ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸರ್ಕಾರಿ ಪ್ರಾಥಮಿಕ ಶಾಲೆ ಹಡಗಿನಾಳದ 'ಜ್ಞಾನ ದೇಗುಲ' 

80 ವಸಂತಗಳನ್ನು ಪೂರೈಸಿರುವ
Last Updated 27 ಸೆಪ್ಟೆಂಬರ್ 2019, 19:31 IST
ಅಕ್ಷರ ಗಾತ್ರ

ಮೂಡಲಗಿ: ಎಂಟು ದಶಕಗಳನ್ನು ಪೂರೈಸಿರುವ ಗೋಕಾಕ ತಾಲ್ಲೂಕಿನ ದಂಡಿನ ಮಾರ್ಗದ ಹಡಗಿನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಗ್ರಾಮೀಣ ಭಾಗದ ಮಕ್ಕಳಿಗೆ ಅಕ್ಷರ ಜ್ಞಾನ ನೀಡುತ್ತಿರುವ ‘ಜ್ಞಾನ ದೇಗುಲ’ವಾಗಿದೆ.

1ರಿಂದ 7ನೇ ತರಗತಿಗಳಿವೆ. ಪ್ರತಿ ವರ್ಷವೂ 400ರಿಂದ 500ವರೆಗೆ ಮಕ್ಕಳ ದಾಖಲಾತಿ ಇದೆ. ನಲಿ-ಕಲಿಗಾಗಿ 3 ತರಗತಿಗಳನ್ನು ನಡೆಸುತ್ತಿರುವುದು ಇಲ್ಲಿನ ವಿಶೇಷ.

ಕಲಿಕೆಗಾಗಿ 10 ಕೊಠಡಿಗಳಿದ್ದು ಮಕ್ಕಳನ್ನು ಆಕರ್ಷಿಸಲು ಗೋಡೆಯನ್ನು ರೈಲು ಬೋಗಿಯಂತೆ ವಿನ್ಯಾಸ ಮಾಡಲಾಗಿದೆ. ಇದು ಮೆರುಗು ನೀಡುತ್ತಿದೆ. ವಾರದಲ್ಲಿ 2 ದಿನಗಳು ವಿಶೇಷ ಸಮವಸ್ತ್ರ ಧರಿಸಿ ಬರುವ ಮಕ್ಕಳು ‘ನಾವು ಕಾನ್ವೆಂಟ್‌ನವರಿಗಿಂತ ಕಡಿಮೆ ಇಲ್ಲ’ ಎನ್ನುವುದನ್ನು ನಿರೂಪಿಸುತ್ತಿದ್ದಾರೆ.

ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ರಂಗಮಂಟಪ ಮತ್ತು ಕಾಂಪೌಂಡ್‌ ಹೊಂದಿದೆ. ಕಂಪ್ಯೂಟರ್ ಕೊಠಡಿ ಇದೆ. ಕಂಪ್ಯೂಟರ್ ಜ್ಞಾನ ನೀಡಿ ಮಕ್ಕಳನ್ನು ಆಧುನಿಕ ಜಗತ್ತಿಗೆ ಸಜ್ಜುಗೊಳಿಸಲಾಗುತ್ತಿದೆ ಹಾಗೂ ಎಜುಸ್ಯಾಟ್‌ಗೆ ವಿಶೇಷ ಗಮನ ನೀಡಿದ್ದಾರೆ.

ವಿಶೇಷ ತರಬೇತಿ:

12 ಶಿಕ್ಷಕರಿದ್ದು ಅದರಲ್ಲಿ ಮೂವರು ಸ್ನಾತಕೋತ್ತರ ಪದವೀಧರರು. ನವೋದಯ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಲು ಬಯಸುವ ಮಕ್ಕಳಿಗೆ ವಿಶೇಷ ತರಬೇತಿ ನೀಡುತ್ತಿದ್ದಾರೆ. ಪ್ರತಿ ವರ್ಷವೂ ಹಲವು ಮಕ್ಕಳು ಆ ಶಾಲೆಗಳಿಗೆ ಆಯ್ಕೆಯಾಗುತ್ತಿದ್ದಾರೆ.

‘ದಿನಕ್ಕೊಂದು ಪುಸ್ತಕ ಪರಿಚಯ’ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಓದುವ ಸಂಸ್ಕೃತಿ ಬೆಳೆಸುತ್ತಿದ್ದಾರೆ. ಮುಖ್ಯ ಶಿಕ್ಷಕ ವಿಠ್ಠಲ ಆರ್. ಬೂದಿ ಅವರ ಶೈಕ್ಷಣಿಕ ಕಾಳಜಿಯಿಂದಾಗಿ ಶಾಲೆಯು ಇಲಾಖೆಯ ಪ್ರಶಂಸೆಗೆ ಪಾತ್ರವಾಗಿದೆ. ಪ್ರಸಕ್ತ ಸಾಲಿನಲ್ಲಿ ಅವರು ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. 2014ರಲ್ಲಿ ರಾಜ್ಯ ಶಾಲಾ ಮೌಲ್ಯಾಂಕನ ಪರಿಷತ್ತಿನಿಂದ ‘ಎ’ ಶ್ರೇಯಾಂಕವನ್ನು ಶಾಲೆ ಪಡೆದಿದೆ.

ದಟ್ಟಿ ಕುಣಿತ ತಂಡ:

ಗ್ರಾಮದ ಜನಪದ ‘ದಟ್ಟಿ ಕುಣಿತ’ ಕಲೆ ಉಳಿಸುವ ಸಲುವಾಗಿ ಮಕ್ಕಳ ತಂಡ ಕಟ್ಟಿ ವಿಶೇಷ ತರಬೇತಿ ನೀಡಲಾಗುತ್ತಿದೆ. ಮೈಸೂರು ದಸರಾ ಮತ್ತು ವಿವಿಧೆಡೆ ಅವರು ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ. ಕ್ರೀಡೆ, ಪ್ರತಿಭಾ ಕಾರಂಜಿ ಮೊದಲಾದ ಸ್ಪರ್ಧೆಗಳಲ್ಲಿ ಮಿಂಚುತ್ತಿದ್ದಾರೆ.

ಶಿಕ್ಷಕರ ಕಾಳಜಿಯೊಂದಿಗೆ ಸಮುದಾಯ ಕೈಜೋಡಿಸಿದರೆ ಸರ್ಕಾರಿ ಶಾಲೆಗಳನ್ನು ಮಾದರಿಯಾಗಿ ರೂಪಿಸಬಹುದು ಎನ್ನುವ ಮಾತಿಗೆ ಹಡಗಿನಾಳ ಶಾಲೆ ಉದಾಹರಣೆಯಾಗಿದೆ. ಸಂ‍ಪರ್ಕಕ್ಕೆ ಮೊ: 9164192949.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT