ಗುರುವಾರ , ಆಗಸ್ಟ್ 22, 2019
25 °C
ಮರಾಠಾ ಕಾಲೊನಿ ಸೇರಿ ಹಲವು ಬಡಾವಣೆಗಳು ಜಲಾವೃತ; ಮಂಕಾದ ಲಕ್ಷ್ಮಿ ಹಬ್ಬ

ಮತ್ತೆ ಅಬ್ಬರಿಸಿದ ವರುಣ; ತಪ್ಪದ ಗೋಳು

Published:
Updated:
Prajavani

ಬೆಳಗಾವಿ: ನಗರದಲ್ಲಿ ಗುರುವಾರ ಕೊಂಚ ಬಿಡುವು ನೀಡಿದ್ದ ವರುಣ, ಶುಕ್ರವಾರ ಅಬ್ಬರಿಸುವ ಮೂಲಕ ಆತಂಕ ಹೆಚ್ಚಿಸಿದ. ಧಾರಾಕಾರ ಮಳೆಯಿಂದಾಗಿ ಹಲವು ಬಡಾವಣೆಗಳು ಮತ್ತೆ ಜಲಾವೃತವಾಗಿದ್ದು, ಅಲ್ಲಿನ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಮರಾಠಾ ಕಾಲೊನಿ, ಸಮರ್ಥನಗರ, ಕಪಿಲೇಶ್ವರ ಕಾಲೊನಿ, ಕಾಂಗ್ರೆಸ್‌ ರಸ್ತೆ, ತಿಲಕವಾಡಿ, ಗಾಂಧಿನಗರ, ಶಾಸ್ತ್ರಿನಗರ, ಅಶೋಕನಗರ ಮೊದಲಾದ ಕಡೆಗಳಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ, ನಿವಾಸಿಗಳು ಪರದಾಡಿದರು. ಮನೆಗಳು, ಅಪಾರ್ಟ್‌ಮೆಂಟ್‌ಗಳ ಸೆಲ್ಲಾರ್‌ಗಳಿಗೆ ನುಗ್ಗಿದ ನೀರು ಹೊರಹಾಕಲು ಸಾಹಸಪಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಕೆಲವು ಕಡೆಗಳಲ್ಲಿ ಜನರು ಹೊರಬರಲಾರದೇ ಸಂಕಷ್ಟ ಅನುಭವಿಸಿದರು.

ಕೆಲವು ನಿಮಿಷಗಳಷ್ಟೇ ಬಿಡುವು ನೀಡುತ್ತಿದ್ದ ಮಳೆರಾಯ ಆರ್ಭಟ ಜೋರಾಗಿಯೇ ಇತ್ತು. ಇದರಿಂದಾಗಿ ತಗ್ಗು ಪ್ರದೇಶದಲ್ಲಿನ ರಸ್ತೆಗಳೆಲ್ಲವೂ ಕಾಲುವೆಗಳಂತಾಗಿದ್ದವು. ಜನಜೀವನ ಅಸ್ತವ್ಯಸ್ತವಾಗಿತ್ತು. ಹಲವು ವಾಣಿಜ್ಯ ಮಳಿಗೆಗಳ ಸೆಲ್ಲಾರ್‌ಗಳಿಗೆ ನೀರು ನುಗ್ಗಿದ್ದರಿಂದ, ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದ್ದರಿಂದ ಕಚೇರಿಗಳು, ಅಂಗಡಿಗಳು ಬಂದ್ ಆಗಿದ್ದವು. ಶಾಲಾ–ಕಾಲೇಜುಗಳಿಗೂ ರಜೆ ನೀಡಿದ್ದರಿಂದಾಗಿ ಹೆಚ್ಚಿನ ವಾಹನಗಳ ಅಬ್ಬರ ಇರಲಿಲ್ಲ. ಸ್ವಯಂಪ್ರೇರಿತ ಬಂದ್ ವಾತಾವರಣ ನಿರ್ಮಾಣವಾಗಿದ್ದು ಕಂಡುಬಂತು.

ಹೆಂಗಳೆಯರ ನೆಚ್ಚಿನ ಹಬ್ಬ ವರ ಮಹಾಲಕ್ಷ್ಮಿ ಹಬ್ಬ ಮಳೆಯಿಂದಾಗಿ ಕಳೆಗುಂದಿತು. ಬಹಳಷ್ಟು ಬಡಾವಣೆಗಳು ಜಲಾವೃತವಾಗಿದ್ದರಿಂದ ಹಾಗೂ ಅಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರಿಂದಾಗಿ ತೊಂದರೆ ಅನುಭವಿಸುತ್ತಿರುವ ಕಾರಣ ಹಬ್ಬದ ಸಂಭ್ರಮ ಕಂಡುಬರಲಿಲ್ಲ. ಕೆಲವೇ ಬಡಾವಣೆಗಳಲ್ಲಿನ ಮಹಿಳೆಯರು ವರಮಹಾಲಕ್ಷ್ಮಿಯನ್ನು ಪೂಜಿಸಿದರು. ಸಂಜೆ ಬಂಧು–ಮಿತ್ರರ ಮನೆಗೆ ಅರಿಸಿನ–ಕುಂಕುಮ ತೆಗೆದುಕೊಳ್ಳಲು ಹೋಗುವ ಮಹಿಳೆಯರಿಗೆ ತೊಂದರೆಯಾಯಿತು. ಮಳೆಯಲ್ಲಿ ನೆನೆಯಬೇಕಾಯಿತು.

‘ದಕ್ಷಿಣ ವಿಧಾನಸಭಾ ಕ್ರೇತ್ರವೊಂದರಲ್ಲೇ ಮಳೆಯಿಂದಾಗಿ 347 ಮನೆಗಳು ಬಿದ್ದಿವೆ. 2762ಕ್ಕೂ ಮನೆಗಳಿಗೆ ಹಾನಿಯಾಗಿದೆ. 9700ಕ್ಕೂ ಹಚ್ಚು ಮನೆಗಳಿಗೆ ನೀರು ನುಗ್ಗಿದೆ. ಕೆಲವು ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದೇನೆ. ಸಮಗ್ರವಾಗಿ ಸಮೀಕ್ಷೆ ನಡೆಸಿ ವರದಿ ತಯಾರಿಸಬೇಕು ಹಾಗೂ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಶಾಸಕ ಅಭಯ ಪಾಟೀಲ ಮಾಹಿತಿ ನೀಡಿದರು.

ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಕೂಡ ನೆರೆ‍ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ಸ್ಪಂದಿಸಿದರು.

ಇಲ್ಲಿನ ಹಿಂಡಲಾಗದಲ್ಲಿರುವ ಕೇಂದ್ರ ಕಾರಾಗೃಹಕ್ಕೂ ನೀರು ನುಗ್ಗಿದೆ. ಇದರಿಂದ, ಅಲ್ಲಿನ ಸಿಬ್ಬಂದಿ ಹಾಗೂ ಕೈದಿಗಳು ‍ಪರದಾಡಿದರು. ಪಂಪ್ ಮಾಡಿ ನೀರನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಯಿತು.

ಅಪಾರ್ಟ್‌ಮೆಂಟ್‌ಗಳಲ್ಲಿ ಸಿಲುಕಿದರು
ನಗರದ ಬಹುತೇಕ ಅಪಾರ್ಟ್‌ಮೆಂಟ್‌ಗಳಿಗೆ ಮಳೆ ನೀರು ನುಗ್ಗಿದೆ. ಹೀಗಾಗಿ, ಅಲ್ಲಿನ ಜನರು ಅಕ್ಷರಶಃ ಜಲಬಂಧನದಲ್ಲಿದ್ದಾರೆ. ಹೊರ ಬರಲಾಗದೇ ಪರದಾಡುವಂತಾಗಿದೆ. ಸೆಲ್ಲಾರ್‌ಗಳಲ್ಲಿರುವ ಕಾರು, ದ್ವಿಚಕ್ರವಾಹನಗಳು ಜಲಾವೃತವಾಗಿವೆ.

Post Comments (+)