ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿ ಒನ್ ಫ್ಯಾಮಿಲಿ, ಒನ್‌ ನೇಷನ್: ಜೋಶಿ ಟೀಕೆ

Last Updated 30 ಮಾರ್ಚ್ 2021, 11:20 IST
ಅಕ್ಷರ ಗಾತ್ರ

ಬೆಳಗಾವಿ: ‘ಶಾಸಕ ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ. ಪ್ರಕರಣದಲ್ಲಿ ಎಸ್‌ಐಟಿ ಚೆನ್ನಾಗಿ ಕೆಲಸ ಮಾಡುತ್ತಿದೆ. ಶೀಘ್ರವೇ ತಾರ್ಕಿಕ ಅಂತ್ಯಕ್ಕೆ ಬರುವ ಸಾಧ್ಯತೆ ಇದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಇಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರಕ್ಕೆ ಯಾರು ಬರಬೇಕು ಅಥವಾ ಬರಬಾರದು ಎನ್ನುವುದನ್ನು ಪಕ್ಷ ನಿರ್ಧರಿಸುತ್ತದೆ. ಆದರೆ, ನಮ್ಮೆಲ್ಲ ಶಾಸಕರೂ ಭಾಗವಹಿಸಲಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಪ್ರಲ್ಹಾದ ಜೋಶಿ ಕೇಂದ್ರದಲ್ಲಿ ಸೈಡ್ ಆಕ್ಟರ್‌’ ಎಂಬ ವಿಧಾನಸಭ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಬಿಜೆಯಲ್ಲಿ ಎಲ್ಲ ಆಯ್ಕೆ ಪ್ರಕ್ರಿಯೆಯೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುತ್ತದೆ. ಆದರೆ, ಕಾಂಗ್ರೆಸ್‌ನಲ್ಲಿ ಒನ್ ಫ್ಯಾಮಿಲಿ; ಒನ್‌ ನೇಷನ್ ಆಗಿದೆ. ರಾಹುಲ್‌ ಗಾಂಧಿ ಮುಂದೆ ಸಿದ್ದರಾಮಯ್ಯ ಅವರು ವಯಸ್ಸನ್ನೂ ಮರೆತು ಕೈಕಟ್ಟಿ ನಿಂತುಕೊಳ್ಳುತ್ತಾರೆ. ಅವರು, ವಿವೇಚನೆಯಿಂದ ಹೇಳಿಕೆ ನೀಡುವುದನ್ನು ಇನ್ನಾದರೂ ಕಲಿಯಲಿ’ ಎಂದರು.

***

‘ಸಿ.ಡಿ. ಪ್ರಕರಣ: ಹೆಚ್ಚು ಮಾತನಾಡುವುದಿಲ್ಲ’

ಬೆಳಗಾವಿ: ‘ಸಿ.ಡಿ. ಪ್ರಕರಣವನ್ನು ಎಸ್‌ಐಟಿ ತನಿಖೆಗೆ ನೀಡಲಾಗಿದೆ. ತನಿಖೆ ಹಂತದಲ್ಲಿರುವುದರಿಂದ ಹೆಚ್ಚಾಗಿ ಮಾತನಾಡುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ಯಾರು ಯಾರ ಗುಲಾಮರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಯಾರ ಕಾಲು ಹಿಡಿದುಕೊಂಡು ಮುಖ್ಯಮಂತ್ರಿಯಾದರು ಎನ್ನುವುದೂ ಗೊತ್ತಿದೆ. ಕಾಂಗ್ರೆಸ್‌ನಲ್ಲಿ ಘಟಾನುಘಟಿ ನಾಯಕರನ್ನು ಬದಿಗೆ ಸರಿಸಿ ಅವರು ಹೇಗೆ ನಾಯಕರಾದರು. ಅದಕ್ಕಾಗಿ ಯಾರ ಮನೆ ಕಾದರು ಎನ್ನುವುದು ಗೊತ್ತಿದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

‘ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ಗೆ ಈ ದೇಶದ ಪ್ರಜಾಪ್ರಭುತ್ವ ಹಾಗೂ ಕಾನೂನಿನ ಮೇಲೆ ನಂಬಿಕೆ ಇಲ್ಲ. ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ. ಅವರ ಬಗ್ಗೆ ಅವರಿಗೇ ನಂಬಿಕೆ ಇಲ್ಲ ಎನಿಸುತ್ತದೆ’ ಎಂದು ಟೀಕಿಸಿದರು.

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ,ಸಿ.ಡಿ. ಪ್ರಕರಣದಿಂದ ಬಿಜೆಪಿಗೆ ಮೈನಸ್ ಆಗುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT