ಸೋಮವಾರ, ಮಾರ್ಚ್ 27, 2023
31 °C
ಜಾಗೋ ಹಿಂದೂ ಸಮಾವೇಶ

ಹಿಂದೂ ಪದ ಅಶ್ಲೀಲ ಎಂದವನೇನು ಸನ್ನಿ ಲಿಯೋನಿ ಮಗನಾ?: ಧನಂಜಯ ಭಾಯ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ವಿಧಾನಸಭೆ ಚುನಾವಣೆ ಫಾರ್ಮ್‌ನಲ್ಲಿ ಧರ್ಮವನ್ನು ಹಿಂದೂ ಎಂದು ಬರೆದುಕೊಳ್ಳುತ್ತಾರೆ. ಅದೇ ಹಿಂದೂ ಪದದ ಅರ್ಥ ಅಶ್ಲೀಲ ಎಂದು ನಾಲಿಗೆ ಹರಿಬಿಡುತ್ತಾರೆ. ಇಂಥ ‘ಪಾರ್ನ್‌ಸ್ಟಾರ್‌’ಗಳು ಎಲ್ಲಿಂದ ಬರುತ್ತಾರೆ. ಅವನೇನು ಸನ್ನಿ ಲಿಯೋನಿ ಮಗನಾ? ಬೇರೆಯವರ ಮಗನಾ?’ ಎಂದು ಹಿಂದೂ ರಾಷ್ಟ್ರ ಸೇನಾ ಅಧ್ಯಕ್ಷ ಧನಂಜಯ ಭಾಯ್ ದೇಸಾಯಿ ಕಿಡಿ ಕಾರಿದರು.

ಬೆಳಗಾವಿ ತಾಲ್ಲೂಕಿನ ಯಮಕನಮರಡಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಕಡೋಲಿಯಲ್ಲಿ ಶನಿವಾರ ರಾತ್ರಿ, ಹಿಂದೂ ರಾಷ್ಟ್ರ ಸೇನಾ ಆಯೋಜಿಸಿದ್ದ ಜಾಗೋ ಹಿಂದೂ ಸಮಾವೇಶದಲ್ಲಿ ಅವರು ವಾಗ್ದಾಳಿ ಮಾಡಿದರು.

‘ಧರ್ಮವೆಂದರೆ ತಾಯಿಯ ಸಮಾನ. ತಾವು ಹುಟ್ಟಿದ ತಾಯಿ ಗರ್ಭವನ್ನೇ ಅಶ್ಲೀಲ ಎಂದು ಹೇಳುವವರು ಇಲ್ಲಿದ್ದಾರೆ.  ಅಶ್ಲೀಲ ಧರ್ಮದಲ್ಲಿ ಹುಟ್ಟಿದ್ದೇನೆ ಎಂದು ಅವರಿಗೇಕೆ ಅನಿಸುತ್ತದೆ? ಇಂಥವರನ್ನು ವಿಧಾನಸಭೆ ಕಳುಹಿಸಿ ತಲೆ ತಗ್ಗಿಸುವ ಕೆಲಸ ಮಾಡುತ್ತಿದ್ದೇವೆ’ ಎಂದರು.

‘ಆ ವ್ಯಕ್ತಿಯ ಹೇಳಿಕೆ ಬಗ್ಗೆ ಸಮಗ್ರ ತನಿಖೆ ಆಗಬೇಕು.  ಅವರೇ ಸವಾಲು ಹಾಕಿದಂತೆ ಕರ್ನಾಟಕ ಸರ್ಕಾರ ಒಂದು ಸಮಿತಿ ರಚಿಸಬೇಕು’ ಎಂದೂ ಆಗ್ರಹಿಸಿದರು.

‘ಹಿಂದೂ ಹಿತದ ಬಗ್ಗೆ ಯಾರೋ ಮಾತನಾಡುವವರು ಮಾತ್ರ ದೇಶ ನಡೆಸಬೇಕು ಎಂದು ಸಂಕಲ್ಪ ಮಾಡಿ. ಗ್ರಾಮ ಪಂಚಾಯಿತಿಯಿಂದ ಹಿಡಿದು ಪ್ರಧಾನಿ ಪಟ್ಟದವರೆಗೂ ಅಂಥವರು ಮಾತ್ರ ಅಧಿಕಾರದಲ್ಲಿರಬೇಕು’ ಎಂದೂ ಹೇಳಿದರು.
‘ರಾಹುಲ್‌ ಗಾಂಧಿ ಮಾಡುತ್ತಿರುವುದು ಭಾರತ ಜೋಡೊ ಯಾತ್ರೆಯಲ್ಲ; ಭಾರತ ಥೋಡೊ (ಒಡೆಯಿರಿ) ಯಾತ್ರೆ. ಭಾರತ ವಿರೋಧಿ ವ್ಯಕ್ತಿತ್ವ ಹೊಂದಿದ ಪಿಎಫ್ಐ ಬೆಂಬಲಿಸುವವರೆಲ್ಲ ರಾಹುಲ್ ಗಾಂಧಿ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ’ ಎಂದೂ ದೂರಿದರು.

ಹುಕ್ಕೇರಿಯ ಕ್ಯಾರಗುಡ್ಡದ ಅಭಿನವ ಮಂಜುನಾಥ ಸ್ವಾಮೀಜಿ, ನಾಥ ಸಂಸ್ಥಾನದ ಯೋಗಿಶ್ರೀ ಬಾಲ ಮಹರಾಜ, ಯಮಕನಮರಡಿ ಕ್ಷೇತ್ರದ ಬಿಜೆಪಿ ಮುಖಂಡರು ವೇದಿಕೆ ಮೇಲಿದ್ದರು.

ಮರಾಠಿ ಮತದಾರರಿಗಾಗಿ ಸಮಾವೇಶ: ಜಾಗೋ ಹಿಂದೂ ಸಮಾವೇಶವನ್ನು ಮರಾಠಿಯಲ್ಲೇ ಆಯೋಜಿಸಲಾಗಿತ್ತು. ಶಾಸಕ ಸತೀಶ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದ ಕಡೋಲಿ ಹಾಗೂ ಕಾಕತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಮರಾಠಿ ಭಾಷಿಕ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ.

ಸತೀಶ ಜಾರಕಿಹೊಳಿ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದ ಮೇಲೂ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಆಕ್ರೋಶ ನಿಂತಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು