ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕದಿಂದಲೂ ಗ್ರಾಹಕರಿಗೆ ಅರಿವು–ನೆರವು

ವ್ಯಾಜ್ಯಗಳನ್ನು ದಾಖಲಿಸಲು ಮಾರ್ಗದರ್ಶನ
Last Updated 14 ಮಾರ್ಚ್ 2019, 13:12 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕಣಬರಗಿ ರಸ್ತೆಯ ಭಾರತ ಕಾಲೊನಿಯಲ್ಲಿರುವ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರವು, ಗ್ರಾಹಕರು ತಮಗೆ ಆಗುವ ಅನ್ಯಾಯಗಳನ್ನು ಹೇಳಿಕೊಂಡು, ನ್ಯಾಯ ಪಡೆದುಕೊಳ್ಳುವುದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಮಹಿಳಾ ಕಲ್ಯಾಣ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಈ ಕೇಂದ್ರವು ಗ್ರಾಹಕರ ಹಕ್ಕುಗಳ ಕುರಿತು ಮಾಹಿತಿ ನೀಡುವುದು ಮಾತ್ರವಲ್ಲದೇ, ವ್ಯಾಜ್ಯಗಳನ್ನು ದಾಖಲಿಸುವುದಕ್ಕೆ ಹಾಗೂ ನಿರ್ವಹಿಸುವುದಕ್ಕೂ ಸಹಕಾರ ನೀಡುತ್ತಿದೆ. ಹಲವು ಕಾರ್ಯಕ್ರಮಗಳ ಮೂಲಕ ಗ್ರಾಹಕರಿಗೆ ಹಕ್ಕುಗಳ ಕುರಿತು ಮನವರಿಕೆ ಮಾಡಿಕೊಡುವ ನಿರಂತರ ಪ್ರಯತ್ನವನ್ನು ನಡೆಸುತ್ತಿದೆ.

10 ವರ್ಷಗಳಿಂದ ಇರುವ ಕೇಂದ್ರವು, 2015ರ ಜೂನ್‌ನಿಂದ ಅಧಿಕೃತವಾಗಿ ಅಂದರೆ ಜಿಲ್ಲಾಡಳಿತದ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದೆ. ಒಬ್ಬರು ಸಂಯೋಜಕರನ್ನು ಹೊಂದಿದೆ.

ಕ್ರಿಯಾಶೀಲ:

‘ಗ್ರಾಹಕರಿಗೆ ಅವರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು ಮಹತ್ವದ ವಿಷಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರವು ಕ್ರಿಯಾಶೀಲವಾಗಿದೆ. ಅವರಿಗೆ ಮಾಹಿತಿ ನೀಡುವುದು, ವ್ಯಾಜ್ಯಗಳನ್ನು ದಾಖಲಿಸಲು ನೆರವಾಗುವುದನ್ನು ನಿರ್ವಹಿಸುತ್ತಿದ್ದೇವೆ. ಲೀಗಲ್‌ ನೋಟಿಸ್ ಸಿದ್ಧಪಡಿಸಿಕೊಡುತ್ತಿದ್ದೇವೆ. ಗ್ರಾಹಕರ ವ್ಯಾಜ್ಯಗಳ ವೇದಿಕೆಯಲ್ಲಿ ದೂರು ದಾಖಲಿಸುವುದು ಹೇಗೆ ಎಂಬಿತ್ಯಾದಿ ಮಾರ್ಗದರ್ಶನವನ್ನೂ ಮಾಡುತ್ತಿದ್ದೇವೆ’ ಎಂದು ಕೇಂದ್ರದ ಸಂಯೋಜಕ ಎಂ.ಎಂ. ಗಡಗಲಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘74 ಸರ್ಕಾರಿ ಪ್ರೌಢಶಾಲೆಗಳಲ್ಲಿ ಗ್ರಾಹಕರ ಕ್ಲಬ್‌ಗಳನ್ನು ರಚಿಸಲಾಗಿದೆ. ಮಕ್ಕಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ತಿಂಗಳಿಂದೀಚೆಗೆ 20 ಸರ್ಕಾರಿ ಪ್ರೌಢಶಾಲೆಗಳಲ್ಲಿ ಪ್ರಬಂಧ ಸ್ಪರ್ಧೆಗಳನ್ನು ನಡೆಸಲಾಗಿದೆ. ವಿಜೇತ ಮಕ್ಕಳಿಗೆ ಪ್ರಮಾಣಪತ್ರ, ನೆನಪಿನ ಕಾಣಿಕೆಯನ್ನು ನೀಡಲಾಗಿದೆ. ಬೆಳೆಯುವ ಹಂತದಲ್ಲಿಯೇ ಮಕ್ಕಳಿಗೆ ಹಕ್ಕುಗಳ ಬಗ್ಗೆ ತಿಳಿಸಿಕೊಡುವುದು ಇದರ ಉದ್ದೇಶವಾಗಿದೆ’ ಎನ್ನುತ್ತಾರೆ ಅವರು.

40 ಪ್ರಕರಣ:

‘ಕೇಂದ್ರದ ಮೂಲಕ 40 ಪ್ರಕರಣಗಳನ್ನು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದಾಖಲಿಸಿದ್ದೇವೆ. ಇದರಲ್ಲಿ ಪ್ರಮುಖವಾಗಿ ಚಲನಚಿತ್ರ ನಿರ್ಮಾ‍ಪಕ ಆನಂದ ಅ‍ಪ್ಪುಗೋಳ ಅಧ್ಯಕ್ಷರಾಗಿರುವ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಸೊಸೈಟಿ ವಿರುದ್ಧದ ಪ್ರಕರಣಗಳೇ ಜಾಸ್ತಿ ಇವೆ. ಅಲ್ಲಿ ಠೇವಣಿ ಇಟ್ಟಿದ್ದವರು, ತಮಗೆ ಠೇವಣಿ ವಾಪಸ್‌ ಕೊಡಿಸುವಂತೆ ಕೋರಿ ವ್ಯಾಜ್ಯ ದಾಖಲಿಸಿದ್ದಾರೆ. ಇದಲ್ಲದೇ, ಘಟಪ್ರಭಾ, ಹುಕ್ಕೇರಿ ಹಾಗೂ ಬೋರವಾಂವದ ಸೊಸೈಟಿಗಳಿಂದ ವಂಚನೆಯಾಗಿದೆ ಎಂದು ಕೆಲವರು ದೂರು ನೀಡಿದ್ದಾರೆ. ಟಿವಿ ದುರಸ್ತಿ, ದ್ವಿಚಕ್ರವಾಹನ ಟೈಯರ್‌ನಲ್ಲಿ ಲೋಪ ಮೊದಲಾದ ಪ್ರಕರಣಗಳ ಇತ್ಯರ್ಥಕ್ಕಾಗಿ ಗ್ರಾಹಕರು ನೆರವು ಕೋರಿ ಬರುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‌‘ಗ್ರಾಹಕರ ಹಕ್ಕುಗಳ ಕುರಿತು ಈ ಹಿಂದೆ ಶಾಲಾ ಪಠ್ಯದಲ್ಲಿ ವಿಷಯ ಇರಲಿಲ್ಲ. ಆದರೆ, ಈ ವರ್ಷದಿಂದ ಇದೇ ಮೊದಲ ಬಾರಿಗೆ ಪ್ರೌಢಶಾಲೆಯ ಸಮಾಜ ವಿಜ್ಞಾನ ವಿಷಯದಲ್ಲಿ ‘ಗ್ರಾಹಕ ಹಕ್ಕು ಶಿಕ್ಷಣ, ಸಂರಕ್ಷಣೆ’ ಬಗ್ಗೆ ಪಠ್ಯ ಪರಿಚಯಿಸಲಾಗಿದೆ. ಮಕ್ಕಳು ಮೂರು ವರ್ಷಗಳವರೆಗೆ ವಿಷಯ ಕಲಿಯುವುದರಿಂದ, ಅಂಕ ಗಳಿಕೆಗಾಗಿಯಾದರೂ ಓದುವುದರಿಂದ ಅವರಲ್ಲಿ ಅರಿವು ಮೂಡುತ್ತದೆ. ಗ್ರಾಹಕರ ಹಕ್ಕುಗಳ ಸಂರಕ್ಷಣೆ ವಿಷಯದಲ್ಲಿ ಇಂದೊಂದು ಮಹತ್ವದ ಬೆಳವಣಿಗೆಯಾಗಿದೆ’ ಎಂದು ತಿಳಿಸಿದರು.

ದೂರು ನೀಡಲು: 70199 70558.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT