ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್‌ ಕೀ ಬಾತ್‌’ ಅಲ್ಲ, ‘ಮಂಕಿ ಬಾತ್‌’’: ಸಿದ್ಧರಾಮಯ್ಯ ವ್ಯಂಗ್ಯ

Last Updated 20 ಏಪ್ರಿಲ್ 2019, 12:18 IST
ಅಕ್ಷರ ಗಾತ್ರ

ಗೋಕಾಕ: ಪ್ರಧಾನಿ ನೇತೃತ್ವದ ಕೇಂದ್ರ ಸರ್ಕಾರ ರೈತ ವಿರೋಧಿ ಸರ್ಕಾರ. ಅದು ಅಂಬಾನಿ, ಅದಾನಿ, ಮಲ್ಯ, ನೀರವ ಮೋದಿ ಅಂಥವರ ಪರವಾಗಿರುವ ಸರ್ಕಾರ. ಇವರಿಂದ ಈ ದೇಶದ ರೈತರ ಹಿತ ರಕ್ಷಣೆ ಸಾಧ್ಯವೇ ? ಎಂದು ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ ಪ್ರಶ್ನಿಸಿದರು.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ಡಾ. ವಿರೂಪಾಕ್ಷ ಸಾಧುನವರ ಪರ ನಗರದಲ್ಲಿ ಶುಕ್ರವಾರ ರಾತ್ರಿ ಪ್ರಚಾರ ಭಾಷಣ ಮಾಡಿದ ಅವರು, ‘ಕೇಂದ್ರದ ಬಿಜೆಪಿ ಸರ್ಕಾರ ಎಂದರೆ ಕರ್ನಾಟಕದ ಪಾಲಿಗೆ ರೈತರ ವಿರೋಧಿ ಸರ್ಕಾರ’ ಎಂದು ಮೂದಲಿಸಿದರು.

‘56 ಇಂಚಿನ ಎದೆ ಎಂದು ಜಂಭ ಕೊಚ್ಚಿಕೊಳ್ಳುವ ಪ್ರಧಾನಿ ಮೋದಿ ಏನು ಕೈಯಲ್ಲಿ ಗನ್‌ ಹಿಡಿದು ಪಾಕಿಸ್ತಾನದ ಮೇಲೆ ಏರ್‌ ಸ್ಟ್ರೈಕ್‌’ ಮಾಡಿದರೇ ? ಆ ಖ್ಯಾತಿ ಸೈನಿಕರಿಗೆ ಸಲ್ಲಬೇಕು. ಅವರಿಗೊಂದು ಸಲಾಮ್‌. ಇದರಲ್ಲಿ ಮೋದಿಯವರ ಸಾಧನೆ ಏನಿದೆ ?’ ಎಂದು ವ್ಯಂಗ್ಯವಾಡಿದರು.

ಸ್ವಾತಂತ್ರ್ಯಾ ನಂತರದ ಭಾರತದ ಇತಿಹಾಸವನ್ನು ಗಮನಿಸಿದರೆ ಮೋದಿ ಹೇಳಿಕೊಳ್ಳುತ್ತಿರುವ ಏರ್‌ ಸ್ಟ್ರೈಕ್‌ ಇದು ಮೊದಲನೆಯದೇನೂ ಅಲ್ಲ ಇದಕ್ಕೂ ಮೊದಲು 14 ಬಾರಿ ಇಂಥ ಯತ್ನಗಳು ಭಾರತದಿಂದ ನಡೆದಿವೆ ಎಂದು ಅಂಕಿ–ಅಂಶಗಳನ್ನು ಸಭೆಗೆ ನೀಡಿದರು.

ಪ್ರಧಾನಿ ಮೋದಿ ಅವರು ಬೂಟಾಟಿಕೆ ಮಾತುಗಳನ್ನಾಡುವ ‘ಮನ್‌ ಕೀ ಬಾತ್‌’ ಅಲ್ಲ ಅದು, ‘ಮಂಕಿ ಬಾತ್‌’ ಎಂದು ವ್ಯಂಗ್ಯವಾಡಿದರು.

ರಾಜ್ಯ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಸಿದ್ಧರಾಮಯ್ಯ, ‘ಜೈಲು ಕಂಡು ಬಂದ ಯಡಿಯೂರಪ್ಪ, ಹಾಲಪ್ಪ, ಕಟ್ಟಾ ಸುಬ್ರಣಿಯಮ್‌ ಇಂಥ ಹತ್ತು–ಹಲವರನ್ನು ಬೆನ್ನಿಗೆ ಕಟ್ಟಿಕೊಂಡು ಈ ರಾಜ್ಯವನ್ನು ಇವರು ಉದ್ಧರಿಸಲು ಸಾಧ್ಯವೇ ?’ ಎಂದರು.

‘ಬಿಜೆಪಿಯ ಈಶ್ವರಪ್ಪ ಎಂಬ ಉದ್ದನೆಯ ನಾಲಿಗೆಯ ವ್ಯಕ್ತಿ ಆ ಪಕ್ಷದಲ್ಲಿದ್ದುಕೊಂಡು ಹಿಂದುಳಿದವರ ಏಳ್ಗೆಗೆಗಾಗಿ ಏನನ್ನು ಮಾಡಿದ್ದಾರೆ, ಒಬ್ಬನೇ ಒಬ್ಬ ಕುರುಬ / ಹಾಲುಮತಸ್ಥ ಸಮುದಾಯದವರಿಗೆ ತಮ್ಮ ಪಕ್ಷದ ಟಿಕೆಟ್ ಕೊಡಸಲಾಗಿಲ್ಲ. ಇಂಥ ವ್ಯಕ್ತಿಯಿಂದ ಕೇವಲ ‘ರಾಯಣ್ಣ ಬ್ರಿಗೇಡ್‌’ ಕಟ್ಟಲು ಹೋಗಿ ಕೈ ಸುಟ್ಟುಕೊಂಡಿರುವುದನ್ನು ಬಿಟ್ಟರೆ ಮತ್ತೇನಾಗಲು ಸಾಧ್ಯ’ ಎಂದು ಛೇಡಿಸಿದರು.

‘ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಮೈತ್ರಿ ಧರ್ಮ ಪಾಲನೆಗೆ ಬದ್ಧವಾಗಿದ್ದುಕೊಂಡೂ ತನ್ನ ಪಾಲಿನ 20 ಲೋಕಸಭಾ ಸ್ಥಾನಗಳ ಪೈಕಿ 8 ಸ್ಥಾನಗಳನ್ನು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ನೀಡಿದೆ. ಬಿಜೆಪಿ ಕರ್ನಾಟಕದ 27 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ ಅವರಲ್ಲಿ ಹಿಂದುಳಿದವರಾಗಲೀ ಅಲ್ಪಸಂಖ್ಯಾತರಾಗಲೀ ಒಬ್ಬರೂ ಇಲ್ಲ’ ಎಂದು ಸವಾಲು ಹಾಕಿದರು.

ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ‘ಕಳೆದ ಐದು ವರ್ಷಗಳ ಅವಧಿಯಲ್ಲಿ ಈ ದೇಶ ಮಹಾನ್‌ ಸುಳ್ಳಗಾರ ನರೇಂದ್ರ ಮೋದಿ ಅವರ ಕೈಯಲ್ಲಿ ಸಿಲುಕಿ ಅನೇಕ ಅನಾಹುತಗಳನ್ನು ಎದುರಿಸಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು’ ಎಂದು ಕೋರಿದರು.

ಉದ್ಯಮಿ ಲಖನ್‌ ಜಾರಕಿಹೊಳಿ, ಸಿದ್ಲಿಂಗ ದಳವಾಯಿ, ಫಿರೋಜ್‌ ಸೇಠ, ಬಿ.ಬಿ.ಬೆಳಕೂಡ, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ, ಅರವಿಂದ ದಳವಾಯಿ ಮೊದಲಾದ ಮುಖಂಡರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಶ್ಯಾಮ ಘಾಟಗೆ, ವೀರಕುಮಾರ ಪಾಟೀಲ, ರಮೇಶ ಉಟಗಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ರಾಜು ಶೇಠ್‌ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT