ಹೊಸಇದ್ದಿಲಹೊಂಡಕ್ಕೆ ಹಿಗ್ಗು ತಂದ ಹೀರೆ!

ಸೋಮವಾರ, ಮೇ 20, 2019
30 °C
ನೂರಕ್ಕೂ ಹೆಚ್ಚಿನ ರೈತರಿಂದ ಬೆಳೆ; ಬೋರ್‌ವೆಲ್‌ ನೀರೇ ಆಧಾರ

ಹೊಸಇದ್ದಿಲಹೊಂಡಕ್ಕೆ ಹಿಗ್ಗು ತಂದ ಹೀರೆ!

Published:
Updated:
Prajavani

ಬೆಳಗಾವಿ: ತಾಲ್ಲೂಕಿನ ಹೊಸಇದ್ದಿಲಹೊಂಡ (ಶಿವಾಪುರ) ಗ್ರಾಮದ ರೈತರು ಹೀರೇಕಾಯಿ ಹಾಗೂ ಹಾಗಲಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಮೂಲಕ ವಿಶೇಷವಾದ ಹೆಸರು ಗಳಿಸಿದ್ದಾರೆ.

ಬೆಳಗಾವಿ ತಾಲ್ಲೂಕಿನಲ್ಲಿ ಸಿಹಿಗೆಣಸು, ಕಡಲೆಕಾಯಿ ಅಥವಾ ಆಲೂಗಡ್ಡೆ ಬೆಳೆಯುವ ರೈತರು ಜಾಸ್ತಿ. ಆದರೆ, ಹೊಸಇದ್ದಿಲಹೊಂಡ ಗ್ರಾಮದ ಕೃಷಿಕರು ವಿಭಿನ್ನವಾಗಿ ಕೃಷಿ ಮಾಡುತ್ತಿದ್ದಾರೆ. ಹೀರೇಕಾಯಿಯೊಂದಿಗೆ ಹಾಗಲಕಾಯಿ ಬೆಳೆದು ವರಮಾನ ಕಾಣುತ್ತಿದ್ದಾರೆ. ಈ ಗ್ರಾಮದ ಮುಖ್ಯರಸ್ತೆಯ ಎಡ ಹಾಗೂ ಬಲಬದಿಯ ಜಮೀನುಗಳಲ್ಲಿ ಅಲ್ಲಲ್ಲಿ ಕೇವಲ ಹಚ್ಚಹಸಿರಿನ ಹೀರೇಕಾಯಿ ಬೆಳೆಯ ಜಮೀನುಗಳೇ ಕಾಣಸಿಗುತ್ತವೆ. ಬರೋಬ್ಬರಿ 100ಕ್ಕೂ ಹೆಚ್ಚು ಮಂದಿ ಈ ಕೃಷಿಯಲ್ಲಿ ತೊಡಗಿದ್ದಾರೆ ಮತ್ತು ಖುಷಿಯನ್ನೂ ಅನುಭವಿಸುತ್ತಿದ್ದಾರೆ.

ಸಾಂಪ್ರದಾಯಿಕ ಕೃಷಿ ಬದಲಿಗೆ, ವರಮಾನ ಕಾಣಬಹುದಾದ ಬೇಸಾಯ ಮಾಡುತ್ತಿರುವ ಇವರು ಇತರರಿಗೆ ಮಾದರಿಯಾಗಿ ಗಮನಸೆಳೆದಿದ್ದಾರೆ. ಕುಟುಂಬದವರೆಲ್ಲರೂ ಈ ಕೆಲಸದಲ್ಲಿ ಭಾಗಿಯಾಗುತ್ತಾರೆ. ತಾಜಾ ಹೀರೇಕಾಯಿಯನ್ನು ನಗರಗಳ ಮಾರುಕಟ್ಟೆಗೆ ಪೂರೈಸುತ್ತಿದ್ದಾರೆ.

ಬೇರಾವುದೂ ಬರುವುದಿಲ್ಲ

‌ಮಳೆಯಾಶ್ರಿತ ‍ಪ್ರದೇಶವಾದ ಇಲ್ಲಿಗೆ ನೀರಾವರಿ ವ್ಯವಸ್ಥೆ ಇಲ್ಲ. ಹೀಗಾಗಿ, ರೈತರು ಬೋರ್‌ವೆಲ್‌ಗಳನ್ನು ಕೊರೆಸಿ, ಹೀರೇಕಾಯಿ ಬೇಸಾಯ ಮಾಡಿ ಹಿಗ್ಗುತ್ತಿದ್ದಾರೆ. ಬೇರೆ ಬೆಳೆಯನ್ನೇಕೆ ಬೆಳೆಯುವುದಿಲ್ಲ ಎಂದು ಪ್ರಶ್ನಿಸಿದರೆ, ‘ಬೇರೆ ಯಾವುದೇ ಬೆಳೆಯು ಸರಿಯಾಗಿ ಬರುವುದಿಲ್ಲ. ಈ ಮಣ್ಣಿಗೆ ಹೀರೇಕಾಯಿ ಹಾಗೂ ಹಾಗಲಕಾಯಿಯೇ ಚೆನ್ನಾಗಿದೆ ಎನ್ನುವುದು ನಮ್ಮ ಅನುಭವದಿಂದ ತಿಳಿದುಬಂದಿದೆ. ಬದನೆಕಾಯಿ, ಮೆಣಸಿನಕಾಯಿ ಬೆಳೆಯಲು ಹೋಗಿ ಕೈಸುಟ್ಟುಕೊಂಡೆವು. ಹೀಗಾಗಿ, ಹೀರೇಕಾಯಿಗೆ ಆದ್ಯತೆ ನೀಡುತ್ತಿದ್ದೇವೆ‌. ಜೊತೆಗೆ ಹಾಗಲಕಾಯಿಯೂ ವರಮಾನದ ‘ಸಿಹಿ’ ನೀಡುತ್ತಿದೆ’ ಎಂದು ಉತ್ತರಿಸುತ್ತಾರೆ.

‘ಕಳೆದ 30–35 ವರ್ಷಗಳಿಂದಲೂ ಇದೇ ಕೃಷಿ ಮಾಡುತ್ತಿದ್ದೇವೆ. ಎಲ್ಲರೂ ಸರಾಸರಿ 15ರಿಂದ 20 ಗುಂಟೆಯಷ್ಟು ಹೀರೇಕಾಯಿ ಬೆಳೆಯುತ್ತಾರೆ. ಒಂದು ಸೀಸನ್‌ನಲ್ಲಿ ಸರಾಸರಿ 100ರಿಂದ 300 ಬ್ಯಾಗ್‌ಗಳಷ್ಟು (ಒಂದು ಬ್ಯಾಗ್‌ 40ರಿಂದ 45 ಕೆ.ಜಿ. ತೂಗುತ್ತದೆ) ಹೀರೇಕಾಯಿ ಇಳುವರಿ ಬರುತ್ತದೆ’ ಎಂದು ರೈತ ಕೆಂಪಣ್ಣ ಬಂಗಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಹೋಳಿ ಸಂದರ್ಭದಲ್ಲಿ

‘ಪ್ರತಿ ವರ್ಷ ಹೋಳಿ ಹುಣ್ಣಿಮೆಯಂದು ಹೀರೇಕಾಯಿ ಬೀಜ ಬಿತ್ತನೆ ಮಾಡುವ ಸಂಪ್ರದಾಯವನ್ನು ಇಲ್ಲಿ ಮುಂದುವರಿಸಿಕೊಂಡು ಬಂದಿದ್ದೇವೆ. 39 ದಿನಕ್ಕೆ ಕಾಯಿಗಳು ಕೊಯ್ಲಿಗೆ ಬರುತ್ತವೆ. ಬೋರ್‌ವೆಲ್‌ ಹಾಗೂ ಬಾವಿ ನೀರನ್ನು ಅವಲಂಬಿಸಿದ್ದೇವೆ. 3 ತಿಂಗಳವರೆಗೆ ಹೀರೇಕಾಯಿ ದೊರೆಯುತ್ತದೆ. ನಂತರ ಹಾಗಲಕಾಯಿ ಕೊಯ್ಲು ಶುರುವಾಗುತ್ತದೆ. ಎರಡೂವರೆ ತಿಂಗಳು ಅದನ್ನು ಮಾರಾಟ ಮಾಡುತ್ತೇವೆ. ನಂತರ ಭೂಮಿ ಹದ ಮಾಡಿ ಅದೇ ಕೃಷಿ ಮುಂದುವರಿಸುತ್ತೇವೆ. ಹೀರೇಕಾಯಿ ಹಾಗೂ ಹಾಗಲಕಾಯಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇರುತ್ತದೆ. ಇವುಗಳನ್ನು ಬೆಳೆಯುವುದರಿಂದ ಊರು ಫೇಮಸ್‌ ಆಗಿದೆ’ ಎನ್ನುತ್ತಾರೆ ಅವರು.

ಬೆಳಗಾವಿಯ ಸಗಟು ಮಾರುಕಟ್ಟೆಗೆ ನಿತ್ಯ ಈ ಗ್ರಾಮದಿಂದ 14 ಲೋಡ್‌ (ಟೆಂಪೊಗಳಲ್ಲಿ) ಹೀರೇಕಾಯಿ ಬರುತ್ತಿದೆ. ಸರಾಸರಿ 40ರಿಂದ 50 ಕೆ.ಜಿ.ಯಷ್ಟು ಪಿಂಡಿ ಕಟ್ಟಿಕೊಂಡು ಬರಲಾಗುತ್ತದೆ. ರೈತರಿಂದ ಕೆ.ಜಿ.ಗೆ ಸರಾಸರಿ ₹ 20ರಿಂದ ₹25ರಂತೆ ಖರೀದಿಸುವ ದಲ್ಲಾಳಿಗಳು, ನಂತರ ಅದನ್ನು ಚಿಲ್ಲರೆ ವ್ಯಾಪಾರಿಗಳಿಗೆ ಮಾರುತ್ತಾರೆ. ಬೆಳಗಾವಿಯಿಂದ ಪುಣೆ, ಬಾಂಬೆ, ಹೈದರಾಬಾದ್, ರಾಯಚೂರು, ಗೋವಾ ಮೊದಲಾದ ಕಡೆಗಳಿಗೂ ಇಲ್ಲಿನ ಹಿರೇಕಾಯಿ ತಲುಪುತ್ತಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !