ಮಂಗಳವಾರ, ನವೆಂಬರ್ 19, 2019
29 °C
ನಮ್ಮ ನಗರ– ನಮ್ಮ ಧ್ವನಿ

ಮಳೆ, ಪ್ರವಾಹ ತಗ್ಗಿದ ಮೇಲೆ ಬೆಳಗಾವಿ ರಸ್ತೆಗಳಲ್ಲಿ ಹಳ್ಳಗಳದ್ದೇ ಕಾರುಬಾರು!

Published:
Updated:
Prajavani

ಬೆಳಗಾವಿ: ಮಳೆ... ಮಳೆ... ಮಳೆ... ನವೆಂಬರ್‌ ತಿಂಗಳು ಆರಂಭವಾಗಿದ್ದರೂ ಬೆಂಬಿಡದ ಮಳೆರಾಯನ ಬಗ್ಗೆಯೇ ನಗರದಲ್ಲೆಡೆ ಮಾತು. ವರುಣನ ಅವಕೃಪೆಗೆ ಒಳಗಾಗಿರುವ ಕುಂದಾ ನಗರಿ ಬೆಳಗಾವಿ ನಲುಗಿ ಹೋಗಿದೆ. ಜೂನ್‌ ತಿಂಗಳಿನಿಂದ ಸುರಿಯುತ್ತಿರುವ ಮಳೆ ನವೆಂಬರ್‌ ತಿಂಗಳು ಆರಂಭವಾದರೂ ಬಿಡುತ್ತಿಲ್ಲ. ಸತತ 5 ತಿಂಗಳಿನಿಂದ ಸುರಿದ ಮಳೆಗೆ ನಗರದ ಬಹುತೇಕ ರಸ್ತೆಗಳು ಕಿತ್ತುಹೋಗಿವೆ.

ಇಲ್ಲಿನ ನೆಹರು ನಗರ, ಸದಾಶಿವ ನಗರ, ಟಿಳಕವಾಡಿ, ಮಾಳಮಾರುತಿ, ಬೋಗಾರ್‌ವೇಸ್‌, ಕಾಲೇಜು ರಸ್ತೆ, ಶಹಾಪುರ, ಖಾಸಬಾಗ, ವಡಗಾಂವ, ಹಿಂದವಾಡಿ, ಹಿಂಡಲಗಾ ರಸ್ತೆ, ಕ್ಲಬ್ ರಸ್ತೆ, ಫೋರ್ಟ್‌ ರಸ್ತೆ, ಹಳೇ ಪಿ.ಬಿ. ರಸ್ತೆ, ಖಾನಾಪುರ ರಸ್ತೆ, ಉದ್ಯಮಬಾಗ್‌ ಒಳರಸ್ತೆಗಳು, ಆಟೊ ನಗರ ಒಳರಸ್ತೆಗಳು ಸೇರಿದಂತೆ ಬಹುತೇಕ ಭಾಗಗಳಲ್ಲಿ ರಸ್ತೆಯ ಟಾರು ಕಿತ್ತುಹೋಗಿ, ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ.

ಎರಡು ಪಟ್ಟು ಹೆಚ್ಚು: ಮಲೆನಾಡು ಪ್ರದೇಶಕ್ಕೆ ಒಳಪಡುವ ಬೆಳಗಾವಿ ನಗರ ಪ್ರದೇಶದಲ್ಲಿ ಈ ಸಲ ವಿಪರೀಪ ಮಳೆ ಸುರಿಯಿತು. ವಾಡಿಕೆ ಮಳೆಗಿಂತ ಎರಡು ಪಟ್ಟು ಹೆಚ್ಚು ಮಳೆ ಸುರಿಯಿತು. 122.3 ಸೆಂ.ಮೀ.ಗೆ ಹೋಲಿಸಿದರೆ 218.3 ದಿಂದ 266.1 ಸೆಂ.ಮೀ ವರೆಗೆ ಮಳೆಯಾಗಿದೆ.

ಆಗಸ್ಟ್‌ ಹಾಗೂ ಅಕ್ಟೋಬರ್‌ ತಿಂಗಳಿನಲ್ಲಿ ವಿಪರೀತ ಮಳೆಯಾಯಿತು. ಆಗಸ್ಟ್‌ನಲ್ಲಿ 27.3 ವಾಡಿಕೆ ಮಳೆಗೆ ಹೋಲಿಸಿದರೆ 99.2 ಸೆಂ.ಮೀ ದಿಂದ 130.1 ಸೆಂ.ಮೀ ವರೆಗೆ ಮಳೆಯಾಗಿತ್ತು. ಇದು ದಾಖಲೆ ಪ್ರಮಾಣದ ಮಳೆಯಾಗಿತ್ತು. ಯಾವೊಂದು ತಿಂಗಳಿನಲ್ಲಿ ಇಷ್ಟೊಂದು ಮಳೆಯಾಗಿರಲಿಲ್ಲ. ಅಕ್ಟೋಬರ್‌ ತಿಂಗಳಿನಲ್ಲಿ 13.6 ಸೆಂ.ಮೀ ವಾಡಿಕೆ ಮಳೆಗೆ ಹೋಲಿಸಿದರೆ 34.8 ಸೆಂ.ಮೀ ದಿಂದ 35.8 ಸೆಂ.ಮೀ ವರೆಗೆ ಮಳೆಯಾಗಿದೆ.

ಹಗಲು ರಾತ್ರಿ ಬಿರುಸಿನಿಂದ ಸುರಿದ ಮಳೆಗೆ ಟಾರು ರಸ್ತೆಗಳೆಲ್ಲ ಸಂಪೂರ್ಣ ಹಾಳಾಗಿ ಹೋದವು. ಪೇವರ್ಸ್‌ ಕೂಡ ಒಡೆದುಹೋದವು. ಸಿಮೆಂಟ್‌ ರಸ್ತೆಗಳಲ್ಲೂ ಗುಂಡಿ ನಿರ್ಮಾಣವಾದವು. ನಗರದ ತುಂಬೆಲ್ಲ ಈಗ ಗುಂಡಿಗಳದ್ದೇ ‘ದರ್ಬಾರ್‌’ ಎನ್ನುವಂತಾಗಿದೆ.

ಮತ್ತಷ್ಟು ಹಾಳು: ಮಳೆಯ ರಭಸಕ್ಕೆ ನೆಲ ಸಡಿಲುಗೊಂಡಿದ್ದು, ಭಾರಿ ಭಾರದ ವಾಹನಗಳು ಸಂಚರಿಸಿದಾಗ, ರಸ್ತೆಗಳು ಇನ್ನಷ್ಟು ಹಾಳಾಗುತ್ತಿವೆ. ಬೈಪಾಸ್‌ ರಸ್ತೆ ಇಲ್ಲದಿರುವುದರಿಂದ ಸರಕು ಹೊತ್ತ ಲಾರಿ, ಟ್ರಕ್‌ಗಳು ನಗರದೊಳಗಿನಿಂದಲೇ ಸಂಚರಿಸುತ್ತಿವೆ. ಖಾನಾಪುರದಿಂದ ಮರಗಳ ದಿಮ್ಮೆಗಳನ್ನು ಹೊತ್ತು ಬರುವ ಹಾಗೂ ಕಾರವಾರ– ಗೋವಾದಿಂದ ಖನಿಜಗಳನ್ನು ಹೊತ್ತು ಸಾಗಿಸುವ ಟ್ರಕ್‌ಗಳು, ನಗರದೊಳಗಿನಿಂದಲೇ ಸಂಚರಿಸಿ, ಹುಬ್ಬಳ್ಳಿ– ಧಾರವಾಡ, ಕೊಲ್ಹಾಪುರ, ಪುಣೆಯತ್ತ ಪ್ರಯಾಣ ಬೆಳೆಸುತ್ತಿವೆ. ಈ ಕಾರಣದಿಂದಾಗಿಯೂ ರಸ್ತೆಗಳು ಸಾಕಷ್ಟು ಹಾಳಾಗಿವೆ.

ಕಾರವಾರ– ಗೋವಾದಿಂದ ಬರುವ ವಾಹನಗಳು ಪೀರಣವಾಡಿಯಿಂದ ಖಾನಾಪುರ ರಸ್ತೆ, ಕಾಂಗ್ರೆಸ್‌ ರಸ್ತೆ, ಬೋಗಾರ್‌ವೇಸ್‌, ರಾಣಿ ಚನ್ನಮ್ಮ ವೃತ್ತ, ಕೊಲ್ಹಾಪುರ ವೃತ್ತ, ನೆಹರು ನಗರದ ಮೂಲಕ ಪಿ.ಬಿ. ರಸ್ತೆಗೆ ಸೇರಿಕೊಳ್ಳುತ್ತವೆ. ಇನ್ನೊಂದೆಡೆ, ಮಹಾರಾಷ್ಟ್ರದ ಚಂದಗಡದಿಂದ ಬರುವ ವಾಹನಗಳು ಹಿಂಡಲಗಾ, ರಾಣಿ ಚನ್ನಮ್ಮ ವೃತ್ತ, ಗಾಂಧಿ ನಗರ ಮೂಲಕ ಪಿ.ಬಿ. ರಸ್ತೆ ಸೇರಿಕೊಳ್ಳುತ್ತವೆ. ಇವೆರಡೂ ಮಾರ್ಗದ ರಸ್ತೆಗಳು ಹಾಳಾಗಿವೆ.

ಹರಸಾಹಸ: ಇಂತಹ ರಸ್ತೆಗಳಲ್ಲಿ ವಾಹನ ಚಾಲಕರು, ವಿಶೇಷವಾಗಿ ಬೈಕ್‌– ಸ್ಕೂಟರ್‌ ಸವಾರರು ವಾಹನಗಳನ್ನು ಸರ್ಕಸ್‌ ಮಾಡುತ್ತ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಆಗೊಮ್ಮೆ, ಈಗೊಮ್ಮೆ ಆಯತಪ್ಪಿ ಬಿದ್ದು ಗಾಯ ಮಾಡಿಕೊಂಡ ಉದಾಹರಣೆಗಳೂ ಇವೆ. ಗುಂಡಿ ತಪ್ಪಿಸಲು ಹೋಗಿ, ಅಕ್ಕಪಕ್ಕದ ವಾಹನಗಳಿಗೆ ಢಿಕ್ಕಿ ಹೊಡೆದು, ಚಿಕ್ಕಪುಟ್ಟ ಅಪಘಾತಗಳನ್ನು ಮಾಡಿಕೊಂಡಿದ್ದಾರೆ.

ಧೂಳು: ರಸ್ತೆಯ ಮೇಲಿನ ಟಾರು ಕಿತ್ತುಹೋಗಿದ್ದರಿಂದ ಅಡಿಯಲ್ಲಿದ್ದ ಮಣ್ಣಿನ ಧೂಳು ಮೇಲೆದ್ದು, ವಾತಾವರಣವನ್ನು ಕಲ್ಮಶಗೊಳಿಸಿದೆ. ಗಾಳಿಯ ಜೊತೆ ಸೇರಿಕೊಂಡ ಧೂಳು ಹಾಗೂ ಮಣ್ಣಿನ ಸಣ್ಣ ಸಣ್ಣ ಕಣಗಳು ದಾರಿಹೋಕರ ಕಣ್ಣಲ್ಲಿ ಸೇರಿಕೊಂಡು ತೊಂದರೆಗೀಡು ಮಾಡುತ್ತಿವೆ. ಕಣ್ಣುಗಳನ್ನು ಉಜ್ಜಿಕೊಂಡೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರಂತೂ ಇನ್ನೂ ಹೆಚ್ಚಿನ ಅಪಾಯ ಎದುರಿಸುತ್ತಿದ್ದಾರೆ.

ಮಣ್ಣಿನ ಕಣಗಳು ಗಾಳಿಯ ಮೂಲಕ ದೇಹದೊಳಗೆ ಪ್ರವೇಶಿಸಿ, ಆರೋಗ್ಯಕ್ಕೆ ಕುತ್ತು ತಂದೊಡ್ಡಿವೆ. ಉಸಿರಾಟಕ್ಕೆ ತೊಂದರೆ ಮಾಡುವುದು ಹಾಗೂ ಅಸ್ತಮಾದಂತಹ ಕಾಯಿಲೆಗೂ ಕಾರಣವಾಗುತ್ತಿವೆ.

ಚರಂಡಿ, ಕೇಬಲ್‌ ಕಾಮಗಾರಿಯಿಂದಲೂ ಅಡ್ಡಿ: ನಗರದ ಹಲವು ಭಾಗಗಳಲ್ಲಿ ನಡೆಯುತ್ತಿರುವ ಒಳ ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ಕೇಬಲ್‌ ಅಳವಡಿಸುವ ಕಾಮಗಾರಿಯಿಂದಲೂ ರಸ್ತೆಗಳು ಹಾಳಾಗಿವೆ. ನೆಹರು ನಗರದಲ್ಲಿ ಎರಡು ಬದಿ ರಸ್ತೆ ಅಗೆದುಬಿಟ್ಟಿದ್ದಾರೆ. ಭೂಮಿ ಅಗೆದು, ಹೊರ ತೆಗೆದ ಮಣ್ಣನ್ನು ಹಾಗೆಯೇ ಬಿಟ್ಟುಹೋಗಿದ್ದಾರೆ. ಇದರಿಂದಾಗಿ ವಾಹನಗಳ ಓಡಾಟಕ್ಕೆ ತೊಂದರೆಯುಂಟಾಗುತ್ತಿದೆ. ನಿಧಾನಗತಿ ಕಾಮಗಾರಿಯಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗುತ್ತಿದೆ.

15 ವರ್ಷ ಹಿಂದಿನ ಸ್ಥಿತಿ: ‘ನಗರದಲ್ಲಿನ ರಸ್ತೆಗಳ ಪರಿಸ್ಥಿತಿಯನ್ನು ನೋಡಿದರೆ 15 ವರ್ಷ ಹಿಂದಕ್ಕೆ ಹೋದಂತೆ ನಮಗೆ ಭಾಸವಾಗುತ್ತಿದೆ. ಅಷ್ಟರ ಮಟ್ಟಿಗೆ ರಸ್ತೆಗಳು ಹಾಳಾಗಿವೆ. ಮಳೆಗಾಲ ಆರಂಭವಾಗುವುದಕ್ಕಿಂತ ಮುಂಚೆ ಅಂದರೆ ಏಪ್ರಿಲ್‌– ಮೇ ತಿಂಗಳಿನಲ್ಲಿ ಇದ್ದಂತಹ ಸ್ಥಿತಿ ಮರುಳಬೇಕಾದರೆ ಸಾಕಷ್ಟು ಸಮಯ ಬೇಕಾಗಬಹುದು’ ಎಂದು ಮಹಾನಗರ ಪಾಲಿಕೆ ಸದಸ್ಯ ರಮೇಶ ಸೊಂಟಕ್ಕಿ ಹೇಳಿದರು.

‘ಈ ರಸ್ತೆಗಳನ್ನೆಲ್ಲ ರಿಪೇರಿ ಮಾಡಿಸಲು ಸಾಕಷ್ಟು ಅನುದಾನದ ಅವಶ್ಯಕತೆ ಇದೆ. ದಕ್ಷಿಣ ಬೆಳಗಾವಿಯ ಶಾಸಕ ಅಭಯ ಪಾಟೀಲ ಅನುದಾನ ತರಲು ಸಾಕಷ್ಟು ಶ್ರಮಪಡುತ್ತಿದ್ದಾರೆ. ಅನುದಾನ ದೊರೆಯುತ್ತಿದ್ದಂತೆ ರಸ್ತೆಗಳ ಅಭಿವೃದ್ಧಿ ಕಾರ್ಯ ಆರಂಭಿಸುತ್ತೇವೆ’ ಎಂದರು.

‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೆಲವು ಕಡೆ ಕೈಗೊಂಡಿರುವ ರಸ್ತೆ ಕಾಮಗಾರಿಗಳು ಇನ್ನೂ ಪೂರ್ಣವಾಗಿಲ್ಲ. ಮಂಡೋಳಿ ರಸ್ತೆ ಹಾಗೂ ನೆಹರು ನಗರದ ರಸ್ತೆ ಇನ್ನೂ ಪೂರ್ಣಗೊಂಡಿಲ್ಲ. 2 ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಕಾಮಗಾರಿ ನಡೆಯುತ್ತಿದೆ ಎಂದರೆ ಎಂತಹ ನಿಧಾನಗತಿಯ ಕಾಮಗಾರಿ ಇದಾಗಿರಬಹುದು ಎಂದು ಯೋಚಿಸಿ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದರೂ ಕಾಮಗಾರಿ ತ್ವರಿತವಾಗಿ ಆಗುತ್ತಿಲ್ಲ. ಅಧಿಕಾರಿಗಳು ಇನ್ನೂ ವೇಗವಾಗಿ ಕೆಲಸ ಮಾಡಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)