ಶುಕ್ರವಾರ, ಏಪ್ರಿಲ್ 3, 2020
19 °C
ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮ

ಜೀವಂತವಿರುವವರೆಗೂ ನಾನು ಶಾಸಕನೇ: ಸತೀಶ ಜಾರಕಿಹೊಳಿ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ನನಗೆ ಸೋಲಿನ ಭಯವಿಲ್ಲ. ಜೀವಂತ ಇರುವವರೆಗೂ ನಾನು ಶಾಸಕನಾಗಿಯೇ ಇರುತ್ತೇನೆ’ ಎಂದು ಯಮಕನಮರಡಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಕುಮಾರಗಂಧರ್ವ ಕಲಾಮಂದಿರದಲ್ಲಿ ಭಾನುವಾರ ಮಾನವ‌ ಬಂಧುತ್ವ ವೇದಿಕೆ ನೇತೃತ್ವದಲ್ಲಿ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ‌ಜಯಂತಿ ಆಚರಣೆ, ಆದರ್ಶ ‌ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‌

‘ಯಮಕನಮರಡಿ ಕ್ಷೇತ್ರದಲ್ಲಿ ಶಾಸಕನಾಗಿ ಇಲ್ಲದಿದ್ದರೂ ಸಮಾಜ ಸೇವೆ ಮಾಡುತ್ತೇನೆ ಹಾಗೂ ವ್ಯವಸ್ಥೆ ವಿರುದ್ಧ ಹೋರಾಟವನ್ನು ನಿರಂತರ ಮುಂದುವರಿಸುತ್ತೇನೆ. ಬಸವಣ್ಣ, ಬುದ್ಧ, ಅಂಬೇಡ್ಕರ್‌ ಅನುಯಾಯಿ ಆಗಿರುವ ನಾನು, ಅವರ ಮಾರ್ಗದಲ್ಲಿಯೇ ನಡೆಯುತ್ತೇನೆ. ಅಂಬೇಡ್ಕರ್‌ ಮಂತ್ರಿ ಸ್ಥಾನ ಬಿಡಲು ಹೆದರಲಿಲ್ಲ. ಬಸವಣ್ಣ ಕುರ್ಚಿ ಬಿಡಲು ಹೆದರಲಿಲ್ಲ. ಬುದ್ಧ ದೇಶ ಬಿಡಲು ಹೆದರಲಿಲ್ಲ. ಅದೇ ರೀತಿ ಸೋಲು ಗೆಲುವಿನ ಭಯ ನನಗಿಲ್ಲ’ ಎಂದರು.

ಶಾಸಕನಲ್ಲದಿದ್ದರೂ

‘ಶಾಸಕರಾಗಿ ಕೆಲಸ ನಿರ್ವಹಿಸಲು ಕೆಲವು ನಿರ್ಬಂಧಗಳಿರುತ್ತವೆ. ಶಾಸಕನಲ್ಲದೇ ಹೋದರೆ ಸಮಾಜ ಸೇವೆಯನ್ನು ಹತ್ತು ಪಟ್ಟು ಹೆಚ್ಚಾಗಿ ಮಾಡಬಹುದು. ಸಾವಿತ್ರಿಬಾಯಿ ಫುಲೆ ಅವರು ಅದೇ ರೀತಿ ಮಾಡಿದವರು. ಅವರ ಆದರ್ಶಗಳನ್ನು ಮಕ್ಕಳಿಗೆ ಶರವೇಗದಲ್ಲಿ‌ ‌ಮುಟ್ಟಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು’ ಎಂದು ತಿಳಿಸಿದರು.

‘ದಿಟ್ಟ ಮಹಿಳೆ‌ಯಾದ ಸಾವಿತ್ರುಬಾಯಿ ಜನಿಸದೇ ಇದ್ದಿದ್ದರೆ ಮಹಿಳೆಯರು ಶಿಕ್ಷಣ ‌ಪಡೆಯಲು‌ ವಿಳಂಬವಾಗುತ್ತಿತ್ತು. ಅವರ ಹೋರಾಟದಿಂದ ಈಗ ಮಹಿಳೆಯರು ಎಲ್ಲ ‌ಕ್ಷೇತ್ರದಲ್ಲೂ ಬಂದಿದ್ದಾರೆ. ಸಾವಿತ್ರಿಬಾಯಿ ಯಾವುದೇ ಜಾತಿಗೆ ಸೀಮಿತವಾದವರಲ್ಲ. ಅವರು ಇಡೀ ಭಾರತದ ‌ನಾಯಕಿ’ ಎಂದು ಸ್ಮರಿಸಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಸಂಜೀವ ತಳವಲಕರ ಮಾತನಾಡಿ, ‘ದೇಶದಲ್ಲಿ ಜಾತಿ ಎಂಬ ಪಿಡುಗು ತಾಂಡವಾಡುತ್ತಿದೆ. ಮಹಾಪುರುಷರ ಜಯಂತಿಗಳು ಜಾತಿಗೆ ಸೀಮಿತವಾಗುತ್ತಿವೆ. ದಾರ್ಶನಿಕರನ್ನು ಜಾತಿಗೆ ಸೀಮಿತಗೊಳಿಸಬಾರದು. ಎಲ್ಲರೂ, ದೇಶಕ್ಕಾಗಿ ಹೋರಾಡಿದ ಮಹಾಪುರುಷರ ಜಯಂತಿಯನ್ನು ಆಚರಿಸಬೇಕು’ ಎಂದು ಹೇಳಿದರು.

ಜಾತಿ ಆಧಾರದಲ್ಲಿ

ಮನುವಾದಿಗಳ ಬಗ್ಗೆ ಕಿಡಿಕಾರಿದ ಅವರು, ‘ಮಹಾಪುರುಷರನ್ನು ಸಹ ಜಾತಿ ಆಧಾರದಲ್ಲಿ ಇಬ್ಭಾಗ ಮಾಡಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಆರ್‌ಎಸ್‌ಎಸ್‌ನವರು, ಮನುವಾದಿಗಳು ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಸತೀಶ ಜಾರಕಿಹೊಳಿ ಸೋಲಿಸಲು ಚುನಾವಣೆಗೆ 2 ವರ್ಷಗಳಿಗೆ ಮುನ್ನವೇ ಪ್ರಚಾರ ಮಾಡಲು ತಂತ್ರ ಹೂಡಿದ್ದಾರೆ. ಹೀಗಾಗಿ, ದಲಿತ ಮುಖಂಡರನ್ನು ಒಗ್ಗೂಡಿಸಿ, ನರಸತ್ತವರಂತೆ ಇರುವವರನ್ನು ಬಲಗೊಳಿಸುವ ಕಾರ್ಯವನ್ನು ಮಾಡಬೇಕು’ ಎಂದರು.

ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ ಮಾತನಾಡಿ, ‘ಶಿಕ್ಷಣ ಪಡೆಯುವುದು ಅಫರಾದ ಎಂಬ ಸಂದರ್ಭದಲ್ಲಿ ಸಾವಿತ್ರಿಬಾಯಿ ಪುಲೆ ಶಿಕ್ಷಣ ಪಡೆದಿದ್ದಾರೆ. ಸಮಾಜವನ್ನೇ ಎದುರು ಹಾಕಿಕೊಂಡ ಅವರು ಮಹಿಳೆಯರಿಗೆ ಶಿಕ್ಷಣ ನೀಡಿದ್ದಾರೆ. ಅವರ ಜಯಂತಿ ‌ರಾಷ್ಟ್ರ ಮಟ್ಟದಲ್ಲಿಯೂ ಜಯಂತಿ ಆಚರಣೆ‌ ‌ಮಾಡುವಂತಾಗಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ’ ಎಂದು ತಿಳಿಸಿದರು.

ಇದೇ ವೇಳೆ ‘ಆದರ್ಶ ಶಿಕ್ಷಕಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಾಧ್ಯಾಪಕಿ ಡಾ.ಚಂದ್ರಿಕಾ ಬಿ.ಕೆ., ಜಿಲ್ಲಾ ಸಂಚಾಲಕ ಪ್ರೊ.ದೀಪಕ ಕಾಂಬಳೆ, ಅರುಣ ಕಟಾಂಬಳೆ ಇದ್ದರು.

ಪ್ರೊ.ಮಂಜುನಾಥ ಪಾಟೀಲ ಸ್ವಾಗತಿಸಿದರು. ರಾಮಕೃಷ್ಣ ಪಾನಬುಡೆ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು