173 ಬಾರಿ ದಾನ; ಸಂಕಷ್ಟದಲ್ಲಿ ನೆರವು

ಭಾನುವಾರ, ಜೂಲೈ 21, 2019
25 °C
ವಿಶ್ವ ರಕ್ತ ದಾನ ದಿನ ಜೂನ್ 14ರಂದು

173 ಬಾರಿ ದಾನ; ಸಂಕಷ್ಟದಲ್ಲಿ ನೆರವು

Published:
Updated:
Prajavani

ಬೆಳಗಾವಿ: ಇಲ್ಲೊಬ್ಬರು ಬರೋಬ್ಬರಿ 36 ವರ್ಷಗಳಿಂದ 173 ಬಾರಿ ರಕ್ತ ನೀಡುವ ಮೂಲಕ ಗಮನಸೆಳೆದಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ರೋಗಿಗೆ ಹಾಗೂ ಅವರ ಕುಟುಂಬದವರಿಗೆ ನೆರವಾಗಿ ಇತರರಿಗೆ ಪ್ರೇರಣೆ ನೀಡುತ್ತಿದ್ದಾರೆ. ರಕ್ತ ದಾನ ಶ್ರೇಷ್ಠವಾದುದು ಎನ್ನುವುದನ್ನು ನಿರೂಪಿಸುತ್ತಾ ಮಾದರಿಯಾಗಿದ್ದಾರೆ.

ಅನಗೋಳದ ನಿವಾಸಿ ವಿನಾಯಕ ಮಾರುತಿ ದೇಸಾಯಿ ಈ ದಾನಿ. ಬಿ.ಎ. ಪದವೀಧರರಾದ ಅವರು, ಪ್ರಸ್ತುತ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸ್ವಯಂಸೇವಕರೂ ಆಗಿದ್ದಾರೆ. ಆರ್‌ಪಿಡಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾಗಿನಿಂದಲೂ ಅಂದರೆ 1983ರಿಂದಲೂ ರಕ್ತ ದಾನ ಮಾಡುತ್ತಾ ಬಂದಿದ್ದಾರೆ. ಇದರಲ್ಲಿ ಶತಕವನ್ನೂ ಬಾರಿಸಿ, ದ್ವಿಶತಕ ಸಾಧನೆಯ ಗಡಿಯಲ್ಲಿದ್ದಾರೆ.

‘ಅಗತ್ಯ ಬಿದ್ದಾಗ ತಮಗೆ ಪರಿಚಯದವರು, ನೆಂಟರಿಷ್ಟರು ಮೊದಲಾದವರ ಕೋರಿಕೆ ಮೇರೆಗೆ ರಕ್ತದಾನ ಮಾಡಿದ್ದೇನೆ. ಸ್ವಯಂಸ್ಫೂರ್ತಿಯಿಂದ ಇದರಲ್ಲಿ ತೊಡಗಿದ್ದೇನೆ. ಇದರಿಂದ ನನ್ನ ಆರೋಗ್ಯಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ. ಹೀಗೆ ದಾನ ಮಾಡಬೇಕೆಂದರೆ ಮಾನಸಿಕವಾಗಿ ಗಟ್ಟಿಯಾಗಿರಬೇಕು. ಆ ಗಟ್ಟಿತನವನ್ನು ಸಂಪಾದಿಸಿದ್ದೇನೆ. ನನ್ನನ್ನು ನೋಡಿ ಇತರ ಕೆಲವರಾದರೂ ಪ್ರೇರಣೆ ಪಡೆದರಷ್ಟೇ ಸಾಕು. ಕುಟುಂಬದವರು ಕೂಡ ಇದೇ ಹಾದಿಯಲ್ಲಿ ಸಾಗುತ್ತಿದ್ದಾರೆ’ ಎಂದು ವಿನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಕುಟುಂಬದವರೂ:

‘ಪತ್ನಿ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷೆ ತೇಜಸ್ತಿನಿ ಕೂಡ 20 ಬಾರಿ ರಕ್ತ ದಾನ ಮಾಡಿದ್ದಾರೆ. ಮಕ್ಕಳೂ ಮುಂದಾಗಿದ್ದಾರೆ. ಒಮ್ಮೆ ರಕ್ತ ಕೊಟ್ಟರೆ ನಾಲ್ಕು ಮಂದಿಗೆ ಅನುಕೂಲವಾಗುತ್ತದೆ. ರೋಗಿಗಳಿಗೆ ಚಿಕಿತ್ಸೆ ಸಂದರ್ಭದಲ್ಲಿ ಎದುರಾಗುವ ರಕ್ತದ ಕೊರತೆ ನೀಗಿಸುವುದು ಸಾಧ್ಯವಾಗುತ್ತದೆ. ಸಂಕಷ್ಟದಲ್ಲಿ ಇರುವವರಿಗೆ ನೆರವಾದಂತೆ ಆಗುತ್ತದೆ. ನಾವಾಗಲೀ, ವೈದ್ಯರಾಗಲೀ ಜೀವ ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬಹುದು. ಆದರೆ, ರೋಗಿಯು ಬದುಕುಳಿಯುವುದು ದೇವರ ಕೈಯಲ್ಲಿರುತ್ತದೆ’ ಎನ್ನುತ್ತಾರೆ ಅವರು.

‘ರಕ್ತ ದಾನಿ’ ಎಂದೇ ಗುರುತಿಸಿಕೊಂಡಿರುವ ಅವರನ್ನು ಸಂಘ–ಸಂಸ್ಥೆಗಳು ಸತ್ಕರಿಸಿವೆ. ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವ ಆಚರಣೆ ಕಾರ್ಯಕ್ರಮ, ಬಿ.ಎಂ. ಕಂಕಣವಾಡಿ ಆಯುರ್ವೇದ ಕಾಲೇಜು, ಜಿಲ್ಲಾಸ್ಪತ್ರೆಯ ರಕ್ತ ಭಂಡಾರ, ಮಹಾವೀರ ಬ್ಲಡ್ ಬ್ಯಾಂಕ್, ಬಿಜೆಪಿ ಯುವ ಮೋರ್ಚಾ, ವಿವಿಧ ಯುವಕ ಮಂಡಳ, ಗಣೇಶೋತ್ಸವ ಮಂಡಳದವರು ಅವರನ್ನು ಸನ್ಮಾನಿಸಿವೆ.

ಜಾಗೃತಿ ಮೂಡಿಸುವ ಕೆಲಸ:

ರಕ್ತದಾನದ ಮಹತ್ವದ ಕುರಿತು ವಿವಿಧ ಕಾರ್ಯಕ್ರಮಗಳಲ್ಲಿ ಜಾಗೃತಿ ಮೂಡಿಸುತ್ತಿರುವ ಅವರು, ನಗರದಲ್ಲಿರುವ ರಕ್ತದಾನಿಗಳ ಹೆಸರು, ಮೊಬೈಲ್ ಸಂಖ್ಯೆಯನ್ನು ತಿಳಿಸಿ, ಅವಶ್ಯಕತೆ ಇರುವವರಿಗೆ ಪೂರೈಸುವ ನಿಟ್ಟಿನಲ್ಲಿ ಸಹಕರಿಸುತ್ತಿದ್ದಾರೆ. ರಕ್ತಕ್ಕೆ ಪರ್ಯಾಯವಿಲ್ಲ ಎನ್ನುವುದನ್ನು ತಿಳಿಸುತ್ತಿದ್ದಾರೆ. ಜೊತೆಗೆ, ಆರೋಗ್ಯವಂತರು ರಕ್ತ ದಾನಕ್ಕೆ ಮುಂದಾಗಬೇಕಾದ ಅಗತ್ಯವನ್ನು ತಿಳಿಸುತ್ತಿದ್ದಾರೆ.‌ ತಪ್ಪುಕಲ್ಪನೆಗಳನ್ನು ಹೋಗಲಾಡಿಸಲು ಯತ್ನಿಸುತ್ತಿದ್ದಾರೆ.

ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವ ಅವರು, ಅನಗೋಳ ಮಧ್ಯವರ್ತಿ ಶಿವ ಜಯಂತ್ಯುತ್ಸವ ಮಂಡಳದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಮೂರು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಅನಗೋಳ ಭಾಗದಲ್ಲಿ ಸಾಮೂಹಿಕ ಗಣಹೋಮ, ಸತ್ಯನಾರಾಯಣ ಪೂಜೆ, ಸಾಮೂಹಿಕ ವಿವಾಹ ಹಾಗೂ ವನಮಹೋತ್ಸವ ಆಯೋಜನೆಯಲ್ಲಿ ಸಕ್ರಿಯವಾಗಿದ್ದಾರೆ. ಸಂಪರ್ಕಕ್ಕೆ: 82773 65408.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !