ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು, ನೆರಳು, ಬೆಳಕಿಲ್ಲದ ಸ್ಮಶಾನಗಳು..!

Last Updated 19 ಫೆಬ್ರುವರಿ 2018, 7:21 IST
ಅಕ್ಷರ ಗಾತ್ರ

ಮಂಡ್ಯ: ಮನುಷ್ಯ ಮೃತಪಟ್ಟಾಗ ಆತನ ದೇಹವನ್ನು ಗೌರವದಿಂದ ಅಂತ್ಯಸಂಸ್ಕಾರ ನೆರವೇರಿಸಬೇಕು. ಆದರೆ ನಗರದಲ್ಲಿರುವ ಸ್ಮಶಾನಗ ಳಲ್ಲಿ ಮೂಲ ಸೌಲಭ್ಯಗಳು ಇಲ್ಲದ ಕಾರಣ ಅಂತ್ಯಕ್ರಿಯೆಯ ವಿಧಿವಿಧಾನ ನೆರವೇರಿಸಲು ಜನರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿ 15ಕ್ಕೂ ಹೆಚ್ಚು ರುದ್ರಭೂಮಿಗಳನ್ನು ಗುರುತಿಸಲಾಗಿದೆ. ಆದರೆ ನಗರಸಭೆ ಒಂದಕ್ಕೂ ಮೂಲಸೌಲಭ್ಯ ಒದಗಿಸಿಲ್ಲ. ಸ್ಥಳೀಯರು ಸಂಘ–ಸಂಸ್ಥೆಗಳ ಜೊತೆಗೂಡಿ ನಿರ್ವಹಣೆ ಮಾಡುತ್ತಿದ್ದು ಅಂತ್ಯಸಂಸ್ಕಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ನಗರಸಭೆ ವತಿಯಿಂದ ಸ್ಮಶಾನಕ್ಕೆ ಕನಿಷ್ಠ ಪಕ್ಷ ಒಬ್ಬ ಸಿಬ್ಬಂದಿಯನ್ನೂ ನೇಮಕ ಮಾಡದೇ ಇರುವುದು ಜನರಿಗೆ ನೋವುಂಟು ಮಾಡಿದೆ. ಬಹುತೇಕ ಸ್ಮಶಾನಗಳಲ್ಲಿ ದೀಪದ ವ್ಯವಸ್ಥೆಯೂ ಇಲ್ಲ. ಅಲ್ಲಿಗೆ ತೆರಳಲು ರಸ್ತೆಯೂ ಸಮರ್ಪಕವಾಗಿ ಇಲ್ಲ. ಹೀಗಾಗಿ ರಾತ್ರಿಯ ವೇಳೆ ಅಂತ್ಯಸಂಸ್ಕಾರ ನೆರವೇರಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ.

ಹೊಳಲು ಬಡಾವಣೆಯಲ್ಲಿ ಇರುವ ಸ್ಮಶಾನ ನಗರದ ಅತೀದೊಡ್ಡ ಮುಕ್ತಿಧಾಮವಾಗಿದ್ದು, 7.5 ಎಕರೆ ವಿಸ್ತೀರ್ಣ ಹೊಂದಿದೆ. ಈ ಸ್ಮಶಾನಕ್ಕೆ ಜೈನ ಸಮುದಾಯದ ಜನರು ಮೂಲ ಸೌಲಭ್ಯ ಒದಗಿಸಿದ್ದಾರೆ. ಜೈನರ ಬೀದಿ ಸಮೀಪವೇ ಇರುವ ಕಾರಣ ಅವರು ತಮ್ಮ ಸಮುದಾಯದ ಜನರು ಮೃತಪಟ್ಟಾಗ ಇದೇ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡುತ್ತಾರೆ. ಹೀಗಾಗಿ ಅವರು ಸ್ಮಶಾನದಲ್ಲಿ ಕಲ್ಲು ಬೆಂಚು, ಕಲ್ಲು ಹಾಸುಗಳನ್ನು ಹಾಕಿಕೊಟ್ಟಿದ್ದಾರೆ. ‘ಹೊಳಲು ಸ್ಮಶಾನಕ್ಕೆ ಮೂಲಸೌಲಭ್ಯ ಒದಗಿಸುವಂತೆ ಕಳೆದ 10 ವರ್ಷಗಳಿಂದಲೂ ನಗರಸಭೆಗೆ ಬೇಡಿಕೆ ಸಲ್ಲಿಸುತ್ತಿದ್ದೇವೆ. ಆದರೆ ಯಾವ ಸೌಲಭ್ಯಗಳೂ ಸಿಕ್ಕಿಲ್ಲ. ಮೂರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸುವುದನ್ನು ಬಿಟ್ಟರೆ ನಗರಸಭೆಯಿಂದ ಯಾವ ಕೆಲಸವೂ ಆಗಿಲ್ಲ’ ಎಂದು ಹೊಳಲು ಬಡಾವಣೆ ನಿವಾಸಿ ಪ್ರಕಾಶ್‌ ಬೇಸರ ವ್ಯಕ್ತಪಡಿಸಿದರು.

ಕುರುಚಲು ಕಾಡಾದ ಕಲ್ಲಹಳ್ಳಿ ಸ್ಮಶಾನ

6.5 ಎಕರೆ ವಿಸ್ತೀರ್ಣದಲ್ಲಿರುವ ಕಲ್ಲಹಳ್ಳಿ ಸ್ಮಶಾನ ಕುರುಚಲು ಕಾಡಿನಂತಿದೆ. ಇಲ್ಲಿ ಒಂದು ಭಾಗದಲ್ಲಿ ಮೃತದೇಹಗಳ ಅಂತ್ಯಸಂಸ್ಕಾರ ಮಾಡಿದರೆ ಇನ್ನೊಂದು ಭಾಗವನ್ನು ಖಾಲಿ ಬಿಡಲಾಗಿದೆ. ಕುರುಚಲು ಗಿಡಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ಸಣ್ಣದೊಂದು ಕಚೇರಿ ನಿರ್ಮಾಣ ಮಾಡಿದ್ದು ಅದನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಒಂದು ಮಂಟಪ ಇದೆ, ಅಲ್ಲಿ 20ಕ್ಕಿಂತ ಹೆಚ್ಚು ಜನರು ಕುಳಿತುಕೊಳ್ಳಲು ಸಾಧ್ಯವಿಲ್ಲ. ಅಂತ್ಯ ಸಂಸ್ಕಾರ ನೆರವೇರಿಸಲು ಜನರು ಬಂದಾಗ ಅವರು ಕುಳಿತುಕೊಳ್ಳಲು ಒಂದು ಕಲ್ಲು ಬೆಂಚು ವ್ಯವಸ್ಥೆಯೂ ಇಲ್ಲ. ನೆರಳಿನ ವ್ಯವಸ್ಥೆಯೂ ಇಲ್ಲ. ರಾತ್ರಿಯ ವೇಳೆ ಕಗ್ಗತ್ತಲು ಕವಿಯುತ್ತದೆ. ದೀಪಗಳನ್ನೂ ಅಳವಡಿಸಿಲ್ಲ. ಕಲ್ಲಹಳ್ಳಿ ಸ್ಮಶಾನವನ್ನು ಸತ್ಯ ಹರಿಶ್ಚಂದ್ರ ಸೇವಾ ಸಮಿತಿ ನಿರ್ವಹಣೆ ಮಾಡುತ್ತಿದೆ. ಸ್ಥಳೀಯರ ಸಹಾಯದೊಂದಿಗೆ ಸಮಿತಿ ಸದಸ್ಯರು ಅಲ್ಲಿ ಕೆಲವು ತೆಂಗಿನ ಸಸಿ ನೆಟ್ಟು ಪೋಷಣೆ ಮಾಡುತ್ತಿದ್ದಾರೆ.

‘ಕಳೆದ ತಿಂಗಳು ನಗರಸಭೆಯಿಂದ ಜೆಸಿಬಿ ಕರೆಸಿ ಸ್ಮಶಾನದ ಆವವರಣವನ್ನು ಸ್ವಚ್ಛಗೊಳಿಸಿದೆ. ಮನವಿ ಕೊಟ್ಟು ಒಂದು ತಿಂಗಳಾದ ನಂತರ ಕೇವಲ ಒಬ್ಬ ಸಿಬ್ಬಂದಿಯೊಂದಿಗೆ ಜೆಸಿಬಿ ಕಳುಹಿಸಿದರು. ಸ್ಮಶಾನಕ್ಕೆ ಉದ್ಯಾನದ ರೂಪ ಕೊಡಬೇಕು, ಕಲ್ಲು ಬೆಂಚು ಹಾಕಿಸಬೇಕು, ಒಳಗೆ ಸತ್ಯ ಹರಿಶ್ಚಂದ್ರ ಮಹಾರಾಜರ ಪ್ರತಿಮೆಯೊಂದನ್ನು ಸ್ಥಾಪಿಸಬೇಕು ಎಂದು ಹಲವರು ವರ್ಷಗಳಿಂದ ಒತ್ತಾಯ ಮಾಡುತ್ತಿದ್ದೇವೆ. ಆದರೆ ನಗರಸಭೆ ಅಧಿಕಾರಿಗಳು ನಮ್ಮ ಬೇಡಿಕೆಯನ್ನು ಕಿವಿಗೆ ಹಾಕಿಕೊಂಡಿಲ್ಲ’ ಎಂದು ಸತ್ಯಹರಿಶ್ಚಂದ್ರ ಸೇವಾ ಸಮಿತಿ ಅಧ್ಯಕ್ಷ ಕೆ.ರಾಜು ಹೇಳಿದರು.

ಆಲಹಳ್ಳಿ ಬಡಾವಣೆಯೊಂದರಲ್ಲೇ ನಾಲ್ಕೈದು ಸ್ಮಶಾನಗಳಿವೆ. ಒಂದೇ ಆವರಣದಲ್ಲಿ ವಿವಿಧ ಭಾಗ ಮಾಡಿಕೊಳ್ಳಲಾಗಿದೆ. ಅದರಲ್ಲಿ ಒಂದನ್ನು ಜೈನ ಸಮುದಾಯ ನಿರ್ವಹಣೆ ಮಾಡುತ್ತಿದೆ. ಬ್ರಾಹಣ ಸಮಾಜ ನಿರ್ವಹಣೆ ಮಾಡುತ್ತಿರುವ ಇನ್ನೊಂದು ಸ್ಮಶಾನದಲ್ಲಿ ಸಮುದಾಯದ ಜನರೇ ಮೂಲ ಸೌಲಭ್ಯ ಒದಗಿಸಿದ್ದಾರೆ. ಕ್ರೈಸ್ತ ಸಮುದಾಯದ ನಿರ್ವಹಣೆ ಮಾಡುತ್ತಿರುವ ಸ್ಮಶಾನಕ್ಕೆ ಉದ್ಯಾನದ ರೂಪ ಕೊಡಲಾಗಿದೆ. ಶಂಕರಮಠದಲ್ಲಿ ಮುಸ್ಲಿಮರು ಒಂದು ಸ್ಮಶಾನವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಇಲ್ಲಿಯೂ ಸಮುದಾಯದ ಜನರೇ ಸೌಲಭ್ಯ ಒದಗಿಸಿದ್ದಾರೆ.

‘ಆಯಾ ಸಮುದಾಯಗಳ ಜನರು ನಿರ್ವಹಿಸುತ್ತಿರುವ ಸ್ಮಶಾನಗಳಲ್ಲಿ ಸೌಲಭ್ಯಗಳಿವೆ. ಆದರೆ ನಗರಸಭೆ ನಿರ್ವಹಿಸುತ್ತಿರುವ ಸ್ಮಶಾನಗಳಲ್ಲಿ ನೀರು, ಬೆಳಕು, ನೆರಳಿಲ್ಲ’ ಎಂದು ಆಲಹಳ್ಳಿ ಬಡಾವಣೆಯ ಶಿವೇಗೌಡ ಹೇಳಿದರು.

‘ಈ ಬಾರಿಯ ನಗರಸಭೆ ಬಜೆಟ್‌ನಲ್ಲಿ ಪ್ರತಿ ಸ್ಮಶಾನಕ್ಕೆ ಮೂಲ ಸೌಲಭ್ಯ ಒದಗಿಸಲು ತಲಾ ₹ 10 ಲಕ್ಷ ಮೀಸಲಿಡಲಾಗಿದೆ. ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಶೀಘ್ರ ಸ್ಮಶಾನ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಪೌರಾಯುಕ್ತ ಟಿ.ಎನ್‌.ನರಸಿಂಹಮೂರ್ತಿ ಹೇಳಿದರು.

ಅರ್ಧಕ್ಕೆ ನಿಂತ ವಿದ್ಯುತ್‌ ಚಿತಾಗಾರ ಕಾಮಗಾರಿ

ಮಂಡ್ಯ ನಗರದಲ್ಲಿ ಸುಸಜ್ಜಿತವಾದ ವಿದ್ಯುತ್‌ ಚಿತಾಗಾರ ನಿರ್ಮಾಣವಾಗಬೇಕು ಎಂಬ ಬಹುಕಾಲದ ಬೇಡಿಕೆ ಮರೀಚಿಕೆಯಾಗಿಯೇ ಉಳಿದಿದೆ. ಕಲ್ಲಹಳ್ಳಿ ಸ್ಮಶಾನದಲ್ಲಿ ನಾಲ್ಕೈದು ವರ್ಷಗಳ ಹಿಂದೆಯೇ ವಿದ್ಯುತ್‌ ಚಿತಾಗಾರ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ನಿರ್ಮಾಣ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದೆ.ಕಟ್ಟಡ ನಿರ್ಮಾಣ ಮಾಡಲಾಗಿದೆ, ಆದರೆ ವಿದ್ಯುತ್‌ ಚಿತಾಗಾರಕ್ಕೆ ಬೇಕಾದ ಉಪಕರಣಗಳ ಅಳವಡಿಕೆ ಆಗಿಲ್ಲ.

‘ಕ್ರೈಸ್ತ ಸಮುದಾಯದ ಸದಸ್ಯರು ಹಲವು ವರ್ಷಗಳಿಂದಲೂ ವಿದ್ಯುತ್‌ ಚಿತಾಗಾರ ನಿರ್ಮಿಸಲು ನಗರಸಭೆಗೆ ಒತ್ತಾಯ ಮಾಡುತ್ತಿದ್ದೇವೆ. ಈಚೆಗೆ ಕೂಡ ನಗರಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿದೆವು. ಆದರೂ ನಮ್ಮ ಬೇಡಿಕೆ ಈಡೇರಿಲ್ಲ’ ಎಂದು ಡೇವಿಡ್‌ ಬೆಂಜಮಿನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT