ಗುರುವಾರ , ಆಗಸ್ಟ್ 11, 2022
23 °C
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅಭಿಮತ

ಹಕ್ಕು ಪಡೆದುಕೊಳ್ಳಲು ಜಾಗೃತಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಮುಖ್ಯ ಉದ್ದೇಶ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುವುದಾಗಿದೆ. ಹಕ್ಕುಗಳ ಉಲ್ಲಂಘನೆಯಾದರೆ ಆಯೋಗಕ್ಕೆ ಮೊರೆ ಹೋಗಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಕಿವಿಮಾತು ಹೇಳಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ‌ ಶಾಖೆ, ಗೃಹರಕ್ಷಕ ದಳ ಮತ್ತು ಪೌರರಕ್ಷಣೆ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಗುರುವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಮತ್ತು ಕೊರೊನಾ ಯೋಧರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹಕ್ಕುಗಳಿಂದ ವಂಚಿತರಾದವರು, ಅತ್ಯಾಚಾರಕ್ಕೆ ಒಳಗಾದವರು, ಅಂಗವಿಕಲರು, ಬಾಲ ಕಾರ್ಮಿಕರು, ವಯೋವೃದ್ಧರು, ಎಚ್.ಐ.ವಿ. ಸೋಂಕಿತರನ್ನು ನಾವೆಲ್ಲರೂ ಸಹನಾಭೂತಿಯಿಂದ ಹಾಗೂ ಇತರರಂತೆ ಸಮಾನವಾಗಿ ನೋಡಬೇಕು. ಎಷ್ಟೋ ಜನರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲ. ಅವರು ವಿವಿಧ ಬಗೆಯ ದೌರ್ಜನ್ಯಗಳನ್ನು ಸಹಿಸಿಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಈ ವರ್ಗದವರಿಗೆ ಅರಿವು ಮೂಡಿಸಿ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗೌರವ ಕಾರ್ಯದರ್ಶಿ ವಿಜಯ ದೇವರಾಜ ಅರಸ್, ‘ಸಂವಿಧಾನ ನಮ್ಮೆಲ್ಲರಿಗೂ ಮೂಲಭೂತ ಹಕ್ಕುಗಳನ್ನು ನೀಡಿದೆ. ಆ ಹಕ್ಕುಗಳ ಉಲಂಘನೆಯಾದರೆ ನ್ಯಾಯಾಲಯದ ಮೊರೆ ಹೋಗಬಹುದು’ ಎಂದು ಸಲಹೆ ನೀಡಿದರು.

‘ಶಾಲಾ-ಕಾಲೇಜು ಸೇರಿದಂತೆ ಪ್ರತಿ ಹಳ್ಳಿ ಮತ್ತು ನಗರಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ. ಹಕ್ಕುಗಳ ಉಲಂಘನೆಯಾದಲ್ಲಿ ಕಾನೂನು ಸಲಹೆ ನೀಡಲಾಗುತ್ತಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಅಧ್ಯಕ್ಷ ಅಶೋಕ ಬದಾಮಿ, ‘ಸಮಾನವಾಗಿ ಜೀವಿಸುವ ಹಕ್ಕು ಎಲ್ಲರಿಗೂ ಇದೆ. ಮಾನವ ಹಕ್ಕುಗಳ ಸರಿಯಾದ ಪಾಲನೆ ಆಗಬೇಕಾದರೆ ಎಲ್ಲರಿಗೂ ಶಿಕ್ಷಣ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

‘ಅಂತರ ಕಾಯ್ದುಕೊಳ್ಳುವುದು ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಕೋವಿಡ್–19 ವಿರುದ್ಧ ಒಗ್ಗಟ್ಟಾಗಿ ಹೋರಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದರು.

ಕೊರೊನಾ ಯೋಧರಿಗೆ ರೆಡ್ ಕ್ರಾಸ್ ಸಂಸ್ಥೆಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗೃಹರಕ್ಷಕ ದಳ ಮತ್ತು ಪೌರರಕ್ಷಣೆ ಇಲಾಖೆಯ ಕಮಾಂಡೆಂಟ್ ಡಾ.ಕಿರಣ ರುದ್ರಾನಾಯ್ಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಕಾರ್ಯದರ್ಶಿ ಡಾ.ಡಿ.ಎನ್. ಮಿಸಾಳೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಗೃಹರಕ್ಷಕದಳ ಮತ್ತು ಪೌರ ರಕ್ಷಣೆ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು‌‌.

ಕಾರ್ಯಕ್ರಮಕ್ಕೂ ಮುನ್ನು ರೆಡ್ ಕ್ರಾಸ್ ಸಂಸ್ಥೆಯ ಸ್ವಯಂಸೇವರು, ಗೃಹರಕ್ಷಕ ದಳದಿಂದ ಕೋವಿಡ್–19 ಜಾಗೃತಿ ಜಾಥಾ ಜಿಲ್ಲಾಧಿಕಾರಿ ಕಾರ್ಯಾಲಯದ ಆವರಣದಿಂದ ರಾಣಿ ಚನ್ನಮ್ಮ ವೃತ್ತದ ಮೂಲಕ ಜಿಲ್ಲಾ ‍‍ಪಂಚಾಯಿತಿ ತಲುಪಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.