ಆಗ ಪೈಪ್‌ಗಳ ವಿತರಕ... ಈಗ ಉದ್ಯಮಿ

7
ಶ್ರದ್ಧೆ, ಪರಿಶ್ರಮದಿಂದ ಬೆಳೆಯುತ್ತಿರುವ ಗಿರೀಶ ಜಿನಗನ್ನವರ

ಆಗ ಪೈಪ್‌ಗಳ ವಿತರಕ... ಈಗ ಉದ್ಯಮಿ

Published:
Updated:
Prajavani

ಮೂಡಲಗಿ: ಬಿ.ಕಾಂ. ಮುಗಿಸಿ ಹನಿ ನೀರಾವರಿಯ ಪೈಪ್‌ಗಳ ವಿತರಕರಾಗಿದ್ದ ರಂಗಾಪುರದ ಗಿರೀಶ ಸಂಗಪ್ಪ ಜಿನಗನ್ನವರ ಈಗ ತಾವೇ ಪಿವಿಸಿ ಪೈಪ್‌ಗಳ ಉತ್ಪಾದಕರಾಗಿ ಯಶಸ್ಸಿ ಉದ್ಯಮಿ ಎನಿಸಿಕೊಂಡಿದ್ದಾರೆ.

ಅವರು ಸ್ವಂತ ಉದ್ಯೋಗವೆಂದು ಹತ್ತು ವರ್ಷಗಳವರೆಗೆ ಪೈಪ್‌ಗಳ ವಿತರಕರಾಗಿದ್ದರು. ನೀರಾವರಿಗೆ ಬಳಸುವ ಪಿವಿಸಿ ಪೈಪ್‌ಗಳ ಅನಿವಾರ್ಯತೆ ಬಗ್ಗೆ ಮತ್ತು ಸಾರಿಗೆ ವೆಚ್ಚ ಭರಿಸಿ ಬೇರೆ ಊರುಗಳಿಂದ ಹೆಚ್ಚಿನ ಬೆಲೆ ಕೊಟ್ಟು ತರಿಸಿಕೊಳ್ಳುವ ರೈತರ ಕಷ್ಟಗಳನ್ನು ಅವರು ಮನಗಂಡಿದ್ದರು. ತಾವೇ ಏಕೆ ಸ್ಥಳೀಯವಾಗಿ ಪಿವಿಸಿ ಪೈಪ್‌ಗಳನ್ನು ತಯಾರಿಸಿ ಕಡಿಮೆ ಬೆಲೆಯಲ್ಲಿ ರೈತರಿಗೆ ಮಾರಬಾರದು ಎಂದು ಯೋಚಿಸಿ, ಅದರಲ್ಲಿ ಕಾರ್ಯಪ್ರವತ್ತರಾದರು. ಈ ಕಾರ್ಯದಲ್ಲಿ ಯಶಸ್ವಿಯಾಗಿ ಗಮನಸೆಳೆದಿದ್ದಾರೆ.

2012ರಿಂದ: ಪಿವಿಸಿ ಪೈಪ್‌ಗಳನ್ನು ಉತ್ಪಾದಿಸುವ ಬಗ್ಗೆ ಇಚಲಕರಂಜಿ, ಕೊಲ್ಹಾಪುರ, ಸಾಂಗಲಿ, ಪುಣೆ ಮತ್ತಿತರ ಸ್ಥಳಗಳಿಗೆ ಅಲೆದಾಡಿ ಮಾರುಕಟ್ಟೆಯ ಜ್ಞಾನವನ್ನು ಪಡೆದುಕೊಂಡು, 2012ರಲ್ಲಿ ಮೂಡಲಗಿಯಲ್ಲಿ ಸ್ವಂತ ನಿವೇಶನದಲ್ಲಿ ಸ್ವಂತ ಬಂಡವಾಳ ಹಾಕಿ ‘ಗಣೇಶ ಪಿವಿಸಿ ಪೈಪ್ ಇಂಡಸ್ಟ್ರೀಸ್‌’ ಹೆಸರಿನಲ್ಲಿ ಸಣ್ಣ ಕೈಗಾರಿಕಾ ಘಟಕ ಪ್ರಾರಂಭಿಸಿದರು.

‘ಆರಂಭದಲ್ಲಿ ಒಂದಿಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ನನಗೆ ಪತ್ನಿ ಲಲಿತಾ ಧೈರ್ಯ ತುಂಬಿದರು. ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯಬಾರದು ಎಂದು ಶ್ರದ್ಧೆ ಮತ್ತು ಪರಿಶ್ರಮದಿಂದ ಕೆಲಸ ಮಾಡಿದ್ದರ ಫಲವಾಗಿ ಕಾರ್ಖಾನೆಯು ಯಶಸ್ವಿಯಾಗಿ ನಡೆದದಿದೆ’ ಎಂದು ಆರು ವರ್ಷಗಳಲ್ಲಿ ಉದ್ಯಮದಲ್ಲಿ ನೆಲೆ ನಿಂತಿರುವುದನ್ನು ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

ಕಾರ್ಖಾನೆಗಾಗಿ 2 ಪ್ರತ್ಯೇಕ ಶೆಡ್‌ಗಳನ್ನು ನಿರ್ಮಿಸಿದ್ದಾರೆ. ರಾಸಾಯನಿಕ ಮಿಶ್ರಣ ಮಾಡುವ ಮಿಕ್ಸರ್, ಪೈಪ್‌ಗಳನ್ನು ಸಿದ್ಧಗೊಳಿಸುವ, ವಾಟರಿಂಗ್‌, ಪೈಪ್‌ಗಳ ಕಟ್ಟಿಂಗ್, ಕಾಲರ್ ಘಟಕದ ಮೂಲಕ ಇಲ್ಲಿ ಕೆಲಸ ನಡೆಯುತ್ತದೆ. ವಿವಿಧ ವ್ಯಾಸಗಳಲ್ಲಿ ಪೈಪ್‌ಗಳನ್ನು ತಯಾರಿಸಲಾಗುತ್ತದೆ.

ಗುಣಮಟ್ಟಕ್ಕೆ ಆದ್ಯತೆ ನೀಡುತ್ತಿದ್ದೇವೆ: ಹನಿ ನೀರಾವರಿ ಮತ್ತು ನೀರಾವರಿಗಾಗಿ 2 ಅಂಗುಲದಿಂದ 4 ಅಂಗುಲದವರೆಗಿನ ವ್ಯಾಸಗಳ 4 ಕೆ.ಜಿ, 6 ಕೆ.ಜಿ, 8 ಕೆ.ಜಿ.ಯ ಪೈಪ್‌ಗಳನ್ನು  ಇಲ್ಲಿ ಸಿದ್ಧಪಡಿಸುತ್ತಾರೆ. ಮನೆಯ ನಲ್ಲಿ ಮತ್ತು ವಿದ್ಯುತ್‌ ತಂತಿಗೆ ಕವಚಗಳಿಗಾಗಿ ಸಹ ಎಪಿವಿಸಿ ಪೈಪ್‌ಗಳನ್ನು ತಯಾರಿಸುತ್ತಾರೆ. ಎರಡು ಪ್ರತ್ಯೇಕ ಯುನಿಟ್‌ಗಳಲ್ಲಿ ತಾಸಿಗೆ 30ರಿಂದ 50 ಪೈಪ್‌ಗಳು ಉತ್ಪಾದನೆಯಾಗುತ್ತವೆ. ಅವುಗಳ ಗುಣಮಟ್ಟ ಪರೀಕ್ಷಿಸಿ ನಂತರ ಮಾರಾಟಕ್ಕೆ ಅಣಿ ಮಾಡುತ್ತಾರೆ.

‘ಗುಣಮಟ್ಟಕ್ಕೆ ಆದ್ಯತೆ ನೀಡುತ್ತಿದ್ದು, ಉತ್ತಮ ಗುಣಮಟ್ಟಕ್ಕಾಗಿ ಬೆಂಗಳೂರಿನ ಯುನಿವರ್ಸಲ್ ರಿಜಿಸ್ಟ್ರಾರ್ ಅವರು ಕೊಡ ಮಾಡುವ ಐಎಸ್ಒ-9001 ಪ್ರಮಾಣಪತ್ರ ದೊರೆತಿದೆ. ಸದ್ಯ ಕಾರ್ಖಾನೆಯಲ್ಲಿ 25 ಮಂದಿ ಕೆಲಸ ಮಾಡುತ್ತಿದ್ದಾರೆ. ಸ್ವಂತ ಉದ್ಯಮದೊಂದಿಗೆ ಒಂದಷ್ಟು ಮಂದಿಗೆ ಕೆಲಸ ಕೊಟ್ಟ ತೃಪ್ತಿ ನನಗಿದೆ' ಎಂದು ತಿಳಿಸಿದರು.

‘ಬೆಳಗಾವಿ, ಬಾಗಲಕೋಟೆ, ವಿಜಯಪುರ, ಶಿವಮೊಗ್ಗ ಮತ್ತು ಮಹಾರಾಷ್ಟ್ರದ ಕೆಲವು ಕಡೆಗಳಿಂದ ಪೈಪ್‌ಗಳಿಗೆ ಬೇಡಿಕೆ ಇದೆ. ಸಾರಿಗೆ ವೆಚ್ಚ ತಗುಲದಿರುವುದು ಮತ್ತು ಕಡಿಮೆ ದರದಲ್ಲಿ ಸಿಗುವುದರಿಂದ ಸುತ್ತಮುತ್ತಲಿನ ಗ್ರಾಮಗಳ ರೈತರು ನಮ್ಮಲ್ಲಿ ಪೈಪ್‌ಗಳನ್ನು ಖರೀದಿಸುತ್ತಾರೆ. ನಿತ್ಯ 400ರಿಂದ 500 ಪೈಪ್‌ಗಳು ಉತ್ಪಾದನೆಯಾಗುತ್ತವೆ. ಬೇಸಿಗೆಯಲ್ಲಿ ಈ ಪೈಪ್‌ಗಳಿಗೆ ಅಧಿಕ ಬೇಡಿಕೆ ಇರುತ್ತದೆ’ ಎಂದು ಮಾಹಿತಿ ನೀಡಿದರು. ಸಂಪರ್ಕಕ್ಕೆ 95380 48512.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !