ಬೆಳಗಾವಿ: ‘ರೆಡಿಯಾಲಾಜಿ ತಂತ್ರಜ್ಞಾನವು ಶತಮಾನಕ್ಕೂ ಹಳೆಯದು. ರೋಗ ಪತ್ತೆ ವಿಧಾನವು ಅತ್ಯಂತ ಸರಳವಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ವ್ಯಾಪಕವಾದ ಆರೋಗ್ಯ ಸೇವೆಗೆ ಸಹಕಾರಿಯಾಗಿದೆ’ ಎಂದು ಕಾಹೇರ್ ಉಪಕುಲಪತಿ ಡಾ.ನಿತಿನ ಗಂಗಾನೆ ಹೇಳಿದರು.
ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ರೆಡಿಯಾಲಾಜಿ ವಿಭಾಗವು ಬುಧವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ರೆಡಿಯಾಲಾಜಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಅನೇಕ ಸಂದರ್ಭಗಳಲ್ಲಿ ಶೀಘ್ರ ಮತ್ತು ಪರಿಣಾಮಕಾರಿಯಾದ ಚಿಕಿತ್ಸೆ ನೀಡಲು ರೆಡಿಯೊ ತರಂಗಾಂತರ ಸಹಾಯಕ್ಕೆ ಬರುತ್ತಿದೆ. ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗೂ ಆರೋಗ್ಯ ಸೇವೆಗಳು ಕಟ್ಟಕಡೆಯ ವ್ಯಕ್ತಿಗೂ ಲಭಿಸುವಂತಾಗಿದೆ’ ಎಂದರು.
‘ಆರೋಗ್ಯ ಕ್ಷೇತ್ರವೂ ಅನೇಕ ಆವಿಷ್ಕಾರಗಳೊಂದಿಗೆ ಜನಸೇವೆಗೆ ಲಭ್ಯವಾಗುತ್ತಿದೆ. ಈ ಮೊದಲು ಅನೇಕ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಸಂಪೂರ್ಣ ಭಾಗವನ್ನು ಗಾಯಗೊಳಿಸಬೇಕಾಗುತ್ತಿತ್ತು. ಆದರೆ ರೋಗಪತ್ತೆ ವಿಧಾನದಿಂದ ಇಂದು ಅದೇ ಶಸ್ತ್ರಚಿಕಿತ್ಸೆ ನೆರವೇರಿಸಲು ಕೇವಲ ಒಂದು ರಂಧ್ರವನ್ನು ಮಾಡಲಾಗುತ್ತದೆ. ಇದು ಸಮಯವನ್ನು ಉಳಿಸುವದರೊಂದಿಗೆ ಶೀಘ್ರ ಗುಣಮುಖ ಮಾಡುವಲ್ಲಿ ಸಹಕಾರಿಯಾಗಿದೆ. ಇಂಟರ್‌ವೆನ್ಶನಲ್ ರೆಡಿಯಾಲಾಜಿ ಕಾರ್ಯವಿಧಾನಗಳು ಅತ್ಯಂತ ಸರಳವಾಗಿದ್ದು, ನರಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ಪರಿಣಾಮಕಾರಿ ಆಗಿದೆ’ ಎಂದರು.
ಬಹಳಷ್ಟು ವೈದ್ಯಕೀಯ ಉಪಕರಣಗಳನ್ನು ಹೊರದೇಶದಿಂದ ಆಮದು ಮಾಡಿಕೊಳ್ಳುವುದರಿಂದ ಚಿಕಿತ್ಸಾ ವೆಚ್ಚ ಹೆಚ್ಚಾಗಿದೆ. ನಮ್ಮಲ್ಲೇ ಸಂಶೋಧನೆಗಳು ನಡೆದರೆ ಈ ಸಮಸ್ಯೆ ನೀಗಿಸಬಹುದುಕರ್ನಲ್ ಡಾ.ಎಂ. ದಯಾನಂದ, ವೈದ್ಯಕೀಯ ನಿರ್ದೇಶಕ, ಕೆಎಲ್‌ಇ ಆಸ್ಪತ್ರೆ
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ಎಂ.ದಯಾನಂದ ಮಾತನಾಡಿ, ‘ಬಹಳಷ್ಟು ವೈದ್ಯಕೀಯ ಉಪಕರಣಗಳನ್ನು ಹೊರದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದು, ಸಂಶೋಧನೆಗಳ ಮೂಲಕ ಅವುಗಳನ್ನು ಭಾರತದಲ್ಲಿಯೇ ತಯಾರಿಸಲು ವೃತ್ತಿನಿರತ ಸಂಶೋಧಕರ ಸಹಕಾರ ನೀಡಬೇಕು. ಅದರಿಂದ ದೇಶದ ಜನರಿಗೆ ಕೈಗೆಟಕುವ ದರದಲ್ಲಿ ರೋಗಪತ್ತೆ ಮತ್ತು ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ’ ಎಂದರು.
ಉಪನ್ಯಾಸಕರಾಗಿ ಶಿವಮೊಗ್ಗದ ಡಾ.ಎಂ.ಪಿ.ಭರತ ಆಗಮಿಸಿದ್ದರು. ಕಾಹೇರ್ ಕುಲಸಚಿವ ಡಾ.ಎಂ.ಎಸ್. ಗಣಾಚಾರಿ, ಜೆ.ಎನ್.ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಸ್. ಮಹಾಂತಶೆಟ್ಟಿ, ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ, ಡಾ.ರಾಜೇಶ ಪವಾರ, ಡಾ.ವಿ.ಎಂ. ಪಟ್ಟಣಶೆಟ್ಟಿ, ಡಾ.ರಾಜೇಂದ್ರ ಮಾಳಿ, ಡಾ.ಪ್ರದೀಪ ಪಾಟೀಲ, ಡಾ.ಅಶ್ವಿನ ಪಾಟೀಲ, ಡಾ.ಪೂಜಾ ಕವಟಗಿಮಠ, ಡಾ.ನವೀನ ಮೂಲಿಮನಿ, ಡಾ.ಅಭಿನಂದನ್ ರೂಗೆ, ಡಾ.ಪ್ರದೀಪ ಗೌಡರ, ಡಾ.ಅಭಿಮಾನ ಬಾಳೋಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.