ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಲಾಗಿದ್ದಕ್ಕೆ ಅಂಕಪಟ್ಟಿಗಳು, ಸ್ಕ್ಯಾನರ್‌ ಕದ್ದ ಭೂಪ!

Last Updated 13 ಜನವರಿ 2020, 14:50 IST
ಅಕ್ಷರ ಗಾತ್ರ

ಬೆಳಗಾವಿ: ಪರೀಕ್ಷೆಯಲ್ಲಿ ಹಲವು ಬಾರಿ ಅನುತ್ತೀರ್ಣಗೊಂಡಿದ್ದಕ್ಕೆ ಬೇಸರಗೊಂಡ ಯುವಕ ಇಲ್ಲಿನ ಭೂಮರಾಮನಹಟ್ಟಿ ಸಮೀಪದಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ನುಗ್ಗಿ ತನ್ನ ಕಾಲೇಜು ವಿದ್ಯಾರ್ಥಿಗಳ 300 ಅಂಕಪಟ್ಟಿಗಳು ಹಾಗೂ 2 ಸ್ಕ್ಯಾನರ್‌ಗಳನ್ನು ಕಳವು ಮಾಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತುಬಚಿ ಗ್ರಾಮದ ಬಸಪ್ಪ ಶಿವಲಿಂಗಪ್ಪ ಹೊನವಾಡ (23) ಬಂಧಿತ.

ಜಮಖಂಡಿ ತಾಲ್ಲೂಕಿನ ಹುನ್ನೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ. ಓದುತ್ತಿದ್ದರು. ‘5ನೇ ಸೆಮಿಸ್ಟರ್‌ನ ಕೆಲವು ವಿಷಯಗಳಲ್ಲಿ ಪದೇ ಪದೇ ಅನುತ್ತೀರ್ಣಗೊಂಡಿದ್ದಕ್ಕೆ ಹತಾಶೆಗೊಂಡು ಕಳವು ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾರೆ’ ಎಂದು ಕಾಕತಿ ಠಾಣೆ ಪೊಲೀಸರು ಮಾಹಿತಿ ನೀಡಿದರು.

ಶುಕ್ರವಾರ ರಾತ್ರಿ ಬೆಳಗಾವಿಗೆ ಬಂದು ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಗೆಳೆಯರ ಕೋಣೆಯಲ್ಲಿ ಇದ್ದರು. ಮರು ದಿನ ಮೌಲ್ಯಮಾಪನ ಕುಲಸಚಿವರ ಬಳಿ ಹೋಗಿ ಪಾಸ್ ಮಾಡುವಂತೆ ಅಂಗಲಾಚಿದ್ದರು. ನಂತರ ಜಗಳವನ್ನೂ ಮಾಡಿದ್ದರು. ಮರು ಮೌಲ್ಯಮಾಪನಕ್ಕೆ ಹಾಕುವಂತೆ ಸಲಹೆ ನೀಡಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ತಿಳಿದುಬಂದಿದೆ.

ಕುಲಸಚಿವರ ಕಚೇರಿಯಲ್ಲಿ ಸುತ್ತಾಡಿ ಮಾಹಿತಿ ಕಲೆ ಹಾಕಿದ ಬಸಪ್ಪ, ಶನಿವಾರ ರಾತ್ರಿ ಕಿಟಕಿ ಮೂಲಕ ಒಳ ನುಗ್ಗಿದ್ದಾರೆ. ಸ್ಕ್ಯಾನರ್‌ ಹಾಗೂ ಅಂಕಪಟ್ಟಿಗಳನ್ನು ಕಳವು ಮಾಡಿದ್ದಾರೆ. ಪರಾರಿಯಾಗುವಾಗ ಗಮನಿಸಿದ ಭದ್ರತಾ ಸಿಬ್ಬಂದಿ ಕೂಡಲೇ ಅವರನ್ನು ತಡೆದಿದ್ದಾರೆ. ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಅಧಿಕಾರಿಗಳ ಮೂಲಕ ಪೊಲೀಸರಿಗೆ ಮಾಹಿತಿ ಕೊಡಿಸಿದ್ದಾರೆ. ಇನ್‌ಸ್ಪೆಕ್ಟರ್‌ ಶ್ರೀಶೈಲ ಕೌಜಲಗಿ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಪ್ರತಿಕ್ರಿಯೆಗೆ ಕುಲಸಚಿವರು ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT