ಭಾನುವಾರ, ಡಿಸೆಂಬರ್ 8, 2019
21 °C
ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಮುಖ್ಯಮಂತ್ರಿಗೆ ಒತ್ತಾಯ

ಕೆಲಸ ಕಾಯಂಗೆ ಅತಿಥಿ ಉಪನ್ಯಾಸಕರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ಕೆಲಸ ಕಾಯಂಗೊಳಿಸಬೇಕು ಹಾಗೂ ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದವರು ಬುಧವಾರ ತಾಲ್ಲೂಕಿನ ಸುವರ್ಣ ವಿಧಾನಸೌಧದ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಧರಣಿ ನಡೆಸಿದರು.

‘ರಾಜ್ಯದ 412 ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ 11,450 ಮಂದಿ ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದಲೂ ಕೇವಲ ಗೌರವಭತ್ಯೆ ಪಡೆದು ಕಾರ್ಯನಿರ್ವಹಿಸುತ್ತಿದ್ದೇವೆ. ಅಭದ್ರತೆ ತೂಗುಕತ್ತಿ ತೂಗಾಡುತ್ತಲೇ ಇದೆ. ಅತಿಥಿ ಉಪನ್ಯಾಸಕ ಎಂಬ ತಾತ್ಕಾಲಿಕ ಹಾಗೂ ವೈಜ್ಞಾನಿಕ ಪದ್ಧತಿಯು ಉನ್ನತ ಶಿಕ್ಷಣ ವ್ಯವಸ್ಥೆಗೆ ಮಾರಕವಾಗಿದೆ. ಪ್ರತಿಭಾವಂತ ಹಾಗೂ ಬೋಧನಾ ಕೌಶಲವುಳ್ಳವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದಂಥ ಪರಿಸ್ಥಿತಿ ಇದೆ’ ಎಂದು ತಿಳಿಸಿದರು.

‘ನಿಗದಿಪಡಿಸಿರುವ ಕಡಿಮೆ ಗೌರವಧನವನ್ನೂ ಸರಿಯಾಗಿ ಪಾವತಿಸದೇ ಇರುವುದರಿಂದ ಆತಂಕ ಹಾಗೂ ಅಭದ್ರತೆಯಲ್ಲಿ ಬದುಕುವಂತೆ ಆಗಿದೆ’ ಎಂದು ತಿಳಿಸಿದರು.

‘16ಸಾವಿರ ಅತಿಥಿ ಶಿಕ್ಷಕರನ್ನು ಕಾಯಂ ಮಾಡಲು ನವದೆಹಲಿ ಸರ್ಕಾರ ವಿಶೇಷ ನಿಯಮಾವಳಿ ರೂಪಿಸಿದೆ. ಹಾಗೆಯೇ ಹರಿಯಾಣ ಸರ್ಕಾರವೂ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಿದ ನಿದರ್ಶನಗಳಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘10 ವರ್ಷಗಳಿಂದಲೂ ಸೇವಾ ಭದ್ರತೆಗಾಗಿ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಸಂಘಟನಾತ್ಮಕವಾಗಿ ಪ್ರತಿಭಟನೆಗಳನ್ನು ನಡೆಸುತ್ತಲೇ ಬಂದಿದ್ದೇವೆ. ನೂರಾರು ಅತಿಥಿ ಉಪನ್ಯಾಸಕರ ವಯೋಮಿತಿ ಮೀರಿದೆ. ಈಗಲಾದರೂ ಸರ್ಕಾರವು ಮಾನವೀಯ ನೆಲೆಯಲ್ಲಿ ಯೋಚಿಸಿ ಅನುಕೂಲ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

‘ನಮ್ಮ ಸರ್ಕಾರ ಬಂದರೆ, ನಾನು ಮುಖ್ಯಮಂತ್ರಿಯಾದರೆ ಅತಿಥಿ ಉಪ‍ನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವುದಾಗಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದರು. ಜೆಡಿಎಸ್‌ ಚುನಾವಣಾ ಪ್ರಣಾಳಿಕೆಯಲ್ಲೂ ಈ ಭರವಸೆ ನೀಡಲಾಗಿದೆ. ಮಾತಿನಂತೆ ಅವರು ನಡೆದುಕೊಳ್ಳಬೇಕು. ಎಲ್ಲ 412 ಪದವಿ ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿರುವ ಎಲ್ಲ ಅತಿಥಿ ಉಪನ್ಯಾಸಕರಿಗೂ ಭದ್ರತೆ ನೀಡಬೇಕು. ₹ 25ಸಾವಿರ ವೇತನ ಕೊಡಬೇಕು’ ಎಂದು ಕೋರಿದರು.

‘2003ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿದ ಅರೆಕಾಲಿಕ ಉಪನ್ಯಾಸಕರನ್ನು ಸೇವಾ ಹಿರಿತನದ ಆಧಾರದಲ್ಲಿ ವಿಲೀನಗೊಳಿಸಲಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ 2016–17ನೇ ಸಾಲಿನಲ್ಲಿ ದುಡಿದ ಅತಿಥಿ ಉಪನ್ಯಾಸಕರನ್ನು ವಿದ್ಯಾರ್ಹತೆ, ಸೇವಾ ಹಿರಿತನ ಮತ್ತು ವಯೋಮಿತಿ ಆಧಾರದಲ್ಲಿ ವಿಲೀನಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ 3.5 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ನಮ್ಮ ಭವಿಷ್ಯವೇ ಅತಂತ್ರವಾಗಿದೆ’ ಎಂದು ತಿಳಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುಂಬಾರ, ಪದಾಧಿಕಾರಿಗಳಾದ ವಿಠ್ಠಲ ಮಾಳವದೆ, ಕೆ.ಎನ್. ಕಾಂಬಳೆ, ಜಯಶ್ರೀ ಹಂಚಿನಮನಿ, ಶಿವಾನಂದ ಕಲ್ಲೂರ, ನಿಂಗಪ್ಪ ಸಂಗ್ರೇಜಿಕೊಪ್ಪ, ಅಡಿವೇಶ ಇಟಗಿ ಇದ್ದರು.

ಶಾಸಕ ಸತೀಶ ಜಾರಕಿಹೊಳಿ, ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ, ಅರುಣ್ ಶಹಾಪುರ, ಹಣಮಂತ ನಿರಾಣಿ, ನಾರಾಯಣಸ್ವಾಮಿ ಮನವಿ ಸ್ವೀಕರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು