ಹಿಡಕಲ್‌ ಡ್ಯಾಂ ಉದ್ಯಾನ: ಕೆಆರ್‌ಎಸ್‌ ಮಾದರಿಯಲ್ಲಿ ಅಭಿವೃದ್ಧಿ

6
ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಚಿವ ರಮೇಶ ಜಾರಕಿಹೊಳಿ

ಹಿಡಕಲ್‌ ಡ್ಯಾಂ ಉದ್ಯಾನ: ಕೆಆರ್‌ಎಸ್‌ ಮಾದರಿಯಲ್ಲಿ ಅಭಿವೃದ್ಧಿ

Published:
Updated:
Deccan Herald

ಹುಕ್ಕೇರಿ: ಘಟಪ್ರಭಾ ನದಿಗೆ ತಾಲ್ಲೂಕಿನ ಹಿಡಕಲ್‌ನಲ್ಲಿ ನಿರ್ಮಿಸಿರುವ ರಾಜಾ ಲಖಮಗೌಡ ಜಲಾಶಯದ ಉದ್ಯಾನವನ್ನು ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಉದ್ಯಾನದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಭರವಸೆ ನೀಡಿದರು.

ಮೂರು ವರ್ಷಗಳ ನಂತರ ಭರ್ತಿಯಾಗಿರುವ ಹಿಡಕಲ್‌ ಜಲಾಶಯದಲ್ಲಿ ಭಾನುವಾರ ಗಂಗಾಪೂಜೆ ನೆರವೇರಿಸಿ, ಬಾಗಿನ ಸಲ್ಲಿಸಿದ ನಂತರ  ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಇಲ್ಲಿನ ಉದ್ಯಾನವನ್ನು ಪ್ರವಾಸಿಗರನ್ನು ಆಕರ್ಷಿಸುವಂತೆ ಅಭಿವೃದ್ಧಿಪಡಿಸಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದಲೂ ಇದೆ. ಈ ಬಾರಿ ಇದನ್ನ ಗಂಭೀರವಾಗಿ ಪರಿಗಣಿಸಲಾಗುವುದು. ಸ್ಥಳೀಯ ಶಾಸಕ ಉಮೇಶ ಕತ್ತಿ ಅವರೊಂದಿಗೆ ಸೇರಿ, ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಈ ಬಾರಿ ಉತ್ತಮ ಮಳೆಯಾಗುತ್ತಿದೆ. ಬಹಳ ವರ್ಷಗಳ ನಂತರ ಹಿಡಕಲ್ ಜಲಾಶಯ ತುಂಬಿದೆ. ನೀರನ್ನು ಹೊರಬಿಡಲಾಗುತ್ತಿದೆ. ರೈತರು ನೀರನ್ನು ಹಿತಮಿತವಾಗಿ ಬಳಸಬೇಕು’ ಎಂದು ತಿಳಿಸಿದರು.

ಚಿಕ್ಕೋಡಿ ತಾಲ್ಲೂಕಿನಲ್ಲಿ ಹರಿದು ಹೋಗುವ ನಾಲೆಯಲ್ಲಿ ಕೊನೆವರೆಗೆ ನೀರು ಹರಿಯುವುದಿಲ್ಲ. ಇದರಿಂದ ಆ ಭಾಗದ ರೈತರಿಗೆ ತೊಂದರೆಯಾಗುತ್ತಿದೆ ಎಂದು ವಿಧಾನಪರಿಷತ್ ವಿರೋಧಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ತಿಳಿಸಿದರು.

‘ನಮ್ಮ ಭಾಗದ ರೈತರ ಸ್ಥಿತಿಯೂ ಹೀಗೇ ಇದೆ’ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ದನಿಗೂಡಿಸಿದರು. ರಾಯಬಾಗ ಮತ್ತು ಚಿಕ್ಕೋಡಿ ತಾಲ್ಲೂಕಿನಿಂದ ಬಂದಿದ್ದ ರೈತರು ಸಚಿವರಿಗೆ ಮನವಿ ಸಲ್ಲಿಸಿದರು. ‘ಈ ವರ್ಷ ಜಲಾಶಯ ಸಂಪೂರ್ಣ ಭರ್ತಿಯಾಗಿರುವುದರಿಂದ, ನಾಲೆ ಸಂಪರ್ಕ ಇರುವವರೆಗೂ ನೀರು ಹರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸಚಿವರು ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಹುಕ್ಕೇರಿ ಶಾಸಕ ಉಮೇಶ ಕತ್ತಿ, ಘಟಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಸಂಘದ ಅಧ್ಯಕ್ಷ ಅಶೋಕ ಖಂಡ್ರಳ್ಳಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಹುಂಡೇಕಾರ, ನಿರ್ದೇಶಕ ರಾಜೇಂದ್ರ ಪಾಟೀಲ, ಮಾಜಿ ಅಧ್ಯಕ್ಷ ಬಸವರಾಜ ಮಟಗಾರ, ಮಾಜಿ ಸಚಿವ ಶಶಿಕಾಂತ ನಾಯಿಕ, ಉಪವಿಭಾಗಾಧಿಕರಿ ಕವಿತಾ ಯೋಗಪ್ಪನವರ, ತಹಶೀಲ್ದಾರ್ ನಾಗನಗೌಡ ಪಾಟೀಲ, ಸಿಪಿಐ ಪ್ರಭು ಗಂಗನಹಳ್ಳಿ, ಮುಖ್ಯ ಎಂಜಿನಿಯರ್ ಎಂ. ನಾರಾಯಣ, ಅಧೀಕ್ಷಕ ಎಂಜಿನಿಯರ್ ಸಿ.ಬಿ. ಹಿರೇಮಠ, ಎಇಇ ಆರ್.ವಿ. ತಾಳೂರ, ಸೆಕ್ಷನ್ ಆಫೀಸರ್ ಅಲೋಕ ಶೆಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !