ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಟಿ ಪರಿಶೀಲನೆ: ಅಧಿಕಾರಿಗಳಿಗೆ ‘ನುಸುಳುವ’ ಸವಾಲು!

ಗೋವಾ ಸರ್ಕಾರದಿಂದ ಕಾಲಹರಣ: ಆರೋಪ
Last Updated 4 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕವು ಕಳಸಾ ತಿರುವು ಯೋಜನೆ ಮೂಲಕ ಮಲಪ್ರಭಾ ನದಿಗೆ ಅಕ್ರಮವಾಗಿ ನೀರು ಹರಿಸಿಕೊಂಡಿದೆ ಎಂಬ ಗೋವಾದ ಆರೋಪದ ಹಿನ್ನೆಲೆಯಲ್ಲಿ, ಕಣಿವೆ ವ್ಯಾಪ್ತಿಯ ಮೂರೂ ರಾಜ್ಯಗಳ ಸದಸ್ಯರನ್ನು ಒಳಗೊಂಡ ಜಂಟಿ ಸಮಿತಿಯು ಸ್ಥಳ ಪರಿಶೀಲನೆ ನಡೆಸಿ 4 ವಾರದೊಳಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಈಚೆಗೆ ಆದೇಶಿಸಿದೆ. ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವ ಕುತೂಹಲ ಇಲ್ಲಿನ ಜನರದಾಗಿದೆ. ಆ ಸ್ಥಳದಲ್ಲಿ ಪರಿಶೀಲನೆಯು ಸವಾಲಿನ ವಿಷಯವೇ ಆಗಿರುವುದು ಇದಕ್ಕೆ ಕಾರಣ.

ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಲೇಬೇಕಾದ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಪ್ರತಿನಿಧಿಸುವ ಜಂಟಿ ಪರಿಶೀಲನಾ ಸಮಿತಿಯ ಅಧಿಕಾರಿಗಳು ಕಳಸಾ ಬಂಡೂರಿ ಯೋಜನಾ ಪ್ರದೇಶದಲ್ಲಿರುವ ಸಣ್ಣದಾದ ಸುರಂಗದ ಮಾದರಿಯ ಸ್ಥಳವನ್ನು ಪ್ರವೇಶಿಸಬೇಕಾಗುತ್ತದೆ. ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿಯ ಕಳಸಾ ಬಂಡೂರಿ ಯೋಜನಾ ಪ್ರದೇಶದಲ್ಲಿ ನಿರ್ಮಿಸಿರುವ ಎರಡು ತಡೆಗೋಡೆಗಳ ನಡುವಿನ ಜಾಗಕ್ಕೆ ‘ನುಗ್ಗ’ಬೇಕಾಗುತ್ತದೆ ಅಥವಾ ನುಸುಳಿಕೊಂಡು ಹೋಗಬೇಕಾಗುತ್ತದೆ. ಕೇವಲ 4 ಮೀಟರ್ ಅಗಲ ಹಾಗೂ 5.8 ಮೀ. ಎತ್ತರದ ಈ ಸ್ಥಳಕ್ಕೆ ಹೋಗುವುದು ಹೇಗೆ ಎನ್ನುವ ಕುತೂಹಲವೂ ಮೂಡಿದೆ.

ಕೆಸರು ತುಂಬಿದೆ

ಒಂದು ತಡೆಗೋಡೆ ಬಳಿ 240 ಮೀ. ಹಾಗೂ ಇನ್ನೊಂದರಲ್ಲಿ 780 ಮೀ.ಗಳಷ್ಟು ಒಳಕ್ಕೆ ಕ್ರಮಿಸಬೇಕಾಗುತ್ತದೆ. ಒಳಗೆ ಎರಡು ಮೀಟರ್‌ನಷ್ಟು ಹೂಳು ತುಂಬಿದೆ. ಅಲ್ಲಿ ಆಮ್ಲಜನಕದ ಕೊರತೆಯೂ ಇದೆ. ಹಾವು, ಇತರ ಜಲಚರಗಳಿವೆ ಎನ್ನಲಾಗಿದೆ. ಈ ಪರಿಸ್ಥಿತಿಯಲ್ಲಿ, ಆಕ್ಸಿಜನ್‌ ಸಿಲಿಂಡರ್ ಬೆನ್ನಿಗೆ ಕಟ್ಟಿಕೊಂಡು ಸಣ್ಣ ತೆಪ್ಪಗಳಲ್ಲಿ ಕುಳಿತು ಹೋಗುವುದಕ್ಕೂ ಕಷ್ಟವಾಗುತ್ತದೆ ಎನ್ನುವುದು ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯರ ಮಾತಾಗಿದೆ.

‘ನಾನೂ ಈ ಬಗ್ಗೆ ಮಾಹಿತಿ ಪಡೆದಿದ್ದೇನೆ. ಯೋಜನಾ ಪ್ರದೇಶ ಪ್ರವೇಶಿಸುವುದೇ ಸಾಧ್ಯವಿಲ್ಲ ಎನ್ನುವ ಸ್ಥಿತಿ ಇರುವಾಗ ಅದರೊಳಗಿಂದಲೆ ಕರ್ನಾಟಕವು ನೀರು ತಿರುಗಿಸಿಕೊಂಡಿದೆ ಎಂದು ಗೋವಾ ಯಾವ ಆಧಾರದ ಮೇಲೆ ದೂರಿದೆ ಎನ್ನುವುದೇ ಪ್ರಶ್ನೆಯಾಗಿದೆ. ಕಿರಿದಾದ ಜಾಗದಲ್ಲಿ ಅಧಿಕಾರಿಗಳು ಹೇಗೆ ನುಸುಳಿ ಹೋಗಿ ಪರಿಶೀಲಿಸುತ್ತಾರೆ ಎನ್ನುವ ಕುತೂಹಲವೂ ಇದೆ’ ಎಂದು ಹೋರಾಟಗಾರ ಅಶೋಕ ಚಂದರಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬಳಸಿಕೊಳ್ಳುತ್ತಿರುವ ಗೋವಾ

‘2018ರ ಆ.14ರಂದು ಮಹದಾಯಿ ನ್ಯಾಯಮಂಡಳಿಯು ಐತೀರ್ಪು ಪ್ರಕಟಿಸಿದ ನಂತರ 2020ರ ಫೆ.20ರಂದು ಸುಪ್ರೀಂ ಕೋರ್ಟ್‌ ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸುವಂತೆ ಆದೇಶಿಸಿತ್ತು. ಕೇಂದ್ರವು ಫೆ. 27ರಂದು ಪ್ರಕಟಿಸಿದೆ. ಆದರೆ, ಕೇಂದ್ರ ಅರಣ್ಯ ಮತ್ತು ವನ್ಯಜೀವಿ ಸಚಿವಾಲಯದ ಅನುಮತಿ ಪಡೆದುಕೊಂಡು ಕಳಸಾ ಬಂಡೂರಿ ತಿರುವು ಯೋಜನೆಯ ಕಾಮಗಾರಿ ಆರಂಭಿಸುವಂತೆ ಸುಪ್ರೀಂ ಕೋರ್ಟ್‌ ತಿಳಿಸಿದೆ. ಈ ಅನುಮತಿ ಇನ್ನೂ ಸಿಕ್ಕಿಲ್ಲ. ಈ ನಡುವೆ, ಗೋವಾ ಸರ್ಕಾರವು ಕಳಸಾ ತಿರುವು ಯೋಜನೆಯ ಅನುಷ್ಠಾನ ತಡೆಯಲು ಕೇಂದ್ರ ಮತ್ತು ಸುಪ್ರೀಂ ಕೋರ್ಟ್‌ ಅನ್ನು ಬಳಸಿಕೊಳ್ಳುತ್ತಿದೆ. ಕಾಲಹರಣ ಮಾಡುವುದೇ ಗೋವಾದ ಕುತಂತ್ರವಾಗಿದೆ’ ಎಂದು ಆರೋಪಿಸುತ್ತಾರೆ ಅವರು.

ಕೆಲವೇ ದಿನಗಳಲ್ಲಿ ಪರಿಶೀಲನಾ ಸಮಿತಿಯು ಯೋಜನಾ ಸ್ಥಳಕ್ಕೆ ಭೇಟಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ನಮ್ಮ ಪಾಲಿನ ನೀರು ಪಡೆದುಕೊಳ್ಳುವ ನಿಟ್ಟಿನಲ್ಲಿ ₹ 500 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ, ಹೋದ ವರ್ಷದ ಬಜೆಟ್‌ನಲ್ಲಿ ತೆಗೆದಿರಿಸಿತ್ತು. ಆದರೆ, ಅದು ಖರ್ಚಾಗಲೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT