ಗುರುವಾರ , ಮಾರ್ಚ್ 23, 2023
29 °C
ಹಳ್ಳೂರಿನ ಶಂಕರೆಪ್ಪ ಸಂತಿ ಸರ್ಕಾರಿ ಕಾಲೇಜು

ಮೂಡಲಗಿ: ಗ್ರಾಮೀಣ ಮಕ್ಕಳ ‘ವಿದ್ಯಾಕಾಶಿ’

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ (ಬೆಳಗಾವಿ): ತಾಲ್ಲೂಕಿನ ಹಳ್ಳೂರ ಗ್ರಾಮದ ಶಂಕರೆಪ್ಪ ರಾಮಪ್ಪ ಸಂತಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಲವು ಕಾರಣಗಳಿಂದ ಗಮನಸೆಳೆಯುತ್ತಿದೆ.

ಆವರಣಕ್ಕೆ ಕಾಲಿಡುತ್ತಿದ್ದಂತೆ ಗಿಡಗಳು ಸ್ವಾಗತಿಸುತ್ತವೆ. ಹಚ್ಚಹಸುರಿನ ಪರಿಸರದ ಮಡಿಲಲ್ಲಿ ವಿವಿಧ ಶೈಕ್ಷಣಿಕ ಸೌಲಭ್ಯಗಳನ್ನು ಕಾಲೇಜು ಹೊಂದಿದೆ.

ಗ್ರಾಮೀಣ ಮಕ್ಕಳಿಗೆ ಕಾಲೇಜು ಶಿಕ್ಷಣ ದೊರೆಯಲಿ ಎನ್ನುವ ಉದ್ದೇಶದಿಂದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಆಸಕ್ತಿಯಿಂದಾಗಿ 2007ರಲ್ಲಿ ಗ್ರಾಮದಲ್ಲಿ ಕಾಲೇಜು ಪ್ರಾರಂಭಗೊಂಡಿತು.

ಗ್ರಾಮದ ಸ್ವಾತಂತ್ರ ಹೋರಾಟಗಾರ, ಶಿಕ್ಷಣ ಪ್ರೇಮಿ ದಿ.ಶಂಕರೆಪ್ಪ ರಾಮಪ್ಪ ಸಂತಿ ಅವರ ಸ್ಮರಣೆಯಲ್ಲಿ ಅವರ ಪುತ್ರರಾದ ಬಸಪ್ಪ ಸಂತಿ, ಮಹಾದೇವ ಸಂತಿ, ರಾಮಪ್ಪ ಸಂತಿ ಮತ್ತು ಸೂರ್ಯಕಾಂತ ಸಂತಿ ಸಹೋದರರು ನೀಡಿದ ಒಂದೂವರೆ ಎಕರೆ ದಾನದ ಫಲವಾಗಿ ಕಾಲೇಜು ವಿದ್ಯಾಕಾಶಿಯಾಗಿದೆ.

ಆರಂಭದಲ್ಲಿ 15 ಇದ್ದ ‍ದಾಖಲಾತಿ 2020-21ನೇ ಸಾಲಿನಲ್ಲಿ 400ಕ್ಕೆ ಏರಿದೆ.

‘ಪ್ರೌಢಶಾಲೆ ಮುಗಿಸಿ ಶಿಕ್ಷಣ ಮೊಟಕುಗೊಳಿಸುತ್ತಿದ್ದ ಈ ಭಾಗದ ತೋಟಪಟ್ಟಿಯ ಅದೆಷ್ಟೋ ಹೆಣ್ಣು ಮಕ್ಕಳಿಗೆ ಕಾಲೇಜಿನಿಂದ ನೆರವಾಗಿದೆ. ಉನ್ನತ ಶಿಕ್ಷಣ ಪಡೆಯುವಂತಾಗಿದೆ’ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ ಸಂತಿ ತಿಳಿಸಿದರು.

ಉತ್ತಮ ಫಲಿತಾಂಶ: ‘ಕೆಪಿಎಸ್‌ಸಿ ಮೂಲಕ ಆಯ್ಕೆಯಾಗಿರುವ ಪ್ರತಿಭಾವಂತ 9 ಜನ ಉಪನ್ಯಾಸಕರು ಇಲ್ಲಿದ್ದಾರೆ. ಪಾಠ, ವಿದ್ಯಾರ್ಥಿಗಳ ಗುಂಪು ಅಧ್ಯಯನ, ಚರ್ಚೆ, ವಿಷಯಾಧಾರಿತ ರಸಪ್ರಶ್ನೆ, ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬೋಧನೆ, ವಿಚಾರಸಂಕಿರಣ, ಕಾರ್ಯಾಗಾರಗಳ ಮೂಲಕ ಜ್ಞಾನ ವೃದ್ಧಿಗೆ ಉಪನ್ಯಾಸಕರು ಒತ್ತು ಕೊಡುತ್ತಿದ್ದಾರೆ’ ಎಂದು ಪ್ರಾಚಾರ್ಯ ಎಸ್.ಎಸ್. ಬೆಕ್ಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘2019-20ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ 95.16ರಷ್ಟು ಫಲಿತಾಂಶ ಗಳಿಸಿದೆ. ವಾಣಿಜ್ಯದಲ್ಲಿ ಸುಪ್ರೀತಾ ಪಾಲಭಾಂವಿ ಶೇ 95.16 ಅಂಕ ಪಡೆದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಪ್ರತಿ ವರ್ಷವೂ ರ‍್ಯಾಂಕ್‌ ಗಿಟ್ಟಿಸಿಕೊಳ್ಳುತ್ತಿರುವುದು ಕಾಲೇಜಿನ ವಿಶೇಷ’ ಎನ್ನುತ್ತಾರೆ ಅವರು.

ಕ್ರೀಡೆಗೂ ಸೈ: ಕ್ರೀಡೆಗೂ ಇಲ್ಲಿ ಉತ್ತೇಜನ ನೀಡಲಾಗುತ್ತಿದೆ. ಕೊಕ್ಕೊದಲ್ಲಿ ರೂಪಾ ನಂದಗಾಂವಮಠ, ರೇಖಾ ರೊಡ್ಡನ್ನವರ, ಕಸ್ತೂರಿ ದೊಡಮನಿ, ಕಬಡ್ಡಿಯಲ್ಲಿ ಅಕ್ಷತಾ ಸಪ್ತಸಾಗರ, ಯೋಗದಲ್ಲಿ ಭರಮಪ್ಪ ರೊಡ್ಡನ್ನವರ ಮತ್ತು ಡಿಸ್ಕಸ್ ಥ್ರೋದಲ್ಲಿ ಅಂಜಲಿ ಮಂಗಳೂರು ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿದ್ದಾರೆ.

ಕ್ರೀಡಾಕೂಟಗಳಿಗೆ ಆತಿಥ್ಯ ನೀಡಿ ವಿದ್ಯಾರ್ಥಿಗಳಲ್ಲಿ ಕ್ರೀಡಾ ಸ್ಫೂರ್ತಿ ತುಂಬಲಾಗುತ್ತಿದೆ. ಗಿಡಗಳಿಗೆ ನೀರುಣಿಸಲು ಶಿಕ್ಷಕರೆಲ್ಲ ಸೇರಿ ಡ್ರಿಪ್‌ ವ್ಯವಸ್ಥೆ ಮಾಡಿದ್ದಾರೆ. ನಿಯಮಿತ ಪಾಲಕರ ಸಭೆ ನಡೆಯುತ್ತದೆ. ಸ್ವಾತಂತ್ರ್ಯ ಹೋರಾಟಗಾರ ಶಂಕರೆಪ್ಪ ಸಂತಿ ಅವರ ಪುತ್ಥಳಿ ಸ್ಥಾಪಿಸಲಾಗಿದೆ.

ಸಮುದಾಯದ ಕೊಡುಗೆ: ಕಾಲೇಜು ಅಭಿವೃದ್ಧಿಗೆ ಗ್ರಾಮ ಪಂಚಾಯ್ತಿಯೂ ಆದ್ಯತೆ ನೀಡಿರುವುದು ಗಮನಾರ್ಹ. ಸಭಾಭವನ, ಕಾಂಪೌಂಡ್, ರಸ್ತೆ, ನೀರಿನ ಟ್ಯಾಂಕ್, ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದೆ. ₹ 65 ಲಕ್ಷ ಅನುದಾನ ಒದಗಿಸಿದೆ.

‘ಕಾಲೇಜು ಅಭಿವೃದ್ಧಿ ವಿಷಯದಲ್ಲಿ ಎಲ್ಲರ ಸಹಯೋಗ ಇದೆ. ಇದು ಊರಿಗೆ ದೇಗುಲ ಇದ್ದಂತೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮಣ ಕತ್ತಿ.

ಬಸವೇಶ್ವರ, ಮಹಾವೀರ, ಹಳ್ಳದರಂಗ, ಹಾಲು ಉತ್ಪಾದಕರ ಸಹಕಾರಿ ಸಂಘಗಳೂ ಬೆಳವಣಿಗೆಗೆ ಕೈಜೋಡಿಸಿವೆ.

‘ಶಾಸಕರ ಮಾರ್ಗದರ್ಶನದಲ್ಲಿ ₹ 6 ಲಕ್ಷ ವೆಚ್ಚದಲ್ಲಿ ಉದ್ಯಾನ ಅಭಿವೃದ್ಧಿಪಡಿಸಲಾಗುತ್ತಿದೆ. ₹ 5 ಲಕ್ಷದಲ್ಲಿ ಮೈದಾನ, ಗ್ಯಾಲರಿ ನಿರ್ಮಿಸಲಾಗುವುದು’ ಎಂದು ಪಿಡಿಒ ಹಣಮಂತ ವೈ. ತಾಳಿಕೋಟಿ ತಿಳಿಸಿದರು.

**
ಮಾದರಿಯಾಗಿದೆ
13 ವರ್ಷಗಳ ಹಿಂದೆ ಪ್ರಾರಂಭಿಸಿದ್ದ ಕಾಲೇಜು ಮಾದರಿಯಾಗಿ ಬೆಳೆದಿದ್ದು ಖುಷಿ ಎನಿಸುತ್ತದೆ. ಹಳ್ಳೂರ ಗ್ರಾಮದ ಜನರ ಶೈಕ್ಷಣಿಕ ಕಾಳಜಿ, ಒಗ್ಗಟ್ಟು ಮಾದರಿಯಾಗಿದೆ
–ಬಾಲಚಂದ್ರ ಜಾರಕಿಹೊಳಿ, ಶಾಸಕ, ಅರಭಾವಿ

**
ಬೇಡಿಕೆ ಇದೆ
ಇಲ್ಲಿ ಸರ್ಕಾರಿ ಪದವಿ ಕಾಲೇಜು ಪ್ರಾರಂಭಿಸಬೇಕು ಎಂದು ಗ್ರಾಮದ ಜನರ ಬೇಡಿಕೆ ಇದ್ದು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಗಮನಕ್ಕೆ ತರಲಾಗಿದೆ.
–ಉಮೇಶ ಸಂತಿ, ಅಧ್ಯಕ್ಷ, ಸಿಡಿಸಿ

ಸಂಪರ್ಕಕ್ಕೆ ಪ್ರಾಚಾರ್ಯ: ಮೊ:9448735863.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು