಗಿ ಭರ್ತಿಯಾಗಿಲ್ಲ. ಕೊರತೆ ಇರುವುದರಿಂದಾಗಿ, ಪಾಠ–ಪ್ರವಚನಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಇನ್ನೊಂದೆಡೆ, ಶೈಕ್ಷಣಿಕ ವರ್ಷ ಆರಂಭವಾಗಿ ಬರೋಬ್ಬರಿ ಎರಡು ತಿಂಗಳುಗಳಾಗಿದ್ದರೂ ಅತಿಥಿ ಉಪನ್ಯಾಸಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿಲ್ಲ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯೊಂದರಲ್ಲೇ ಹೋದ ಶೈಕ್ಷಣಿಕ ವರ್ಷದಲ್ಲಿ 75 ಮಂದಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿತ್ತು. ಕೆಲವು ದಿನಗಳ ಹಿಂದೆ ಕೆಲವರನ್ನು ‘ನಿಯೋಜನೆ’ ಮಾಡಲಾಗಿದೆ. ಅವರು ವಾರದಲ್ಲಿ ಎರಡೆರಡು ಕಾಲೇಜುಗಳಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ.

ನಿಯೋಜನೆಗೆ ಕ್ರಮ: ‘ಅತಿಥಿ ಉಪನ್ಯಾಸಕರ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಆದೇಶ ಬಂದಿಲ್ಲ. ಉಪನ್ಯಾಸಕರ ವರ್ಗಾವಣೆ ಕೌನ್ಸೆಲಿಂಗ್ ನಡೆಯುತ್ತಿದ್ದು, ಬೇರೆ ಕಡೆಯಿಂದ ಇಲ್ಲಿಗೆ ಬರುವವರು ಹಾಗೂ ಇಲ್ಲಿಂದ ಬೇರೆ ಜಿಲ್ಲೆಗಳಿಗೆ ಹೋಗುವವರು ಇರುತ್ತಾರೆ. ನಂತರ, ಎಷ್ಟು ಕಡೆಗಳಲ್ಲಿ ಹುದ್ದೆಗಳು ಖಾಲಿ ಉಂಟಾಗುತ್ತವೆ ಎನ್ನುವುದನ್ನು ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಡಿಡಿಪಿಯು ಎಸ್.ಎಸ್. ಹಿರೇಮಠ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಯಾವ ಕಾಲೇಜುಗಳಲ್ಲಿ ಯಾವ ವಿಷಯದ ಉಪನ್ಯಾಸಕರಿಗೆ ಕಾರ್ಯಭಾರ ಕಡಿಮೆ ಇದೆಯೋ ಅವರನ್ನು ಖಾಲಿ ಇರುವ ಕಾಲೇಜುಗಳಿಗೆ ನಿಯೋಜನೆ ಮಾಡಲಾಗಿದೆ. ಕಾಯಂ ಉಪನ್ಯಾಸಕರು ಕಾಲೇಜುಗಳಲ್ಲಿ ವಾರಕ್ಕೆ 20 ಗಂಟೆ ಪಾಠ ಮಾಡಬೇಕು ಎಂಬ ನಿಯಮವಿದೆ. ಅವರ ಕಾಲೇಜುಗಳಲ್ಲಿ 10 ಗಂಟೆಗಳ ಕೆಲಸವಷ್ಟೇ ಇದ್ದರೆ ನಿಯೋಜಿಸಲಾಗುತ್ತದೆ. 50 ಮಂದಿಯನ್ನು ವಿವಿಧೆಡೆಗೆ ನಿಯೋಜಿಸಲಾಗಿದ್ದು, ವಾರದಲ್ಲಿ ತಲಾ 3 ದಿನ ಎರಡೂ ಕಾಲೇಜುಗಳಲ್ಲಿ ಅವರು ಕಾರ್ಯನಿರ್ವಹಿಸಬೇಕಾಗುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸದ್ಯಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.

Post Comments (+)