‘ಭಕ್ತಿಯ ಸರಳ ಮಾರ್ಗ ತೋರಿಸಿದ ದಾಸರು’

ಮಂಗಳವಾರ, ಏಪ್ರಿಲ್ 23, 2019
33 °C
ಹರಿದಾಸ ಹಬ್ಬದಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿಕೆ

‘ಭಕ್ತಿಯ ಸರಳ ಮಾರ್ಗ ತೋರಿಸಿದ ದಾಸರು’

Published:
Updated:
Prajavani

ಬೆಳಗಾವಿ: ‘ಪುರಂದರದಾಸರು ಭಕ್ತಿಯ ಸರಳ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಇಲ್ಲಿನ ಭಾಗ್ಯನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ಹರಿದಾಸ ಸೇವಾ ಸಮಿತಿಯವರು ಹಮ್ಮಿಕೊಂಡಿರುವ ‘ಹರಿದಾಸ ಹಬ್ಬ’ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಭಕ್ತಿ ಮಾರ್ಗ ತುಂಬಾ ಶ್ರೇಷ್ಠವಾದುದು. ಗಿಡದಲ್ಲಿರುವ ನೂರು ಕಾಗೆಗಳನ್ನು ಹಾರಿಸಲು ಒಂದೇ ಒಂದು ಕಲ್ಲು ಸಾಕು. ಅಂತೆಯೇ ಭಕ್ತಿಯಿಂದ ಹೇಳುವ ಒಂದೇ ಒಂದು ನಾಮಸ್ಮರಣೆ ನೂರಾರು ಪಾಪಗಳನ್ನು ಕಳೆಯುತ್ತದೆ’ ಎಂದು ತಿಳಿಸಿದರು.

‘ದಾಸ ಸಾಹಿತ್ಯವನ್ನು ಉತ್ತಮ ರೀತಿಯಲ್ಲಿ ಸಂಘಟಿಸಿ ಭಕ್ತಿಯ ಮಾರ್ಗವನ್ನು ಜಾಗೃತಗೊಳಿಸುತ್ತಿರುವ ಹರಿದಾಸ ಸೇವಾ ಸಮಿತಿಯವರ ಕಾರ್ಯ ಅಭಿನಂದನಾರ್ಹ. ಅದರಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದಾಸ ಸಾಹಿತ್ಯ, ವಿಷ್ಣುಸಹಸ್ರನಾಮ ಕುರಿತಂತೆ ಜಾಗೃತಿ ಮೂಡಿಸುತ್ತಿರುವ ‘ಅನಂತಾದ್ರೀಶ ಪ್ರಶಸ್ತಿ’ಯನ್ನು ಇಲ್ಲಿ ಸ್ವೀಕರಿಸಿದ ಅರಳು ಮಲ್ಲಿಗೆ ಪಾರ್ಥಸಾರಥಿ ಅವರ ಕಾರ್ಯವೂ ಶ್ಲಾಘನೀಯ. ಅವರು ದಾಸಸಾಹಿತ್ಯ, ಶಾಸ್ತ್ರ ಸಾಹಿತ್ಯವೆಂಬ ರಥದ ಸಾರಥಿಗಳು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಶಸ್ತಿ ಸ್ವೀಕರಿಸಿದ ಪಾರ್ಥಸಾರಥಿ ಮಾತನಾಡಿ, ‘ಅನಂತಾರ್ದೀಶರರು ಬೆಳಗಾವಿ ಜಿಲ್ಲೆಯ ಕಿತ್ತೂರಿನವರು. ನೂರಾರು ಎಕರೆ ಜಮೀನು ಹೊಂದಿದ್ದ ಅವರು ಎಲ್ಲ ಆಸ್ತಿಯನ್ನೂ ದಾನ ಮಾಡಿ ಪುರಂದರ ದಾಸರಂತೆ ದಾಸರಾದರು. ಅವರ ಹೆಸರಿನ ಈ ಪ್ರಶಸ್ತಿಯನ್ನು ಸ್ವೀಕರಿಸಲು ಹೆಮ್ಮೆಯಾಗುತ್ತದೆ’ ಎಂದರು.

‘ಮನುಷ್ಯ ಹೊರಗಣ್ಣು ಮುಚ್ಚಿ ಒಳಗಣ್ಣನ್ನು ತೆರೆದಾಗ ಅಹಂಕಾರ, ಅಜ್ಞಾನ, ದುಃಖ, ಶೋಕವೆಲ್ಲ ನಾಶವಾಗುತ್ತವೆ. ಒಳಗಣ್ಣನ್ನು ತೆರೆಯುವ ಸುಲಭ ಮಾರ್ಗವನ್ನೇ ದಾಸರು ಹೇಳಿಕೊಟ್ಟಿದ್ದಾರೆ’ ಎಂದು ಪ್ರತಿಪಾದಿಸಿದರು.

ಪಂ.ರಾಯಚೂರು ಶೇಷಗಿರಿದಾಸ ಮಾತನಾಡಿದರು. ಪೇಜಾವರ ಶ್ರೀಗಳಿಗೆ ಫಲ ಹಾಗೂ ನಾಣ್ಯ ತುಲಾಭಾರ ಸಮರ್ಪಿಸಲಾಯಿತು.

ಮೈಸೂರು ರಾಮಚಂದ್ರಾಚಾರ್ಯ ‘ದಾಸವಾಣಿ’ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಗುರುಪ್ರಸಾದ ನಗರದ ರಾಘವೇಂದ್ರ ಭಜನಾ ಮಂಡಳ, ಭಾಗ್ಯನಗರದ ಪ್ರೇರಣಾ ಪ್ರೀತಿ ಭಜನಾ ಮಂಡಳ, ಅನಂತಶಯನ ಗಲ್ಲಿಯ ಅನಂತಪುರಂದರ ಭಜನಾ ಮಂಡಳ ಹಾಗೂ ಕೋನವಾಳ ಗಲ್ಲಿಯ ವಿಜಯ ವಿಠ್ಠಲ ಭಜನಾ ಮಂಡಳದವರು ಭಜನೆ ಕಾರ್ಯಕ್ರಮ ನೀಡಿದರು.

ಮುಖಂಡರಾದ ಗುರುರಾಜಾಚಾರ್ಯ ಜೋಶಿ, ಮಧ್ವಾಚಾರ್ಯ ಆಯಿ, ಹಣಮಂತ ಕೊಟಬಾಗಿ, ರಾಘವೇಂದ್ರ ಬೆಳಗಾಂವಕರ, ಹರಿದಾಸ ಸೇವಾ ಸಮಿತಿಯ ಕೇಶವ ಮಾಹುಲಿ, ಜಯತೀರ್ಥ ಸವದತ್ತಿ, ಭೀಮಸೇನ ಮಿರ್ಜಿ, ಸಂಜೀವ ಮೊರಪ್ಪನವರ, ಪ್ರಭಾಕರ ಸರಳಾಯಿ, ಶ್ರೀಧರ ಹಲಗತ್ತಿ, ನಂದಕುಮಾರ ಕರಗುಪ್ಪಿಕರ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !