ಶನಿವಾರ, ಜೂನ್ 19, 2021
26 °C

ಬೆಳಗಾವಿ ಜಿಲ್ಲೆಯ ಹಾಲಳ್ಳಿ: ಒಂದೇ ವಾರದಲ್ಲಿ 12 ಮಂದಿ ಸಾವು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆಲಸಂಗ (ಬೆಳಗಾವಿ ಜಿಲ್ಲೆ): ಸಮೀಪದ ಪುಟ್ಟ ಗ್ರಾಮವಾದ ಹಾಲಳ್ಳಿಯಲ್ಲಿ ವಾರದಲ್ಲಿ 12 ಮಂದಿ ಸಾವಿಗೀಡಾಗಿದ್ದಾರೆ. ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲದಿರುವುದು, ಕೋವಿಡ್ ಭೀತಿಯಲ್ಲಿರುವ ಜನರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ. ತಾಲ್ಲೂಕು ಆಡಳಿತ ಇತ್ತ ಗಮನಹರಿಸಬೇಕು ಎಂದು ಅವರು ಕೋರಿದ್ದಾರೆ.

ಏ. 1ರಿಂದ ಮೇ 10ರವೆರೆಗೆ ತೆಲಸಂಗ ಹೋಬಳಿಯ ವಿವಿಧ ಗ್ರಾಮಗಳಲ್ಲಿ 185 ಮಂದಿ ನಿಧನರಾಗಿದ್ದಾರೆ. ತೆಲಸಂಗದಲ್ಲಿ 23, ಬನ್ನೂರ 1, ಕನ್ನಾಳ 1, ಕೊಟ್ಟಲಗಿ 7, ಕೋಹಳ್ಳಿ 9, ಅಡಹಳ್ಳಿ 9, ಯಲಿಹಡಲಗಿ 6, ಬಡಚಿ 5, ಯಕ್ಕಂಚಿ 3, ಐಗಳಿ 10, ಅರಟಾಳ 5, ಬಾಡಗಿ 5, ಖೊಜನವಾಡಿ 7, ಕೊಕಟನೂರ 23, ಕೊಡಗಾನೂರ 9, ಶೇಗುಣಸಿ 12, ನಂದಗಾಂವ 20, ಶಿರಹಟ್ಟಿ 9, ಬಳವಾಡ 1, ಘಟನಟ್ಟಿ 6 ಜನ ಮೃತರಾಗಿದ್ದಾರೆ ಎಂದು ಆಯಾ ಗ್ರಾಮಸ್ಥರು ತಿಳಿಸಿದ್ದಾರೆ. ಇದಲ್ಲದೆ ಕೋವಿಡ್ ದೃಢಪಟ್ಟಿದ್ದ 14 ಮಂದಿ ನಿಧನರಾಗಿದ್ದಾರೆ.

‘ಪರೀಕ್ಷೆ ಮಾಡಿಕೊಳ್ಳದೆ ಮನೆಯಲ್ಲಿಯೇ ಮೃತಪಟ್ಟವರಲ್ಲಿ ಕೋವಿಡ್‌ ಇದ್ದಿದ್ದರೆ ಅವರ ಪ್ರಾಥಮಿಕ ಸಂಪರ್ಕಿತರಿಂದ ಸೋಂಕು ಮತ್ತಷ್ಟು ಹರಡುವ ಭೀತಿ ಇದೆ. ಹೀಗಾಗಿ ತಾಲ್ಲೂಕು ಆಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಕುಟುಂಬದವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ, ಮುಂದಾಗಬಹುದಾದ ತೊಂದರೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

‘ಜನಪ್ರತಿನಿಧಿಗಳು ಕೂಡ ಇತ್ತ ಗಮನಹರಿಸಬೇಕು’ ಎನ್ನುವುದು ಜನರ ಒತ್ತಾಯವಾಗಿದೆ.

‘ಸಮೀಕ್ಷೆಗೆಂದು ಮನೆಗೆ ಬಂದ ಆಶಾ ಕಾರ್ಯಕರ್ತೆಯರೊಂದಿಗೆ ಕೆಲವರು ಜಗಳ ತೆಗೆಯುತ್ತಿರುವುದು ವರದಿಯಾಗಿದೆ. ಆ ರೀತಿ ತೊಂದರೆ ಕೊಡುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆರೋಗ್ಯ ಇಲಾಖೆಯವರಿಗೆ ಸೂಚಿಸಲಾಗಿದೆ. ಮೃತರಾದವರ ಮನೆಗೆ ತೆರಳಿ ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸುವಂತೆ ಹಾಗೂ ಸೋಂಕು ತಗುಲಿರುವುದು ದೃಢಪಟ್ಟರೆ ಹೋಂ ಕ್ವಾರಂಟೈನ್ ಮಾಡುವಂತೆ ನಿರ್ದೇಶನ ಕೊಡಲಾಗಿದೆ’ ಎಂದು ತೆಲಸಂಗ ತಾಲ್ಲೂಕು ಪಂಚಾಯಿತಿ ಇಒ ರವಿ ಬಂಗಾರೆಪ್ಪನವರ ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು