ಬೆಳಗಾವಿ: ‘ತಾಲ್ಲೂಕಿನ ಹಿಂಡಲಗಾದ ಕೇಂದ್ರೀಯ ಕಾರಾಗೃಹದಲ್ಲಿ ಇರುವ ಕೈದಿಗಳು ತಮಗೆ ಬೀಡಿ, ಸಿಗರೇಟ್, ತಂಬಾಕು ನೀಡುವಂತೆ ಪ್ರತಿಭಟನೆ ನಡೆಸಿದ್ದಾರೆ. ಅವುಗಳನ್ನು ಕೊಡುವವರೆಗೆ ಉಪಾಹಾರ ಸೇವಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ’ ಎಂಬ ಮಾಹಿತಿ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಇಡೀ ದಿನ ಹರಿದಾಡಿತು.
‘ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ದರ್ಶನ್ ಸಿಗರೇಟ್ ಸೇದಿರುವ ಹಿನ್ನೆಲೆಯಲ್ಲಿ ಇಲ್ಲಿಯೂ ಅವನ್ನೆಲ್ಲ ಒದಗಿಸಬೇಕು’ ಎಂದು ಕೈದಿಗಳು ಒತ್ತಾಯಿಸಿದ್ದರು ಎನ್ನಲಾಗಿದೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾರಾಗೃಹ ಇಲಾಖೆ ಉತ್ತರ ವಲಯದ ಡಿಐಜಿ ಟಿ.ಪಿ.ಶೇಷ, ‘ಬೀಡಿ, ಸಿಗರೇಟ್, ತಂಬಾಕು ನೀಡುವಂತೆ ಹಿಂಡಲಗಾ ಜೈಲಿನಲ್ಲಿ ಯಾರೂ ಪ್ರತಿಭಟನೆ ನಡೆಸಿಲ್ಲ. ಉಪಾಹಾರ ಸೇವನೆಯನ್ನೂ ತಿರಸ್ಕರಿಸಿಲ್ಲ. ವಾತಾವರಣ ಎಂದಿನಂತಿದೆ’ ಎಂದು ಸ್ಪಷ್ಟಪಡಿಸಿದರು.