ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಇಲ್ಲಿ ಹಿಂದಿ ‘ಹೇರ’ಬೇಕಿಲ್ಲ, ಜನರೇ ‘ಅಪ್ಪಿ’ಕೊಂಡಿದ್ದಾರೆ!

Last Updated 24 ಸೆಪ್ಟೆಂಬರ್ 2020, 1:52 IST
ಅಕ್ಷರ ಗಾತ್ರ
ADVERTISEMENT
""
""
""
""

ಬೆಳಗಾವಿ: ಕರ್ನಾಟಕವೂ ಸೇರಿದಂತೆ ದೇಶದ ಹಲವೆಡೆ ‘ಹಿಂದಿ ಹೇರಿಕೆ’ ವಿರುದ್ಧ ಪ್ರತಿಭಟನೆ ನಡೆಯುತ್ತಲೇ ಇರುತ್ತದೆ. ಆಗಾಗ ಹೋರಾಟ ತೀವ್ರಗೊಳ್ಳುವುದೂ ಉಂಟು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವಿರೋಧ ‘ವೈರಲ್‌’ ಆಗಿ ಕನ್ನಡ ಅಥವಾ ಮಾತೃ ಭಾಷೆ ಬಗೆಗಿನ ಅಭಿಮಾನ ಹೊಳೆಯಾಗಿ ಹರಿಯವುದೂ ಕಂಡುಬರುತ್ತದೆ. ಆದರೆ, ಗಡಿ ನಾಡು ಬೆಳಗಾವಿ ಜಿಲ್ಲೆಯಲ್ಲಿ ಹಿಂದಿಯನ್ನು ಜನರ ಮೇಲೆ ಹೇರಿಕೆ ಮಾಡುವ ಅಗತ್ಯವೇ ಇಲ್ಲ! ಏಕೆಂದರೆ, ಅವರೇ ಅದನ್ನು ಅಪ್ಪಿ (ಒಪ್ಪಿ)ಕೊಂಡು ಬಿಟ್ಟಿದ್ದಾರೆ!

ಗೋವಾ ಹಾಗೂ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ‘ಕುಂದಾನಗರಿ’ ಬೆಳಗಾವಿಯು ಹಲವು ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ಮಿಶ್ರಣದ ತೊಟ್ಟಿಲು. ಬೇರೆ ರಾಜ್ಯಗಳು, ಜಿಲ್ಲೆಗಳಿಂದ ಬಂದಿರುವ ಜನರು ಇಲ್ಲಿ ಹಲವು ಉದ್ಯೋಗ ಅಥವಾ ವಹಿವಾಟುಗಳ ಮೂಲಕ ‘ನೆಲೆ’ ಕಂಡುಕೊಂಡಿದ್ದಾರೆ. ಹಲವು ಭಾಷೆಗಳು ಇಲ್ಲಿರುವುದರಿಂದ ಹಿಂದಿ ಭಾಷೆಯು ಇಲ್ಲಿನವರ ‘ಸಾಮಾನ್ಯ ಭಾಷೆ’ಎಂಬಂತಾಗಿ ಹೋಗಿದೆ!

ಸೈನ್ಯಕ್ಕೆ ಸಂಬಂಧಿಸಿದ ಹಲವು ಪದಾತಿ ದಳಗಳು ಹಾಗೂ ಕೇಂದ್ರ ಸರ್ಕಾರಿ ಸ್ವಾಮ್ಯದ ಹಲವು ಸಂಸ್ಥೆಗಳು ಇಲ್ಲಿವೆ. ಪರಿಣಾಮ, ಇಲ್ಲಿಗೆ ಹಲವು ರಾಜ್ಯಗಳಿಂದ ನೌಕರರು ವರ್ಗಾವಣೆಯಾಗಿ ಬರುವುದು ಸಾಮಾನ್ಯ. ಆದ್ದರಿಂದ ಇಲ್ಲಿ ಎಲ್ಲ ಸಂಸ್ಕೃತಿಗಳ ಸಮ್ಮಿಳಿತ ಸಹಜವೇ. ಕನ್ನಡದ ನೆಲವಾದರೂ ನೆರೆಯ ಮಹಾರಾಷ್ಟ್ರದ ಪ್ರಭಾವವೂ ಇಲ್ಲಿ ಸಾಕಷ್ಟಿದೆ. ನೆರೆಯ ಮಹಾರಾಷ್ಟ್ರ ಹಾಗೂ ಗೋವಾದಲ್ಲಿನ ಲೈಫ್‌ಸ್ಟೈಲ್, ಟ್ರೆಂಡ್‌ಗಳನ್ನು ಇಲ್ಲಿನ ಜನರು ಕೂಡಲೇ ಅಳವಡಿಸಿಕೊಳ್ಳುತ್ತಾರೆ; ಪಾಲಿಸುತ್ತಾರೆ! ಇದರಲ್ಲಿ ಯುವಕ–ಯುವತಿಯರು ಸದಾ ಮುಂದಿದಿದ್ದಾರೆ. ಇದರಲ್ಲಿ ಹಿಂದಿ ಬಳಕೆಯೂ ಒಂದಾಗಿದೆ.

ಭಾವಿಸಿರುವುದರಿಂದ

ಹೆಚ್ಚಿನವರು ಬಳಸುವ ಮತ್ತು ಬಹುತೇಕರಿಗೆ ಅರ್ಥವಾಗುತ್ತದೆ ಎಂದು ಭಾವಿಸಲಾಗಿರುವ ಕಾರಣಕ್ಕೆ ಹಿಂದಿಯನ್ನು ಬಳಸುತ್ತಿದ್ದಾರೆ. ಇದು, ಕನ್ನಡದ ಬೆಳವಣಿಗೆಗೆ ತೊಡಕಾಗುತ್ತಿದೆ ಎನ್ನುವುದು ಕನ್ನಡ ಹೋರಾಟಗಾರರ ಕಳವಳವಾದರೆ, ಬಹು ಭಾಷೆಗಳ ಜಾಗವಾದ ಇಲ್ಲಿ ಸುಲಭವಾದ ಸಂವಹನಕ್ಕೆ ಹಿಂದಿ ನಮಗೆ ಸಹಕಾರಿಯಾಗಿದೆ ಎನ್ನುವುದು ಬಳಸುವವರ ಅಭಿಪ್ರಾಯ.

ಇಲ್ಲಿ ಕನ್ನಡ, ಹಿಂದಿ, ಮರಾಠಿ, ಉರ್ದು, ಕೊಂಕಣಿ ಭಾಷಿಕರಿದ್ದಾರೆ. ಬಹುತೇಕರು ತಮ್ಮ ಮಾತೃಭಾಷೆಯೊಂದಿಗೆ (ಕನ್ನಡ ಅಥವಾ ಮರಾಠಿ) ಹಿಂದಿ ಭಾಷೆ ಬಲ್ಲರು. ಕೆಲವರು ಇವುಗಳ ಜೊತೆಗೆ ಇಂಗ್ಲಿಷ್, ಉರ್ದು ಹಾಗೂ ಕೊಂಕಣಿಯ ಜ್ಞಾನವನ್ನೂ ಹೊಂದಿದ್ದಾರೆ. ಭಾಷಾ ಸಮೃದ್ಧಿ ಹೊಂದಿರುವ ಇಲ್ಲಿ ಬೆಳೆಯುವ ಮಕ್ಕಳಿಗೆ ಕನಿಷ್ಠ ಮೂರು ಭಾಷೆಗಳು ಬರುವುದು ‘ಖಾತ್ರಿ’.

ನಾಲ್ಕೂವರೆ ವರ್ಷಗಳಿಂದ ಬೆಳಗಾವಿಯಲ್ಲಿ ನಾನು ಗಮನಿಸಿದಂತೆ, ಮಾತೃ ಭಾಷೆ ಮನೆಗಳಲ್ಲಷ್ಟೇ ಸೀಮಿತವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ, ವಾಣಿಜ್ಯ ಚಟುವಟಿಕೆಗಳ ಸಂದರ್ಭದಲ್ಲಿ, ಅಷ್ಟೇ ಏಕೆ ಬ್ಯಾಂಕ್‌ ಮೊದಲಾದ ಸರ್ಕಾರಿ ಕಚೇರಿಗಳಲ್ಲಿ ಹಿಂದಿಯದ್ದೇ ಕಾರುಬಾರು; ಬಳಸುವರು ಎಲ್ಲರೂ. ಕನ್ನಡದಲ್ಲಿ ಮಾತನಾಡಿದರೆ ಮೂದಲಿಕೆಯ ನೋಟ ಇಂತಹ ಕಡೆಗಳಲ್ಲಿ ಮಾಮೂಲಿ ಎನ್ನುವಂತಾಗಿದೆ.

ಸುಧಾಮೂರ್ತಿ ಹೀಗೆ ಹೇಳಿದ್ದರು....

‘ಉತ್ತರ ಕರ್ನಾಟಕದ ನಮ್ಮನ್ನು ಬಹಳಷ್ಟು ಮಂದಿ ಆಳಿದ್ದಾರೆ. ಹೀಗಾಗಿಯೇ ಅವರ ಸಂಸ್ಕೃತಿಯ ಪ್ರಭಾವ ಇನ್ನೂ ಇದೆ. ಹೀಗಾಗಿ, ಬೆಳಗಾವಿ ಸೇರಿದಂತೆ ಆ ಭಾಗದ ನಮಗೆ ಕನ್ನಡದೊಂದಿಗೆ ಇತರ ಭಾಷೆಗಳು ಸಲೀಸಾಗಿ ಬಂದು ಬಿಡುತ್ತವೆ. ಮೈಸೂರು ಪ್ರದೇಶದವರಿಗೆ ಹಾಗಲ್ಲ’ ಎಂದು ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಹಾಗೂ ಲೇಖಕಿ ಸುಧಾ ಮೂರ್ತಿ ಅವರು ಕಾರ್ಯಕ್ರಮ ಒಂದರಲ್ಲಿ ಅನಿಸಿಕೆ ವ್ಯಕ್ತಪಡಿಸಿದ್ದು ಇಲ್ಲಿ ನೆನಪಾಗುತ್ತಿದೆ.

ಸುಧಾಮೂರ್ತಿ

ಹಿಂದೆ ಇಲ್ಲಿ ಕನ್ನಡದ ಪರಿಸ್ಥಿತಿ ಇನ್ನೂ ಶೋಚನೀಯವಾಗಿತ್ತು. ‘ಕನ್ನಡದ ಕಂಪು’ ಕ್ರಮೇಣ ಪಸರಿಸುತ್ತಿದೆ. ಕರ್ನಾಟಕ ರಾಜ್ಯೋತ್ಸವ ಆಚರಣೆಯು ವರ್ಷದಿಂದ ವರ್ಷಕ್ಕೆ ಮೆರುಗು ಹೆಚ್ಚಿಸಿಕೊಳ್ಳುತ್ತಿರುವುದು ಹಾಗೂ ಲಕ್ಷಾಂತರ ಕನ್ನಡ ಮನಸ್ಸುಗಳು ಒಗ್ಗೂಡುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾರೆ ಕನ್ನಡ ಪರ ಹೋರಾಟಗಾರರು.

ಒಂದೆಡೆ ಮರಾಠಿ, ಇನ್ನೊಂದೆಡೆ ಹಿಂದಿ ಪ್ರಾಬಲ್ಯದ ನಡುವೆ ಕನ್ನಡವು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಬಲ ಪೈಪೋಟಿ ಕೊಡುತ್ತಲೇ ಇದೆ. ಕೆಲವು ಹಳ್ಳಿಗಳಲ್ಲಿ ಮರಾಠಿಗರು ಕೂಡ ಕನ್ನಡ ಕಲಿತು ಕನ್ನಡಿಗರೊಂದಿಗೆ ಬೆರೆತು ಹೋಗಿದ್ದಾರೆ. ಅಂತೆಯೇ, ಕನ್ನಡಿಗರು ಕೂಡ ಮರಾಠಿ ಭಾಷಿಕರೊಂದಿಗೆ ಉತ್ತಮ ಸೌಹಾರ್ದ ಹೊಂದಿದ್ದಾರೆ. ಗಡಿ ವಿವಾದ ಕೆದಕಿ ಭಾಷಾ ಸಾಮರಸ್ಯ ಹಾಳು ಮಾಡಲು ಪ್ರಯತ್ನಿಸುವ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಸಂಘಟನೆಯ ಚಟುವಟಿಕೆಗಳಿಂದ ಮರಾಠಿ ಭಾಷಿಕರು ಕೂಡ ದೂರಾಗುತ್ತಿರುವುದು ಇಲ್ಲಿ ಕನ್ನಡ ಬೆಳವಣಿಗೆಗೆ ಪೂರಕವಾಗಿ ಪರಿಣಮಿಸಿದೆ. ಆದರೆ, ಸಂವಹನಕ್ಕಾಗಿ ಹಿಂದಿಯನ್ನು ಹೆಚ್ಚಾಗಿ ಬಳಸುವುದನ್ನು ಗುರುತಿಸಬಹುದು.

ಸ್ವೀಕೃತಿ ತಪ್ಪಿದರೆ

ಹಿಂದಿ ಭಾಷೆಯ ಹೇರಿಕೆ ಅಥವಾ ‘ಸ್ವೀಕೃತಿ’ ತಪ್ಪಿದಲ್ಲಿ, ಇಲ್ಲಿ ಕನ್ನಡ ಮತ್ತಷ್ಟು ವಿಜೃಂಭಿಸಲಿದೆ. ಕನ್ನಡಿಗರು ಅನಾಥ ಭಾವದಿಂದ ಇನ್ನಷ್ಟು ದೂರಾಗಬಹುದಾಗಿದೆ. ಅಂತೆಯೇ, ‘ನಾಡಿನಲ್ಲೇ ಇದ್ದುಕೊಂಡು ನಾಡಿನ ವಿರುದ್ಧವೇ ಚಟುವಟಿಕೆಗಳನ್ನು ನಡೆಸುವವರಿಗೆ ನಿಯಂತ್ರಣ ಹೇರಬೇಕು. ಆಗ, ಕನ್ನಡ ಮತ್ತಷ್ಟು ಗಟ್ಟಿಗೊಳ್ಳುವುದರಲ್ಲಿ ಅನುಮಾನವೇ ಇಲ್ಲ’ ಎನ್ನುವ ಖಚಿತ ಅಭಿಪ್ರಾಯ ಕನ್ನಡಪರ ಹೋರಾಟಗಾರರದ್ದು.

ಅಶೋಕ ಚಂದರಗಿ

‘ಬೆಳಗಾವಿಯು ಬಹು ಭಾಷಾ ಪ್ರದೇಶವಾಗಿರುವುದರಿಂದ ಬಹುತೇಕರಿಗೆ ಹಿಂದಿ ಬರುತ್ತದೆ. ಅದನ್ನು ತಮ್ಮ ವ್ಯವಹಾರಗಳ ಸಂದರ್ಭದಲ್ಲಿ ಅತ್ಯಂತ ಸಹಜವಾಗಿಯೇ ಬಳಸುತ್ತಾರೆ. ಇದರಿಂದಾಗಿ ಇಲ್ಲಿ ಹಿಂದಿ ಹೇರಿಕೆ ಎನಿಸುವುದಿಲ್ಲ ನಿಜ. ಆದರೆ, ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಪ್ರಜ್ಞಾಪೂರ್ವಕವಾಗಿ ಹಿಂದಿ ಬಳಸಿ ಹೇರುವುದಕ್ಕೆ ನಮ್ಮ ವಿರೋಧವಿದೆ. ಹೀಗಾಗಿ, ಅಂತಹ ಕಚೇರಿಗಳಲ್ಲಿ ಪ್ರಾದೇಶಿಕ ಭಾಷೆ ಮಾತಾಡುವವರನ್ನು ಹಾಕಬೇಕು. ನಿರಂತರ ಹೋರಾಟ ಹಾಗೂ ಜಾಗೃತಿಯಿಂದಾಗಿ ಕನ್ನಡಮಯ ವಾತಾವರಣ ನಿರ್ಮಾಣವಾಗುತ್ತಿದೆ. ಬೆಳಗಾವಿ ಸಂಪೂರ್ಣವಾಗಿ ಕನ್ನಡಮಯವಾಗಬೇಕು. ಇದಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ’ಎಂದು ಹೇಳುತ್ತಾರೆ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ.

ಸುಧಾರಿಸಿದೆ

‘ಹಿಂದಿನ ದಶಕಗಳಿಗೆ ಹೋಲಿಸಿದರೆ ಗಡಿ ನಾಡಲ್ಲಿ ಕನ್ನಡದ ಪರಿಸ್ಥಿತಿ ಸುಧಾರಿಸುತ್ತಿದೆ’ ಎಂದೇ ಹೇಳಬಹುದು ಎನ್ನುತ್ತಾರೆ ಅವರು.

‘ಕೇಂದ್ರ ಸರ್ಕಾರವು ಹಿಂದಿ ಹೇರಿಕೆ ನೀತಿ ಮತ್ತು ಹಿಂದಿ ದಿವಸ್ ಆಚರಣೆ ಕೈಬಿಡಬೇಕು. ಕನ್ನಡ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಸಮಾನ ಗೌರವ ನೀಡಬೇಕು. ಕೇಂದ್ರವು ಪ್ರಾದೇಶಿಕ ಭಾಷೆಗಳಿಗೆ ಕುತ್ತು ತರುವುದು ಸರಿಯಲ್ಲ. ಸದ್ಯದ ಭಾಷಾ ನೀತಿ ಕೂಡ ಸರಿ ಇಲ್ಲ. ದೇಶದಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ರಚಿಸಲಾಗಿದೆ. ಹೀಗಾಗಿ, ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಸಮಾನ ಸ್ಥಾನಮಾನ ಸಿಗಬೇಕು. ಈ ನಿಟ್ಟಿನಲ್ಲಿ ಹೋರಾಟ ನಡೆಸುತ್ತೇವೆ. ಬೆಳಗಾವಿಯಲ್ಲಿ ಕನ್ನಡದ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣಕ್ಕಾಗಿ ದನಿ ಎತ್ತುತ್ತಲೇ ಇರುತ್ತೇವೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದರು.

ದೀಪಕ ಗುಡಗನಟ್ಟಿ

ಹಿಂದಿನಿಂದಲೂ

‘ಉತ್ತರ ಕರ್ನಾಟಕದಲ್ಲಿ ಹಿಂದಿ ಹೇರಿಕೆ ಎನ್ನುವ ಮಾತು ಅನ್ವಯ ಅಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಕನ್ನಡದ ಜೊತೆ ಹಿಂದಿಯನ್ನು ಇಲ್ಲಿನ ಜನರು ಸಹಜವಾಗಿಯೇ ಬಳಸುತ್ತಾರೆ. ಮುಂಬೈ ಕರ್ನಾಟಕ ಪ್ರಾಂತ್ಯಕ್ಕೆ ಸೇರಿದ್ದು, ಹಿಂದಿ ಸಿನಿಮಾಗಳನ್ನು ಹೆಚ್ಚಾಗಿ ನೋಡುವುದು ಕೂಡ ಕಾರಣವಿರಬಹುದು. ಹಿಂದಿನಿಂದಲೂ ಇದು ಇದೆ. ಈ ಭಾಗದ ಉರ್ದು ಮತ್ತು ಹಿಂದಿ ಸಮ ಸಮವಾಗಿ ಜನರ ನಡುವೆ ಬಳಸುವ ಭಾಷೆಗಳಾಗಿವೆ. ಮೊದಲಿನಿಂದಲೂ ಇದನ್ನು ಸ್ವೀಕರಿಸಿಬಿಟ್ಟಿದ್ದಾರೆ’ ಎಂದು ಗುರುತಿಸುತ್ತಾರೆ ರಂಗಕರ್ಮಿ ಡಿ.ಎಸ್. ಚೌಗಲೆ.

ಡಿ.ಎಸ್. ಚೌಗಲೆ

‘ಯಾರಿಗೂ ಯಾವುದೇ ಭಾಷೆಯನ್ನು ಹೇರಬಾರದು. ಇಚ್ಛೆ ಇದ್ದವರು ಎಷ್ಟು ಭಾಷೆಯನ್ನು ಬೇಕಾದರೂ ಕಲಿಯಲಿ’ ಎನ್ನುವುದು ಅವರ ಸಲಹೆ.

ರಾಜಕಾರಣಿಗಳು ಭಾಷೆ ಬಳಕೆಗೆ –ಆದ್ಯತೆಗೆ ಮಾಡುವ ಲೆಕ್ಕಾಚಾರವೇ ಬೇರೆ! ಯಾವ ಸ್ಥಳದಲ್ಲಿದ್ದೇವೆ; ನಮ್ಮ ಎದುರಿರುವವರು ಯಾರು? ಯಾವ ಬಳಸಿದರೆ ರಾಜಕೀಯವಾಗಿ ಅನುಕೂಲವಾಗುತ್ತದೆ ಎನ್ನುವ ಲಾಭ–ನಷ್ಟದ ಲೆಕ್ಕ ಹಾಕಿಯೇ ಭಾಷೆ ಬಳಸುತ್ತಾರೆ. ಮರಾಠಿ ಭಾಷಿಕರಿಗೆ ಅರ್ಥವಾಗಲೆಂದು, ಸರ್ಕಾರದ ಅಧಿಕೃತ ಸಭೆಗಳಲ್ಲೇ ಕನ್ನಡದ ಬದಲಿಗೆ ಹಿಂದಿ ಬಳಸುವುದು ಉಂಟು. ಇದರಲ್ಲಿ ಸಚಿವರು, ಶಾಸಕರು ಅಥವಾ ಆಡಳಿತ ಪಕ್ಷದವರು ಅಥವಾ ವಿರೋಧ ಪಕ್ಷದವರು... ಎಲ್ಲರೂ ಇದ್ದಾರೆ. ವೋಟ್ ಬ್ಯಾಂಕ್‌ ರಾಜಕಾರಣವಷ್ಟೇ ಅವರಿಗೆ ಮುಖ್ಯ! ಇವೆಲ್ಲ ಕಾರಣಗಳಿಂದಾಗಿಯೇ ಬೆಳಗಾವಿಯಲ್ಲಿ ಹಿಂದಿಯು ‘ಬಹುತೇಕರಿಗೆ ಬೇಕಾದ’ ಭಾಷೆಯಾಗಿ ಹೋಗಿದೆ!

ಶಾಲಾ–ಕಾಲೇಜುಗಳ ಮಕ್ಕಳು, ವಿದ್ಯಾರ್ಥಿಗಳ ಮಾತೃ ಭಾಷೆ ಯಾವುದೇ ಇರಲಿ ಸ್ನೇಹಿತರು ಕೂಡಿದಾಗ ಅಲ್ಲಿ ಸಂವಹನಕ್ಕೆ ಬಳಕೆಯಾಗುವುದು ಹಿಂದಿಯೇ! ಇದಕ್ಕಾಗಿಯೇ ನಾನು ಮೊದಲೇ ಹೇಳಿದ್ದು– ಇಲ್ಲಿ ಹಿಂದಿ ‘ಹೇರ’ಬೇಕಿಲ್ಲ; ಜನರೇ ‘ಅಪ್ಪಿ’ಕೊಂಡಿದ್ದಾರೆ! ಎಂದು. ಇಲ್ಲಿನವರ ಭಾಷಾ ಜ್ಞಾನ, ಮೈಸೂರು ಪ್ರದೇಶದ ನನ್ನಂಥವರಿಗೆ ಅಚ್ಚರಿಯೋ ಅಚ್ಚರಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT