ಸುವರ್ಣ ವಿಧಾನಸೌಧ ಬಳಿ ಪ್ರತಿಭಟನೆ: ಸೇವಾ ಭದ್ರತೆಗೆ ಅತಿಥಿ ಉಪನ್ಯಾಸಕರ ಆಗ್ರಹ

7

ಸುವರ್ಣ ವಿಧಾನಸೌಧ ಬಳಿ ಪ್ರತಿಭಟನೆ: ಸೇವಾ ಭದ್ರತೆಗೆ ಅತಿಥಿ ಉಪನ್ಯಾಸಕರ ಆಗ್ರಹ

Published:
Updated:
Deccan Herald

ಬೆಳಗಾವಿ: ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು ಎಂದು ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಸದಸ್ಯರು ಸೋಮವಾರ ತಾಲ್ಲೂಕಿನ ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆ ನಡೆಸಿದರು.

‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 6816 ಪುರುಷರು, 6043 ಮಹಿಳೆಯರು, 232 ಅಂಗವಿಕಲರು ನಿಯಮಾನುಸಾರ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದೇವೆ. ನಮಗೆ ₹ 25ಸಾವಿರ ವೇತನ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವರು ಈಚೆಗೆ ಸರ್ಕಾರಕ್ಕೆ ಶಿಫಾರಸು ಮಾಡಿರುವುದನ್ನು ಸ್ವಾಗತಿಸುತ್ತೇವೆ. ಇದನ್ನು ಸರ್ಕರ ಕೂಡಲೇ ಪರಿಗಣಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಇನ್ನೊಂದೆಡೆ, 412 ಸರ್ಕಾರಿ ಪದವಿ ಕಾಲೇಜುಗಳಿಗೆ 3,800 ಸಹಾಯಕ ಪ್ರಾಧ್ಯಾಪಕರನ್ನು ಈ ಸಾಲಿನಲ್ಲೇ ಭರ್ತಿ ಮಾಡಿಕೊಳ್ಳುವುದಾಗಿ ಸರ್ಕಾರ ಹೇಳಿದೆ. ಇಲಾಖೆ ಹಾಗೂ ಸರ್ಕಾರದ ಈ ನಡೆ ಅತಿಥಿ ಉಪನ್ಯಾಸಕರನ್ನು ಆತಂಕಕ್ಕೀಡು ಮಾಡಿದೆ. 2017–18ನೇ ಸಾಲಿನಲ್ಲಿ ಬಹಳಷ್ಟು ವಿರೋಧದ ನಡುವೆ ನಿಯಮಬಾಹಿರವಾಗಿ 2160 ಸಹಾಯಕ ಪ್ರಾಧ್ಯಾಪಕರನ್ನು ಇಲಾಖೆ ನೇಮಿಸಿಕೊಂಡ ಕಾರಣದಿಂದಾಗಿ, ಹಿಂದಿನಿಂದಲೂ ದುಡಿಯುತ್ತಾ ಬಂದಿರುವ 4320 ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ಕೈಬಿಡಲಾಯಿತು. ಇಂದಿಗೂ ಅವರು ಪರ್ಯಾಯ ಕೆಲಸ ಸಿಗದೇ ಅತಂತ್ರವಾಗಿದ್ದಾರೆ’ ಎಂದು ತಿಳಿಸಿದರು.

‘ಈಗ ಸರ್ಕಾರವು ಮತ್ತೆ ಹೊಸ ನೇಮಕಾತಿಗೆ ಮುಂದಾದರೆ 8ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಅಕ್ಷರಶಃ ಬೀದಿಗೆ ಬೀಳುತ್ತಾರೆ. ನಮ್ಮನ್ನು ಉಂಡು ಎಸೆವ ಬಾಳೆ ಎಲೆ ರೀತಿ ಬಳಸಿಕೊಳ್ಳಲಾಗುತ್ತಿರುವುದು ಸರಿಯಲ್ಲ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಚುನಾವಣೆಗೆ ಮುನ್ನ ನೀಡಿದ್ದ ಭರವಸೆಯನ್ನು ಈಡೇರಿಸಬೇಕು; ನಮ್ಮ ಕಾರ್ಯಕ್ಕೆ ಮನ್ನಣೆ ನೀಡಬೇಕು’ ಎಂದು ಕೋರಿದರು.

‘ನಮ್ಮನ್ನು ಜೆಒಸಿ ಉಪನ್ಯಾಸಕರ ಮಾದರಿಯಲ್ಲಿ ಕಾಯಂ ಮಾಡಬೇಕು. ಈಗ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿಯೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ನವದೆಹಲಿ ಸರ್ಕಾರದ ಮಾದರಿಯಲ್ಲಿ ನಮ್ಮನ್ನು ವಿಲೀನಗೊಳಿಸಬೇಕು. ಯುಜಿಸಿ ನಿಯಮಾವಳಿಯಂತೆ 2009ರ ಎಂ.ಫಿಲ್.  ಪದವೀಧರರನ್ನು ಕೆಲಸಕ್ಕೆ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಘಟಕದ ಅಧ್ಯಕ್ಷ ಎಚ್‌. ಸೋಮಶೇಖರ ನೇತೃತ್ವ ವಹಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !