ಸೋಮವಾರ, ಡಿಸೆಂಬರ್ 9, 2019
17 °C
30 ಹಾಗೂ 31ರಂದು ಆಯೋಜನೆ

‘ಐಪಿಎಲ್‌ ಫ್ಯಾನ್’ ಕಾರ್ಯಕ್ರಮ: ಕ್ರಿಕೆಟ್‌ ಪಂದ್ಯ ದೊಡ್ಡ ಪರದೆಯಲ್ಲಿ ವೀಕ್ಷಿಸಿ

Published:
Updated:

ಬೆಳಗಾವಿ: ‘ಐಪಿಎಲ್‌ ಕ್ರಿಕೆಟ್‌ ಅಭಿಮಾನಿಗಳಿಗಾಗಿ ಇಲ್ಲಿನ ಜಿಮ್ಖಾನಾ ಮೈದಾನದಲ್ಲಿ ಮಾರ್ಚ್‌ 30 ಹಾಗೂ 31ರಂದು ಸಂಜೆ 6ರಿಂದ ‘ಫ್ಯಾನ್‌ ಪಾರ್ಕ್‌’ ಕಾರ್ಯಕ್ರಮ ಆಯೋಜಿಸಲಾಗಿದ್ದು, 18x32 ಅಡಿ ಅಳತೆಯ ದೊಡ್ಡ ಎಲ್‌ಇಡಿ ಪರದೆಯಲ್ಲಿ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ’ ಎಂದು ಬಿಸಿಸಿಐ ಐಪಿಎಲ್‌ ಫ್ಯಾನ್‌ ಪಾರ್ಕ್‌ ಯೋಜನೆಯ ಮುಖ್ಯಸ್ಥ ಅಮಿತ್‌ ಸಿದ್ದೇಶ್ವರ ತಿಳಿಸಿದರು.

‘ಒಟ್ಟು 4 ಪಂದ್ಯಗಳ ನೇರಪ್ರಸಾರ ಮಾಡಲಾಗುವುದು. ಹಲವು ಮನರಂಜನೆ ಕಾರ್ಯಕ್ರಮ ಮತ್ತು ಸ್ಪರ್ಧೆಗಳನ್ನು ನಡೆಸಲಾಗುವುದು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮಾರ್ಚ್‌ 30ರಂದು ನಡೆಯುವ ಕಿಂಗ್ಸ್‌ ಇಲವೆನ್‌–ಮುಂಬೈ ಇಂಡಿಯನ್ಸ್‌, ದೆಲ್ಲಿ ಡೇರ್‌ಡೆವಿಲ್ಸ್‌– ಕೋಲ್ತತ್ತಾ ನೈಟ್ ರೈಡರ್ಸ್‌, 31ರಂದು ನಡೆಯುವ ಸನ್‌ ರೈಸರ್ಸ್‌ ಹೈದರಾಬಾದ್– ಆರ್‌ಸಿಬಿ, ಚೆನ್ನೈ ಸೂಪರ್‌ಕಿಂಗ್ಸ್‌– ರಾಜಸ್ಥಾನ ರಾಯಲ್ಸ್‌ ತಂಡಗಳ ಪ‍ಂದ್ಯವನ್ನು ಸಾರ್ವಜನಿಕರು ನೋಡಬಹುದು. ಇಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಮುಕ್ತ ಮತ್ತು ಉಚಿತ ಪ್ರವೇಶವಿದೆ. ಸಂಗೀತ, ನೃತ್ಯ ಪ್ರದರ್ಶನವೂ ಇರಲಿದೆ. ಕ್ರೀಡಾಂಗಣದಲ್ಲಿ ನೇರವಾಗಿ ಪಂದ್ಯ ನೋಡುತ್ತಿದ್ದೇವೆ ಎನ್ನುವಂಥ ಅನುಭವ ಬರುವಂತೆ ನೈಜತೆ ಕಟ್ಟಿಕೊಡಲಾಗುವುದು’ ಎಂದು ಹೇಳಿದರು.

ನಗರದ ಬಗ್ಗೆ ಮಾಹಿತಿ

‘ಐಪಿಎಲ್‌ ಪಂದ್ಯದ ನೇರಪ್ರಸಾರದ ವೇಳೆ, ಬೆಳಗಾವಿಯಲ್ಲಿ ಫ್ಯಾನ್‌ ಪಾರ್ಕ್‌ ಕಾರ್ಯಕ್ರಮ ಆಯೋಜಿಸಿರುವ ಕುರಿತು ಕಮೆಂಟರಿ ಮಾಡುವವರು ಪ್ರಕಟಿಸುತ್ತಾರೆ. ಅಲ್ಲದೇ, ನಗರದ ವಿಶೇಷಗಳ ಕುರಿತು ಕೂಡ ‌ತಿಳಿಸಲಾಗುತ್ತದೆ. ಕ್ರಿಕೆಟ್‌ ಪ್ರೋತ್ಸಾಹಿಸಬೇಕು ಎನ್ನುವ ಉದ್ದೇಶದಿಂದ ನಗರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದರು.

‘ಕ್ರಿಕೆಟ್‌ ವೀಕ್ಷಿಸಲು ಬರುವ ಪ್ರತಿಯೊಬ್ಬರಿಗೂ ಕೂಪನ್‌ ನೀಡಲಾಗುವುದು. ಒಬ್ಬ ಅದೃಷ್ಟಶಾಲಿ ಪ್ರೇಕ್ಷಕರನ್ನು ‘ಲಕ್ಕಿಡಿಪ್‌’ ಮೂಲಕ ಆಯ್ಕೆ ಮಾಡಿ, ಅವರಿಗೆ ವಿವೊ ಸ್ಮಾರ್ಟ್‌ಪೋನ್‌ ನೀಡಲಾಗುವುದು. ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಐಪಿಎಲ್‌ ಜರ್ಸಿಗಳನ್ನು ಕೊಡಲಾಗುವುದು‌’ ಎಂದು ವಿವರಿಸಿದರು.

‘5 ಸಾವಿರಕ್ಕೂ ಹೆಚ್ಚಿನ ಮಂದಿ ಕುಳಿತು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಫುಡ್‌ ಸ್ಟಾಲ್‌ ಕೂಡ ಇರಲಿದೆ. ವೃದ್ಧರು, ಅಶಕ್ತರು ಹಾಗೂ ಮಕ್ಕಳಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಇರುತ್ತದೆ. ಈ ಆವೃತ್ತಿಯಲ್ಲಿ ದೇಶದ 21 ರಾಜ್ಯಗಳ 36 ನಗರಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

ಅಂತರರಾಷ್ಟ್ರೀಯ ಪಂದ್ಯ

ಕೆಎಸ್‌ಸಿಎ ಧಾರವಾಡ ವಲಯದ ಸದಸ್ಯ ಅವಿನಾಶ ಪೋತದಾರ ಮಾತನಾಡಿ, ‘ಕಳೆದ ಆವೃತ್ತಿಯಲ್ಲಿ 4ಸಾವಿರದಿಂದ 5ಸಾವಿರ ಮಂದಿ ಪಾಲ್ಗೊಂಡಿದ್ದರು. ಕ್ರಿಕೆಟ್ ಪಂದ್ಯ ನೋಡಲು ಬೆಂಗಳೂರಿಗೆ ಹೋಗುವುದಕ್ಕೆ ಆಗದವರಿಗಾಗಿ, ಸ್ಟೇಡಿಯಂ ಅನ್ನೇ ಅವರ ಬಳಿಗೆ ತರುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ’ ಎಂದು ಹೇಳಿದರು.

‘ಕಣಬರಗಿ ರಸ್ತೆಯಲ್ಲಿರುವ ಕೆಎಸ್‌ಸಿಎ ಮೈದಾನಕ್ಕೆ ಹೊನಲು ಬೆಳಕಿನ ವ್ಯವಸ್ಥೆ ಮಾಡುವಂತೆ, ಕೆಪಿಎಲ್ ‍ಪಂದ್ಯಗಳನ್ನು ನೀಡುವಂತೆ ಕೆಎಸ್‌ಸಿಎಯನ್ನು ಕೋರಲಾಗಿದೆ. ಕ್ರೀಡಾ ಕೇಂದ್ರ ಬಹುತೇಕ ಸಿದ್ಧವಾಗಿದೆ. ಭಾರತ ‘ಎ’ ಹಾಗೂ ಶ್ರೀಲಂಕಾ ‘ಎ’ ತಂಡಗಳ ನಡುವಿನ ಅಂತರರಾಷ್ಟ್ರೀಯ ಪಂದ್ಯ ನಗರದಲ್ಲಿ ದೊರೆಯುವ ಸಾಧ್ಯತೆ ಇದೆ’ ಎಂದು ವಿಶ್ವಾಸ ವ್ಯಕ್ತ‍ಪಡಿಸಿದರು.

‘ಈ ನಗರದಲ್ಲಿ 5000ದಿಂದ 8000 ಮಂದಿ ಆಗಮಿಸಬಹುದೆಂದು ನಿರೀಕ್ಷಿಸಲಾಗುತ್ತಿದೆ. ಇದಕ್ಕೆ ತಕ್ಕಂತೆ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗುವುದು. ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸಲು ಹೋಗಲಾಗಲಿಲ್ಲವೆಂಬ ಅಭಿಮಾನಿಗಳ ಕೊರಗು ನೀಗಿಸುವುದಕ್ಕಾಗಿ, ಕ್ರೀಡಾಂಗಣವನ್ನೇ ಜನರ ಮುಂದೆ ತರುವಂತಹ ರೀತಿಯ ಕಾರ್ಯಕ್ರಮವಿದು’ ಎಂದರು.

ಜಿಮ್ಖಾನಾ ಕಾರ್ಯದರ್ಶಿ ಪ್ರಸನ್ನ ಸುಂಟನಕರ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು