ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಯಾದೆಗೇಡು ಹತ್ಯೆ ಶಂಕೆ

Last Updated 1 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮೈಸೂರು: ಎಚ್‌.ಡಿ.ಕೋಟೆ ತಾಲ್ಲೂಕಿನ ಗೊಲ್ಲನಬೀಡು ಗ್ರಾಮದ ಯುವತಿ ಸುಷ್ಮಾ (22) ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಮರ್ಯಾದೆಗೇಡು ಹತ್ಯೆ ಶಂಕೆ ವ್ಯಕ್ತವಾಗಿದೆ.

ದಲಿತ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೇ ಮಗಳಿಗೆ ವಿಷವುಣಿಸಿ ಕೊಲೆಗೈದು ಶವವನ್ನು ಸುಟ್ಟುಹಾಕಿದ ಆರೋಪ ಕೇಳಿಬಂದಿದೆ. ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ತಂದೆ ಕುಮಾರ್‌ ಎಂಬುವರನ್ನು ಗುರುವಾರ ಬಂಧಿಸಿದ್ದಾರೆ.

ಒಕ್ಕಲಿಗ ಸಮುದಾಯಕ್ಕೆ ಸೇರಿದ ಯುವತಿ ಆಲನಹಳ್ಳಿ ಗ್ರಾಮದ ದಲಿತ ಯುವಕ ಉಮೇಶ್‌ ಎಂಬಾತನನ್ನು ಪ್ರೀತಿಸುತ್ತಿದ್ದಳು. ಎರಡು ವರ್ಷಗಳ ಹಿಂದೆ ಮನೆ ತೊರೆದು ಪ್ರಿಯಕರನ ಜತೆ ಹೋಗಿದ್ದಳು.

ಗ್ರಾಮದ ಕೆಲ ಮುಖಂಡರು ಸೇರಿಕೊಂಡು ನ್ಯಾಯ ಪಂಚಾಯಿತಿ ಮಾಡಿ ಯುವತಿಯನ್ನು ಕರೆತಂದಿದ್ದರು. ಇಬ್ಬರಿಗೂ ಬುದ್ಧಿವಾದ ಹೇಳಿ ಪರಸ್ಪರ ದೂರಮಾಡಿದ್ದರು. ಇತ್ತೀಚೆಗೆ ಸ್ವಜಾತಿಯ ಹುಡುಗನನ್ನು ಮದುವೆಯಾಗುವಂತೆ ಹೆತ್ತವರು ಹೇಳಿದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರೀತಿಸಿದ ಯುವಕನನ್ನೇ ವಿವಾಹವಾಗುವುದಾಗಿ ಸುಷ್ಮಾ ಹಟ ಹಿಡಿದಿದ್ದಳು ಎನ್ನಲಾಗಿದೆ.

ಇದರಿಂದ ಕೋಪಗೊಂಡಿದ್ದ ಪೋಷಕರು ಫೆಬ್ರುವರಿ 22ರಂದು ವಿಷವುಣಿಸಿ ಕೊಲೆಗೈದು ಶವವನ್ನು ತಮ್ಮದೇ ಜಮೀನಿನಲ್ಲಿ ಸುಟ್ಟುಹಾಕಿದ್ದಾರೆ. ಯಾವುದೇ ಅನುಮಾನ ಬಾರದಿರಲಿ ಎಂದು ಜಮೀನಿನಲ್ಲಿ ಉಳುಮೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಯುವತಿ ಇದ್ದಕ್ಕಿದ್ದಂತೆ ನಾಪತ್ತೆಯಾದದ್ದು ಗ್ರಾಮದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಯುವಕನ ಸಂಬಂಧಿಕರೊಬ್ಬರು ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿ ಪಟ್ಟಣದ ಪೊಲೀಸರಿಗೆ ವಿಷಯ ತಿಳಿಸಿದ್ದರಿಂದ ಬಹಿರಂಗವಾಗಿದೆ. ಶವ ಸುಟ್ಟುಹಾಕಿರುವ ಸ್ಥಳಕ್ಕೆ ಯುವತಿಯ ತಂದೆ ಕುಮಾರ್‌ನನ್ನು ಕರೆತಂದ ಪೊಲೀಸರು ಮಹಜರು ನಡೆಸಿದರು.

‘ತಂದೆಯೇ ಮಗಳನ್ನು ಕೊಂದು ಶವ ಸುಟ್ಟುಹಾಕಿದ್ದಾರೆ ಎಂಬ ಮಾಹಿತಿ ಕಾನ್‌ಸ್ಟೆಬಲ್‌ ಒಬ್ಬರಿಗೆ ದೊರೆತಿದೆ. ಆ ವಿಷಯವನ್ನು ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕೂಡಲೇ ಪರಿಶೀಲನೆ ನಡೆಸಿ ಸ್ವಯಂಪ್ರೇರಿತ ದೂರು ದಾಖಲಿಸಿದ್ದು, ಕೊಲೆ ಮತ್ತು ಸಾಕ್ಷ್ಯನಾಶದ ಆರೋಪದಡಿ ತನಿಖೆ ನಡೆಸಲಾಗುತ್ತಿದೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರುದ್ರಮುನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT