ಸೋಮವಾರ, ಮಾರ್ಚ್ 8, 2021
22 °C
ಘಟಕಗಳ ಮೇಲೆ ಔಷಧ ನಿಯಂತ್ರಣ ಅಧಿಕಾರಿಗಳ ದಾಳಿ

ಗರ್ಭಪಾತ, ಲೈಂಗಿಕ ಆಸಕ್ತಿ ವೃದ್ಧಿಸುವ ಮಾತ್ರೆಗಳು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಔಷಧ ನಿಯಂತ್ರಣ ಅಧಿಕಾರಿಗಳ ತಂಡದವರು ತಾಲ್ಲೂಕಿನ ಕಾಕತಿಯ ಲಕ್ಷ್ಮಿ ನಗರದ 3ನೇ ಕ್ರಾಸ್‌ ಹಾಗೂ 6ನೇ ಕ್ರಾಸ್‌ನಲ್ಲಿ ಪರವಾನಗಿ ಇಲ್ಲದೇ ಕಾರ್ಯನಿರ್ವಹಿಸುತ್ತಿದ್ದ ಪ್ರತ್ಯೇಕ 2 ಕಾಂತಿವರ್ಧಕ ತಯಾರಿಕಾ ಘಟಕ ಹಾಗೂ ನಗರದ ಕಾಂತಿವರ್ಧಕ ಮಾರಾಟಗಾರರ ಎರಡು ಅಂಗಡಿಗಳ ಮೇಲೆ ಶುಕ್ರವಾರ ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿದ್ದಾರೆ.

‌‌‌ಆಂಟಿಬಯೊಟಿಕ್, ಸ್ಟಿರಾಯ್ಡ್ ಔಷಧಗಳ ಕಲಬೆರಕೆಯೊಂದಿಗೆ ತಯಾರಿಸಿ ಮಾರಾಟ ಮಾಡುತ್ತಿದ್ದ ಹಾನಿಕಾರಕವಾಗುವಂತಹ ಕಾಂತಿವರ್ಧಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಕತಿಯ 6ನೇ ಅಡ್ಡ ರಸ್ತೆಯ ಫಜಲುಲ್ಲಾ ಫಾರೂಕಿ ಎನ್ನುವವರ ಮನೆಯಲ್ಲಿ ಅನಧಿಕೃತವಾಗಿ ತಯಾರಿಸಿದ್ದ ‘ಫಾರೂಖಿ ಅರಬಿ ಕ್ರೀಮ್’ಗಳು, ಯಂತ್ರೋಪಕರಣಗಳು, ಪ್ಯಾಕಿಂಗ್ ಸಾಮಗ್ರಿಗಳು, ಲೇಬಲ್‌ಗಳು, ಪ್ಲಾಸ್ಟಿಕ್ ಡಬ್ಬಗಳು ಮೊದಲಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅದೇ ಗ್ರಾಮದ ‌3ನೇ ಅಡ್ಡರಸ್ತೆಯ ಜಹೀದಾಬಾನು ಬೇಪಾರಿ ಅವರ ಮನೆಯಲ್ಲೂ ಅನಧಿಕೃತವಾಗಿ ‘ಜಹಿದಾಸ್ ಒರಿಜಿನಲ್ ಅರೆಬಿಕ್ ಕ್ರೀಮ್‌’ಗಳನ್ನು ತಯಾರಿಸಿರುವುದು ಹಾಗೂ ಆಲೋಪಥಿ ಔಷಧಗಳು, ಯಂತ್ರೋಪಕರಣಗಳು, ಪ್ಯಾಕಿಂಗ್ ಮಟೀರಿಯಲ್‌ಗಳು, ಲೇಬಲ್‌ಗಳು, ಪ್ಲಾಸ್ಟಿಕ್ ಡಬ್ಬಗಳನ್ನು ವಶಕ್ಕೆ ಪಡೆಯಲಾಗಿದೆ.

ಇದೇ ತನಿಖಾ ತಂಡವು ನಗರದ ದರ್ಬಾರ್ ಗಲ್ಲಿಯಲ್ಲಿನ ಬೈಟುಜಾರಾ ಕಾಂಪ್ಲೆಕ್ಸ್‌ನ ಫಾರೂಕಿ ಅರಬಿ ಕ್ರೀಮ್ ಶಾಪ್ ಹಾಗೂ ಕೋನವಾಲ ಗಲ್ಲಿಯ ರಂಗರೇಜ ಜನರಲ್ ಸ್ಟೋರ್ಸ್‌ನಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ‘ಫಾರೂಖಿ ಅರಬಿ ಕ್ರೀಮ್‘ ಹಾಗೂ ‘ಜಹಿದಾಸ್ ಒರಿಜಿನಲ್ ಅರೆಬಿಕ್ ಕ್ರೀಮ್‌’ಗಳನ್ನು ವಿಶ್ಲೇಷಣೆಗೆ ಪಡೆಯಲಾಗಿದೆ. ನಾಲ್ಕೂ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಕಾಂತಿವರ್ಧಕ, ಔಷಧ ಹಾಗೂ ಇತರ ಸಾಮಗ್ರಿಗಳನ್ನು ಅಧಿಕಾರಿಗಳ ಸ್ವಾಧೀನದಲ್ಲಿ ಇಟ್ಟಕೊಳ್ಳಲು 2ನೇ ಹಾಗೂ 4ನೇ ಜೆಎಂಎಫ್‌ ನ್ಯಾಯಾಲಯ ಆದೇಶಿಸಿದೆ.

ಫಾರೂಖಿ ಅರಬಿ ಕ್ರೀಮ್ ಹಾಗೂ ಜಹಿದಾಸ್ ಒರಿಜಿನಲ್ ಅರೆಬಿಕ್ ಕ್ರೀಮ್‌ಗಳನ್ನು ಫಜಲುಲ್ಲಾ ಫಾರೂಕಿ ಹಾಗೂ ಜಾಹೀದಾಬಾನು ಬೇಪಾರಿ ಆಲೋಪಥಿಕ್ ಔಷಧಗಳನ್ನು ಬೆರೆಸಿ ಕ್ರೀಮ್‌ಗಳನ್ನು ತಯಾರಿಸಿರುವ ಹಾಗೂ ಕ್ರೀಮ್‌ಗಳನ್ನು ಜೋಳದ ಹಿಟ್ಟು, ಕಡಲೆ ಹಿಟ್ಟು, ಅರಿಸಿನ ಪುಡಿ ಬೆರೆಸಿ ತಯಾರಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಮಾತ್ರೆ, ಸ್ಪ್ರೇ ವಶ:

ಜಿಲ್ಲೆಯ ಔಷಧ ನಿಯಂತ್ರಣಾಧಿಕಾರಿಗಳ ತಂಡ ಮಾರ್ಕೆಟ್‌ ಠಾಣೆ ವ್ಯಾಪ್ತಿಯ ರವಿವಾರ ಪೇಟೆ ಕರ್ನಾಟಕ ಚೌಕದ ಆಝಾದ್ ಗಲ್ಲಿಯಲ್ಲಿ ಅಮರ ಪ್ಯಾಲೇಸ್ ಲಾಡ್ಜ್‌ನ ಮೇಲೆ ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿದೆ. ಅಲ್ಲಿನ ಕೊಠಡಿಯಲ್ಲಿ ಹುಬ್ಬಳ್ಳಿಯ ಕೃಷ್ಣಮೂರ್ತಿ ಧರೇಗೌಡರ ಎನ್ನುವವರು ಅನಧಿಕೃತವಾಗಿ ಮಾರಾಟಕ್ಕೆ ಇಟ್ಟುಕೊಂಡಿದ್ದ ಲೈಂಗಿಕ ಆಸಕ್ತಿ ವೃದ್ಧಿಸುವ ಮಾತ್ರೆಗಳು, ಸ್ಪ್ರೇಗಳನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಔಷಧಗಳಲ್ಲಿ ಡಿಕೆಟಿ ಸಂಸ್ಥೆಯ ಎ ಕೇರ್‌ ಔಷಧವು ಮೈಫೆಪ್ರಿಸ್ಟೋನ್ ಹಾಗೂ ಮೈಸೋಪ್ರೋಸ್ಟೋಲ್ ಎಂಬ ಸಂಯೋಜನೆಯದಾಗಿದ್ದು, ಅನುಸೂಚಿ ‘ಎಚ್‌’ ಔಷಧವಾಗಿದೆ. ಇದನ್ನು ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಅವಶ್ಯ ರೋಗಿಗೆ, ರಕ್ತ ವರ್ಗಾವಣೆ ಸೌಲಭ್ಯವಿರುವ ಆಸ್ಪತ್ರೆಗಳಲ್ಲಿ ಮಾತ್ರ ನೀಡುವುದಾಗಿದೆ. ಆದರೆ, ಈ ಔಷಧವು ‘ಅಬಾರ್ಷನ್ ಪಿಲ್’ (ಗರ್ಭಪಾತ ಮಾತ್ರೆ) ಎಂದು ದುರುಪಯೋಗವಾಗುವುದಲ್ಲದೇ, ನಕಲಿ ವೈದ್ಯರು ಈ ಔಷಧಿಯನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಖರೀದಿಸಿ ಅನಧಿಕೃತವಾಗಿ ಗರ್ಭಪಾತಕ್ಕೆ ಉಪಯೋಗಿಸುವುದು ತಿಳಿದುಬಂದಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕೃಷ್ಣಮೂರ್ತಿ ಧರೇಗೌಡರ ಬೆಳಗಾವಿಯ ಸಮೃದ್ಧ ಫಾರ್ಮಾ ಹಾಗೂ ಶ್ರೇಯಾ ಮೆಡಿಕಲ್ ಎನ್ನುವ ಹೆಸರಿನ ನಕಲಿ ಮೊಹರು ಮತ್ತು ಬಿಲ್ಲುಗಳನ್ನು ಉಪಯೋಗಿಸಿ ಅನಧಿಕೃತ ಔಷಧ ಮಾರಾಟದಲ್ಲಿ ತೊಡಗಿರುವುದು ಮಹಜರ್ ಮೂಲಕ ದೃಢಪಟ್ಟಿದೆ. ಔಷಧ ಹಾಗೂ ಇತರ ದಾಖಲಾತಿಗಳನ್ನು ಅಧಿಕಾರಿಗಳ ಸ್ವಾಧೀನದಲ್ಲಿ ಇಟ್ಟುಕೊಳ್ಳಲು 2ನೇ ಜೆಎಂಎಫ್‌ ನ್ಯಾಯಾಲಯ ಅನುಮತಿ ನೀಡಿದೆ’ ಎಂದು ತಿಳಿಸಿದರು.

ಔಷಧಗಳ ಡಬ್ಬಗಳ ಮೇಲೆ ಬ್ಯಾಚ್ ಸಂಖ್ಯೆ, ಉತ್ಪಾದಿಸಿದ ದಿನಾಂಕ ಹಾಗೂ ಎಕ್ಸ್‌ಪೈರಿ ಡೇಟ್ ಇರಲಿಲ್ಲ ಎಂದು ಖಚಿತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು