ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜಿಲ್ಲೆಯಾದ್ಯಂತ ಗುರುಪೂರ್ಣಿಮೆ ಸಂಭ್ರಮ

ಗುರುಗಳನ್ನು ಗೌರವದಿಂದ ಕಾಣಲು ಸಲಹೆ
Last Updated 16 ಜುಲೈ 2019, 13:00 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ಶಾಲಾ–ಕಾಲೇಜುಗಳು, ಸಂಘ–ಸಂಸ್ಥೆಗಳ ವತಿಯಿಂದ ಮಂಗಳವಾರ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಗುರುಗಳನ್ನು ಸ್ಮರಿಸಲಾಯಿತು. ಸಾಯಿ ಮಂದಿರಗಳಲ್ಲಿ ವಿಶೇಷ ಪೂಜೆ ನೆರವೇರಿತು.

ಬಸವ ಭೀಮ ಸೇನೆ: ‘ಬಸವ ಸಮಾಜದಲ್ಲಿ ಬಲಪಂಥೀಯರ ಸಂಖ್ಯೆ ಹೆಚ್ಚುತ್ತಿರುವುದು ಸಮಾಜದ ಸಂಘಟನೆ ಮತ್ತು ವೈಚಾರಿಕ ವಿಚಾರಧಾರೆಗಳ ಬೆಳವಣಿಗೆಗೆ ಬಹು ದೊಡ್ಡ ಅಡ್ಡಿಯಾಗುತ್ತಿದೆ’ ಎಂದು ಬಸವ ಭೀಮ ಸೇನೆ ಅಧ್ಯಕ್ಷ ಆರ್.ಎಸ್. ದರ್ಗೆ ಕಳವಳ ವ್ಯಕ್ತಪಡಿಸಿದರು.

ಗುರುಪೂರ್ಣಿಮೆ ಅಂಗವಾಗಿ ಬಸವ ಭೀಮ ಸೇನೆಯು ಬಸವೇಶ್ವರ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ‘ವಿಶ್ವಗುರು ಬಸವಣ್ಣನವರಿಗೆ ಗೌರವ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವ ಧರ್ಮಕ್ಕೆ ಬಾಹ್ಯ ಶಕ್ತಿಗಳಿಂದ ಯಾವ ಅಪಾಯವೂ ಇಲ್ಲ. ಆಂತರಿಕ ಶಕ್ತಿಗಳಿಂದಲೇ ಅಪಾಯ ಎದುರಿಸುತ್ತಿದೆ’ ಎಂದರು.

‘ಜಗತ್ತಿನಾದ್ಯಂತ ಬಸವಣ್ಣನವರು ವಿಸ್ಮಯಕಾರಿ ನಾಯಕರಾಗಿ ವಿಜೃಂಭಿಸುತ್ತಿರುವ ಈ ಸಂದರ್ಭದಲ್ಲಿ ಬಸವಾದಿ ಶರಣರ ಕರ್ಮಭೂಮಿ ಕರ್ನಾಟಕದಲ್ಲಿಯೇ ಬಸವ ಸಮಾಜ ತನ್ನ ಅಸ್ತಿತ್ವ ಕಂಡುಕೊಳ್ಳಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸುಸಂಸ್ಕೃತ ಸಮಾಜಕ್ಕೆ ಶೋಭೆ ತರುವಂಥದಲ್ಲ. ನಾಡಿನ ಹಿತ, ಸಮಾಜದ ಒಳಿತು, ಅಸ್ತಿತ್ವ, ಸಂಸ್ಕೃತಿ ಹಾಗೂ ಅಸ್ಮಿತೆಯ ಉಳಿವಿಗಾಗಿ ಬಲಪಂಥೀಯ ಶಕ್ತಿಗಳಿಂದ ದೂರವಿದ್ದು, ನಿಜವಾದ ಬಸವ ಪ್ರೇಮಿಗಳಾಗಬೇಕು. ಈ ಮೂಲಕ ಧರ್ಮ ಹಾಗೂ ಗುರುವಿನ ಋಣ ತೀರಿಸಬೇಕು’ ಎಂದು ಕೋರಿದರು.

ಸಮಸ್ತ ಲಿಂಗಾಯತ ಮೀಸಲಾತಿ ಹೋರಾಟ ವೇದಿಕೆ ಅಧ್ಯಕ್ಷ ಬಿ.ಎಂ. ಚಿಕ್ಕನಗೌಡರ ಮಾತನಾಡಿ, ‘ಧರ್ಮ ಮತ್ತು ಸಂಸ್ಕೃತಿಯ ಉಳಿವಿನ ಹೋರಾಟದ ಜೊತೆಗೆ ಸಮಾಜದ ಬಡ ಮಕ್ಕಳ ಭವಿಷ್ಯದ ಬಗ್ಗೆಯೂ ನಾವು ಹೋರಾಡಬೇಕಾಗಿದೆ. ಕೃಷಿ ಕಾಯಕ ಆಧಾರಿತ ಸಮಾಜವು ಮತ್ತೆ ಗೌರವಯುತ ಬದುಕು ಕಂಡುಕೊಳ್ಳಬೇಕಾಗಿದೆ. ಇದಕ್ಕಾಗಿ ಮೀಸಲಾತಿ ಹೋರಾಟ ನಡೆಸಲಾಗುತ್ತಿದೆ’ ಎಂದರು.

ಬಸವ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ಬಸವಣ್ಣ ಅನುಭವ ಮಂಟಪದ ಮೂಲಕ ಸಾರಿದ ಸಮಾನತೆಯ ಕ್ರಾಂತಿಯನ್ನು ಮತ್ತೆ ಆರಂಭಿಸಬೇಕು’ ಎಂದು ಹೇಳಿದರು.

ಲಿಂಗಾಯತ ಸೇವಾ ಸಮಿತಿಯ ರಾಜು ಕುಂದಗೋಳ, ಸಂಚಾರಿ ಗುರುಬಸವ ಬಳಗದ ಬಸವರಾಜ ಪಾಟೀಲ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ ನಗರ ಘಟಕದ ಅಧ್ಯಕ್ಷ ಪ್ರಭು ಬೆಣ್ಣಿ, ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದಗೌಡ ಮೋದಗಿ, ವಿರೂಪಾಕ್ಷಿ ಯಲಿಗಾರ, ವಕೀಲ ಚನ್ನಬಸಪ್ಪ ಬಾಗೇವಾಡಿ, ಆಕಾಶ ಹಲಗೇಕರ, ಕಿರಣ ಪಾಟೀಲ, ಬಿ.ಎಸ್. ಪಾಟೀಲ, ಸಿದ್ರಾಮ ಸಾವಳಗಿ, ಯಲ್ಲಪ್ಪ ಹುದಲಿ ಇದ್ದರು.

ಅಮ್ಮನೇ ಮೊದಲ ಗುರು:‘ಗುರುವಿನ ಆಶೀರ್ವಾದವಿಲ್ಲದೇ ಯಾರೂ ಏನನ್ನೂ ಸಾಧಿಸಲಾಗುವುದಿಲ್ಲ. ಸಾಧನೆ ಆಗಬೇಕಿದ್ದರೆ ಗುರುವಿನ ಆಶೀರ್ವಾದ ಬೇಕು. ಅಂತಹ ಕಾರ್ಯಕ್ಕೆ ಅಮ್ಮನೇ ಮೊದಲ ಗುರು. ಅವರದೇ ಸಾಧನೆಗೆ ಮೊದಲ ಮೆಟ್ಟಿಲು’ ಎಂದು ಕಾಕಡೆ ಉದ್ಯೋಗ ಪ್ರತಿಷ್ಠಾನದ ಸಂಸ್ಥಾಪಕ ಕಿಶೋರ ಕಾಕಡೆ ಹೇಳಿದರು.

ಇಲ್ಲಿನ ಎಸ್‌ಜಿವಿ ಮಹೇಶ ಪಿಯು ಕಾಲೇಜಿನಲ್ಲಿ ಗುರುಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವ್ಯಕ್ತಿಯ ವ್ಯಕ್ತಿತ್ವ ರೂಪಿಸಿ ನಿರ್ದೇಶಿಸುವುದು ಗುರು. ಅಂತಹ ಗುರುವಿಗೆ ನಾವು ಸದಾ ವಿಧೇಯರಾಗಿರಬೇಕು. ಪ್ರತಿಯೊಬ್ಬರು ತಮ್ಮ ಜೀವಿತದ ಅವಧಿಯನ್ನು ಸಮಾಜ, ದೇಶಕ್ಕಾಗಿ ಮೀಸಲಿಡಬೇಕು’ ಎಂದರು.

ಪ್ರಾಚಾರ್ಯ ಎಂ.ವಿ. ಭಟ್ಟ ಮಾತನಾಡಿದರು. ಉಪ ಪ್ರಾಚಾರ್ಯ ಆನಂದ ಖೋತ, ಹಿರಿಯ ಉಪನ್ಯಾಸಕ ಮುಕುಂದ ಗೋಖಲೆ ಇದ್ದರು. ಅಬ್ದುಲ್ ನಯೀಂ ಸ್ವಾಗತಿಸಿದರು. ಉಪನ್ಯಾಸಕಿ ಐಶ್ವರ್ಯಾ ಅಡವಿ ನಿರೂಪಿಸಿದರು. ಉಪನ್ಯಾಸಕ ರಾಜು ಭಟ್ಟ ವಂದಿಸಿದರು.

ಉಷಾತಾಯಿ ಗೋಗಟೆ ಶಾಲೆ
ಬೆಳಗಾವಿ ಶಿಕ್ಷಣ ಸಂಸ್ಥೆಯ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ 34 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ನಗರ ವಲಯ ಬಿಇಒ ಕೆ.ಡಿ. ಬಡಿಗೇರ, ‘ಗುರುವಿನ ಮಾರ್ಗದರ್ಶನವಿಲ್ಲದೇ ಜೀವನ ಸಾರ್ಥಕವಾಗದು. ಪ್ರತಿಯೊಬ್ಬರ ಜೀವನದಲ್ಲೂ ಗುರುವಿಗೆ ಅಮೂಲ್ಯ ಸ್ಥಾನವಿದೆ. ಅಜ್ಞಾನದಿಂದ ಸುಜ್ಞಾನ ಮಾಡುವ ಹಾಗೂ ಪ್ರತಿಯೊಬ್ಬರಿಗೂ ಸರಳ ಮಾರ್ಗ ತೋರುವ ಕಾರ್ಯವನ್ನು ಗುರುಗಳು ಮಾಡುತ್ತಾರೆ. ವಿದ್ಯಾರ್ಥಿಗಳು ಗುರುವಿನ ಮೇಲೆ ಶ್ರದ್ಧೆಯಿಟ್ಟು ಒಳ್ಳೆಯದನ್ನು ಅನುಕರಣೆ ಮಾಡಬೇಕು’ ಎಂದು ಸಲಹೆ ನೀಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಡಾ.ರಾಜಶೇಖರ ಚಲಗೇರಿ, ಅಧ್ಯಕ್ಷತೆ ವಹಿಸಿದ್ದ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಸುಧೀರ ಕುಲಕರ್ಣಿ ಮಾತನಾಡಿದರು.

ವಿದ್ಯಾರ್ಥಿನಿಯರು ದಾಸ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಗೀತೆಗಳನ್ನು ಪ್ರಸ್ತುತಪಡಿಸಿದರು. ಗುರುವರ್ಯ ಕುಂಟೆ, ಅಸಾವರಿ ಸಂತ, ಲೀನಾ ಅಷ್ಠೇಕರ, ಮಧುಕರ ನಾಯಿಕ, ಅಭಿಜಿತ ಅಂಕಲೆ, ಗಿರಿಜಾ ಗನಪತಿ ಶಾಲದಾರ, ವೃಂದಾ ಚಿಕ್ಕೆರುರ ಮತ್ತು ವೃಂದಾ ಹೂಯಿಲಗೊಳ, ಎಸ್.ಎಸ್. ಕುಲಕರ್ಣಿ, ರಾಜೇಂದ್ರ ನಾಯಿಕ ಹಾಗೂ ವಿಜೇಂದ್ರ ನಾಯಿಕ ಹಾಗೂ ಎಸ್.ಕೆ. ಕುಲಕರ್ಣಿ ಮೊದಲಾದ ದಾನಿಗಳು ನೀಡಿದ ವಿದ್ಯಾರ್ಥಿವೇತನವನ್ನು 34 ಬಡ ವಿದ್ಯಾರ್ಥಿನಿಯರಿಗೆ ವಿತರಿಸಲಾಯಿತು.

ಕಾರ್ಯಕ್ರಮ ಸಂಚಾಲಕಿ ಲಕ್ಷ್ಮಿ ಯಳವಟಕ ಇದ್ದರು. ಮುಖ್ಯಶಿಕ್ಷಕ ಎಂ.ಕೆ. ಮಾದಾರ ಪ್ರಾಸ್ತಾವಿಕ ಮಾತನಾಡಿದರು. ಸೃಷ್ಟಿ ಪಾಖರೆ ನಿರೂಪಿಸಿದರು. ಈಶ್ವರಿ ಪಾಟೀಲ ವಂದಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT