ಶುಕ್ರವಾರ, ಆಗಸ್ಟ್ 6, 2021
22 °C
ಲಾಕ್‌ಡೌನ್‌ನಿಂದ ಸಡಿಲಿಕೆ; ಸಾರ್ವಜನಿಕರಿಗೆ ಅನುಕೂಲ

ತೆರೆಯಲಿವೆ ದೇಗುಲ, ಹೋಟೆಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೋವಿಡ್–19 ಲಾಕ್‌ಡೌನ್‌ನಿಂದ ಸಡಿಲಿಕೆ ನೀಡಿರುವುದರಿಂದಾಗಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ (ಜೂನ್ 8)ದಿಂದ ಬಹುತೇಕ ದೇಗುಲಗಳು ಸೇರಿದಂತೆ ಧಾರ್ಮಿಕ ಕೇಂದ್ರಗಳು ಭಕ್ತರ ದರ್ಶನಕ್ಕೆ ತೆರೆಯಲಿವೆ. ಈವರೆಗೆ ಪಾರ್ಸಲ್‌ ಮಾತ್ರವೇ ಸಿಗುತ್ತಿದ್ದ ಹೋಟೆಲ್‌ಗಳಲ್ಲಿ ಇತರ ಎಲ್ಲ ಸೇವೆಗಳೂ ಲಭ್ಯವಾಗಲಿವೆ.

ಸವದತ್ತಿ ಯಲ್ಲಮ್ಮ ಹಾಗೂ ಜೋಗುಳಬಾವಿ ಸತ್ತೆಮ್ಮ ಮತ್ತು ಚಿಂಚಲಿ ಮಾಯಕ್ಕದೇವಿ ದೇವಸ್ಥಾನ ಹೊರತುಪಡಿಸಿ ಉಳಿದ ದೇಗುಲಗಳು ತೆರೆಯಲಿವೆ. ಮಸೀದಿ, ಚರ್ಚ್‌ ಮತ್ತಿತರ ಧಾರ್ಮಿಕ ಕೇಂದ್ರಗಳನ್ನು ತೆರೆಯುವುದಕ್ಕೂ ಅವಕಾಶವಿದೆ. ಅಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಹಾಗೂ ಅಂತರ ಕಾಯ್ದುಕೊಳ್ಳುವುದಕ್ಕೆ ಕ್ರಮ ವಹಿಸಬೇಕಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಬೆಳಿಗ್ಗೆ 5ರಿಂದ ರಾತ್ರಿ 9ರವರೆಗೆ ಸಮಯ ನಿಗದಿಪಡಿಸಲಾಗಿದೆ.

ಭಾನುವಾರವೇ ತೆರೆದಿದ್ದವು!:

ಈ ಹಿನ್ನೆಲೆಯಲ್ಲಿ ಧಾರ್ಮಿಕ ಕೇಂದ್ರಗಳು, ಹೋಟೆಲ್‌ಗಳಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಯಿತು. ಕೆಲವು ಹೋಟೆಲ್‌ಗಳು ಮುನ್ನಾದಿನವಾದ ಭಾನುವಾರವೇ ಗ್ರಾಹಕರಿಗೆ ಸೇವೆ ನೀಡುತ್ತಿದ್ದುದು ಕಂಡುಬಂತು!

‘ಧಾರ್ಮಿಕ ಕೇಂದ್ರಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಆಗಾಗ ಸ್ಯಾನಿಟೈಸ್ ಮಾಡಲು ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ  ಡಾ.ಎಸ್.ಬಿ. ಬೊಮ್ಮನಹಳ್ಳಿ ‘‍ಪ್ರಜಾವಾಣಿ’ಗೆ ತಿಳಿಸಿದರು.

ಈ ಭಾಗದ ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಕಪಿಲೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಪ್ರವೇಶ ನೀಡುವುದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಯಿತು. ಶನಿವಾರ ಹಾಗೂ ಭಾನುವಾರ ಹೋಮ–ಹವನ ಕಾರ್ಯಕ್ರಮ ನಡೆಯಿತು. ಚಿಕ್ಕಮಗಳೂರಿನ ದತ್ತಪೀಠದ ಅಶೋಕ ಶರ್ಮ ನೇತೃತ್ವದಲ್ಲಿ ವಿಧಿ ವಿಧಾನಗಳು ನೆರವೇರಿದವು.

ಮಕ್ಕಳು, ವೃದ್ಧರಿಗೆ ಪ್ರವೇಶವಿಲ್ಲ:

‘ಸೋಮವಾರದಿಂದ ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ಭಕ್ತರಿಗೆ ಪ್ರವೇಶ ಇರುತ್ತದೆ. ಮುಂಜಾನೆಯೇ ರುದ್ರಾಭಿಷೇಕ ನೆರವೇರಲಿದೆ. ಮುಖಗವಸು ಧರಿಸದವರು, ಮಕ್ಕಳು ಹಾಗೂ ವೃದ್ಧರಿಗೆ ಅವಕಾಶ ನೀಡುವುದಿಲ್ಲ. ಅಂತರ ಕಾಯ್ದುಕೊಂಡು ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಲ್ಲರಿಗೂ ಹ್ಯಾಂಡ್ ಸ್ಯಾನಿಟೈಸರ್‌ ನೀಡಲಾಗುವುದು. ಆಗಮನಕ್ಕೊಂದು, ನಿರ್ಗಮನಕ್ಕೊಂದು ದ್ವಾರವಷ್ಟೇ ತೆರೆದಿರಲಿದೆ’ ಎಂದು ಟ್ರಸ್ಟಿ ರಾಕೇಶ ಕಲಘಟಗಿ ಮಾಹಿತಿ ನೀಡಿದರು.

‘ಕೊರೊನಾ ಸೋಂಕಿನ ಭೀತಿ ಇರುವುದರಿಂದ ಸರ್ಕಾರದ ಸೂಚನೆ ಮೇರೆಗೆ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ತೀರ್ಥ, ಪ್ರಸಾದವನ್ನು ಕೂಡ ಕೊಡುವುದಿಲ್ಲ. ಭಕ್ತರು ಹಣ್ಣು, ತೆಂಗಿನ ಕಾಯಿ ಅಥವಾ ಹೂವುಗಳನ್ನು ಸಹ ತರುವಂತಿಲ್ಲ’ ಎಂದು ಸ್ಪಷ್ಟಪಡಿಸಿದರು.

ಇನ್ನೊಂದೆಡೆ ಹೋಟೆಲ್‌ಗಳಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಹಕರು ಅಲ್ಲೇ ಕುಳಿತು ಊಟ, ಉಪಾಹಾರ ಮಾಡಬಹುದಾಗಿದೆ. ಆದರೆ, ಅಂತರ ಕಾಯ್ದುಕೊಳ್ಳುವುದಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಒಂದು ಟೇಬಲ್‌ನಲ್ಲಿ ಇಬ್ಬರಿಗಷ್ಟೇ ಅವಕಾಶ ಕೊಡಲು ಮಾಲೀಕರು ಉದ್ದೇಶಿಸಿದ್ದಾರೆ.

‘ಗ್ರಾಹಕರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುವುದು. ಹ್ಯಾಂಡ್ ಸ್ಯಾನಿಟೈಸರ್‌ ನೀಡಲಾಗುವುದು. ಸಿಬ್ಬಂದಿಗೆ ಮಾಸ್ಕ್‌, ಫೇಸ್‌ ಶೀಲ್ಡ್‌ ಒದಗಿಸಲಾಗಿದೆ. ಆಗಾಗ ಟೇಬಲ್‌ಗಳನ್ನು ಸ್ಯಾನಿಟೈಸ್ ಮಾಡಲಾಗುವುದು’ ಎಂದು ರವಿವಾರಪೇಟೆಯ ಹೋಟೆಲ್‌ವೊಂದರ ಮಾಲೀಕ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು