ಮಂಗಳವಾರ, ಸೆಪ್ಟೆಂಬರ್ 28, 2021
21 °C
ಭಾರಿ ಮಳೆ, 4 ಸೇತುವೆಗಳು ಜಲಾವೃತ

ನಿಪ್ಪಾಣಿ: ಪ್ರವಾಹದ ಭೀತಿಯಲ್ಲಿ ಗಡಿ ಗ್ರಾಮಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಿಪ್ಪಾಣಿ: ಕಳೆದ ಎರೆಡು ದಿನಗಳಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವೇದಗಂಗಾ ಮತ್ತು ದೂಧ್‌ಗಂಗಾ ನದಿಗಳು ಮೈದುಂಬಿಕೊಂಡು ಹರಿಯುತ್ತಿದ್ದು ತಾಲ್ಲೂಕಿನ 4 ಕಿರು ಸೇತುವೆಗಳು ಗುರುವಾರ ಮುಳುಗಡೆಯಾಗಿವೆ.

ನದಿ ತೀರದ ಗ್ರಾಮಗಳಿಗೆ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ತಾಲೂಕಿನ ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜತ್ರಾಟ್- ಭೀವಶಿ, ಅಕ್ಕೋಳ- ಸಿದ್ನಾಳ ಹಾಗೂ ಭೋಜ_ಕುನ್ನೂರ ಮತ್ತು ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಾರದಗಾ-ಭೋಜ ಸೇತುವೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.

ಇದರಿಂದ ಸಿದ್ನಾಳ, ಹುನ್ನರಗಿ, ಬೋಳೆವಾಡಿ, ಭೋಜ, ಕಾರದಗಾ ಹೀಗೆ ಅನೇಕ ಗ್ರಾಮದ ಜನರು ಪರ್ಯಾಯ ಮಾರ್ಗವಾಗಿ ಸಂಚಾರ ಮಾಡಬೇಕಾಗಿದೆ. ಇನ್ನೂ ಮಳೆ ಮುಂದುವರೆದಿದ್ದರಿಂದ ಮುನ್ನೆಚ್ಚರಿಕೆಯಾಗಿ ತಾಲೂಕಾ ಆಡಳಿತ ಬ್ಯಾರೇಜ್‌ ಹತ್ತಿರ ಬ್ಯಾರಿಕೇಡ್‌ ಅಳವಡಿಸಿ ಗಡಿ ಹಾಗೂ ನದಿಯ ದಡದಲ್ಲಿರುವ ಗ್ರಾಮಗಳ ಜನರರಿಗೆ ಎಚ್ಚರಿಕೆಯಿಂದ ಇರಲು ತಿಳಿಸಿದ್ದಾರೆ. ಹಲವೆಡೆ ಗಂಜಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ತಹಶೀಲ್ದಾರ್ ಪ್ರಕಾಶ ಗಾಯಕವಾಡ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ವಿವಿಧ ಭಾಗಗಳಲ್ಲಿ ಕಳೆದ 24 ಗಂಟೆಯಲ್ಲಿ ಸರಾಸರಿ 8.95 ಸೆ.ಮೀ. ಮಳೆಯಾಗಿದ ಕುರಿತು ವರದಿಯಾಗಿದೆ. ಜೂ.1ರಿಂದ ಇಲ್ಲಿಯವರೆಗೆ 49.58 ಸೆ.ಮೀ. ಮಳೆಯಾಗಿದೆ. ನೆರೆಯ ಮಹಾರಾಷ್ಟ್ರದ ಕಾಳಮ್ಮವಾಡಿ ಜಲಾಶಯ ಪರಿಸರದಲ್ಲಿ ಕಳೆದ 24 ಗಂಟೆಯಲ್ಲಿ 11 ಸೆ.ಮೀ, ಪಾಟಗಾಂವ ಜಲಾಶಯ ಪರಿಸರದಲ್ಲಿ 18.3 ಸೆ.ಮೀ. ಮಳೆಯಾಗಿರುವ ಕುರಿತು ವರದಿಯಾಗಿದೆ.

ಬೆಳೆಗಳ ನಾಶ: ತಾಲ್ಲೂಕಿನಾದ್ಯಂತ ಅವಿತರವಾಗಿ ಮಳೆಯಾಗುತ್ತಿರುವ ಪರಿಣಾಮ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹಳ್ಳಕೊಳ್ಳದ ಬದಿಗಿರುವ ಹೊಲಗದ್ದೆಗಳಲ್ಲಿ ನೀರು ನುಗ್ಗಿ ಹಲವಾರು ರೈತರಿಗೆ ಅಪಾರ ನಷ್ಟವಾಗಿದೆ.

ತುಂಬಿದ ಜವಾಹರ ಜಲಾಶಯ: ಸ್ಥಳೀಯರಿಗೆ ಕುಡಿಯುವ ನೀರು ಪೂರೈಕೆಯಾಗುವ ಜವಾಹರ ಜಲಾಶಯದ ನೀರಿನ ಶೇಖರಣೆಯ ಗರಿಷ್ಠ ಮಟ್ಟವನ್ನು ಮೀರಿ ತುಂಬಿಕೊಂಡಿದೆ. ಹೆಚ್ಚಿನ ನೀರು ಹಲವರ ಹೊಲಗದ್ದೆಗಳಲ್ಲಿ ನುಸುಳುತ್ತಿದೆ.

ನಾಗರಿಕರ ಆಕ್ರೋಶ: ನಗರದಲ್ಲಿ ಒಳಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ನಗರಸಭೆಯಿಂದ ಸಮಯಕ್ಕೆ ಒಳಚರಂಡಿ ಸ್ವಚ್ಛತೆಯ ಕಾರ್ಯ ಪೂರ್ಣಗೊಳ್ಳದ ಪರಿಣಾಮ ಒಳಚರಂಡಿ ನೀರು ರಸ್ತೆಯ ಮೇಲೆ ನುಸುಳುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು