ಭಾನುವಾರ, ಜುಲೈ 3, 2022
27 °C

ಮುಸ್ಲಿಂ ವರ್ತಕರಿಗೆ ನಿರ್ಬಂಧ | ಸರ್ಕಾರ ಮೌನವಾಗಿರುವುದೇಕೆ: ವಿಶ್ವನಾಥ್ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಮುಸ್ಲಿಂ ವರ್ತಕರಿಗೆ ನಿರ್ಬಂಧ ವಿಧಿಸಿರುವುದು ಸರಿಯಲ್ಲ. ಅದನ್ನು ಯಾರೂ  ಒಪ್ಪುವುದಿಲ್ಲ. ಈ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶಿಸಬೇಕು’ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್‌ ಒತ್ತಾಯಿಸಿದರು.

ಜಿಲ್ಲೆಯ ಗೋಕಾಕದಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಬದುಕನ್ನು ಯಾರೂ ಕಸಿದುಕೊಳ್ಳಬಾರದು. ಆದರೆ, ಈ ವಿಷಯದಲ್ಲಿ ಸರ್ಕಾರ ಮೌನ ವಹಿಸಿರುವುದೇಕೆ ಎನ್ನುವುದು ತಿಳಿಯುತ್ತಿಲ್ಲ’ ಎಂದರು.

‘ದೇವಸ್ಥಾನ, ಜಾತ್ರೆ ಮೊದಲಾದ ಕಡೆಗಳಲ್ಲಿ ವ್ಯಾಪಾರ ಮಾಡುವವರ ಬಂಡವಾಳ ಐನೂರು ರೂಪಾಯಿಯೂ ಇರುವುದಿಲ್ಲ. ಅಂಥವರ ಹೊಟ್ಟೆ ಮೇಲೆ ಹೊಡೆದರೆ ಅವರೇನು ತಿನ್ನಬೇಕು? ಹೊಟ್ಟೆ ಮಹತ್ವದ್ದು. ಧರ್ಮ, ಜಾತಿ, ಪಕ್ಷ ನಂತರದ್ದು. ಹೊಟ್ಟೆಗೇ ಇಲ್ಲದ ಮೇಲೆ ಏನು ಮಾಡಲಾದೀತು? ಅವರು ಈ ದೇಶದ ಪ್ರಜೆಗಳಲ್ಲವೇ? ಏನನ್ನೂ ಯೋಚಿಸದೆ ಏನೇನೋ ತೀರ್ಮಾನಗಳಾಗುತ್ತಿವೆ. ಇದು ಸರಿಯಲ್ಲ. ನಿರ್ಬಂಧ ವಿಧಿಸುವುದು ಅಸ್ಪೃಶ್ಯತೆ ಆಚರಣೆಯಲ್ಲದೇ ಮತ್ತೇನೂ ಅಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಕೈಲಾಗುತ್ತದೆಯೇ?: ‘ಭಾರತೀಯರು ನಮ್ಮ ದೇಶದಲ್ಲಿ ಇರುವಂತಿಲ್ಲ ಎಂದು ವಿದೇಶಗಳು ಮತ್ತು ಮುಸ್ಲಿಂ ರಾಷ್ಟ್ರಗಳೆಲ್ಲವೂ ತೀರ್ಮಾನ ತೆಗೆದುಕೊಂಡರೆ ಏನಾಗುತ್ತದೆ ಎಂಬ ಅರಿವಿದೆಯೇ? ವಾಪಸ್ ಬಂದವರಿಗೆಲ್ಲ ಕೆಲಸ ಕೊಡಲು ನಿಮ್ಮ ಕೈಲಾಗುತ್ತದೆಯೇ’ ಎಂದು ಕೇಳಿದರು.

‘ಜಾತಿ–ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವುದು ಅಪಾಯ. ಎಷ್ಟು ದಿನ ಮಾಡುತ್ತೀರಿ. ಒಂದು ಅಥವಾ ಎರಡು ಚುನಾವಣೆ ಗೆಲ್ಲಬಹುದು. ನಂತರ’ ಎಂದು ಪ್ರಶ್ನಿಸಿದರು.

‘ಮುಸ್ಲಿಮರನ್ನು ಹೊರ ಹಾಕುತ್ತೇವೆ, ಅವರು ಈ ದೇಶದಲ್ಲಿರಬಾರದು ಎಂದು ಬಿಜೆಪಿ ಪಕ್ಷದ ಸಂವಿಧಾನದಲ್ಲಿ ಬರೆಯಲಾಗಿದೆಯೇ? ಹೀಗೆಯೇ ಮುಂದುವರಿದರೆ ಏನಾಗುತ್ತದೆ?’ ಎಂದು ಕಳವಳ ವ್ಯಕ್ತಪಡಿಸಿದರು.

‘ದೇಶ ವಿಭಜನೆಯಾದಾಗ ಇಲ್ಲಿನ ಮುಸ್ಲಿಮರು ಪಾಕಿಸ್ತಾನಕ್ಕೆ ಜಿನ್ನಾ ಜೊತೆ ಹೋಗಲಿಲ್ಲ. ಅವರೆಲ್ಲರೂ ಭಾರತೀಯರು. ಇದೆಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕು. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ, ಜನರೇ ಕೈಗೆತ್ತಿಕೊಳ್ಳುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಸಬ್‌ಕಾ ಸಾತ್, ಸಬ್‌ಕಾ ವಿಶ್ವಾಸ್ ಎಂದುಕೊಂಡು ಬಂದಿದ್ದಾರೆಯೇ ಹೊರತು ಹಿಂದುತ್ವದ ಬಗ್ಗೆ ಈವರೆಗೂ ಮಾತನಾಡಿಲ್ಲ. ಆದರೆ, ಈ ದೇಶ– ರಾಜ್ಯವನ್ನು ನಾವು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎನ್ನುವುದು ಮುಖ್ಯ’ ಎಂದರು.

ನನ್ನನ್ನು, ರಮೇಶನನ್ನು ಯಾರೂ ತುಳಿಯಲಾಗದು: ‘ನನ್ನನ್ನು ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಯಾರೂ ತುಳಿಯಲಾಗುವುದಿಲ್ಲ’ ಎಂದು ವಿಶ್ವನಾಥ್ ಗುಡುಗಿದರು.

‘ಸಚಿವ ಸ್ಥಾನ ಸಿಗದಿರಲು ಕಾಣುವ ಕೈಗಳೇ ಕಾರಣ. ಸಿದ್ದರಾಮಯ್ಯ, ನಾವು, ಜಾರಕಿಹೊಳಿ, ಹಿಂದುಳಿದ ವರ್ಗದವರು ಯಾರೂ ಬೆಳೆಯುವಂತಿಲ್ಲ ಇಲ್ಲಿ. ಬಿಜೆಪಿ ಸರ್ಕಾರ ರಚನೆಗೆ ರಮೇಶ ಪ್ರಮುಖ ಕಾರಣ. ಅವರನ್ನೇ ಆಟವಾಡಿಸಿದರೆ ಹೇಗೆ?. ನಿಮಗೆ ಅಧಿಕಾರ ಕೊಟ್ಟವರು ನಾವೆ. ನಾವು ನೀಡಿದ ತ್ರಿಶೂಲದಲ್ಲಿ ನಮ್ಮನ್ನೇ ತಿವಿಯುತ್ತಿದ್ದೀರಿ. ಇದು ಶಾಶ್ವತವಲ್ಲ’ ಎಂದು ಬಿಜೆಪಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು