ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಬಹುತೇಕ ಹಳ್ಳಿಗಳಿಗೆ ಆರೋಗ್ಯ ಸೇವೆ ‘ದೂರ’

ಗಡಿ ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆಗೆ ಪಾರ್ಶ್ವವಾಯು!
Last Updated 5 ಜೂನ್ 2021, 1:29 IST
ಅಕ್ಷರ ಗಾತ್ರ

ಬೆಳಗಾವಿ: ಬರೋಬ್ಬರಿ 53 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ, ಬಯಲುಸೀಮೆ ಮತ್ತು ಪಶ್ಚಿಮ‌ಘಟ್ಟದ ಸೆರಗು ಹಾಗೂ ಎರಡು ರಾಜ್ಯಗಳ‌ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಪಾರ್ಶ್ವವಾಯು ಪೀಡಿತವಾಗಿದೆ. ಬಹುತೇಕ ಹಳ್ಳಿಗಳಿಗೆ ಆರೋಗ್ಯ ಸೇವೆ ಇನ್ನೂ ‘ದೂರ’ವಾಗಿಯೇ ಉಳಿದಿದೆ.

15 ತಾಲ್ಲೂಕುಗಳ ವಿಸ್ತಾರ ಹೊಂದಿರುವ ಜಿಲ್ಲೆಗೆ 139 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಾಲುತ್ತಿಲ್ಲ. ಇರುವ ಆಸ್ಪತ್ರೆಗಳಲ್ಲಿ ಒಂದಿಲ್ಲೊಂದು ಸೌಲಭ್ಯಗಳಿಲ್ಲ; ಸಿಬ್ಬಂದಿ ಇಲ್ಲ. ಕೆಲವೆಡೆ ಮುಖ್ಯವಾಗಿ ವೈದ್ಯರೇ ಇಲ್ಲ. ಇರುವವರಲ್ಲಿ ಕೆಲವರು ಕೋವಿಡ್ ಪೀಡಿತರಾಗಿದ್ದಾರೆ. ಒಬ್ಬೊಬ್ಬರಿಗೆ 2-3 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪ್ರಭಾರ ನೀಡಲಾಗಿದೆ. ಇರುವ ಸಿಬ್ಬಂದಿಯೇ ಒತ್ತಡದ ನಡುವೆಯೂ ಸೇನಾನಿಗಳಂತೆ ದುಡಿಯುತ್ತಿದ್ದಾರೆ.

ಆಸ್ಪತ್ರೆ ಇರುವ ಊರು ಬಿಟ್ಟರೆ ವ್ಯಾಪ್ತಿಯ ಇತರ ಗ್ರಾಮದವರು ಬಂದು ಹೋಗಬೇಕಾದರೆ ಸರಾಸರಿ 20ರಿಂದ 30 ಕಿ.ಮೀ. ಪ್ರಯಾಣಿಸಬೇಕು. ಲಾಕ್‌ಡೌನ್‌ನ ಈ ಸಮಯದಲ್ಲಿ ಸಾರಿಗೆಗೆ ಪರದಾಟ. ಕೊರೊನಾ ರುದ್ರನರ್ತನದ ಈ ವೇಳೆ ‘ಸಂಜೀವಿನಿ’ಯಂತೆ ಇರಬೇಕಿದ್ದ ಬಹುತೇಕ ಕೇಂದ್ರಗಳು ಭಾಗಶಃ ಸೋತಿವೆ! ಪರಿಣಾಮ ಆ ಭಾಗದ ಜನರ ಪರದಾಟ ತಪ್ಪಿಲ್ಲ.

ಹೆಸರಿಗಷ್ಟೆ 24x7 ಸೇವೆ!

‘ಪ್ರಜಾವಾಣಿ’ಯು ಹಲವು ಪ್ರಾಥಮಿಕ ಕೇಂದ್ರಗಳು, ಹತ್ತಾರು ಹಳ್ಳಿಗಳಿಗೆ ಭೇಟಿ ನೀಡಿದಾಗ ಕಂಡ ಸ್ಥಿತಿಯು ಸರ್ಕಾರ ಹೇಳುವುದಕ್ಕೆ ತದ್ವಿರುದ್ಧವಾಗಿರುವುದು ವೇದ್ಯವಾಯಿತು.

ಹುಕ್ಕೇರಿ ತಾಲ್ಲೂಕಿನ ಇಸ್ಲಾಂಪೂರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತಲುಪಿದಾಗ ಬೆಳಿಗ್ಗೆ 10 ಗಂಟೆಯಾಗಿತ್ತು. 24x7 ಆಸ್ಪತ್ರೆಯಾದ ಇಲ್ಲಿ ಎಲ್ಲ ಸಮಯದಲ್ಲೂ ಚಿಕಿತ್ಸೆ ಸಿಗಬಹುದೆಂದು ಹಲವರು ಬಂದಿದ್ದರು. ಸ್ಟ್ರೆಚರ್‌ನಲ್ಲಿ ಮಲಗಿದ್ದ ವೃದ್ಧೆಯೊಬ್ಬರು ನರಳಾಡುತ್ತಿದ್ದರು. ಗಂಟೆ ಕಳೆದರೂ ವೈದ್ಯರ ಸುಳಿವಿರಲಿಲ್ಲ. ಅಂದು ತಾನೇ ಕೆಲಸಕ್ಕೆ ವರದಿ ಮಾಡಿಕೊಳ್ಳಲು ಬಂದಿದ್ದ ಯುವ ವೈದ್ಯ, ‘ನಾನು ಇಂದಷ್ಟೇ ಬಂದಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ಆಸ್ಪತ್ರೆಯ ಎದುರಿನ ಶಾಲೆ ಆವರಣದಲ್ಲಿ ಮಕ್ಕಳು, ಯುವಕರು ಮಾಸ್ಕ್ ಕ್ರಿಕೆಟ್ ಆಡುತ್ತಿದ್ದರು. ಅಂಗಡಿಗಳ ಬಳಿ, ವೃತ್ತಗಳಲ್ಲಿ ಯುವಕರು ಗುಂಪಾಗಿ ಚರ್ಚಿಸುತ್ತಿದ್ದರು. ಬಹುತೇಕರು ಮಾಸ್ಕ್‌ ಹಾಕಿರಲಿಲ್ಲ. ಕೋವಿಡ್ ಜಾಗೃತಿ ಹಳ್ಳಿಗಳನ್ನು ತಲುಪಿದೆಯೇ ಎಂಬ ಅನುಮಾನ ಕಾಡಿತು.

ಗುಡ್ಡದ ಮೇಲೆ ಆಸ್ಪತ್ರೆ ಮಾಡಿ...:

ಬಸ್ಸಾಪುರದ ಆಸ್ಪತ್ರೆಯನ್ನು ಹೊರವಲಯದಲ್ಲಿ ಗುಡ್ಡದ ಮೇಲೆ ಕಟ್ಟಲಾಗಿದೆ. ಅಲ್ಲಿಗೆ ತಲುಪಲು ಕಲ್ಲು–ಮಣ್ಣಿನ ಹಾದಿಯಲ್ಲಿ ಕಿ.ಮೀ. ಗುಡ್ಡವೇರಬೇಕು. ದ್ವಿಚಕ್ರವಾಹನದಲ್ಲಿ ಹೋಗುವಾಗ ಆಯತಪ್ಪಿ ಬಿದ್ದರೆ ಪಕ್ಕದ ಚಿಕ್ಕ ಕಾಲುವೆ ಪಾಲಾಗಬೇಕಾಗುತ್ತದೆ. ಬಸ್ಸಾಪೂರ, ಹಗೆದಾಳ, ಶಿರೂರ, ಕರಗುಪ್ಪಿ, ಯಲ್ಲಾಪುರ, ಹರಳಿಕಟ್ಟಿ, ಹಳೇವಂಟಮೂರಿ ಹಾಗೂ ಮಾಣಗಾವಿ ಗ್ರಾಮಗಳ ವ್ಯಾಪ್ತಿಯನ್ನು ಈ ಆಸ್ಪತ್ರೆ ಹೊಂದಿದೆ. ಅಲ್ಲಿಗೆ ತಲುಪಲು ಕನಿಷ್ಠ ಸಮರ್ಪಕ ರಸ್ತೆ ಮಾಡಿಕೊಡುವ ಕೆಲಸವೂ ನಡೆದಿಲ್ಲ!

‘ಇಲ್ಲಿಗೆ ತಲುಪುವುದೇ ದೊಡ್ಡ ಸವಾಲು. ಹೆಣ್ಣು ಮಕ್ಕಳು ಒಬ್ಬೊಬ್ಬರೇ ಬರುವುದಕ್ಕೆ ಭಯವಾಗುತ್ತದೆ. ಜೊತೆಯಲ್ಲಿ ಮನೆಯವನ್ನು ಕರೆದುಕೊಂಡು ಬರಬೇಕು. ರೋಗಿಗಳು ಬರಲು ತ್ರಾಸದ ಕೆಲಸವೇ’ ಎಂದು ಸಿಬ್ಬಂದಿ ತಿಳಿಸಿದರು. ಅಲ್ಲಿ ರೋಗಿಗಳ ಸಂಖ್ಯೆಯೂ ಕಡಿಮೆ ಇತ್ತು. ಫಾರ್ಮಾಸಿಸ್ಟ್‌ 11ಗಂಟೆ ನಂತರ ಬಂದರು. ಅಲ್ಲಿಯೂ ಅಂದಷ್ಟೆ ಸೇರಿದ್ದ ಯುವ ವೈದ್ಯ ಕುರ್ಚಿ ಸರಿ ಮಾಡಿಕೊಳ್ಳುತ್ತಿದ್ದರು.

ಇಲ್ಲಿ ನರ್ಸೇ ದಿಕ್ಕು!:

ಚಿಕ್ಕೋಡಿ ತಾಲ್ಲೂಕು ಕರಗಾಂವ ಆರೋಗ್ಯ ಕೇಂದ್ರದಲ್ಲಿ 3 ತಿಂಗಳುಗಳಿಂದಲೂ ವೈದ್ಯರಿಲ್ಲ. ನರ್ಸೇ ಇಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ.

‘ಇಬ್ಬರು ನರ್ಸ್‌ ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಕೋವಿಡ್ ಭೀತಿ ಕಾರಣದಿಂದಾಗಿ ರೋಗಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಹೆರಿಗೆ ಮಾಡಿಸುತ್ತಿದ್ದೇವೆ. ಆಂಬುಲೆನ್ಸ್ ಬೇಕೆಂದರೆ 18 ಕಿ.ಮೀ. ದೂರದ ಚಿಕ್ಕೋಡಿಯಿಂದ ಬರಬೇಕು. 15 ಕಿ.ಮೀ. ದೂರದಲ್ಲಿರುವ ಉಮರಾಣಿ ವ್ಯಾಪ್ತಿಯನ್ನೂ ಆಸ್ಪತ್ರೆ ಹೊಂದಿದೆ’ ಎಂದು ನರ್ಸ್‌ ಪಾರ್ವತಿ ಚಂದರಗಿ ತಿಳಿಸಿದರು.

ಕೋವಿಡ್ ಲಸಿಕೆಗಾಗಿ ಕೆಲವರು ಬಂದಿದ್ದರು. ‘ಒಟ್ಟು 10 ಮಂದಿಯಾಗಲಿ’ ಎಂದು ಆಸ್ಪತ್ರೆಯವರು ಹೇಳಿದ್ದರಿಂದ ಕಾಯುತ್ತಿದ್ದರು.

ಕರಗಾಂವ–ಚಿಕ್ಕೋಡಿ ಮಾರ್ಗದ ತೋಟದ ಮನೆಗಳ ಬಳಿ ಸ್ಥಳೀಯರಿಂದ ಮಾದರಿ ಸಂಗ್ರಹಿಸಲಾಗುತ್ತಿತ್ತು. ಮಾತಿಗೆ ಸಿಕ್ಕ ಅಂಗನವಾಡಿ ಕಾರ್ಯಕರ್ತೆ ಸಕ್ಕೂಬಾಯಿ ಪರಪ್ಪ ಕಮತೆ, ‘ಗ್ರಾಮದಲ್ಲಿ ವಾರದೊಳಗೆ 25 ಮಂದಿಗೆ ಕೋವಿಡ್ ದೃಢ‍ಪಟ್ಟಿದೆ. ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಲು ಮನವರಿಕೆ ಮಾಡುವುದೇ ಸವಾಲಾಗಿದೆ’ ಎಂದು ಹೇಳಿದರು.

ಕಬ್ಬೂರ ಸಮುದಾಯ ಆರೋಗ್ಯ ಕೇಂದ್ರದ ನಿರ್ವಹಣೆ ಗಮನಸೆಳೆಯಿತು. ಪಕ್ಕವೇ ಕೋವಿಡ್ ಕೇರ್ ಕೇಂದ್ರವಿದೆ. ತಂದೆ ಕಳೆದುಕೊಂಡು ತಾಯಿಯೊಂದಿಗೆ ಆಗ ತಾನೆ ಕೇಂದ್ರ ಸೇರಿದ್ದ ಮಗುವಿನ ಆಕ್ರಂದನ ಮುಗಿಲು ಮುಟ್ಟಿತ್ತು.

ಕೇಂದ್ರವೇ ಬಂದ್!

ಬೆಳಗಾವಿ ತಾಲ್ಲೂಕಿನ‌ ಹೊನಗಾ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಜೆ 4ಕ್ಕೇ ಬಂದ್ ಆಗಿತ್ತು. ಮಹಿಳೆಯೊಬ್ಬರು ಕೇಂದ್ರದ ಆವರಣದಲ್ಲಿ ಹುಲ್ಲು ಮೇಯಿಸಲು ಎಮ್ಮೆಗಳನ್ನು ಬಿಟ್ಟಿದ್ದರು. ‘ತಿಂಗಳಿಂದಲೂ ಕೇಂದ್ರ ಬಂದ್‌ ಇದೆ. ಇದರಿಂದ ಪ್ರಯೋಜನ ಆಗುತ್ತಿಲ್ಲ' ಎಂದು ಸ್ಥಳೀಯರು ತಿಳಿಸಿದರು.

ಪ್ರವಾಸದಲ್ಲಿ ಎದುರಾದ ಹಲವರು ‘ಲಸಿಕೆ ಸಿಕ್ಕಿಲ್ಲ’ ಎಂದೇ ಉತ್ತರಿಸಿದರು. ‘ಆಸ್ಪತ್ರೆಗೆ ಹೋಗಿದ್ದೆವು, ಲಸಿಕೆ ಬಂದಾಗ ತಿಳಿಸುತ್ತೇವೆ; ಆಗ ಬನ್ನಿ’ ಎಂದು ಹೇಳಿದ್ದಾರೆ’ ಎಂದು ಪ್ರತಿಕ್ರಿಯಿಸಿದರು. ಜಿಲ್ಲೆಗೆ ಲಸಿಕೆ ಪೂರೈಕೆ ಸಾಲುತ್ತಿಲ್ಲ.

ಜಿಲ್ಲೆಯ 450ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸರಾಸರಿ 30ರಿಂದ 40ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಬಹುತೇಕ ದೊಡ್ಡ ಹಳ್ಳಿಗಳಲ್ಲಿ ಮೇ ತಿಂಗಳೊಂದರಲ್ಲಿ ಸರಾಸರಿ 20 ಮಂದಿ ಸಾವಿಗೀಡಾಗಿದ್ದಾರೆ. ಇವುಗಳಲ್ಲಿ ಕೋವಿಡ್ ಸಾವೆಷ್ಟು ಎನ್ನುವುದು ಖಚಿತವಾಗಿಲ್ಲ. ಏಕೆಂದರೆ, ಬಹುತೇಕರು ಕೋವಿಡ್ ತಪಾಸಣೆಗೆ ಮಾಡಿಸಿರಲಿಲ್ಲ.

***

ಪ್ರವಾಸದಲ್ಲಿ ಕಂಡಿದ್ದು

* ಜಾಗೃತಿ ಕೊರತೆ. ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಗಳಿಗೆ ಭೇಟಿ ಕೊಟ್ಟಿಲ್ಲ.

* ಪ್ರತ್ಯೇಕ ಶೌಚಾಲಯ, ಕೊಠಡಿ ಕೊರತೆಯಿಂದ ಹೋಂ ಐಸೊಲೇಷನ್‌ ಫಲ ನೀಡುತ್ತಿಲ್ಲ.

* ತೋಟಪಟ್ಟಿ ವಾಸಿಗಳನ್ನು ಆರೋಗ್ಯ ಭಾಗ್ಯ ತಲುಪಿಲ್ಲ.

