ಗುರುವಾರ , ಮಾರ್ಚ್ 30, 2023
21 °C
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ‌. ಅತೀಕ್‌ ಸೂಚನೆ

ಗುಣಮಟ್ಟದ ಆಹಾರ, ಶುದ್ಧ ನೀರು ಒದಗಿಸಿ: ಎಲ್.ಕೆ‌. ಅತೀಕ್‌ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಎಲ್ಲ ಅಂಗನವಾಡಿ ಮತ್ತು ವಸತಿನಿಲಯಗಳಲ್ಲಿ ಗುಣಮಟ್ಟದ ಆಹಾರ ಒದಗಿಸಬೇಕು. ಶುದ್ಧ ಕುಡಿಯುವ ನೀರು ಪೂರೈಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ‌. ಅತೀಕ್‌ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಶಾಲೆಗಳು, ಅಂಗನವಾಡಿ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಸತಿನಿಲಯಗಳಲ್ಲಿ ಹಾಸಿಗೆ-ಹೊದಿಕೆ ಸರಿಯಾಗಿ ನೀಡಬೇಕು. ಶೌಚಾಲಯ ನಿರ್ವಹಿಸಬೇಕು. ಸೋಲಾರ್‌ ವ್ಯವಸ್ಥೆ ಕಲ್ಪಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಅಧಿಕಾರಿಗಳು ದಿಢೀರ್‌ ಭೇಟಿ ನೀಡಿ ಪರಿಶೀಲಿಸಬೇಕು. ಗ್ರಾಮ, ಪಟ್ಟಣಗಳಿಂದ ದೂರದಲ್ಲಿ ಹೊಸ ವಿದ್ಯಾರ್ಥಿನಿಲಯಗಳನ್ನು ನಿರ್ಮಿಸಬಾರದು. ಊರಿಗೆ ಸಮೀಪದಲ್ಲೇ ಜಾಗ ನೀಡಬೇಕು. ಪ್ರಸಕ್ತ ಸಾಲಿನ ಶಿಷ್ಯವೇತನವನ್ನು ಸಕಾಲದಲ್ಲಿ ನೀಡಬೇಕು’ ಎಂದು ತಿಳಿಸಿದರು.

ಖಾತ್ರಿಪಡಿಸಿಕೊಳ್ಳಬೇಕು:

‘ಅಂಗನವಾಡಿ ಕೇಂದ್ರಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಮಾಡಬೇಕು. ಖಾಲಿ ಇರುವ ಕಾರ್ಯಕರ್ತೆಯರ ಹುದ್ದೆಗಳನ್ನು ಭರ್ತಿ ಮಾಡಬೇಕು. ಮಕ್ಕಳಿಗೆ ನೀಡಲಾಗುವ ಆಹಾರದ ಗುಣಮಟ್ಟದ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಪ್ರತಿ ಗ್ರಾಮಗಳಲ್ಲಿ ಕನಿಷ್ಠ ಒಂದು ಕೆರೆ ಇರಬೇಕು. ಇರದಿದ್ದರೆ ಹೊಸದಾಗಿ ನಿರ್ಮಿಸಬೇಕು. ಮಳೆಗಾಲದ ವೇಳೆಗೆ ನಿಗದಿತ ಗುರಿ ಪ್ರಕಾರ ಸಸಿಗಳನ್ನು ನೆಡಲು ಸಿದ್ಧತೆ ಮಾಡಿಕೊಳ್ಳಬೇಕು’ ಎಂದರು.

‘ಕೋವಿಡ್ ಲಸಿಕಾಕರಣದಲ್ಲಿ ನಿಗದಿತ ಗುರಿಗಿಂತ ಕಡಿಮೆ ಸಾಧನೆಯಾಗಿರುವ 4 ತಾಲ್ಲೂಕಿನಲ್ಲಿ ಲಸಿಕಾಕರಣ ಚುರುಕುಗೊಳಿಸಬೇಕು’ ಎಂದು ತಿಳಿಸಿದರು.

ಗ್ರಾಮಸಭೆ ನಡೆಸಬೇಕು:

‘ಜಲಜೀವನ ಮಿಷನ್‌ನಲ್ಲಿ ಹೊಸ ಡಿಪಿಆರ್‌ಗೆ ಮುಂಚೆ ಕಡ್ಡಾಯವಾಗಿ ಗ್ರಾಮಸಭೆ ನಡೆಸಬೇಕು. ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದರು.

‘ಸಾಕಷ್ಟು ಕೋವಿಡ್ ಲಸಿಕೆ ಲಭ್ಯ ಇರುವುದರಿಂದ ಲಸಿಕಾಕರಣ ಚುರುಕಿನಿಂದ ನಡೆಸಲಾಗುತ್ತಿದೆ. ಬಾಕಿ ಇರುವ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ  ಘಟಕಗಳನ್ನು ಸ್ಥಾಪಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

‘ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 16,272 ಮನೆಗಳಿಗೆ ಹಾನಿಯಾಗಿದೆ. ಪರಿಹಾರ ವಿತರಣೆ ಕಾರ್ಯ ಚಾಲ್ತಿಯಲ್ಲಿದೆ. 74 ಸಾವಿರ ರೈತರಿಗೆ ₹ 66 ಕೋಟಿ ಬೆಳೆ ಹಾನಿ ಪರಿಹಾರ ಜಮೆ ಮಾಡಲಾಗಿದೆ’ ಎಂದು ವಿವರಿಸಿದರು.

ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ಬಸವರಾಜ ವರವಟ್ಟಿ, ಜಿ.ಪಂ. ಸಿಇಒ ಎಚ್‌.ವಿ. ದರ್ಶನ್ ಮಾತನಾಡಿದರು.

ಉಪ ವಿಭಾಗಾಧಿಕಾರಿಗಳಾದ ರವೀಂದ್ರ ಕರಲಿಂಗಣ್ಣವರ, ಶಶಿಧರ್ ‌ಬಗಲಿ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ ಇದ್ದರು.

‘ನೋಂದಣಿಗೆ ಕ್ರಮ’

‘ರಸಗೊಬ್ಬರ ಕೊರತೆ ಇಲ್ಲ. ಮುಖ್ಯಮಂತ್ರಿ ರೈತ ವಿದ್ಯಾನಿಧಿ ಶಿಷ್ಯವೇತನ ಯೋಜನೆ ಜಾರಿಗೆ ತಂದಿದ್ದು, 2913 ಜನರು ನೋಂದಾಯಿಸಿದ್ದಾರೆ. ಒಟ್ಟು 5.72 ರೈತ ಕುಟುಂಬಗಳಿವೆ. ಅರ್ಹ ಮಕ್ಕಳನ್ನು ನ. 30ರೊಳಗೆ ನೋಂದಣಿ ಮಾಡಿಕೊಳ್ಳಲಾಗುವುದು. 1,15,661 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ಬಾರಿಯ ಬೆಳೆ ವಿಮೆ ಪರಿಹಾರ ಜಮೆಯಾಗಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.

‘16 ಸಾವಿರಕ್ಕೂ ಅಧಿಕ ರೈತರಿಗೆ ಕೋವಿಡ್ ಸಂದರ್ಭದಲ್ಲಿನ ಪರಿಹಾರ ಧನವನ್ನು ಖಾತೆಗೆ ಜಮಾ‌ ಮಾಡಲಾಗಿದೆ. ಇತ್ತೀಚಿನ ಅತಿವೃಷ್ಟಿ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ ₹ 5.59 ಕೋಟಿ ಮೌಲ್ಯದ ತೋಟಗಾರಿಕೆ ಬೆಳೆ ಹಾನಿಯಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುರಗೋಡ ವಿವರಿಸಿದರು.

‘ಪಠ್ಯಪುಸ್ತಕ ವಿತರಣೆ’

ಡಿಡಿಪಿಐ ಡಾ.ಎ.ಬಿ. ಪುಂಡಲೀಕ ಮಾತನಾಡಿ, ‘ಶೇ.96ರಷ್ಟು ಮಕ್ಕಳಿಗೆ ಪಠ್ಯಪುಸ್ತಕ ನೀಡಲಾಗಿದೆ. ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಸಮವಸ್ತ್ರ ಕೂಡ ಪೂರೈಕೆಯಾಗುತ್ತಿದೆ’ ಎಂದರು.

‘ಸಮಾಜ ಕಲ್ಯಾಣ ಇಲಾಖೆಯಲ್ಲಿ 94 ವಸತಿನಿಲಯಗಳಿವೆ. 87ಕ್ಕೆ ಸ್ವಂತ ಕಟ್ಟಡಗಳಿವೆ. ಮೂರು ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ಇಲಾಖೆಯ ಜಂಟಿ ನಿರ್ದೇಶಕಿ ಡಾ.ಉಮಾ ಸಾಲಿಗೌಡರ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು