ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ವಾಸ್ತವ್ಯಕ್ಕೆ ‘ಬ್ಯಾರಕ್‌’ ಸಿದ್ಧ

ಅಧಿವೇಶನದ ಭದ್ರತೆಗೆ ಬರುವ 2ಸಾವಿರ ಮಂದಿಗೆ ಅವಕಾಶ
Last Updated 26 ಅಕ್ಟೋಬರ್ 2018, 14:27 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿ ಸೆಂಬರ್‌ನಲ್ಲಿ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದ ಭದ್ರತೆಗೆ ನಿಯೋಜಿಸಲಾಗುವ ಪೊಲೀಸರು ವಾಸ್ತವ್ಯಕ್ಕಾಗಿ ಪರದಾಡುವ ಪ್ರಮೇಯ ಈ ಬಾರಿ ತಪ್ಪುವ ನಿರೀಕ್ಷೆ ಇದೆ. ಏಕೆಂದರೆ, ಅವರ ಅನುಕೂಲಕ್ಕಾಗಿ ನಿರ್ಮಿಸಿರುವ ಬ್ಯಾರಕ್‌ಗಳನ್ನು ಒಳಗೊಂಡ (ವಾಸ್ತವ್ಯಕ್ಕೆ ವ್ಯವಸ್ಥೆಯುಳ್ಳ) ಬಹುಉದ್ದೇಶಿತ ಭವನ ಎಪಿಎಂಸಿ ರಸ್ತೆಯ ಕೆಎಸ್‌ಆರ್‌ಪಿ ಮೈದಾನದ ಬಳಿ ಅಂತಿಮ ಸ್ಪರ್ಶ ಪಡೆಯುತ್ತಿದೆ.

ವರ್ಷಕ್ಕೊಮ್ಮೆ ಇಲ್ಲಿ 10 ದಿನಗಳ ಅಧಿವೇಶನ ನಡೆಸಲಾಗುತ್ತದೆ. ಆಗ ಕರ್ತವ್ಯಕ್ಕೆಂದು ರಾಜ್ಯದ ವಿವಿಧೆ ಜಿಲ್ಲೆಗಳಿಂದ 4ಸಾವಿರಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಅವರು ಎರಡು ವಾರಕ್ಕೂ ಹೆಚ್ಚು ದಿನಗಳು ಇಲ್ಲಿರಬೇಕಾಗುತ್ತದೆ. ಅವರಿಗಾಗಿ ಬ್ಯಾರಕ್‌ ನಿರ್ಮಿಸಲೆಂದು ಹೋದ ವರ್ಷದ ಬಜೆಟ್‌ನಲ್ಲಿ ಸರ್ಕಾರವು ₹ 3 ಕೋಟಿ ಅನುದಾನ ನಿಗದಿಪಡಿಸಿತ್ತು. ಕೆಎಸ್‌ಆರ್‌ಪಿ ಮೈದಾನದ ಬಳಿಯ ಜಾಗದಲ್ಲಿ ಭವನ ನಿರ್ಮಾಣ ಕಾಮಗಾರಿಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದರು. ವರ್ಷದೊಳಗೆ ಇಲ್ಲಿನ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ಉದ್ಘಾಟನೆಗೆ ಸಿದ್ಧವಾಗಿದೆ.

ತೊಂದರೆ ತಪ್ಪಲಿದೆ:

‘ಅಂದುಕೊಂಡಂತೆಯೇ ಕಾಮಗಾರಿ ಪೂರ್ಣಗೊಂಡಿದೆ. ಅಲ್ಲಿ 2ಸಾವಿರ ಪೊಲೀಸರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಬಹುದಾಗಿದೆ. ಇದರಿಂದಾಗಿ, ಅಧಿವೇಶನ ಸಂದರ್ಭದಲ್ಲಿ ಪೊಲೀಸರ ವಾಸ್ತವ್ಯಕ್ಕೆ ಆಗುತ್ತಿದ್ದ ತೊಂದರೆ ತಪ್ಪಿಸಬಹುದಾಗಿದೆ. ಕೆಲವೇ ದಿನಗಳಲ್ಲಿ ಗೃಹಸಚಿವರನ್ನು ಆಹ್ವಾನಿಸಿ ಶೀಘ್ರವೇ ಉದ್ಘಾಟನೆ ನೆರವೇರಿಸಲಾಗುವುದು. ಈ ಅಧಿವೇಶನಕ್ಕೆ ಬರುವ ಸಿಬ್ಬಂದಿಗೆ ಬಳಕೆಗೆ ಮುಕ್ತಗೊಳ್ಳಲಿದೆ‌’ ಎಂದು ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ಸಾಲುವುದಿಲ್ಲ. ಹೀಗಾಗಿ, ಇನ್ನೂ ಎರಡು ಭವನ ನಿರ್ಮಿಸುವ ಅಗತ್ಯವಿದೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಗೃಹಸಚಿವರಿಗೆ ಅಧಿವೇಶನ ಸಂದರ್ಭದಲ್ಲಿ ಮನವಿ ಸಲ್ಲಿಸಲಾಗುವುದು. ಅನುದಾನ ದೊರೆತರೆ ಶೀಘ್ರವೇ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ದೂರದ ಊರುಗಳಿಂದ ಬರುವ ಪೊಲೀಸರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಭವನಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಪರದಾಡುತ್ತಿದ್ದರು:

ಈ ಮುನ್ನ ಬ್ಯಾರಕ್‌ ನಿರ್ಮಿಸಲು ಹೊರವಲಯದಲ್ಲಿರುವ ಕೆಐಎಡಿಬಿ ಜಾಗ ಗುರುತಿಸಲಾಗಿತ್ತು. ಆದರೆ ತುಂಬಾ ದೂರವಾಗಿದ್ದರಿಂದ ಆ ಜಾಗವನ್ನು ಕೈಬಿಡಲಾಯಿತು.

ಅಧಿವೇಶನಗಳ ಸಂದರ್ಭದಲ್ಲಿ, ಪೊಲೀಸರಿಗೆ ರಾಮತೀರ್ಥನಗರದ ಕೆಐಎಡಿಬಿ ಸಮುದಾಯ ಭವನ, ಡಿಎಆರ್‌ ಆವರಣದಲ್ಲಿರುವ ದೇವಾಲಯದ ಸಭಾಂಗಣ, ಎಪಿಎಂಸಿ ಆವರಣದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ಪೊಲೀಸರಿಗೆ ವಸತಿ, ಶೌಚಾಲಯ, ಸ್ನಾನಕ್ಕೆ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ಊಟದ ವ್ಯವಸ್ಥೆಯೂ ಸರಿ ಇರಲಿಲ್ಲ ಎನ್ನುವ ಆರೋಪಗಳು ಕೇಳಿಬಂದಿದ್ದವು.

ಟ್ಯಾಂಕರ್‌ನಲ್ಲಿ ತಂದಿದ್ದ ನೀರಿನಿಂದ ಪೊಲೀಸರು ಬಯಲಿನಲ್ಲಿಯೇ ಸ್ನಾನ ಮಾಡುತ್ತಿದ್ದ, ನೀರು ಖಾಲಿಯಾಗುತ್ತದೆ ಎನ್ನುವ ಧಾವಂತದಲ್ಲಿ ಸ್ನಾನಕ್ಕೆ ಮುಗಿಬಿದ್ದು ಪೊಲೀಸರು ತೊಂದರೆ ಅನುಭವಿಸಿದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹಬ್ಬಿದ್ದವು. ಇದು ಅಧಿವೇಶನಲ್ಲೂ ಚರ್ಚೆಯಾಗಿತ್ತು. ನಂತರ, ಅಂದಿನ ಗೃಹ ಸಚಿವ ಡಾ.ಜಿ. ಪರಮೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರ ಕುಂದುಕೊರತೆಗಳನ್ನು ಆಲಿಸಿದ್ದರು. ಪೊಲೀಸರ ವಾಸ್ತವ್ಯಕ್ಕೆ ಶಾಶ್ವತ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು. ನಂತರ ಭವನ ನಿರ್ಮಿಸುವ ಕುರಿತು ಅನುದಾನ ನಿಗದಿಪಡಿಸಿ, ಬಜೆಟ್‌ನಲ್ಲಿಯೇ ಅಧಿಕೃತವಾಗಿ ಪ್ರಕಟಿಸಲಾಗಿತ್ತು. ಬಳಿಕ ಭೂಮಿಪೂಜೆ ನೆರವೇರಿತ್ತು.

ಅಲ್ಲಿನ ಬದಲಿಗೆ:

ಸುವರ್ಣ ವಿಧಾನಸೌಧದ ಸುತ್ತಮುತ್ತ ಮಾತ್ರವಲ್ಲದೇ, ವಿವಿಧೆಡೆಯ ಪ್ರತಿಭಟನಾ ವೇದಿಕೆಗಳ ಬಳಿ ಹಾಗೂ ಹೆದ್ದಾರಿ ಬಳಿ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಹೀಗಾಗಿ, ಅಲ್ಲಿಗೆ ಸಮೀಪವೇ ಜಾಗ ನೀಡಿದರೆ ಅನುಕೂಲವಾಗುತ್ತದೆ; ಇದರಿಂದ, ಸಾರಿಗೆ ವೆಚ್ಚ ತಗ್ಗಿಸಬಹುದು ಎಂದು ಯೋಜಿಸಲಾಗಿತ್ತು. ಹಲಗಾ, ಬಸ್ತವಾಡದಲ್ಲಿ ಜಿಲ್ಲಾಡಳಿತದಿಂದ ಜಾಗ ತೋರಿಸಲಾಗಿತ್ತು. ಕೊನೆಗೆ, ಕೆಎಸ್‌ಆರ್‌ಪಿ ಆವರಣದ ಜಾಗ ಅಂತಿಮಗೊಳಿಸಲಾಗಿತ್ತು. ನಿರ್ಮಾಣದ ಮೇಲ್ವಿಚಾರಣೆಯನ್ನು ಕೆಎಸ್‌ಆರ್‌ಪಿಗೆ ವಹಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT