ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆ ಬೆಳೆಯಲ್ಲಿ ಖುಷಿ ಕಂಡರು...

ಮಾದರಿಯಾದ ಕುಲಗೋಡದ ಪ್ರಕಾಶ ಬೀಸನಕೊಪ್ಪ
Last Updated 28 ಜನವರಿ 2019, 19:45 IST
ಅಕ್ಷರ ಗಾತ್ರ

ಮೂಡಲಗಿ (ಬೆಳಗಾವಿ ಜಿಲ್ಲೆ): ವೈಜ್ಞಾನಿಕ ಮತ್ತು ತಾಂತ್ರಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಖುಷಿ ಕಾಣುತ್ತಿರುವ ತಾಲ್ಲೂಕಿನ ಕುಲಗೋಡ ಗ್ರಾಮದ ಪ್ರಕಾಶ ಹನಮಂತಪ್ಪ ಬೀಸನಕೊಪ್ಪ ಮಾದರಿ ರೈತರಾಗಿ ಗಮನಸೆಳೆಯುತ್ತಿದ್ದಾರೆ.

ಅವರಿಗೆ 32 ಎಕರೆ ಜಮೀನಿದೆ. ತಂದೆ ಕಾಲದಿಂದಲೂ ಜೋಳ, ಸಜ್ಜೆ ಹಾಗೂ ಶೇಂಗಾ ಬೆಳೆಯುತ್ತಿದ್ದರು. ಆದರೆ, ಆದಾಯ ಅಷ್ಟಕಷ್ಟೇ ಇರುತ್ತಿದ್ದುದ್ದರಿಂದ ಆರ್ಥಿಕವಾಗಿ ಕಷ್ಟದಲ್ಲಿದ್ದರು. ಪಿಯುಸಿವರೆಗೆ ಕಲಿತಿರುವ ಅವರು, ತಂದೆ ನಿಧನ ನಂತರ ತಾವೇ ಕೃಷಿಯ ಜವಾಬ್ದಾರಿ ಹೊತ್ತರು. ದಶಕದ ಹಿಂದೆ ತೋಟಗಾರಿಕೆ ವಿಜ್ಞಾನಿಗಳು ಮತ್ತು ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಲಹೆ ಮೇರೆಗೆ ಬಾಳೆ, ಚೆಂಡು ಹೂವು, ಕಲ್ಲಂಗಡಿ ಬೆಳೆಯಲು ಪ್ರಾರಂಭಿಸಿದರು.

ಆರಂಭದಲ್ಲಿ ಒಂದು ಎಕರೆ ಬಾಳೆ ಬೆಳೆದು ಯಶಸ್ವಿಯಾದರು. ಕ್ರಮೇಣ ಹೆಚ್ಚಿನ ಪ್ರದೇಶಕ್ಕೆ ವಿಸ್ತರಿಸಿದ್ದಾರೆ. ಸದ್ಯ 13 ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದು ಎಕರೆಗೆ 52ರಿಂದ 54 ಟನ್‌ ಇಳುವರಿ ಪಡೆಯುತ್ತಿದ್ದಾರೆ.

ಭೂಮಿ ಸಿದ್ಧತೆ:

ಬಾಳೆ ಬೆಳೆಯುವ ಮುನ್ನ, ಆ ಭೂಮಿಯಲ್ಲಿ ಕಬ್ಬು ಬೆಳೆದು ರವದಿಯನ್ನು ರೊಟೊವೇಟರ್‌ನಿಂದ ಮಣ್ಣಿನಲ್ಲಿ ಮಿಶ್ರಣ ಮಾಡಿ ಗೊಬ್ಬರವಾಗಿಸಿ ಜಮೀನು ಅಣಿಗೊಳಿಸಿದ್ದಾರೆ. ಸೆಣಬು, ಡಯಾಂಚ ಮತ್ತು ಅಲಸಂದಿ ಹಾಕಿ ಅವು ಹೂ ಬಿಡುವ ಮುನ್ನ ಭೂಮಿಗೆ ಸೇರಿಸಿ ಹಸಿರೆಲೆ ಗೊಬ್ಬರದೊಂದಿಗೆ ಭೂಮಿ ಹದಗೊಳಿಸಿರುವುದಲ್ಲದೇ ಒಂದೂವರೆ ತಿಂಗಳವರೆಗೆ ಕುರಿಗಳನ್ನು ಭೂಮಿಯಲ್ಲಿ ಬಿಟ್ಟು ಮೇಯಿಸಿ, ಭೂಮಿಯನ್ನು ಫಲವತ್ತಾಗಿಸಿದ್ದಾರೆ.

6 ಅಡಿ ಮತ್ತು 5 ಅಡಿ ಅಂತರದಲ್ಲಿ ‘ಜಿ 9’ ತಳಿಯ ಬಾಳೆ ನಾಟಿ ಮಾಡಿ ಹನಿ ನೀರಾವರಿ ಅಳವಡಿಸಿದ್ದಾರೆ. ಗೊಬ್ಬರ, ಪಾಸ್ಪ್‌ರಿಕ ಆಸಿಡ್, ಸಗಣಿ ಗೊಬ್ಬರ, ಬೂದಿ ಗೊಬ್ಬರ, ಸಕ್ಕರೆ ಕಾರ್ಖಾನೆಯ ಮಳ್ಳಿಯೊಂದಿಗೆ ಹಾಳು ಮಣ್ಣು ಸೇರಿಸಿ ಭೂಮಿಗೆ ಸೇರಿಸುವುದನ್ನು ರೂಢಿಸಿಕೊಂಡು ಬಂದಿದ್ದಾರೆ. ಇದೆಲ್ಲದರ ಪರಿಣಾಮ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಪ್ರತಿ ಗೊನೆಯಲ್ಲಿ 250ರಿಂದ 380 ಕಾಯಿಗಳು ಇರುತ್ತವೆ. ಗೊನೆಗಳ ಭಾರ ತಡೆಯಲು ಬಿದಿರು ಮತ್ತು ಪ್ಲಾಸ್ಟಿಕ್‌ ಟೇಪ್‌ನಿಂದ ಗೊನೆಗಳನ್ನು ಕಟ್ಟುವ ವ್ಯವಸ್ಥೆ ಮಾಡಿದ್ದಾರೆ.

3ರಿಂದ 4 ಬೆಳೆ:

ತೋಟದ ಅಲ್ಲಲ್ಲಿ ಎರೆಹುಳು ಗೊಬ್ಬರ ತಯಾರಿಕಾ ಘಟಕ ಇರುವುದು ಇವರ ಜಮೀನಿನ ವಿಶೇಷ. ‘ಸಾಮಾನ್ಯವಾಗಿ ರೈತರು ವಾರ್ಷಿಕ 2 ಬೆಳೆ ತೆಗೆಯುತ್ತಾರೆ. ನಾನು 3ರಿಂದ 4 ಬೆಳೆ ಮಾಡುತ್ತಿದ್ದೇನೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಬಾಳೆ ಜೊತೆಗೆ ಕಬ್ಬು, ಅರಿಸಿನ, ಕಲ್ಲಂಗಡಿ, ಮೆಣಸಿನಕಾಯಿ, ಚೆಂಡು ಹೂ ಮತ್ತು ಸೇವಂತಿಗೆ ಬೆಳೆಯುತ್ತಿದ್ದಾರೆ. ಬದುವಿನಲ್ಲಿ ಸಾಗವಾನಿ, ತೆಂಗು, ಪೇರು ಮತ್ತು ಮಾವಿನ ಗಿಡಗಳನ್ನು ನೆಟ್ಟಿರುವುದರಿಂದ, ತೋಟವು ಹಚ್ಚಹಸಿರಿಂದ ನಳನಳಿಸುತ್ತಿದೆ. ‘ನಾನು ಮಿಶ್ರ ಬೇಸಾಯದಿಂದ ಉತ್ತಮ ಆದಾಯ ದೊರೆಯುತ್ತಿದ್ದು, ಕೃಷಿಯಲ್ಲಿ ಖುಷಿ ಇದೆ’ ಎಂದು ತಿಳಿಸಿದರು.

ವಿವಿಧೆಡೆಗೆ:

ನವದೆಹಲಿ, ಚಂಡಿಗಡ ಹಾಗೂ ರಾಜ್ಯದ ವಿವಿಧೆಡೆಗೆ ಬಾಳೆ ರವಾನಿಸುತ್ತಾರೆ. ವಿದೇಶಗಳಿಗೆ ಬಾಳೆಯನ್ನು ಪ್ಯಾಕ್ ಮಾಡಿ ರಪ್ತು ಮಾಡುತ್ತಾರೆ. ದೇಶ, ವಿದೇಶದಲ್ಲಿ ಬಾಳೆ ಮಾರುಕಟ್ಟೆಗಾಗಿ ಇರುವ ಸಂಪರ್ಕ ಜಾಲವನ್ನು ತೋಟದಲ್ಲೇ ಕುಳಿತು ಬಳಸಿಕೊಳ್ಳುತ್ತಿದ್ದಾರೆ.

ಅವರಿಗೆ ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆ ಪ್ರಶಸ್ತಿ, ತಾಲ್ಲೂಕು ಮತ್ತು ಬೆಳಗಾವಿ ಜಿಲ್ಲಾ ತೋಟಗಾರಿಕೆ ಇಲಾಖೆಯಿಂದ ಶ್ರೇಷ್ಠ ಕೃಷಿಕ ಪ್ರಶಸ್ತಿ ದೊರೆತಿದೆ. ಸ್ಟೇಟ್ ಬ್ಯಾಂಕ್, ಅರಭಾವಿ ತೋಟಗಾರಿಕೆ ಕಾಲೇಜು ಸೇರಿದಂತೆ ವಿವಿಧ ಸಂಘ–ಸಂಸ್ಥೆಯವರು ಅವರನ್ನು ಗೌರವಿಸಿದ್ದಾರೆ. ಕ್ಷೇತ್ರೋತ್ಸವದಲ್ಲಿ ರೈತರೊಂದಿಗೆ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಸಂಪರ್ಕಕ್ಕೆ 94494 65111.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT