ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ‘ಬಣ್ಣ’ದಲ್ಲಿ ತೊಯ್ದ ಜನರು...

ಜಿಲ್ಲೆಯಾದ್ಯಂತ ಸಂಭ್ರಮದ ಹೋಳಿ ಹಬ್ಬ ಆಚರಣೆ
Last Updated 21 ಮಾರ್ಚ್ 2019, 10:55 IST
ಅಕ್ಷರ ಗಾತ್ರ

ಬೆಳಗಾವಿ: ನಗರ ಹಾಗೂ ಜಿಲ್ಲೆಯಾದ್ಯಂತ ಬಣ್ಣಗಳ ಹಬ್ಬ ‘ಹೋಳಿ’ಯನ್ನು ಗುರುವಾರ ಸಾರ್ವಜನಿಕರು ಸಂಭ್ರಮ–ಸಡಗರದಿಂದ ಆಚರಿಸಿದರು.

ಬಹುತೇಕ ಬಡಾವಣೆಗಳಲ್ಲಿ ನಿವಾಸಿಗಳು ರಂಗಿನಾಟವಾಡಿ ಸಂಭ್ರಮಿಸಿದರು. ಮಕ್ಕಳು, ಮಹಿಳೆಯರು, ಯುವಕರು ಪರಸ್ಪರ ಬಣ್ಣ ಹಚ್ಚಿಕೊಂಡು, ಬಣ್ಣದ ನೀರನ್ನು ಎರಚಿ, ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಖುಷಿಪಟ್ಟರು. ಪ್ರಮುಖ ವೃತ್ತಗಳಲ್ಲಿ ಕಟ್ಟಿಗೆಗಳಿಗೆ ಬೆಂಕಿ ಹಚ್ಚಿ ಕಾಮಣ್ಣನ ದಹನ ಮಾಡಿದ್ದು ಕಂಡುಬಂತು. ಮಕ್ಕಳು ಹಾಗೂ ಯುವಕರು ತಮಟೆಗಳನ್ನು ಬಾರಿಸುತ್ತಾ, ಬಾಯಿ ಬಡಿದುಕೊಳ್ಳುತ್ತಾ ಸಂಭ್ರಮಿಸಿದರು. ಕೆಲವರು ಮುಖಕ್ಕೆ ಬಣ್ಣ ಹಚ್ಚಿಕೊಂಡು, ಬಗೆ ಬಗೆಯ ಮುಖವಾಡಗಳನ್ನು ಹಾಕಿಕೊಂಡು ದ್ವಿಚಕ್ರವಾಹನದಲ್ಲಿ ಸುತ್ತಾಡುತ್ತಿದ್ದರು.

ಗಲ್ಲಿ ಗಲ್ಲಿಗಳಲ್ಲಿ ಡಿಜೆ ಅಥವಾ ಸ್ಪೀಕರ್‌ಗಳಲ್ಲಿ ಹಾಡು ಹಾಕಿಕೊಂಡು ಸ್ಥಳೀಯರು ಕುಣಿದು ಕುಪ್ಪಳಿಸಿದರು. ಕೆಲವು ಕಡೆಗಳಲ್ಲಿ ಸ್ಥಳೀಯರು ಪೊಲೀಸರಿಗೂ ಬಣ್ಣ ಹಚ್ಚಿ ಸಂಭ್ರಮ ಹಂಚಿಕೊಂಡರು.

ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ವ್ಯಾಕ್ಸಿನ್‌ ಡಿಪೊ ಮೈದಾನದಲ್ಲಿ ಆಯೋಜಿಸಿದ್ದ ‘ಹೋಳಿ ಮಿಲನ’ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ನೆರೆದಿದ್ದವರು ಡಿಜೆ ಹಾಡಿಗೆ ನರ್ತಿಸುತ್ತಾ ಬಣ್ಣದೋಕುಳಿಯಲ್ಲಿ ಮಿಂದೆದ್ದರು. ನೀರಿನ ಕಾರಂಜಿಯಲ್ಲಿ ತೊಯ್ದು ನರ್ತಿಸಿದರು. ಚಿಕ್ಕ ಮಕ್ಕಳು ಕೂಡ ‍ಪೋಷಕರೊಂದಿಗೆ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಬಬಲ್‌ ಮಿಷನ್ ಅಳವಡಿಕೆ:

ಪುಣೆ ಹಾಗೂ ಕೊಲ್ಹಾಪುರದ ಲಾವಣಿ ನೃತ್ಯ ಕಾರ್ಯಕ್ರಮ ಈ ಬಾರಿಯ ವಿಶೇಷವಾಗಿತ್ತು. ಸ್ಪಿಂಕ್ಲರ್‌ ಮೂಲಕ ನೀರು ಸಿಂಪಡಣೆ ಮಾಡಲಾಗುತ್ತಿತ್ತು. ಮೈದಾನದಲ್ಲಿ 6 ಬಬಲ್ ಮಷಿನ್‌ಗಳನ್ನು ಅಳವಡಿಸಿ ಆಗಾಗ ಬಬಲ್‌ಗಳನ್ನು ಹಾರಿಸಲಾಗುತ್ತಿತ್ತು. ಇದರಿಂದಾಗಿ ಆವರಣ ತುಂಬೆಲ್ಲಾ ಬಬಲ್‌ಗಳು ತುಂಬಿ ಹೋಗುತ್ತಿದ್ದವು. ರೇನ್‌ಗನ್‌ ಮೂಲಕ ಬಣ್ಣ ಹಾರಿಸಲಾಗುತ್ತಿತ್ತು.

ಅಭಯ ಪಾಟೀಲ, ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ, ಕ್ರೆಡಾಯ್ ರಾಜ್ಯ ಘಟಕದ ಉಪಾಧ್ಯಕ್ಷ ಚೈತನ್ಯ ಕುಲಕರ್ಣಿ ಭಾಗವಹಿಸಿದ್ದರು.

ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹಾಗೂ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ಬೆಳಗಾವಿ ಕ್ಲಬ್‌ ಆವರಣದಲ್ಲಿ ‘ವುಮೇನಿಯಾ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಿಳೆಯರು ಹಾಗೂ ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇಲ್ಲಿಯೂ ಸಾವಿರಾರು ಜನ ಭಾಗವಹಿಸಿದ್ದರು.

ಸಂಜೆವರೆಗೂ:

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಹೋಳಿಯಾಟ ಜೋರಾಗಿಯೇ ನಡೆಯಿತು. ಯುವಕರು ದ್ವಿಚಕ್ರವಾಹನಗಳಲ್ಲಿ ಹಾರ್ನ್‌ ಮಾಡುತ್ತಾ, ಕೇಕೆ, ಸಿಳ್ಳೆ ಹಾಕುತ್ತಾ ದಾರಿಯುದ್ದಕ್ಕೂ ಹಾರ್ನ್‌ ಮಾಡುತ್ತಾ, ಸಿಳ್ಳೆ ಹಾಕುತ್ತಾ ಓಡಾಡುತ್ತಿದ್ದುದು ಸಾಮಾನ್ಯವಾಗಿತ್ತು. ಹಲವು ಬಗೆಯ ಮುಖವಾಡಗಳನ್ನು ಹಾಕಿದ್ದುದು, ಮುಖ ಹಾಗೂ ಕೂದಲಿಗೆ ಬಣ್ಣಗಳನ್ನು ಹಚ್ಚಿಕೊಂಡಿದ್ದುದು ಗಮನಸೆಳೆದರು.

ಪಾಂಗುಳ ಗಲ್ಲಿಯ ಅಶ್ವತ್ಥಾಮ ಮಂದಿರದ ಆವರಣದಲ್ಲಿ ಭಕ್ತರು ಉರುಳು ಸೇವೆ ಮಾಡಿ ಪುನೀತ ಭಾವ ತಳೆದರು. ‘ಹೋಳಿಯಂದು ಅಶ್ವತ್ಥಾಮ ಮಂದಿರದ ಎದುರು ಉರುಳು ಸೇವೆ ಮಾಡಿದರೆ ಶಾಪದಿಂದ ಮುಕ್ತರಾಗುತ್ತೇವೆ’ ಎನ್ನುವ ನಂಬಿಕೆ ಇದೆ. ಹೀಗಾಗಿ, ವಿವಿಧ ಕಡೆಗಳಿಂದ ಸಾವಿರಾರು ಮಂದಿ ಅಲ್ಲಿಗೆ ಬಂದಿದ್ದರು.

ನಗರದಾದ್ಯಂತ ಅಂಗಡಿಗಳನ್ನು ಬಹುತೇಕ ಸಂಜೆವರೆಗೂ ಮುಚ್ಚಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT