ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೇ ಬಿಡುಗಡೆ ಕೋರಿದ್ದೆ, ಬೇಸರವೇನಿಲ್ಲ: ಲಕ್ಷ್ಮಿ ಹೆಬ್ಬಾಳಕರ

ಪ್ರಜಾವಾಣಿ ಸಂದರ್ಶನ
Last Updated 2 ನವೆಂಬರ್ 2018, 19:46 IST
ಅಕ್ಷರ ಗಾತ್ರ

ಬೆಳಗಾವಿ: ‘ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ನಾನೇ ಬಿಡುಗಡೆ ಕೋರಿದ್ದೆ. ಹೀಗಾಗಿ, ಪುಷ್ಪಾ ಅಮರನಾಥ್‌ ಅವರನ್ನು ಆ ಹುದ್ದೆಗೆ ನೇಮಿಸಿರುವುದಕ್ಕೆ ಬೇಸರವಿಲ್ಲ; ಅಸಮಾಧಾನವೂ ಇಲ್ಲ. ಹುದ್ದೆ ಕಳೆದುಕೊಳ್ಳುವುದಕ್ಕೆ ಯಾರದೋ ಕುತಂತ್ರ, ಕೈವಾಡ ಕೆಲಸ ಮಾಡಿದೆ ಎನ್ನುವುದರಲ್ಲಿ ಅರ್ಥವಿಲ್ಲ’. – ಇಲ್ಲಿನ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ‘ಪ್ರಜಾವಾಣಿ’ಗೆ ನೀಡಿದ ಪ್ರತಿಕ್ರಿಯೆ ಇದು.

* ದಿಢೀರನೆ ನಿಮಗೆ ಕೊಕ್ ನೀಡಲಾಗಿದೆಯಲ್ಲಾ?
ಇದು ದಿಢೀರ್‌ ಬೆಳವಣಿಗೆ ಏನಲ್ಲ. ಶಾಸಕಿಯಾಗಿ ಆಯ್ಕೆಯಾದ ನಂತರ ನಾವೇ ಎಐಸಿಸಿಗೆ ಪತ್ರ ಬರೆದಿದ್ದೆ. ಕ್ಷೇತ್ರಕ್ಕೆ ಹೆಚ್ಚಿನ ಸಮಯ ನೀಡಬೇಕಿರುವುದರಿಂದ ಸಂಘಟನೆಗೆ ಹೆಚ್ಚಿನ ಸಮಯ ಕೊಡುವುದಕ್ಕೆ ಆಗುತ್ತಿಲ್ಲ ಎಂದು ತಿಳಿಸಿದ್ದೆ. ಇದನ್ನು ವರಿಷ್ಟರು ಪರಿಗಣಿಸಿದ್ದಾರೆ. 6 ವರ್ಷ ಕಾಂಗ್ರೆಸ್‌ ಘಟಕ, ಮೂರು ಮುಕ್ಕಾಲು ವರ್ಷ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದೇನೆ. 15 ಮಂದಿಯ ಹೆಸರನ್ನು ನಾನೇ ಸೂಚಿಸಿದ್ದೆ. ಅವರಲ್ಲಿ ಐದು ಮಂದಿಯ ಅಂತಿಮ ಪಟ್ಟಿ ಸಿದ್ಧಪಡಿಸಿ, ಪುಷ್ಪಾ ಅವರಿಗೆ ಅವಕಾಶ ಕೊಡಲಾಗಿದೆ. ನನ್ನೊಂದಿಗೆ ಸಮಾಲೋಚನೆ ನಡೆಸಿಯೇ ಎಲ್ಲ ಬೆಳವಣಿಗೆಗಳೂ ನಡೆದಿವೆ. ನೂತನ ಅಧ್ಯಕ್ಷರು ಸಮರ್ಥರಿದ್ದಾರೆ. ಅವರಿಗೆ ಸಹಕಾರ, ಮಾರ್ಗದರ್ಶನ ನೀಡುತ್ತೇನೆ.

* ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ ನಡುವೆ ಉಂಟಾದ ಭಿನ್ನಮತದ ಪರಿಣಾಮವೇ ಇದು?
ಇಲ್ಲ. ಅದಕ್ಕೂ– ಇದಕ್ಕೂ ಎಳ್ಳಷ್ಟೂ ಸಂಬಂಧವಿಲ್ಲ. ನಾನೇ ಬೇಡ ಎಂದು ಹೇಳಿದ್ದ ಮೇಲೆ ಕಿತ್ತುಕೊಳ್ಳಲಾಗಿದೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ನನ್ನ ಕ್ಷೇತ್ರದಿಂದ ಹೆಚ್ಚಿನ ಮತಗಳನ್ನು ಗಳಿಸಿಕೊಡಬೇಕಿದೆ. ಇದಕ್ಕಾಗಿ ಕ್ಷೇತ್ರ ಅಭಿವೃದ್ಧಿಗೆ ಗಮನಹರಿಸುತ್ತೇನೆ.

* ಹುದ್ದೆ ನಿರ್ವಹಿಸಿದ ಬಗ್ಗೆ ತೃಪ್ತಿ ಇದೆಯೇ?
ಹೌದು. ಇತರ ಯಾವುದೇ ಪಕ್ಷಗಳ ಮಹಿಳಾ ಘಟಕಗಳು ಮಾಡದಷ್ಟು ಕ್ರಿಯಾಶೀಲವಾಗಿ ನಾವು ಕೆಲಸ ಮಾಡಿದ್ದೇವೆ. ಘಟಕದ ವರ್ಚಸ್ಸು ವೃದ್ಧಿಸಿದ ಸಮಾಧಾನವಿದೆ. ಆ ಕುರ್ಚಿಗೆ ಗೌರವ ತಂದುಕೊಟ್ಟಿದ್ದೇನೆ; ಸಮರ್ಥವಾಗಿ ನ್ಯಾಯ ಒದಗಿಸಿದ್ದೇನೆ. ಅದರಿಂದ ನನಗೂ ಗೌರವ ದೊರೆತಿದೆ. ಮುಂದೆಯೂ ಪಕ್ಷದಿಂದ ನೀಡುವ ಜವಾಬ್ದಾರಿಯನ್ನು ಶ್ರದ್ಧೆ, ಭಕ್ತಿಯಿಂದ ನಿರ್ವಹಿಸುವೆ.

* ನಿಮ್ಮ ಅವಧಿಯಲ್ಲಾದ ಪ್ರಮುಖ ಕಾರ್ಯಕ್ರಮಗಳೇನು?
ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದೆ. ವರ್ಷವಿಡೀ ಇಂದಿರಾ ನಮನ–ದೀಪ ನಮನ ಕಾರ್ಯಕ್ರಮ ನಡೆಸಿದೆ. ಮಹಿಳೆಯರಿಗಾಗಿ ಅರಿಸಿನ–ಕುಂಕುಮ ಕಾರ್ಯಕ್ರಮವನ್ನು ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲೂ ಮಾಡಿದ್ದೇವೆ. ಮಹಿಳಾ ಕಾರ್ಯಕರ್ತೆಯರು ಗ್ರಾಮ ವಾಸ್ತವ್ಯ ನಡೆಸಿದ್ದು ಇತಿಹಾಸದಲ್ಲೇ ಮೊದಲು. ಮಹಿಳಾ ಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ 4 ಬಾರಿ ನೂರಾರು ಮಹಿಳೆಯರೊಂದಿಗೆ ಸಂಸತ್ತಿಗೆ ಮುತ್ತಿಗೆ ಹಾಕಿದ್ದೆವು. ಪಕ್ಷದಿಂದ ನಡೆಸಿದ ‘ಪ್ರಾಜೆಕ್ಟ್‌ ಶಕ್ತಿ’ ಕಾರ್ಯಕ್ರಮದ ಮೂಲಕ 1.02 ಲಕ್ಷ ಸದಸ್ಯರನ್ನು ನೋಂದಣಿ ಮಾಡಿಸಿದ ದೇಶದ 2ನೇ ಘಟಕ ನಮ್ಮದು. ಇದಕ್ಕಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಈಚೆಗೆ ಪ್ರಶಸ್ತಿಯನ್ನೂ ನೀಡಿದ್ದಾರೆ. ಇದಲ್ಲದೆ, ರಾಜ್ಯದಾದ್ಯಂತ ಹಲವು ಹೋರಾಟಗಳನ್ನು ನಡೆಸಿದ್ದೇನೆ. ಇದರಿಂದ ಪಕ್ಷ ಸಂಘಟನೆಗೆ ಅನುಕೂಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT