ಚಿಕ್ಕೋಡಿ: ‘ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಳ್ಳುವ ಮುನ್ನ 11ನೇ ಸ್ಥಾನದಲ್ಲಿದ್ದ ಭಾರತ ಆರ್ಥಿಕ ಶಕ್ತಿ ಈಗ 5ನೇ ಸ್ಥಾನಕ್ಕೆ ಏರಿದೆ. ದೂರದೃಷ್ಟಿಯಿಂದ ಅಭಿವೃದ್ಧಿ ಮಾಡಿದ್ದೇ ಇದಕ್ಕೆ ಕಾರಣ’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದರು.
ಪಟ್ಟಣದಲ್ಲಿ ಬುಧವಾರ ಕೆಎಲ್ಇ ಸಂಸ್ಥೆಯ (ಸಿಬಿಎಸ್‍ಇ) ಶಾಲೆ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ‘ಅನ್ನ ಯೋಜನೆ, ಮುದ್ರಾ, ಉಜ್ವಲಾ, ಆವಾಸ್ ಯೋಜನೆ, ಡಿಜಿಟಲೀಕರಣ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಮುಂದಿನ ದಿನಗಳಲ್ಲಿ ನಂಬರ್ ಒನ್ ಆರ್ಥಿಕ ಶಕ್ತಿ ನಮ್ಮದಾಗಲಿದೆ’ ಎಂದರು.
‘ಕೆಎಲ್‌ಇ ಸಂಸ್ಥೆಯು ಶಿಕ್ಷಣ, ಆರೋಗ್ಯ, ಸಂಶೋಧನಾ ಕ್ಷೇತ್ರದಲ್ಲಿ ಅಗಾಧವಾಗಿ ಸಾಧನೆ ಮಾಡಿದೆ. ಪ್ರಭಾಕರ ಕೋರೆ ಹಾಗೂ ತಂಡದವರು ಚಿಕ್ಕೋಡಿಯನ್ನು ಬದಲಾಯಿಸಿದ್ದಾರೆ. ನಾನು 45 ವರ್ಷ ನಂತರ ಇಲ್ಲಿ ಬಂದಿದ್ದೇನೆ. ಆಗ ಏನೂ ಇರಲಿಲ್ಲ. ಈಗ ಎಲ್ಲವೂ ಸುಧಾರಣೆ ಆಗಿದೆ’ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಜಗತ್ತಿನಲ್ಲಿ ಇಷ್ಟು ದಿನಗಳ ಕಾಲ ಭಾರತದ ಧ್ವನಿ ಕ್ಷೀಣವಾಗಿತ್ತು. ವಿದೇಶಾಂಗ ನೀತಿಯಲ್ಲಿ ನರೇಂದ್ರ ಮೋದಿ ಅವರ ಸೂತ್ರಗಳನ್ನು ವಿದೇಶಾಂಗ ಸಚಿವ ಜೈಶಂಕರ ಅವುಗಳನ್ನು ಅನುಷ್ಠಾನ ಮಾಡಿದರು. ಪರಿಣಾಮ ಜಗತ್ತು ಇಂದು ನಮ್ಮನ್ನು ನೋಡುವ ದೃಷ್ಟಿಯೇ ಬದಲಾಗಿದೆ’ ಎಂದರು.
ಉಪ ವಿಭಾಗಾಧಿಕಾರಿ ಮಹಿಬೂಬಿ, ಪುರಸಭೆ ಸದಸ್ಯರಾದ ಜಗದೀಶ ಕವಟಗಿಮಠ, ಪ್ರವೀಣ ಕಾಂಬಳೆ, ಸಂಜಯ ಕವಟಗಿಮಠ, ವಿಶ್ವನಾಥ ಕಾಮಗೌಡ, ನಾಗರಾಜ ಮೇದಾರ, ವಿಜಯ ಭಾಸ್ಕರ, ತಾನಾಜಿ ಕದಂ, ಆದಂ ಗಣೇಶವಾಡಿ, ಸಿದ್ದಪ್ಪ ಡಂಗೇರ ಅವರು ಸಿವ ಜೈಶಂಕರ್ ಅವರನ್ನು ಸನ್ಮಾನಿಸಿದರು.
ಕೆಎಲ್‍ಇ ಸಂಸ್ಥೆಯ ನಿರ್ದೇಶಕರಾದ ಡಾ.ವಿ.ಎಸ್. ಸಾಧುನವರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ, ಸಂಸ್ಥೆ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ, ಬಿ.ಜಿ. ದೇಸಾಯಿ, ಚಿಕ್ಕೋಡಿ ಪುರಸಭೆ ಮಾಜಿ ಅಧ್ಯಕ್ಷ ಪ್ರವೀಣ ಕಾಂಬಳೆ ವೇದಿಕೆ ಮೇಲಿದ್ದರು. ಗಂಗಾ ಅರಬಾಂವಿ ನಿರೂಪಿಸಿದರು. ಕೆಎಲ್‍ಇ ಸಂಸ್ಥೆಯ ಸಿಬಿಎಸ್‍ಇ ಶಾಲೆಯ ಪ್ರಾಚಾರ್ಯ ಚೇತನ ಅಲವಾಡೆ ವಂದಿಸಿದರು.
‘ಒಲಿಂಪಿಕ್‌ನಲ್ಲಿ ಭಾಗಿಯಾಗುವ ಬಯಕೆ’
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಪ್ರಾಸ್ತಾವಿಕವಾಗಿ ಮಾತನಾಡಿ ‘ಕೆಎಲ್‍ಇ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಒಲಿಂಪಿಕ್‌ನಲ್ಲಿ ಭಾಗವಹಿಸಬೇಕು ಎಂಬುದು ನಮ್ಮ ಆಶಯ. ಆ ದೃಷ್ಟಿಯಲ್ಲಿ ಸಂಸ್ಥೆ ಹೆಜ್ಜೆ ಇಟ್ಟಿದೆ’ ಎಂದರು. ‘ಮಹಾ ದಾನಿಗಳಿಂದ ಬೆಳೆದು ನಿಂತಿರುವ ಕೆಎಲ್‌ಇ ಸಂಸ್ಥೆ ಇಂದು ಜಾಗತಿಕವಾಗಿ ವಿಸ್ತಿರಿಸಿಕೊಂಡಿದೆ. ಶಿಕ್ಷಣ ಆರೋಗ್ಯ ಸಂಶೋಧನೆಯ ಮೂಲಕ ಜಾಗತಿಕವಾಗಿ ವಿಸ್ತರಿಸಿದೆ. ಆಲೋಪತಿ– ಆಯುರ್ವೇದ– ಹೋಮಿಯೋಪಥಿ ಮೂರು ಚಿಕಿತ್ಸೆಗಳ ಮೂಲಕ 4500 ಹಾಸಿಗೆಗಳ ಬೃಹತ್ ಆರೋಗ್ಯ ಜಾಲವನ್ನು ಹೊಂದಿದೆ. ಬೆಳಗಾವಿಯಲ್ಲಿ 300 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ ಸಿದ್ದಗೊಂಡಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.