ಬುಧವಾರ, ಜೂನ್ 23, 2021
22 °C

250ಕ್ಕೂ ಹೆಚ್ಚು ಪದಕ, ಪ್ರಶಸ್ತಿಗಳಿಗೆ ಭಾಜನ, 71ರ ಹರೆಯದಲ್ಲೂ ಈಜುವ ಉತ್ಸಾಹ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ಇಲ್ಲಿನ ಹಿರಿಯ ಈಜುಪಟು ಲಕ್ಷ್ಮಣ ಕುಂಬಾರ (71) ಅಕ್ಟೋಬರ್‌ನಲ್ಲಿ ವಿಶಾಖಪಟ್ಟಣದಲ್ಲಿ ನಡೆಯಲಿರುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಪ್ರಸ್ತುತ ಮಹಾಂತೇಶ ನಗರ ನಿವಾಸಿಯಾದ ಅವರು ಕೆಎಲ್‌ಇ ಸಂಸ್ಥೆ ಅವರಣದಲ್ಲಿರುವ ಈಜುಕೊಳದಲ್ಲಿ ನಿತ್ಯವೂ ಅಭ್ಯಾಸ ಮಾಡುತ್ತಾರೆ.  ರೇಲ್ವೆ ಇಲಾಖೆಯ ಆರ್‌ಎಂಎಸ್‌ (ರೇಲ್ವೆ ಮೇಲ್ ಸರ್ವಿಸ್) ವಿಭಾಗದಲ್ಲಿ ಕಾರ್ಯನಿರ್ವಹಿಸಿ ಹತ್ತು ವರ್ಷದ ಹಿಂದೆ ನಿವೃತ್ತರಾಗಿದ್ದಾರೆ. ಇದಾದ ನಂತರವೂ ಈಜುವ ಹವ್ಯಾಸ ಮತ್ತು ಸ್ಪರ್ಧೆಗಳಲ್ಲಿ ಪೈಪೋಟಿ ತೋರುವ ಉತ್ಸಾಹ ಕಳೆದುಕೊಂಡಿಲ್ಲ. ಇದು ಯುವಕರಿಗೆ ಮಾದರಿಯಾಗಿದೆ.

ಈಜು ಸ್ಪರ್ಧೆಗಳಲ್ಲಿ 42 ವರ್ಷಗಳಿಂದಲೂ ಪಾಲ್ಗೊಳ್ಳುತ್ತಿದ್ದು, ರಾಜ್ಯ, ರಾಷ್ಟ್ರೀಯ ಹಾಗೂ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ 225 ಚಿನ್ನ, ಬೆಳ್ಳಿ, ಕಂಚಿನ ಪದಕ ಹಾಗೂ ಪಾರಿತೋಷಕಗಳನ್ನು ತಮ್ಮದಾಗಿಸಿಕೊಂಡ ಕೀರ್ತಿ ಅವರದು. ನಿತ್ಯವೂ ಒಂದು ಗಂಟೆ ಯೋಗ ಹಾಗೂ ವಾಕಿಂಗ್‌ ಮಾಡುತ್ತಾರೆ. ಇದಲ್ಲದೇ, ಈಜುಕೊಳದಲ್ಲಿ 3 ಕಿ.ಮೀ.ನಷ್ಟು ಈಜುತ್ತಾರೆ. ಈಚೆಗೆ ನಡೆದ ರಾಜ್ಯ ಮಾಸ್ಟರ್ಸ್‌ ಈಜುಸ್ಪರ್ಧೆಯಲ್ಲಿ 4 ಚಿನ್ನದ ಪದಕಗಳಿಗೆ ಕೊರಳೊಡ್ಡಿ, ರಾಷ್ಟ್ರೀಯ ಕೂಟಕ್ಕೆ ಆಯ್ಕೆಯಾಗಿದ್ದಾರೆ. ದಣಿವರಿಯದ ಸಾಧಕರೆನಿಸಿದ್ದಾರೆ. ಬೆಳಗಾವಿ ಸ್ವಿಮ್ಮರ್ಸ್‌ ಕ್ಲಬ್‌ನ ಸಂಸ್ಥಾಪಕ ಸದಸ್ಯರೂ ಆಗಿದ್ದಾರೆ.

ಆಸಕ್ತಿಯಿಂದ

‘ಪ್ರೌಢಶಾಲಾ ಹಂತದಲ್ಲಿ ಇದ್ದಾಗಿನಿಂದಲೂ ನನಗೆ ಕ್ರೀಡೆಯಲ್ಲಿ ಬಹಳ ಆಸಕ್ತಿ ಇತ್ತು; ವಿವಿಧ ಆಟೋಟಗಳಲ್ಲಿ ಭಾಗವಹಿಸುತ್ತಿದ್ದೆ. ಪದವಿ ವ್ಯಾಸಂಗ ಮಾಡುತ್ತಿದ್ದಾಗ ಬಿಜಾಪುರದ (ಈಗ ವಿಜಯಪುರ ಆಗಿದೆ) ಬಿಎಲ್‌ಡಿ ಕಾಲೇಜಿನ ಹಾಕಿ ತಂಡದಲ್ಲಿದ್ದೆ. ಬೆಳಗಾವಿಗೆ ವರ್ಗಾವಣೆಯಾಗಿ ಬಂದ ನಂತರ ಈಜುವ ಹವ್ಯಾಸ ಮುಂದುವರಿಸುತ್ತಿದ್ದೇನೆ. 1977ರಿಂದಲೂ ಈ ಅಭ್ಯಾಸ ಜೀವನಶೈಲಿಯೇ ಆಗಿ ಹೋಗಿದೆ. ಇದರಿಂದ ಆರೋಗ್ಯ ಕಾಪಾಡಿಕೊಳ್ಳುವುದೂ ಸಾಧ್ಯವಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲಿಗೆ ತಿಲಕವಾಡಿಯ ಮೊದಲ ಗೇಟ್‌ ಬಳಿಯ ಕಾಂಗ್ರೆಸ್‌ ಬಾವಿಯಲ್ಲಿ ಈಜುತ್ತಿದ್ದೆ. ಗೋವಾವೇಸ್‌ ಬಳಿ ಪಾಲಿಕೆಯಿಂದ ಈಜುಕೊಳ ನಿರ್ಮಿಸಿದ ಬಳಿಕ ಅಲ್ಲಿ ಅಭ್ಯಾಸ ಮಾಡುತ್ತಿದ್ದೆ. ಈಗ, ಮಹಾಂತೇಶ ನಗರದಲ್ಲಿ ಮನೆ ಇರುವುದರಿಂದ ಕೆಎಲ್‌ಇ ಈಜುಕೊಳಕ್ಕೆ ಹೋಗುತ್ತಿರುತ್ತೇನೆ. ಪತ್ನಿ ಲೀಲಾವತಿ ಕುಟುಂಬದ ನಿರ್ವಹಣೆ ಮಾಡಿಕೊಳ್ಳುತ್ತಿದ್ದುದ್ದರಿಂದ, ಈ ಸಾಧನೆ ಸಾಧ್ಯವಾಗಿದೆ. ನಾಲ್ವರು ಪುತ್ರಿಯರಿದ್ದು ಅವರಿಗೆ ಮದುವೆಯಾಗಿದೆ. ಕ್ರೀಡೆಯಲ್ಲಿ ತೊಡಗುವಂತೆ ಮೊಮ್ಮಕ್ಕಳಿಗೂ ಹೇಳುತ್ತಿರುತ್ತೇನೆ’ ಎನ್ನುತ್ತಾರೆ ಅವರು.

ದೇಹದಾನ ವಾಗ್ದಾನ

ನಿಧನದ ನಂತರ ತಮ್ಮ ಕಣ್ಣುಗಳು ಹಾಗೂ ದೇಹವನ್ನು ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರಕ್ಕೆ ದಾನ ಮಾಡುವ ವಾಗ್ದಾನವನ್ನೂ ಈ ದಂಪತಿ ಮಾಡಿದ್ದಾರೆ.‌

ಈಜಿನಲ್ಲಿ ಅಪಾರ ಸಾಧನೆ ತೋರಿರುವ ಅವರನ್ನು ಲಿಂಗಾಯತ ಸಂಘಟನೆಯಿಂದ ಈಚೆಗೆ ಸತ್ಕರಿಸಲಾಯಿತು. ನಾಗನೂರ ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ, ಸಂಸದ ಸುರೇಶ ಅಂಗಡಿ, ಶಾಸಕ ಅಭಯ ಪಾಟೀಲ, ವಿಧಾನಪರಿಷತ್‌ ವಿರೋಧ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಮುಖಂಡ ಶಶಿಭುವನ ಪಾಟೀಲ ಸತ್ಕರಿಸಿ ಶುಭ ಹಾರೈಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು