ಭಾನುವಾರ, ಮೇ 16, 2021
22 °C

ಕೈಗಾರಿಕಾ ಪ್ರದೇಶ ನಿರ್ವಹಣೆ ಸಂಘಗಳಿಗೆ: ಗುಂಜನ್‌ ಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ‘ಸ್ಥಳೀಯ ಸಂಸ್ಥೆಗಳಲ್ಲಿ ನಿರ್ಣಯ ಕೈಗೊಂಡು ಒಪ್ಪಿಗೆ ನೀಡಿದರೆ, ಆಯಾ ಕೈಗಾರಿಕಾ ಪ್ರದೇಶಗಳ ನಿರ್ವಹಣೆಯನ್ನು ಕೈಗಾರಿಕಾ ಸಂಘಗಳಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ರಾಜ್ಯ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ನಿರ್ದೇಶನಾಲಯದ ಆಯುಕ್ತೆ ಗುಜನ್‌ ಕೃಷ್ಣ ತಿಳಿಸಿದರು.

ನಿರ್ದೇಶನಾಲಯ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘವು (ಕಾಸಿಯಾ) ಇಲ್ಲಿ ಸೋಮವಾರ ಅಯೋಜಿಸಿದ್ದ ಕೈಗಾರಿಕಾ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಈಗಾಗಲೇ ಬೆಂಗಳೂರಿನ ಪೀಣ್ಯ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಈ ಪ್ರಕ್ರಿಯೆಗಳು ನಡೆದಿವೆ. ಇದೇ ರೀತಿಯ ಇಲ್ಲಿನ ಉದ್ಯಮಬಾಗ್‌ನಲ್ಲೂ ಟೌನ್‌ಶಿಪ್‌ ಮಾಡಲು ಅವಕಾಶವಿದೆ. ಸಂಘದ ಪದಾಧಿಕಾರಿಗಳು ಪಾಲಿಕೆಯಲ್ಲಿ ನಿರ್ಣಯ ಮಾಡಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಹೇಳಿದರು.

ಜಾಗವಿಲ್ಲದೇ ನೀಡಬಾರದು

‘ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಜಾಗ ಲಭ್ಯವಿದ್ದಾಗ ಅದನ್ನು ಅಭಿವೃದ್ಧಿಪಡಿಸಿ ದರ ನಿಗದಿಪಡಿಸಬೇಕು. ನಂತರ ಹಂಚಿಕೆ ಮಾಡಬೇಕು. ಆಗ, ಹೆಚ್ಚುವರಿ ಹಣ ಕಟ್ಟಿಸಿಕೊಳ್ಳುವುದನ್ನು ತಪ್ಪಿಸಬಹುದು. ಈ ಕಾರ್ಯಕ್ರಮ ವ್ಯವಸ್ಥಿತಗೊಳಿಸುವಂತೆ ಕೋರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗುವುದು. ಕೆಐಎಡಿಬಿ ಹಾಗೂ ಕೆಎಸ್‌ಐಡಿಸಿ ಸಮರ್ಪಕವಾಗಿ ಸ್ಪಂದಿಸಿದರೆ ಬಹಳಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ’ ಎಂದು ತಿಳಿಸಿದರು.

‘ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಬಿಲ್‌ ನೀಡುವಲ್ಲಿ ದೊಡ್ಡ ಕೈಗಾರಿಕೆಗಳವರು ವಿಳಂಬ ಮಾಡುವುದು ಸರಿಯಲ್ಲ. ಆ ರೀತಿ ಬಾಕಿ ಉಳಿಸಿಕೊಂಡವರ ಹೆಸರುಗಳನ್ನು ನಿರ್ದೇಶನಾಲಯದ ಜಾಲತಾಣದಲ್ಲಿ ಪ್ರಕಟಿಸಲಾಗುವುದು. ಈ ಮೂಲಕ ಅವರಿಗೆ ಮುಜುಗರ ಉಂಟು ಮಾಡಲಾಗುವುದು’ ಎಂದು ಭರವಸೆ ನೀಡಿದರು.

ನಗರದಲ್ಲಿ ಕೈಗಾರಿಕಾ ತ್ಯಾಜ್ಯ ವಿಲೇವಾರಿಗೆ ‘ಡಂಪಿಂಗ್ ಯಾರ್ಡ್‌’ ಅಗತ್ಯವಿದೆ ಎಂದು ಕಾಸಿಯಾ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್‌ ಶರ್ಮಾ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ದೊಡ್ಡಬಸವರಾಜು, ‘10 ಎಕರೆ ಜಾಗ ನೀಡುವಂತೆ ಜಿಲ್ಲಾಡಳಿತವನ್ನು ಕೋರಲಾಗಿದೆ’ ಎಂದು ಮಾಹಿತಿ ನೀಡಿದರು.

ಮೂಲಸೌಲಭ್ಯ ಕಲ್ಪಿಸಲು ಕ್ರಮ

‘ಎಂಎಸ್‌ಎಂಇ ಅಭಿವೃದ್ಧಿಗೆ ಬೇರೆ ರಾಜ್ಯಗಳಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂಬ ವರದಿ ಪಡೆಯಲಾಗುವುದು. ಕೈಗಾರಿಕಾ ಪ್ರದೇಶಗಳಲ್ಲಿ ಕನಿಷ್ಠ ಮೂಲಸೌಲಭ್ಯಗಳು ಲಭ್ಯವಿರುವಂತೆ ನೋಡಿಕೊಳ್ಳಲಾಗುವುದು. 2019ರ ಕೈಗಾರಿಕಾ ನೀತಿ ಜಾರಿಗೊಳಿಸಲು ಸಿದ್ಧತೆ ನಡೆದಿದೆ. ಉದ್ಯಮಿಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವುದಕ್ಕೂ ಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಕಾಸಿಯಾ ಅಧ್ಯಕ್ಷ ಬಸವರಾಜ ಜವಳಿ ಮಾತನಾಡಿ, ‘ಬೆಂಗಳೂರು, ಪುಣೆ ಹೊರತುಪಡಿಸಿದರೆ ಬೆಳಗಾವಿ ಈ ಭಾಗದ ಪ್ರಮುಖ ಕೈಗಾರಿಕಾ ಕೇಂದ್ರವಾಗಿದೆ. ಕೇಂದ್ರದ ‘ಉಡಾನ್‌’ ಯೋಜನೆಯಡಿ ಬೆಳಗಾವಿ ಸೇರಿಸಬೇಕು. ವಿಮಾನನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಐಟಿ ಪಾರ್ಕ್‌ ಸ್ಥಾಪಿಸಬೇಕು. 1000ಕ್ಕೂ ಹೆಚ್ಚು ಫೌಂಡ್ರಿಗಳು ಇಲ್ಲಿದ್ದು, 500 ಎಕರೆಯಲ್ಲಿ ‘ಫೌಂಡ್ರಿ ಪಾರ್ಕ್‌’ ಅಭಿವೃದ್ಧಿಪಡಿಸಬೇಕು’ ಎಂದು ಒತ್ತಾಯಿಸಿದರು.

ಮೈಸೂರು ಜಿಲ್ಲಾ ಘಟಕದ ಕಾರ್ಯದರ್ಶಿ ಸುರೇಶ್‌ಕುಮಾರ್‌ ಜೈನ್‌, ‘ಕೈಗಾರಿಕೆ, ಸಿಎ, ವಸತಿ ನಿವೇಶನ ಮಂಜೂರಾತಿಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲಾ ಕೈಗಾರಿಕಾ ಕೇಂದ್ರಗಳಿಗೂ ಏಕರೂಪ ಮಾರ್ಗಸೂಚಿ ರಚಿಸಬೇಕು. ರೋಗಗ್ರಸ್ತ ಕೈಗಾರಿಕೆಗಳ ಪುನಶ್ಚೇತನ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದರು.

ಉಪಾಧ್ಯಕ್ಷ ಆರ್. ರಾಜು, ಪ್ರಧಾನ ಕಾರ್ಯದರ್ಶಿ ರವಿಕಿರಣ್ ಕುಲಕರ್ಣಿ, ನಿಕಟ‍ಪೂರ್ವ ಅಧ್ಯಕ್ಷ ಹನುಮಂತೇಗೌಡ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು