ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹ ಫಲಾನುಭವಿಗಳಿಗೆ ನೆರೆ ಪರಿಹಾರ

ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಸದಸ್ಯರ ಆರೋಪ: ಪರಿಶೀಲಿಸಲು ಸೂಚನೆ
Last Updated 18 ಅಕ್ಟೋಬರ್ 2019, 14:34 IST
ಅಕ್ಷರ ಗಾತ್ರ

ಬೆಳಗಾವಿ: ‘ನೆರೆಯಿಂದ ಮನೆ ಕಳೆದುಕೊಂಡಿರುವ ಅರ್ಹ ಫಲಾನುಭವಿಗಳ ಖಾತೆಗೆ ಪರಿಹಾರ ಹಣ ಜಮೆಯಾಗಬೇಕು.ತಾಂತ್ರಿಕ ದೋಷದಿಂದಅನರ್ಹರಿಗೆ ಪರಿಹಾರ ಜಮೆಯಾಗಿದ್ದರೆ ಹಿಂಪಡೆಯಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿ ಶುಕ್ರವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರ ಆರೋಪಕ್ಕೆ ಅವರು ಮೇಲಿನಂತೆ ಪ್ರತಿಕ್ರಿಯೆ ನೀಡಿದರು.

‘ನಿರಾಶ್ರಿತರಿಗೆ ಪರಿಹಾರ ಸಿಗುತ್ತಿಲ್ಲ. ಸಂತ್ರಸ್ತರ ಪಟ್ಟಿಯಲ್ಲಿ ರಾಜಕೀಯ ನಾಯಕರ ಹೆಸರುಗಳೇ ಇವೆ. ಈ ಕುರಿತು ಮತ್ತೊಮ್ಮೆ ಸರ್ವೇ ನಡೆಸಬೇಕು’ ಎಂದು ಸದಸ್ಯರು ಒತ್ತಾಯಿಸಿದರು. ‘ಅಲ್ಲದೇ ನೆರೆ ಸಂತ್ರಸ್ತರಿಗೆ ದೊರೆಯಬೇಕಾದ ಪರಿಹಾರ ಹಣ ಅನರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಈಗಾಗಲೇ ಕೆಲವರ ಖಾತೆಗೆ ಹಣ ಜಮೆಯಾಗಿದೆ’ ಎಂದು ಸಿದ್ದಪ್ಪ ಮುದುಕಣ್ಣವರ ಪ್ರಸ್ತಾಪಿಸಿದರು. ಅದಕ್ಕೆ ಬಹುತೇಕರು ದನಿಗೂಡಿಸಿದರು.

‘ಎಂಜಿನಿಯರ್‌, ಪಿಡಿಒ, ತಹಶೀಲ್ದಾರ್‌ ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ. ನಿಜವಾದ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಿಕೊಡುವ ಪ್ರಯತ್ನ ಮಾಡುತ್ತಿಲ್ಲ. ಪ್ರವಾಹದಲ್ಲಿ ಬಿದ್ದಿರುವ ಮನೆಗಳನ್ನು ‘ಬಿ’ ಪಟ್ಟಿಗೆ, ಬೀಳದೇ ಇರುವ ಮನೆಗಳನ್ನು ‘ಎ’ ಪಟ್ಟಿಗೆ (ಸಂಪೂರ್ಣ ಹಾನಿ) ಸೇರಿಸಿದ್ದಾರೆ. ಇದಕ್ಕಾಗಿ ಹಣ ಪಡೆದಿದ್ದಾರೆ. ಭ್ರಷ್ಟಾಚಾರ ಎಸಗಿದ್ದಾರೆ. ಆದ್ದರಿಂದ ನ್ಯಾಯ ಸಮ್ಮತವಾಗಿ ಮತ್ತೊಮ್ಮಸರ್ವೇನಡೆಸಬೇಕು’ ಆಗ್ರಹಿಸಿದರು.

ನಿಖರ ಮಾಹಿತಿ ಕೊಡಿ:ಸಿಇಒ ಮಾತನಾಡಿ, ‘ನೆರೆ ಪರಿಹಾರ ಹಂಚಿಕೆಯಲ್ಲಿ ಅನರ್ಹ ಫಲಾನುಭವಿಗಳ ಹೆಸರು ಪಟ್ಟಿಯಲ್ಲಿ ಕಂಡು ಬಂದಿರುವುದನ್ನು ಜಿಲ್ಲಾ ಪಂಚಾಯ್ತಿ ಸದಸ್ಯರು ನಿಖರವಾಗಿ ತಿಳಿಸಬೇಕು. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಅಧಿಕಾರಿಗಳು, ತಾಂತ್ರಿಕ ಕಾರಣದಿಂದ ಅನರ್ಹ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿದ್ದರೆ ಅದನ್ನು ಮರುಪಡೆಯಬೇಕು’ ಎಂದು ಸೂಚಿಸಿದರು.

‘5 ವರ್ಷಗಳ ಹಿಂದೆ ಬಿದ್ದ ಮನೆಗಳನ್ನೂ ‘ಎ’ ಪಟ್ಟಿಯಲ್ಲಿ ಸೇರಿಸಿದ್ದಾರೆ ಮತ್ತು ಪರಿಹಾರ ನೀಡುತ್ತಿದ್ದಾರೆ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಲಾಗುವುದು. ಹಾಗೇನಾದರೂ ನಡೆದಿರುವುದು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಅನುದಾನ ಸಾಲದು:‘ಸಣ್ಣ ಪುಟ್ಟ ಹಾನಿಯಾದ ಮನೆಗಳಿಗೆ ₹ 25 ಸಾವಿರ, ಶೇ. 50ರಷ್ಟು ಹಾನಿಯಾಗಿದ್ದರೆ ₹ 1 ಲಕ್ಷ ಹಾಗೂ ಸಂಪೂರ್ಣ ಹಾನಿಯಾದ ಮನೆಗಳಿಗೆ ₹ 5 ಲಕ್ಷ ನೀಡಲಾಗುತ್ತದೆ. ಅರ್ಹರಿಗೆ ಪರಿಹಾರ ದೊರಕಿಸಲಾಗುವುದು’ ಎಂದು ಹೇಳಿದರು.

‘ಪ್ರತಿ ಕಿ.ಮೀ. ರಸ್ತೆಯ ಗುಂಡಿಗಳನ್ನು ಮುಚ್ಚಲು ₹ 60ಸಾವಿರ ನೀಡಲಾಗುತ್ತಿದೆ. ಅದು ಸಾಕಾಗುವುದಿಲ್ಲ. ಹೆಚ್ಚಿನ ಅನುದಾನ ನೀಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದರು.

ಅಧ್ಯಕ್ಷೆ ಆಶಾ ಐಹೊಳೆ ಮಾತನಾಡಿ, ‘ಬಿಡುಗಡೆಯಾಗಿರುವ ಅನುದಾನದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಲಾಗುವುದು’ ಎಂದು ತಿಳಿಸಿದರು.

ಉಪಾಧ್ಯಕ್ಷ ಅರುಣ ಕಟಾಂಬಳೆ, ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT