ಮಾರ್ಗಸೂಚಿ ದರ ಹೆಚ್ಚಳ; ಆಸ್ತಿ ಖರೀದಿದಾರರಿಗೆ ಹೊರೆ

7

ಮಾರ್ಗಸೂಚಿ ದರ ಹೆಚ್ಚಳ; ಆಸ್ತಿ ಖರೀದಿದಾರರಿಗೆ ಹೊರೆ

Published:
Updated:

ಬೆಳಗಾವಿ: ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರವು ಇದೇ ತಿಂಗಳ 1ರಿಂದ ಜಾರಿಯಾಗಿದ್ದು, ನಗರದ ವಿವಿಧ ಪ್ರದೇಶಗಳಲ್ಲಿ ಶೇ 10ರಿಂದ ಶೇ 100ರಷ್ಟು ಹೆಚ್ಚಳವಾಗಿದೆ. ಹೊಸದಾಗಿ ನಿವೇಶನ, ಫ್ಲ್ಯಾಟ್‌, ಕೃಷಿ ಭೂಮಿ ಖರೀದಿ ಮಾಡುವವರಿಗೆ ಹೊರೆಯಾಗಿ ಪರಿಣಮಿಸಿದೆ.

ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಯೋಜನೆಯಡಿ ಆಯ್ಕೆಯಾದ ನಂತರ ನಗರದ ಸೌಂದರ್ಯಕ್ಕಾಗಿ ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಹೊಸ ಹೊಸ ಬಡಾವಣೆಗಳಲ್ಲಿ ಉದ್ಯಾನವನ, ರಸ್ತೆ, ಭೂಮಿಯೊಳಗೆ ವಿದ್ಯುತ್‌ ಕೇಬಲ್‌ ಅಳವಡಿಕೆ, ಅತ್ಯಾಧುನಿಕ ಬಸ್‌ ನಿಲ್ದಾಣಗಳು ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಇದರಿಂದಾಗಿ ನಗರದಲ್ಲಿ ನಿವೇಶನ, ಫ್ಲ್ಯಾಟ್‌ ಖರೀದಿಸಲು ಹಲವರು ಮುಂದಾಗಿದ್ದಾರೆ.

ರಾಜ್ಯ ಸರ್ಕಾರವು ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಹೆಚ್ಚಳ ಮಾಡಿರುವುದು ಇವರಿಗೆ ನುಂಗಲಾರದ ಬಿಸಿತುಪ್ಪವಾಗಿದೆ.

ಶೇ 100ಕ್ಕಿಂತಲೂ ಹೆಚ್ಚಳ: ನಗರದ ಕೆಲವು ಪ್ರದೇಶಗಳಲ್ಲಿ ಸ್ಥಿರಾಸ್ತಿಯ ಮಾರ್ಗಸೂಚಿ ದರವನ್ನು ಶೇ 100ಕ್ಕಿಂತಲೂ ಹೆಚ್ಚು ಹೆಚ್ಚಿಸಲಾಗಿದೆ. ಮಂಡೋಳಿ ರಸ್ತೆಯಲ್ಲಿ ಪ್ರತಿ ಚದರ ಮೀಟರ್‌ಗೆ ಕಳೆದ ವರ್ಷ ₹ 8,600 ಇತ್ತು, ಈಗ ₹ 17,600ಕ್ಕೆ ತಲುಪಿದೆ. ಸರಾಸರಿಯಾಗಿ ಶೇ 10ರಿಂದ ಶೇ 30ರವರೆಗೆ ಎಲ್ಲ ಪ್ರದೇಶಗಳಲ್ಲಿ ಏರಿಕೆಯಾಗಿದೆ.

ಫ್ಲ್ಯಾಟ್‌ಗಳ ದರವು ಏರಿಕೆ: ಆಯಾ ಪ್ರದೇಶದ ಮಾರ್ಗಸೂಚಿ ದರ ಹೆಚ್ಚಳವಾಗಿದ್ದರಿಂದ ಫ್ಲ್ಯಾಟ್‌ಗಳ ದರವೂ ಹೆಚ್ಚಳವಾಗಲಿದೆ. ವಿವಿಧ ಮಾನದಂಡಗಳ ಆಧಾರದ ಮೇಲೆ ಶೇ 20ರಿಂದ 30ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ಕೃಷಿಭೂಮಿ ದರವೂ ಏರಿಕೆ: ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಕೃಷಿ ಭೂಮಿಯ ದರದಲ್ಲಿಯೂ ಪರಿಷ್ಕರಣೆಯಾಗಿದೆ. ಅತಿ ಹೆಚ್ಚು ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಎಕರೆಗೆ ₹ 29.52 ಲಕ್ಷ ಇದ್ದ ದರವು ₹ 39 ಲಕ್ಷಕ್ಕೆ ಏರಿಕೆಯಾಗಿದೆ.

ಲೆಕ್ಕಾಚಾರ ಹೇಗೆ: ನೋಂದಣಿ ಸಂದರ್ಭದಲ್ಲಿ ಆಸ್ತಿಯನ್ನು ಚದರ ಮೀಟರ್‌ಗಳಲ್ಲಿ ಲೆಕ್ಕ ಹಾಕಲಾಗುತ್ತದೆ. 111 ಚ.ಮೀ ಅಂದರೆ 30x40 ನಿವೇಶನಕ್ಕೆ ಸಮವಾಗಿರುತ್ತದೆ. 

ಸರ್ಕಾರಕ್ಕೆ ಹರಿದು ಬರಲಿದೆ ತೆರಿಗೆ: ಮುದ್ರಾಂಕ ಶುಲ್ಕ ಶೇ 5.6 ಹಾಗೂ ನೋಂದಣಿ ಶುಲ್ಕ ಶೇ 1ರ ದರದಲ್ಲಿ ಯಾವುದೇ ಬದಲಾವಣೆಯಿಲ್ಲ. ಇಷ್ಟು ಮೊತ್ತದ ತೆರಿಗೆ ಸರ್ಕಾರಕ್ಕೆ ದೊರೆಯಲಿದೆ. ಮಾರ್ಗಸೂಚಿ ದರ ಹೆಚ್ಚಿಸಿದ್ದರ ಪರಿಣಾಮವಾಗಿ ಸರ್ಕಾರಕ್ಕೆ ಹೆಚ್ಚಿನ ಪ್ರಮಾಣದ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಹರಿದುಬರಲಿದೆ. ಜಿಲ್ಲೆಯಲ್ಲಿ 14 ಉಪನೋಂದಣಿ ಕಚೇರಿಗಳಿವೆ. ಸರಾಸರಿ ಪ್ರತಿವರ್ಷ ₹ 150 ಕೋಟಿಗಿಂತಲೂ ಹೆಚ್ಚು ಶುಲ್ಕ ಸಂಗ್ರಹವಾಗುತ್ತದೆ. ದರ ಪರಿಷ್ಕರಣೆಯಾಗಿರುವುದರಿಂದ ಈ ಮೊತ್ತ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಾಗಬಹುದು ಎಂದು ಜಿಲ್ಲಾ ಉಪನೋಂದಣಾಧಿಕಾರಿ ವಿಷ್ಣುಶರ್ಮ ಹೇಳಿದರು.

ಹೊರೆಯಾಗಿದೆ: ‘ಕಳೆದ ತಿಂಗಳು ಮಾಳಮಾರುತಿ ಪ್ರದೇಶದಲ್ಲಿ ಒಂದು ನಿವೇಶನ ನೋಡಿದ್ದೇವು. ಹಣ ಹೊಂದಿಸಿ, ಈಗ ನೋಂದಣಿ ಮಾಡಿಕೊಳ್ಳಲು ಬಂದಿದ್ದೇವೆ. ಮಾರ್ಗಸೂಚಿ ದರ ಹೆಚ್ಚಾಗಿದ್ದರಿಂದ ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆಯ ಮೊತ್ತ ಹೆಚ್ಚಳವಾಗಿದೆ. ನಮಗಿದು ಹೊರೆಯಾಗಿದೆ. ಆದರೆ, ಏನ್‌ ಮಾಡಲಿಕ್ಕಾಗುತ್ತದೆ. ಸೈಟ್‌ ತೆಗೆದುಕೊಳ್ಳಬೇಕೆಂದರೆ ತೆರಿಗೆ ಕಟ್ಟಲೇಬೇಕಾಗಿದೆ’ ಎಂದು ಪರಶುರಾಮ ಜಾಧವ ಹೇಳಿದರು.

ಸ್ಥಿರಾಸ್ತಿ ದರ ವಿವರ
ಪ್ರದೇಶ; ಹಳೆಯ ದರ; ಹೊಸ ದರ (ಚದರ ಮೀಟರ್‌ಗೆ, ರೂಪಾಯಿಗಳಲ್ಲಿ)

ಅನಗೋಳ; 17,200; 19,800

ಕ್ಲಬ್‌ ರೋಡ್‌; 48,800; 56,100

ಜಿಲ್ಲಾಸ್ಪತ್ರೆ ಪ್ರದೇಶ; 36,200; 41,600

ಮಹಾಂತೇಶ ನಗರ; 13,100; 15,100

ಶಿವಬಸವ ನಗರ; 17,600; 21,100

ಸದಾಶಿವ ನಗರ; 17,000; 19,000

ಸಂಗಮೇಶ್ವರ ನಗರ; 14,000; 20,700

ಶಾಹುನಗರ; 13,100; 16,100

ಮಾಳಮಾರುತಿ; 11,900; 13,700

ರಾಮತೀರ್ಥನಗರ; 12,000; 13,800

ಕಣಬರ್ಗಿ; 8,000; 9,200

ವಡಗಾಂವ; 12,200; 15,000

ಶಹಾಪುರ; 14,800; 17,500

ಟಿಳಕವಾಡಿ; 32,300; 37,100

ಕೃಷಿ ಭೂಮಿ ದರ ವಿವರ
ಪ್ರದೇಶ; ಹಳೆಯ ದರ; ಹೊಸ ದರ (ಪ್ರತಿ ಎಕರೆಗೆ, ಲಕ್ಷಗಳಲ್ಲಿ)

ಅಲಾರವಾಡ; 12.04 ; 13.30

ಬಸವನ ಕುಡಚಿ; 20.66; 25.00

ಬೆನಕನಹಳ್ಳಿ; 14.55; 16.00

ಹಾಲಗಾ; 27.00; 30.66

ಕಾಕತಿ; 21.80; 24.00

ಯಮನಾಪುರ; 10.08; 13.86

ಕಣಬರ್ಗಿ; 19.55; 24.00

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !