ಶನಿವಾರ, ಮೇ 28, 2022
24 °C
ಅಥಣಿ ವಿಭಾಗದ ಕಾಮಗಾರಿಗಳಲ್ಲಿ ನಿಯಮ ಉಲ್ಲಂಘನೆ

ಹೆಸ್ಕಾಂ: ಐವರು ಎಇಇ ಸೇರಿ 20 ಮಂದಿ ಅಧಿಕಾರಿ, ನೌಕರರ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ/ ಅಥಣಿ: ಹೆಸ್ಕಾಂ ಅಥಣಿ ವಿಭಾಗದಲ್ಲಿ 2018ರ ಏಪ್ರಿಲ್‌ನಿಂದ 2021ರ ಆಗಸ್ಟ್‌ವರೆಗೆ ನಡೆದಿರುವ ಗಂಗಾ ಕಲ್ಯಾಣ, ಕುಡಿಯುವ ನೀರು ಪೂರೈಕೆ, ನೆರೆ ಪರಿಹಾರ ಸೇರಿದಂತೆ ವಿವಿಧ ಕಾಮಗಾರಿಗಳ ಅನುಷ್ಠಾನದಲ್ಲಿ ನಿಯಮ ಉಲ್ಲಂಘಿಸಿರುವ ಕಾರಣ ಐವರು ಎಇಇ ಸೇರಿದಂತೆ 20 ಮಂದಿ ಅಧಿಕಾರಿಗಳು ಮತ್ತು ನೌಕರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ಇಲಾಖಾ ವಿಚಾರಣೆ ಜರುಗಿಸುವ ಹಕ್ಕು ಕಾಯ್ದಿರಿಸಿ ಅಮಾನತಿನಲ್ಲಿಡಲಾಗಿದೆ ಪ್ರಧಾನ ವ್ಯವಸ್ಥಾಪಕರು ಆದೇಶದಲ್ಲಿ ತಿಳಿಸಿದ್ದಾರೆ.

ಎಇಇಗಳಾದ ಚಿಕ್ಕೋಡಿ ಉಪವಿಭಾಗದ ಎಸ್.ಎಚ್. ಬಹುರೂಪಿ, ಐಗಳಿ ಉಪವಿಭಾಗದ  ಆರ್.ಎಚ್. ಕಲ್ಲಾರಿ, ಉಗಾರ ಉಪವಿಭಾಗದ ಗೀತಾ ಜಿ. ಕಡ್ಲಾಸ್ಕರ, ವಿಜಯಪುರದ ಜಿ.ವಿ. ಸಂಪಣ್ಣವರ, ಬೆಳಗಾವಿ ಗ್ರಾಮೀಣ ಉಪವಿಭಾಗ–1ರ ವಿ.ಜಿ. ನಾಯಿಕ, ಅಥಣಿ ವಿಭಾಗದ ಲೆಕ್ಕಾಧಿಕಾರಿ ಬಿ.ಎಂ. ಪಾಟೀಲ, ಸಹಾಯಕ ಲೆಕ್ಕಾಧಿಕಾರಿ ವೈ.ಎಸ್. ಕೆಳಗಡೆ, ವಿವಿಧ ಶಾಖೆಗಳ ಸಹಾಯಕ ಎಂಜಿನಿಯರ್‌ಗಳಾದ ಮಲಕಪ್ಪ, ವಿ.ಎ. ಗಣಿ, ಎಸ್.ಬಿ. ಬುಳ್ಳಗೌಡ, ಡಿ.ಕೆ. ಕಾಂಬಳೆ, ಆರ್‌.ಸಿ. ರಾಠೋಡ, ಕಿರಿಯ ಎಂಜಿನಿಯರ್‌ಗಳಾದ ಎಸ್‌.ಎ. ಪಾರ್ಥನಹಳ್ಳಿ, ಎನ್.ಬಿ. ನೇಮಣ್ಣವರ, ಬಿ.ಎಸ್. ಶೀಲವಂತರ, ಎಸ್.ಬಿ. ಮಹಿಷವಾಡಗಿ, ಜಿ.ಎಸ್. ಕೋಲಕಾರ, ಹಿರಿಯ ಸಹಾಯಕ ಎಂ.ಕೆ. ಕುಲಕರ್ಣಿ, ಆಪರೇಟರ್‌ ಸಿ.ಕೆ. ಹಿರೇಮಠ ಮತ್ತು ಮಾಪಕ ಓದುಗ ಕೆ.ಎಸ್. ಠಕ್ಕಣ್ಣವರ ಅಮಾನತುಗೊಂಡವರು.

‘ಕಾಮಗಾರಿಗಳಲ್ಲಿ ಹೆಸ್ಕಾಂ ಅಧಿಕಾರಿಗಳು ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ. ಕಂಪನಿಗೆ  ನಷ್ಟ ಉಂಟು ಮಾಡಿದ್ದಾರೆ’ ಎಂದು ರೈತ ಮುಖಂಡರಿಂದ ದೂರುಗಳು ಸಲ್ಲಿಕೆಯಾಗಿದ್ದವು. ಅಥಣಿಯಲ್ಲಿ ಪ್ರತಿಭಟನೆಗಳು ಕೂಡ ನಡೆದಿದ್ದವು. ಇದನ್ನು ಆಧರಿಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಅಥಣಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಹಲವು ನ್ಯೂನತೆಗಳು, ಲೋಪದೋಷಗಳು ಕಂಡುಬಂದಿದ್ದವು.

ಈ ಹಿನ್ನೆಲೆಯಲ್ಲಿ, ವಿಶೇಷ ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ಕಾರ್ಯನಿರ್ವಾಹಕ ಎಂಜಿನಿಯರ್‌ ಹಾಗೂ ಆರ್ಥಿಕ ಸಲಹೆಗಾರರಿಗೆ ಸೂಚಿಸಲಾಗಿತ್ತು. ಅವರು ವರದಿ ಸಲ್ಲಿಸಿದ್ದಾರೆ. ವಂಚನೆ, ಮೋಸ ಎಸಗಿರುವುದು ಮತ್ತು ಕಂಪನಿಗೆ ಅಪಾರ ಆರ್ಥಿಕ ನಷ್ಟ ಉಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ವಿಶೇಷ ತನಿಖೆ ಮುಂದುವರಿದಿದ್ದು, ಸಂಭವಿಸಬಹುದಾದ ಆರ್ಥಿಕ ಹಾನಿ ತಡೆಯಲು ಅಮಾನತಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

‘ಭ್ರಷ್ಟಾಚಾರದಲ್ಲಿ ಮತ್ತಷ್ಟು ಅಧಿಕಾರಿಗಳು ಭಾಗಿಯಾಗಿದ್ದಾರೆ. ಕೆಲವು ಅಧಿಕಾರವನ್ನು ಕಾಪಾಡುವ ಹುನ್ನಾರ ಅಡಗಿದೆ. ಅದಕ್ಕೆ ಅವಕಾಶ ಕೊಡಬಾರದು. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರೆಲ್ಲರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ರೈತ ಮುಖಂಡ ಪ್ರಕಾಶ ಪೂಜಾರಿ ಆಗ್ರಹಿಸಿದ್ದಾರೆ.

‘ಅವ್ಯವಹಾರಕ್ಕೆ ಅವಕಾಶ ಕೊಡುವುದಿಲ್ಲ’

‘ಇಂಧನ ಇಲಾಖೆಯಲ್ಲಿ ಯಾವುದೇ ಕಾರಣಕ್ಕೂ ಅವ್ಯವಹಾರ ನಡೆಸುವುದಕ್ಕೆ ಅವಕಾಶ ನೀಡುವುದಿಲ್ಲ. ರಾಜ್ಯದ ಯಾವುದೇ ಮೂಲೆಯಲ್ಲಿ ಈ ಬಗೆಯ ಘಟನೆಗಳು ನಡೆದರೆ ಅದನ್ನು ಜನರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ಇಲಾಖೆಯ ಎಲ್ಲ ಹಂತಗಳಲ್ಲೂ ಪಾರದರ್ಶಕತೆ ತರುವುದಕ್ಕೆ ಪ್ರಮಾಣಿಕ ಪ್ರಯತ್ನ ನಡೆಸುತ್ತೇನೆ. ಭ್ರಷ್ಟಾಚಾರ ಹಾಗೂ ಅವ್ಯವಹಾರಕ್ಕೆ ಪ್ರೇರಣೆ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ನಿಶ್ಚಿತ’ ಎಂದು ಇಂಧನ ಸಚಿವ ವಿ.ಸುನೀಲ್‌ಕುಮಾರ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು