ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ: ಮಹೇಶ ಕುಮಟಳ್ಳಿ ಸ್ಪಷ್ಟನೆ

7
ಹಲವು ದಿನಗಳ ನಂತರ ಪ್ರತ್ಯಕ್ಷವಾದ ಶಾಸಕ

ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ: ಮಹೇಶ ಕುಮಟಳ್ಳಿ ಸ್ಪಷ್ಟನೆ

Published:
Updated:
Prajavani

ಅಥಣಿ: ಹಲವು ದಿನಗಳ ನಂತರ ಶುಕ್ರವಾರ ಇಲ್ಲಿ ಪ್ರತ್ಯಕ್ಷವಾದ ಕ್ಷೇತ್ರದ ಶಾಸಕ, ಕಾಂಗ್ರೆಸ್‌ನ ಮಹೇಶ ಕುಮಟಳ್ಳಿ, ‘ನಾವೆಲ್ಲರೂ ಕಾಂಗ್ರೆಸ್‌ನಲ್ಲೇ ಇದ್ದೇವೆ. ಬೇರೆ ಕಡೆ ಹೋಗುತ್ತಿದ್ದೇವೆ ಎನ್ನುವುದೆಲ್ಲವೂ ಊಹಾಪೋಹ’ ಎಂದು ಸ್ಪಷ್ಟಪಡಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬೆನ್ನು ನೋವಿನಿಂದಾಗಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಹೋಗುವುದಕ್ಕೆ ಆಗಲಿಲ್ಲ. ಆಗ ಮುಂಬೈನಲ್ಲಿದ್ದೆ. ವಿಮಾನದ ಟಿಕೆಟ್‌ ಕೂಡ ತೆಗೆಸಿದ್ದೆ. ಆದರೆ, ನೋವು ಜಾಸ್ತಿಯಾದ್ದರಿಂದ ಅಲ್ಲಿಯೇ ಉಳಿಯಬೇಕಾಯಿತು. ಈ ಕುರಿತು ವರಿಷ್ಠರಿಗೆ ಪತ್ರ ಬರೆದು ತಿಳಿಸಿದ್ದೇನೆ. ಬೆನ್ನು ನೋವಿನಿಂದಾಗಿ, ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲೂ ಹೆಚ್ಚು ದಿನ ಭಾಗವಹಿಸಲು ಆಗಲಿಲ್ಲ’ ಎಂದರು.

‘ನಾನು ಎಲ್ಲೂ ನಾಪತ್ತೆಯಾಗಿಲ್ಲ. ಕ್ಷೇತ್ರದಲ್ಲಿಯೇ ಇದ್ದೇನೆ. ಕಳೆದ ವಾರ ಬೆಂಗಳೂರಿಗೆ ಹೋಗಿದ್ದೆ’ ಎಂದು ಪ್ರತಿಕ್ರಿಯಿಸಿದರು.

‌‘ನನ್ನ ರಾಜಕೀಯ ಜೀವನ ಶುರುವಾಗಿದ್ದೇ ಕಾಂಗ್ರೆಸ್‌ನಿಂದ. 25 ವರ್ಷದಿಂದಲೂ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ, ಯಾವುದೇ ಕಾರಣಕ್ಕೂ ಆ ಪಕ್ಷ ಬಿಡುವುದಿಲ್ಲ. ಮುಂದೆಯೂ ಕಾಂಗ್ರೆಸ್‌ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ’ ಎಂದು ತಿಳಿಸಿದರು.

‘ರಮೇಶ ಜಾರಕಿಹೊಳಿ 5 ಬಾರಿ ಶಾಸಕರಾಗಿದ್ದಾರೆ. ಅವರಿಗೆ ಇರುವ ಭಿನ್ನಾಭಿಪ್ರಾಯಗಳನ್ನು ವರಿಷ್ಠರ ಗಮನಕ್ಕೆ ತಂದಿದ್ದಾರೆ. ಅವರು ಪಕ್ಷ ಬಿಟ್ಟು ಹೋಗುತ್ತಾರೆ ಎನ್ನುವುದು ಕೂಡ ಶುದ್ಧ ಸುಳ್ಳು. ಎಲ್ಲರೂ ಪಕ್ಷದಲ್ಲೇ ಇರುತ್ತೇವೆ. ಇದರಲ್ಲಿ ಎರಡು ಮಾತಿಲ್ಲ’ ಎಂದು ಹೇಳಿದರು.

‘ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ. ಇದಕ್ಕಾಗಿ ಪಕ್ಷದೊಂದಿಗೆ ಗಟ್ಟಿಯಾಗಿ ನಿಲ್ಲುತ್ತೇನೆ’ ಎಂದರು.

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !