ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ ಸಿಟಿ ಯೋಜನೆ: ನಿಗಾ, ನಿಯಂತ್ರಣಕ್ಕೊಂದು ಕೇಂದ್ರ

ಮುಖ್ಯಮಂತ್ರಿಯಿಂದ ಉದ್ಘಾಟನೆ ಇಂದು
Last Updated 28 ಜನವರಿ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ತ್ಯಾಜ್ಯ ವಿಲೇವಾರಿ, ಸಂಚಾರ ನಿರ್ವಹಣೆ, ಕುಡಿಯುವ ನೀರಿನ ಲಭ್ಯತೆಯಿಂದ ಹಿಡಿದು ಇ-ಆಡಳಿತದವರೆಗಿನ ಪ್ರತಿ ವ್ಯವಸ್ಥೆಯನ್ನು ಒಂದೇ ಕಡೆ ಕುಳಿತು ನಿರ್ವಹಿಸಲು ಸಾಧ್ಯವಾಗುವಂತಹ ಸೌಲಭ್ಯಗಳುಳ್ಳ ‘ಇಂಟಿಗ್ರೇಟೆಡ್ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್’ ಜ.29ರಂದು ಮಧ್ಯಾಹ್ನ 12.30ಕ್ಕೆ ಉದ್ಘಾಟನೆಗೊಳ್ಳಲಿದೆ.

ಸ್ಮಾರ್ಟ್ ಸಿಟಿ‌ ಯೋಜನೆಯಲ್ಲಿ ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಸೌಲಭ್ಯಗಳು, ಸಂಪರ್ಕ, ಸಂವಹನ ವ್ಯವಸ್ಥೆ ಹೊಂದಿರುವ ಕೇಂದ್ರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮರ್ಪಿಸಲಿದ್ದಾರೆ.

ಯೋಜನಾ ಮೊತ್ತ ₹ 76.80 ಕೋಟಿಗಳಾಗಿದ್ದು, ₹ 45.99 ಕೋಟಿಗೆ ಟೆಂಡರ್‌ ನೀಡಲಾಗಿತ್ತು. ಬೆಂಗಳೂರಿನ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ಕಂಪನಿಗೆ 2018ರ ಮಾರ್ಚ್‌ 16ರಂದು ಕಾರ್ಯಾದೇಶ ನೀಡಲಾಗಿತ್ತು. ಇಲ್ಲಿ ವಿವಿಧ ಇಲಾಖೆಗಳ ತಲಾ ಒಬ್ಬರು ಸಿಬ್ಬಂದಿ ಒಳಗೊಂಡ ಏಕಗವಾಕ್ಷಿ ಪದ್ಧತಿಯ ಸೇವೆ ದೊರೆಯಲಿದೆ. ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಸೇವೆ ಪಡೆಯಬಹುದು ಹಾಗೂ ದೂರುಗಳಿಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಬಹುದು ಎಂದು ಸ್ಮಾರ್ಟ್‌ ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ತಿಳಿಸಿದರು.

ಘನ ತ್ಯಾಜ್ಯ ವಿಲೇವಾರಿ:1.10 ಲಕ್ಷ ಮನೆಗಳಿಗೆ ಆರ್.ಎಫ್.ಐ.ಡಿ. ಟ್ಯಾಗ್ ಹಾಕಲಾಗಿದೆ. ಇದನ್ನು ಬಳಸಿಕೊಂಡು, ಸಮಯಕ್ಕೆ ಸರಿಯಾಗಿ ಕಸ ಸಂಗ್ರಹಣೆ, ವಿಲೇವಾರಿ ಮಾಹಿತಿಯನ್ನು ಕೇಂದ್ರದಲ್ಲಿ ಪಡೆಯಬಹುದು. ಕಸ ವಿಲೇವಾರಿ ವಾಹನಗಳನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್‌ ಮಾಡಲಾಗುವುದು. ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ತಡೆಯಲು 20 ಸ್ಥಳಗಳನ್ನು (ಬ್ಲಾಕ್‌ ಸ್ಪಾಟ್‌) ಗುರುತಿಸಲಾಗಿದ್ದು, ಆ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಲಿ ತ್ಯಾಜ್ಯ ಹಾಕುವವರ ವಿರುದ್ಧ ಕ್ರಮ ವಹಿಸಲಾಗುವುದು.

ಸ್ಮಾರ್ಟ್ ಕಂಬ: ಮಾಲಿನ್ಯದ ಸ್ಥಿತಿಗತಿ ಹಾಗೂ ಹವಾಮಾನದ ಮಾಹಿತಿ ಪಡೆಯಲು ಸ್ಮಾರ್ಟ್‌ ಕಂಬಗಳನ್ನು ಹಾಕಲಾಗಿದೆ. ಮಹಿಳೆಯರ ಸುರಕ್ಷತೆಯ ಹಿತದೃಷ್ಟಿಯಿಂದ 3 ಸಿಸಿಟಿವಿ ಕ್ಯಾಮೆರಾಗಳನ್ನು ಒಳಗೊಂಡ ಈ ಕಂಬಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ತೊಂದರೆಯಲ್ಲಿರುವ ಸಾರ್ವಜನಿಕರು ಈ ಪ್ಯಾನಿಕ್ ಬಟನ್ ಒತ್ತುವ ಮೂಲಕ ರಕ್ಷಣೆ ಪಡೆಯಬಹುದು. ಸಂಬಂಧಿಸಿದ ಇಲಾಖೆಯವರಿಂದ ಸ್ಪಂದನೆಗೆ ಮಾಹಿತಿ ರವಾನೆಯಾಗಲಿದೆ. ಸಾರ್ವಜನಿಕರಿಗೆ ವೈ-ಫೈ ವ್ಯವಸ್ಥೆಯೂ ಲಭ್ಯವಿದೆ.

ಸುಗಮ ಸಂಚಾರ ನಿರ್ವಹಣೆಗಾಗಿ, ವೆಹಿಕಲ್ ಡಿಟೆಕ್ಟಿವ್ ಅಳವಡಿಸಲಾಗಿದೆ. ಇದನ್ನೂ ಕೇಂದ್ರದಿಂದ ನಿಯಂತ್ರಿಸಬಹುದಾಗಿದೆ.

ಜಾಣ ಸಾರಿಗೆ ವ್ಯವಸ್ಥೆ:ಬಸ್ ನಿಲ್ದಾಣಗಳಲ್ಲಿ ಡಿಸ್‌ಪ್ಲೇ ಬೋರ್ಡ್‌ಗಳ ಮೂಲಕ ಸಾರ್ವಜನಿಕರು ಬಸ್‌ಗಳ ಚಲನವಲನ ಹಾಗೂ ಮಾರ್ಗದ ಮಾಹಿತಿ ಪಡೆಯಬಹುದು. ಸಿಟಿಜನ್ ಆ್ಯಪ್‌ ಮೂಲಕವೂ ಬಸ್‌ಗಳ ಮಾರ್ಗ ಮತ್ತು ಸಮಯದ ವಿವರ ತಿಳಿದುಕೊಳ್ಳಬಹುದು.

ಕುಡಿಯುವ ನೀರಿನ ಮೂಲ, ಲಭ್ಯತೆ ಹಾಗೂ ಗುಣಮಟ್ಟ ಕಂಡುಕೊಳ್ಳಬಹುದಾಗಿದೆ. ಪೋಲಾಗುತ್ತಿದ್ದಲ್ಲಿ ಕ್ರಮ ವಹಿಸಲಾಗುವುದು. ರಸ್ತೆ ಅಪಘಾತ, ಅಗ್ನಿ ಅವಘಡಗಳ ಸಂದರ್ಭದಲ್ಲಿ ಸಿಟಿಜನ್ ಆ್ಯಪ್‌ ಮೂಲಕ ಮಾಹಿತಿ ನೀಡಿದಲ್ಲಿ ಸ್ಥಳಕ್ಕೆ ಶೀಘ್ರ ಅಂಬ್ಯುಲೆನ್ಸ್, ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಗುವುದು. ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು, ಔಷಧ ಅಂಗಡಿಗಳು ಹಾಗೂ ಪ್ರಮುಖ ಕೆರೆಗಳು, ಉದ್ಯಾನಗಳು ಹಾಗೂ ಇತರ ಮಾಹಿತಿಗಳನ್ನು ಆ್ಯಪ್‌ನಲ್ಲಿ ಪಡೆಯಬಹುದು.

ಪ್ರಮುಖ ಸ್ಥಳಗಳಲ್ಲಿ ಸಂಶಯಾಸ್ಪದವಾಗಿ ಓಡಾಡುವವರು, ಜನದಟ್ಟಣೆಯ ಚಿತ್ರಣ, ಕಸ ಬಿಸಾಡುವವರು ಹಾಗೂ ಸಂಚಾರ ಉಲ್ಲಂಘನೆ ಮಾಡುವವರನ್ನು ಸುಲಭವಾಗಿ ಗುರುತಿಸಲು ವಿಡಿಯೊ ಅನಾಲಿಸ್ಟಿಕ್ ವ್ಯವಸ್ಥೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT