ಬೆಳಗಾವಿ: ‘ಈ ಬಾರಿ ಜಿಲ್ಲೆಯ ಎಲ್ಲ 15 ತಾಲ್ಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು. ಲೋಪ ಕಂಡುಬಂದಲ್ಲಿ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಂಜುಂ ಪರ್ವೇಜ್ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನರೇಗಾ ಕಾಮಗಾರಿಗಳನ್ನು ನಿರಂತರ ನಡೆಸಬೇಕು. ಈಗಲೂ ಸಮಯಾವಕಾಶ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು’ ಎಂದರು.
‘ಹಳ್ಳಿಗಳಲ್ಲಿ ಅರ್ಹ ಪ್ರತಿಯೊಬ್ಬರಿಗೂ ನರೇಗಾ ಯೋಜನೆಯಡಿ ಕೆಲಸ ನೀಡಬೇಕು. ಸಕಾಲದಲ್ಲಿ ಕೂಲಿ ಜಮೆ ಮಾಡಬೇಕು. ಮಳೆ ಕೊರತೆ ಆಗಿರುವುದರಿಂದ ಮುಂಬರುವ ದಿನಗಳಲ್ಲಿ ಬೆಳಗಾವಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಅದನ್ನು ನಿವಾರಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು’ ಎಂದರು.
ನಿರಂತರ ನೀರು: ನಗರದಲ್ಲಿಯ ನಡೆಯುತ್ತಿರುವ ನಿರಂತರ ನೀರು (24×7) ಪೂರೈಕೆ ಯೋಜನೆಯ ಕಾಮಗಾರಿ ಚುರುಕುಗೊಳಿಸಲು ಕ್ರಮ ಕೈಗೊಳ್ಳಬೇಕು. ಕೊಳವೆಬಾವಿಯ ನೀರಿನ ಗುಣಮಟ್ಟ ಪರಿಶೀಲಿಸಬೇಕು. ಪ್ರತಿಯೊಂದು ಕೊಳವೆಬಾವಿಗೆ ಕ್ರಮಸಂಖ್ಯೆಗಳನ್ನು ನೀಡಬೇಕು’ ಎಂದು ಸಲಹೆ ನೀಡಿದರು.
‘ಬರ ನಿರ್ವಹಣೆಗೆ ಬಂದ ಅನುದಾನದಲ್ಲಿ ಯಾವುದೇ ಕಾರಣಕ್ಕೂ ಹೊಸ ಕೊಳವೆಬಾವಿ ಕೊರೆಯಬಾರದು. ಆದರೆ ಈಗಾಗಲೇ ಇರುವ ಕೊಳವೆಬಾವಿಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದರು.
ಗೃಹಲಕ್ಷ್ಮಿ– ಸಮಸ್ಯೆ ನಿವಾರಿಸಿ: ‘ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿ ಆಗಿರುವ ಫಲಾನುಭವಿಗಳಿಗೆ ಹಣ ಬಿಡುಗಡೆಗೆ ಅಡ್ಡಿಯಾಗಿರುವ ತಾಂತ್ರಿಕ ತೊಂದರೆಗಳನ್ನು ಕೂಡಲೇ ನಿವಾರಿಸಬೇಕು. ಜಿಲ್ಲೆಯಲ್ಲಿ ಬಾಕಿ ಇರುವ 7,000 ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಅಂಜುಂ ಪರ್ವೇಜ್ ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆ, ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆಗಳ ಪ್ರಯೋಜನವನ್ನು ಸರ್ಕಾರದ ಆಶಯದಂತೆ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ತಿಳಿಸಿದರು.
‘ಸಮಾಜಕಲ್ಯಾಣ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳ ಸ್ಥಾಪನೆಗೆ ಅಗತ್ಯ ಭೂಮಿ ಮಂಜೂರಾತಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಇದಲ್ಲದೇ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಲು ಅನುಕೂಲವಾಗುವಂತೆ ಜಾಗೆ ಮಂಜೂರು ಮಾಡಬೇಕು’ ಎಂದು ಅವರು ಹೇಳಿದರು.
‘ಜಿಲ್ಲೆಯಲ್ಲಿ ಬೈಲಹೊಂಗಲ, ಬೆಳಗಾವಿ ನಗರ ಮತ್ತು ಖಾನಾಪುರ ತಾಲ್ಲೂಕಿನಲ್ಲಿ ಡೆಂಗಿ ಪ್ರಕರಣಗಳು ಹೆಚ್ಚು ಕಂಡುಬಂದಿದ್ದು, ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸುವಂತೆ’ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿದರು. ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಶುಭಂ ಶುಕ್ಲಾ, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಸವರಾಜ್ ಹೆಗ್ಗನಾಯಿಕ, ಉಪ ವಿಭಾಗಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.
*
ಬರ ನಿರ್ವಹಣೆಗೆ ₹22.50 ಕೋಟಿ
‘ಬರ ನಿರ್ವಹಣೆಗೆ ರಾಜ್ಯ ಸರ್ಕಾರ ₹22.50 ಕೋಟಿ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಯಲು ಅವಕಾಶವಿಲ್ಲ’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
‘ಜಿಲ್ಲೆಗೆ 17 ಸಾವಿರ ಮೇವಿನ ಕಿಟ್‌ಗಳ ಗುರಿ ನೀಡಲಾಗಿದೆ. ಸದ್ಯಕ್ಕೆ 4,000 ಕಿಟ್‌ಗಳು ಬಂದಿವೆ. ಜಾನುವಾರುಗಳನ್ನು ಹೊಂದಿರುವ ಕೃಷಿಕರಿಗೆ ಮಾತ್ರ ಮೇವಿನ ಕಿಟ್ ವಿತರಿಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.