* ವೈದ್ಯರ ಕೊರತೆ ಕಾರಣ, ‘ಹಳ್ಳಿಗಳ ಕಡೆ ವೈದ್ಯರ ನಡೆ’ ಅನುಷ್ಠಾನವಾಗಿಲ್ಲ. ವೈದ್ಯರು ಒಂದೂರಲ್ಲೂ ಕಂಡುಬರಲಿಲ್ಲ. ಕೆಲವೆಡೆ ಆಸ್ಪತ್ರೆಯಲ್ಲೂ ಇರಲಿಲ್ಲ!

* ಪರೀಕ್ಷಾ ವರದಿ ಸಿಗುವುದು 8–10 ದಿನಗಳಾಗುತ್ತಿರುವುದರಿಂದ ಸೋಂಕು ವ್ಯಾಪಿಸುತ್ತಿದೆ.

* ಖಾನಾಪುರ ತಾಲ್ಲೂಕಿನ ಕಾಡಂಚಿನ ಹಳ್ಳಿಗಳದ್ದು ಬೇರೊಂದು ವ್ಯಥೆ. ಹಲವು ಕಡೆಗಳಿಗೆ ಆಂಬುಲೆನ್ಸ್ ಹೋಗುವುದಿಲ್ಲ. ಮೊಬೈಲ್‌ ಫೋನ್‌ ನೆಟ್‌ವರ್ಕ್ ಸಿಗುವುದಿಲ್ಲ. ಬಸ್ ಸೌಲಭ್ಯವಿಲ್ಲ. ಬೆಳಗಾವಿ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲೂ ಇದೇ ಸ್ಥಿತಿ. ಅಥಣಿ ತಾಲ್ಲೂಕಿನ ಬಹುತೇಕ ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಲ್ಲ.

***

ಹುದ್ದೆಗಳ ಸ್ಥಿತಿಗತಿ...

ಮಂಜೂರಾದ ಹುದ್ದೆಗಳ ಪೈಕಿ ಅರ್ಧದಷ್ಟೂ ಭರ್ತಿಯಾಗಿಲ್ಲ! ಮಂಜೂರಾದ ವಿವಿಧ ಹುದ್ದೆಗಳ ಸಂಖ್ಯೆ 3,822. ಇವುಗಳಲ್ಲಿ 1,500ಕ್ಕೂ ಹೆಚ್ಚು ಖಾಲಿ ಇವೆ. 139 ಪ್ರಾಥಮಿಕ ಆರೋಗ್ಯ ಕೇಂದ್ರ, 16 ಸಮುದಾಯ ಆರೋಗ್ಯ ಕೇಂದ್ರಗಳಿವೆ. 9 ಸಾರ್ವಜನಿಕ ಆಸ್ಪತ್ರೆಗಳಿವೆ. ಎಂಬಿಬಿಎಸ್‌ ವೈದ್ಯರ 146 ಹುದ್ದೆಗಳ ಪೈಕಿ 26 ಖಾಲಿ ಮತ್ತು ತಜ್ಞ ವೈದ್ಯರಲ್ಲಿ 142ರ ಪೈಕಿ 42 ಖಾಲಿ ಇವೆ.

ಯಾರು ಏನಂತಾರೆ?

ನಮಗೆ ಸಮರ್ಪಕವಾಗಿ ಮಾಸ್ಕ್‌, ಸ್ಯಾನಿಟೈಸರ್ ಕೂಡ ಕೊಟ್ಟಿಲ್ಲ. 3 ತಿಂಗಳಿಂದ ಸಂಬಳವೂ ಬಂದಿಲ್ಲ. ಸಮೀಕ್ಷೆಗೆ ಹೋದಾಗ, ಜ್ವರ ಎಂದವರಿಗೆ ಕೊಡಲು ಗುಳಿಗೆಯನ್ನೂ ಪೂರೈಸಿಲ್ಲ

-ನಿರ್ಮಲಾ ಮತ್ತಿಕೊಪ್ಪ, ಆಶಾ ಕಾರ್ಯಕರ್ತೆ, ಬಸ್ಸಾಪೂರ, ಹುಕ್ಕೇರಿ ತಾಲ್ಲೂಕು

***

ನಮ್ಮ ಗ್ರಾಮದಲ್ಲಿ ಮೇ ತಿಂಗಳಲ್ಲಿ 32 ಮಂದಿ ಸಾವಿಗೀಡಾಗಿದ್ದಾರೆ. ಅವರಲ್ಲಿ ಬಹುತೇಕರು ಕೋವಿಡ್ ಪರೀಕ್ಷೆ ಮಾಡಿಸಿರಲಿಲ್ಲ.

-ಸಕ್ಕೂಬಾಯಿ ಕಮತೆ, ಅಂಗನವಾಡಿ ಕಾರ್ಯಕರ್ತೆ, ಕರಗಾಂವ, ಚಿಕ್ಕೋಡಿ ತಾಲ್ಲೂಕು

***

ಚಿಕ್ಕೋಡಿ ತಾಲ್ಲೂಕಿನ ಯಡೂರದಲ್ಲಿ ಕೋವಿಡ್ ಕರ್ಫ್ಯೂ ನಡುವೆಯೂ 15 ಮದುವೆಗಳಾಗಿವೆ. 300–400 ಮಂದಿ ಸೇರುತ್ತಿದ್ದರು. ಮೂವರು ಸಾವಿಗೀಡಾಗಿದ್ದಾರೆ. ಈಗ ಹಳ್ಳಿಗಳಲ್ಲಿ ಕೋವಿಡ್ ಪರೀಕ್ಷೆ ನಡೆಸುತ್ತಿದ್ದೇವೆ. ಜನರು ಸ್ವಯಂ ಚಿಕಿತ್ಸೆ ಬದಲಿಗೆ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು

-ಡಾ.ಎಂ.ಎಸ್. ಕರಗಾಂವಿ, ಮುಖ್ಯ ವೈದ್ಯಾಧಿಕಾರಿ, ಕಬ್ಬೂರ

***

ಗ್ರಾಮದಲ್ಲಿ ಕೋವಿಡ್ 2ನೇ ಅಲೆಯಲ್ಲಿ 500ಕ್ಕೂ ಹೆಚ್ಚು ಮಂದಿ ಅನಾರೋಗ್ಯಕ್ಕೆ ಈಡಾಗಿದ್ದಾರೆ. 25 ಮಂದಿ ಸಾವಿಗೀಡಾಗಿದ್ದಾರೆ. ಬಹುತೇಕರಿಗೆ ಕೋವಿಡ್ ಲಕ್ಷಣವಿತ್ತು. ಆದರೆ, ಪರೀಕ್ಷೆ ಮಾಡಿಸಿರಲಿಲ್ಲ. ಹೆಚ್ಚಿನವರು ಖಾಸಗಿಯವರ ಬಳಿಯೇ ತೋರಿಸುತ್ತಾರೆ.

-ಲಾಲ್‌ಸಾಬ್‌ ತಟಗಾರ, ನಾಗರಮುನ್ನೋಳಿ, ಚಿಕ್ಕೋಡಿ ತಾಲ್ಲೂಕು

***

ಕೋವಿಡ್ ಲಸಿಕೆಗಾಗಿ ಹಲವು ದಿನಗಳ ಹಿಂದೆ ಹುಕ್ಕೇರಿಗೆ ಹೋಗಿದ್ದೆ. ಆದರೆ, ಲಸಿಕೆ ಬಂದಿಲ್ಲ ಎಂದಿದ್ದರು. ಯಾವಾಗ ಮಾಹಿತಿ ಬರುತ್ತದೆಯೋ ಗೊತ್ತಿಲ್ಲ. ಇನ್ನೂ ಪಡೆಯಲು ಆಗಿಲ್ಲ

-ಹೊಳೆಪ್ಪ ಅಪ್ಪಣ್ಣ ಕಾಗಿ, ಇಸ್ಲಾಂಪೂರ, ಹುಕ್ಕೇರಿ ತಾಲ್ಲೂಕು

***

ಖಾನಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನನಗೆ ಹಾಸಿಗೆ ಸಿಗಲಿಲ್ಲ. ಹೊರಗಡೆಯೇ ಕೆಲವು ಗಂಟೆ ಆಮ್ಲಜನಕ ನೀಡಿ ಚಿಕಿತ್ಸೆ ನೀಡಿದರು. ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖನಾದೆ

-ನಾಗೇಂದ್ರ ಚೌಗಲಾ, ಕಾಮಸಿನಕೊಪ್ಪ, ಖಾನಾಪುರ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT