ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡೇತರ ಸಮಸ್ಯೆಗಳಿಗೆ ಚಿಕಿತ್ಸೆ ಅಬಾಧಿತ

ಸರ್ಕಾರಿ ಆಸ್ಪತ್ರೆಗಳಿಗೆ ಬರಲು ಜನರಲ್ಲಿ ಕೋವಿಡ್ ಭೀತಿ
Last Updated 24 ಮೇ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಾದ್ಯಂತ ಕೋವಿಡೇತರ ಆರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುತ್ತಿದೆ.

ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆ ಸೇರಿದಂತೆ ಹಲವು ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳನ್ನಾಗಿ ಮಾಡಲಾಗಿತ್ತು. ಆದರೆ, ಈ ಬಾರಿ ಹಾಗಿಲ್ಲ. ಜಿಲ್ಲಾಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಮಾನ್ಯ ಜ್ವರ, ಶೀತ, ತಲೆ ನೋವು, ಹೊಟ್ಟೆ ನೋವು ಮೊದಲಾದ ಸಣ್ಣಪುಟ್ಟ ಸಮಸ್ಯೆಗಳಿಗೆ ಚಿಕಿತ್ಸೆ ಲಭ್ಯವಿದೆ.

ಹೋದ ವರ್ಷ ಬಹುತೇಕ ಖಾಸಗಿ ವೈದ್ಯರು ಕ್ಲಿನಿಕ್‌ ಅಥವಾ ಆಸ್ಪತ್ರೆಗಳನ್ನು ಬಂದ್ ಮಾಡಿದ್ದರು. ತಮಗೂ ಕೋವಿಡ್ ತಗುಲಬಹುದು ಎಂಬ ಭೀತಿ ಅವರಿಗಿತ್ತು. ಆದರೆ, ಈಗ ಕಾರ್ಯನಿರ್ವಹಿಸುತ್ತಿದ್ದಾರೆ. ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕ್ಲಿನಿಕ್ ಹೊಂದಿರುವ ವೈದ್ಯರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಜನರಲ್ಲಿ ಬಹುತೇಕರು ಕೋವಿಡ್ ಭೀತಿಯಿಂದಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಿಲ್ಲ. ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೇಳಿಬಿಟ್ಟಾರು ಎಂಬ ಭಯ. ಪರಿಣಾಮ, ಸೇವೆ ಲಭ್ಯವಿದ್ದರೂ ಪಡೆದುಕೊಳ್ಳಲು ಹಲವರು ಮುಂದಾಗುತ್ತಿಲ್ಲ. ಖಾಸಗಿಯವರ ಮೊರೆ ಹೋಗುತ್ತಿರುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ.

ಹೊರ ರೋಗಿಗಳಾಗಿ ಚಿಕಿತ್ಸೆ

ಚಿಕ್ಕೋಡಿ: ತಾಲ್ಲೂಕಿನಲ್ಲಿ ಸಾಮಾನ್ಯ ರೋಗಿಗಳಿಗೆ ಖಾಸಗಿ ಮತ್ತು ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿರುವುದರಿಂದ ಸಾಮಾನ್ಯ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿಲ್ಲ. ಹೊರ ರೋಗಿಗಳಾಗಿ ಚಿಕಿತ್ಸೆ ಕೊಡಲಾಗುತ್ತಿದೆ. ಹೆರಿಗೆ ವಿಭಾಗವನ್ನೂ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿಟ್ಟಿದ್ದು, ಸೋಂಕಿತೆಯರಿಗೆ ಮಾತ್ರ ಹೆರಿಗೆ ಮಾಡಿಸಲಾಗುತ್ತಿದೆ.‌ ಸಾಮಾನ್ಯ ಗರ್ಭಿಣಿಯರನ್ನು ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕಳುಹಿಸಿಕೊಡಲಾಗುತ್ತಿದೆ.

ರೋಗಿಗಳ ದಟ್ಟಣೆ ಕಡಿಮೆ!

ರಾಮದುರ್ಗ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡ್‌ ಮಾಡಲಾಗಿದೆ. ಹೀಗಾಗಿ, ಬಹುತೇಕರು ಕೋವಿಡ್ ಭೀತಿಯಿಂದ ಈ ಆಸ್ಪತ್ರೆಗೆ ಬರುತ್ತಿಲ್ಲ. ಇದರಿಂದ ರೋಗಿಗಳ ದಟ್ಟಣೆ ಕಡಿಮೆ ಇದೆ. ಖಾಸಗಿ ವೈದ್ಯರ ಮೊರೆ ಹೋಗುತ್ತಿದ್ದಾರೆ.

ಆಸ್ಪತ್ರೆಗೆ ಹೋಗಲು ಜನರಿಗೆ ಭಯ

ಚನ್ನಮ್ಮನ ಕಿತ್ತೂರು: ಕೊರೊನಾ ಸೋಂಕು ಹಳ್ಳಿಗಳಲ್ಲೂ ವ್ಯಾಪಕವಾಗಿ ಹರಡುತ್ತಿರುವುದರಿಂದ ಜನರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಭಯ ಪಡುತ್ತಿದ್ದಾರೆ. ಶೀತ, ಕೆಮ್ಮ, ಜ್ವರ ಬಂದವರು ಚಿಕಿತ್ಸೆಗೆ ತೆರಳಿದರೆ ಎಲ್ಲಿ ಕೊರೊನಾ ಎಂದು ಹೆಸರಿಟ್ಟು ಬಿಡುತ್ತಾರೋ ಎಂಬ ಭಯವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಪದವಿ ಪಡೆಯದ, ಅಷ್ಟೊಂದು ಪರಿಣಿತರಲ್ಲದ ವೈದ್ಯರ ಬಳಿಗೆ ಹೋಗಿ ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಕೆಲವರ ಸಾವಿಗೆ ಕಾರಣವಾಗುತ್ತಿದೆ ಎಂದು ವೈದ್ಯರು ತಿಳಿಸುತ್ತಾರೆ. ಆರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆದರೆ ಬೇಗ ಗುಣಮುಖರಾಗಲು ಸಾಧ್ಯ ಎನ್ನುತ್ತಾರೆ ವೈದ್ಯರು.

ಖಾಸಗಿ ವೈದ್ಯರತ್ತ ಹೋಗುತ್ತಿದ್ದಾರೆ

ರಾಯಬಾಗ: ತಾಲ್ಲೂಕಿನ ಜನ ಕೊರೊನಾಕ್ಕೆ ಹೆದರಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿರುವುದು ಕಂಡುಬಂದಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ವ್ಯವಸ್ಥೆ ಇದ್ದರೂ ಬಳಸಿಕೊಳ್ಳುತ್ತಿಲ್ಲ. ಖಾಸಗಿ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಡಾ.ಅಜಿತ ನಾಯಿಕ ಮತ್ತು ತಾಲ್ಲೂಕಿನ ದಿಗ್ಗೇವಾಡಿಯ ಸಂಜು ಸಲಗರೆ ಅವರು ಕೋವಿಡ್ ಭೀತಿ ನಡುವೆಯೂ ಬಡವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುತ್ತಾ ಗಮನಸೆಳೆದಿದ್ದಾರೆ.

‘ನನಗೆ ವಿಪರೀತ ಜ್ವರ, ಕೈ ಕಾಲು ನೋವು ಕಾಣಿಸಿಕೊಂಡಿತ್ತು. ವೈದ್ಯರನ್ನು ಸಂಪರ್ಕಿಸಿದಾಗ ರಕ್ತ ಪರೀಕ್ಷೆ ಮಾಡಿಸಲು ಹೇಳಿದರು. ಟೈಫಾಯಿಡ್ ಇರುವುದು ಕಂಡು ಬಂತು. ಡಾ.ಅಜಿತ ಅವರು ಮೂರು ದಿನ ಚಿಕಿತ್ಸೆ ನೀಡಿ ನನ್ನನ್ನು ಗುಣಪಡಿಸಿದರು’ ಎಂದು ರತ್ನಾ ಎ.ಎಂ. ತಿಳಿಸಿದರು.

‘ನನ್ನ ಕ್ಲಿನಿಕ್‌ಗೆ ಬರುವ ರೋಗಿಗಳ ರಕ್ತದ ಮಾದರಿ ಪರೀಕ್ಷಿಸಿದಾಗ ಟೈಫಾಯಿಡ್, ಮಲೇರಿಯಾ, ಡೆಂಗಿ ಮೊದಲಾದ ಸಮಸ್ಯೆ ಇರುವುದು ಕಂಡುಬರುತ್ತಿದೆ. ಜ್ವರವೆಲ್ಲವೂ ಕೋವಿಡ್ ಆಗಿರುವುದಿಲ್ಲ’ ಎಂದು ಡಾ.ಅಜಿತ ಹೇಳಿದರು.

ಪರೀಕ್ಷೆಗೆ ಸೂಚಿಸುತ್ತಾರೆಂದು...

ಖಾನಾಪುರ: ತಾಲ್ಲೂಕು ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ ಎಲ್ಲ ಆರೋಗ್ಯ ಕೇಂದ್ರಗಳಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳಲ್ಲಿ ಶೇ. 75ರಷ್ಟು ಕೋವಿಡ್ ರೋಗ ಲಕ್ಷಣಗಳನ್ನು ಹೊಂದಿದವರೇ ಇರುತ್ತಾರೆ. ಹೀಗಾಗಿ ಮೊದಲು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರಲು ವೈದ್ಯರು ಸೂಚಿಸುವ ಕಾರಣ ಬಹಳಷ್ಟು ಮಂದಿ ಆಸ್ಪತ್ರೆಗೆ ಬರಲು ಹೆದರುವ ಸನ್ನಿವೇಶ ನಿರ್ಮಾಣವಾಗಿದೆ.

ಎಲ್ಲಿಗೆ ಹೋಗುವುದು?

ಗೋಕಾಕ: ಇಲ್ಲಿನ ಬಹುತೇಕ ಆಸ್ಪತ್ರೆಗಳು ತಮ್ಮ ಕಾರ್ಯಕ್ಷೇತ್ರವನ್ನು ಕೋವಿಡ್ ಉಪಚಾರಕ್ಕೆ ಸೀಮಿತಗೊಳಿಸಿದ್ದರಿಂದ ಕೆಮ್ಮು, ನೆಗಡಿ, ಜ್ವರ ಇತ್ಯಾದಿ ಕಾಯಿಲೆಗಳ ಉಪಚಾರಕ್ಕೆ ಎಲ್ಲಿ ಹೋಗುವುದು ಎಂಬ ಪ್ರಶ್ನೆ ಜನರದಾಗಿದೆ. ಕೊರೊನಾ ಅರ್ಭಟದ ನಡುವೆ ಸಾಮಾನ್ಯರ ನೋವು ಕೇಳುವವರಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಇತರ ಕಾಯಿಲೆಯವರು ಆಸ್ಪತ್ರೆಯಿಂದ ವಿಮುಖ

ಮೂಡಲಗಿ: ಇತರ ಕಾಯಿಲೆಗಳಿಂದ ಬಳಲುತ್ತಿರುವವರು ಕೋವಿಡ್ ಸೋಂಕಿನ ಭಯದಿಂದ ಆಸ್ಪತ್ರೆಗಳತ್ತ ಮುಖ ಮಾಡುತ್ತಿಲ್ಲ. ಸಣ್ಣಪುಟ್ಟ ಕಾಯಲೆಗಳು ಬಂದರೆ ವೈದ್ಯರನ್ನು ಫೋನ್‌ನಲ್ಲೇ ಸಂಪರ್ಕಿಸಿ ಮನೆಯಲ್ಲಿ ಪರಿಹಾರ ಕಂಡುಕೊಳ್ಳುತ್ತಿದ್ದಾರೆ.

‘ಆಸ್ಪತ್ರೆಗೆ ಬರುವವರಲ್ಲಿ ಇತರ ರೋಗಿಗಳ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ; ಜನರು ಆಸ್ಪತ್ರೆಗೆ ಬರಲು ಹಿಂಜರಿಯುತ್ತಿದ್ದಾರೆ’ ಎಂದು ಖಾಸಗಿ ಆಸ್ಪತ್ರೆಯ ಡಾ.ಅನಿಲ ಪಾಟೀಲ ತಿಳಿಸಿದರು.

‘ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಬಾಧಿತರ ಆರೈಕೆ ಮತ್ತು ನಿರ್ವಹಣೆಯನ್ನು ಸಿಬ್ಬಂದಿ ಪ್ರತ್ಯೇಕವಾಗಿ ನೋಡಿಕೊಳ್ಳುತ್ತಿದ್ದಾರೆ. ವಿಷ ಸೇವನೆ, ಹಾವು ಕಡಿತ, ಅಪಘಾತ, ಅತಿಸಾರ ಮೊದಲಾದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆರಿಗೆ ವಾರ್ಡ್‌ನಲ್ಲೂ ಪ್ರತ್ಯೇಕ ವ್ಯವಸ್ಥೆ ಇದೆ’ ಎಂದು ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಭಾರತಿ ಕೋಣಿ ತಿಳಿಸಿದರು.

ಸವದತ್ತಿಯಲ್ಲೂ ಕೋವಿಡ್ ಬಗ್ಗೆ ಜನರು ಭೀತರಾಗಿದ್ದಾರೆ. ಕೋವಿಡ್ ಪರೀಕ್ಷೆ ಮಾಡಿಸಿದ್ದಲ್ಲಿ ಮಾತ್ರ ಚಿಕಿತ್ಸೆ ಎಂದು ಕೆಲ ಆಸ್ಪತ್ರೆಗಳವರು ಹೇಳುತ್ತಿರುವುದರಿಂದ ರೋಗಿಗಳು ಕಂಗಾಲಾಗಿದ್ದಾರೆ. ಕೆಲವೆಡೆ ವೈದ್ಯರಿಗೂ ಸೋಂಕು ತಗುಲಿ ಸಾಮಾನ್ಯರು ಚಿಕಿತ್ಸೆಗೆ ಪರದಾಡುವಂತಿದೆ.

ಆಟುಕ್ಕುಂಟು ಲೆಕ್ಕಕ್ಕಿಲ್ಲ!

ತೆಲಸಂಗ: ಕೊರೊನಾ 2ನೇ ಅಲೆಯು ಹಳ್ಳಿಗಳಿಗೂ ವ್ಯಾಪಿಸಿದ್ದು, ತೆಲಸಂಗ ಹೋಬಳಿಯ ಕೆಲ ಗ್ರಾಮಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿವೆ. ತೆಲಸಂಗ ಮತ್ತು ಕೊಕಟನೂರ ಆಸ್ಪತ್ರೆಗಳಲ್ಲಿ ಸೇವೆ ದೊರೆಯುತ್ತಿದೆ. ಬೆಳಿಗ್ಗೆ 9ಗಂಟೆಗೆ ಒಪಿಡಿ ಆರಂಭವಾಗಿ ಸಂಜೆ 4 ಟೆಯವರೆಗೂ ತೆರೆದಿರಬೇಕು. ಆದರೆ, ಸಿಬ್ಬಂದಿ ಬರುವುದೇ 10 ಗಂಟೆ ನಂತರ! ಮಧ್ಯಾಹ್ನ 2ಕ್ಕೆ ಹೊರಟಿರುತ್ತಾರೆ! ಕೆಲವರು ವಾರಕ್ಕೊಮ್ಮೆ ಅಥವಾ 2 ಬಾರಿ ಬರುತ್ತಾರೆ. ವೈದ್ಯರಿಗೆ 2–3 ಆಸ್ಪತ್ರೆಗಳ ಚಾರ್ಜ್ ಇದೆ ಎಂಬ ಸಿದ್ಧ ಉತ್ತರ ಸಿಗುತ್ತದೆ. ಕೆಮ್ಮು, ನೆಗಡಿ, ಜ್ವರ ಬಂದರೆ ಜನರು ಖಾಸಗಿ ವೈದ್ಯರಲ್ಲಿಗೆ ಹೋಗುತ್ತಿದ್ದಾರೆ.

ಪರದಾಡುವ ಸ್ಥಿತಿ

ಎಂ.ಕೆ. ಹುಬ್ಬಳ್ಳಿ: ಗ್ರಾಮೀಣ ಜನರು ಇತರ ಕಾಯಿಲೆಗಳ ನಿವಾರಣೆಗೆ ಪರದಾಡುವ ಸ್ಥಿತಿ ಇದೆ. ಕೋವಿಡ್ ಭೀತಿಯಿಂದಾಗಿ, ರೋಗಿಗಳು ಸರ್ಕಾರಿ ಆಸ್ಪತ್ರೆಗಳ ಬದಲಿಗೆ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ‘ಸರ್ಕಾರಿ ಆಸ್ಪತ್ರೆಗೆ ಹಿಂದೆ ಸರಾಸರಿ 100ಕ್ಕೂ ಹೆಚ್ಚಿನ ಮಂದಿ ಬರುತ್ತಿದ್ದರು. ಈಗ 20ರಿಂದ 30ಕ್ಕೆ ಇಳಿದಿದೆ’ ಎನ್ನುತ್ತಾರೆ ವೈದ್ಯರು.

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾಮಾನ್ಯ ರೋಗಿಗಳಿಗೆ ಪ್ರತ್ಯೇಕ ಕೌಂಟರ್ ಇದೆ. ಕೋವಿಡ್ ಲಕ್ಷಣಗಳು ಕಂಡು ಬಂದರೆ ಮಾತ್ರ ಪರೀಕ್ಷೆ ಮಾಡಲಾಗುತ್ತದೆ. ಒಬ್ಬರೆ ವೈದ್ಯರು ಎಲ್ಲವನ್ನೂ ನಿರ್ವಹಿಸಬೇಕಾದ ಸ್ಥಿತಿ ಇದೆ.

***

ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಜೊತೆಗೆ ಹೊರ ರೋಗಿಗಳ ವಿಭಾಗವೂ ಕಾರ್ಯನಿರ್ವಹಿಸುತ್ತಿದೆ. ಆದರೆ, ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ

-ಡಾ.ನಿರ್ಮಲಾ ಹಂಜಿ, ಮುಖ್ಯ ವೈದ್ಯಾಧಿಕಾರಿ, ಸರ್ಕಾರಿ ಆಸ್ಪತ್ರೆ

**

ಜಿಲ್ಲಾಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆ ಮಾಡಿದರೆ ಇತರ ರೋಗಿಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ, ಎಲ್ಲ ವಿಭಾಗಗಳೂ ಕಾರ್ಯನಿರ್ವಹಿಸುತ್ತಿವೆ. ಬಡ ಜನರಿಗೆ ಸೇವೆ ಒದಗಿಸುತ್ತಿವೆ

-ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ

***

ಲಭ್ಯ ಸಿಬ್ಬಂದಿಯ ಸಹಾಯದಿಂದ ಎಲ್ಲ ರೀತಿಯ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಪ್ರಯತ್ನ ನಡೆದಿದೆ. ಕೋವಿಡ್ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಮತ್ತು ಸಾಧಾರಣ ಕೋವಿಡ್ ರೋಗಿಗಳನ್ನು ಖಾನಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ

-ಡಾ.ಸಂಜಯ ನಾಂದ್ರೆ, ಟಿಎಚ್ಒ ಖಾನಾಪುರ

***

ಕೋವಿಡ್ ಕೇಂದ್ರವೂ ನಡೆಯುತ್ತಿದೆ. ನಿತ್ಯ ಇತರ ರೋಗಿಗಳಿಗೂ ಸಿಬ್ಬಂದಿ ಕೊರತೆಯ ನಡುವೆಯೂ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿದೆ

- ಡಾ.ಭಾರತಿ ಕೋಣಿ, ಮುಖ್ಯ ವೈದ್ಯಾಧಿಕಾರಿ, ಸಮುದಾಯ ಆರೋಗ್ಯ ಕೇಂದ್ರ

***

(ಪ್ರಜಾವಾಣಿ ತಂಡ: ಪ್ರದೀಪ ಮೇಲಿನಮನಿ, ಚನ್ನಪ್ಪ ಮಾದರ, ಸುಧಾಕರ ತಳವಾರ, ಪ್ರಸನ್ನ ಕುಲಕರ್ಣಿ, ಬಾಲಶೇಖರ ಬಂದಿ, ರಾಮೇಶ್ವರ ಕಲ್ಯಾಣಶೆಟ್ಟಿ, ಬಿ.ಎಂ. ಶಿರಸಂಗಿ, ಎಸ್. ವಿಭೂತಿಮಠ, ಜಗದೀಶ ಖೊಬ್ರಿ, ಆನಂದ ಮನ್ನಿಕೇರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT