ನಿರ್ಲಕ್ಷ್ಯಕ್ಕೀಡಾದ ಜಲನಿರ್ಮಲ ಘಟಕಗಳು!

7
ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಅವಳಿ ಗ್ರಾಮಗಳ ನಿವಾಸಿಗರು

ನಿರ್ಲಕ್ಷ್ಯಕ್ಕೀಡಾದ ಜಲನಿರ್ಮಲ ಘಟಕಗಳು!

Published:
Updated:
ಘಟಪ್ರಭಾ ಸಮೀಪದ ಗುಬ್ಬಲ ಗುಡ್ಡ ಹಿಂಭಾಗದಲ್ಲಿ ಶಿಥಿಲಾವಸ್ಥೆಗೆ ತಲುಪಿರುವ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯ್ತಿ ಶುದ್ಧ ಕುಡಿಯುವ ನೀರಿನ ಘಟಕ. 

ಘಟಪ್ರಭಾ: ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕೆಂಬ ಉದ್ದೇಶದೊಂದಿಗೆ ಮಲ್ಲಾಪೂರ ಪಿ.ಜಿ ಹಾಗೂ ಧುಪದಾಳ ಅವಳಿ ಗ್ರಾಮಗಳಲ್ಲಿ ನಿರ್ಮಿಸಲಾದ ಜಲ ನಿರ್ಮಲ ಘಟಕಗಳಲ್ಲಿ ನೈರ್ಮಲ್ಯವೇ ಇಲ್ಲದಂತಾಗಿ ಜನರು ಕಲುಷಿತ ನೀರನ್ನೇ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಶುದ್ಧ ನೀರು ಪೂರೈಸುವ ಘಟಕಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿ ನಿರ್ಲಕ್ಷ್ಯಕ್ಕೊಳಗಾಗಿವೆ.

ಮಲ್ಲಾಪುರ ಪಿ.ಜಿ ಪಟ್ಟಣ ಪಂಚಾಯ್ತಿಯು ಗ್ರಾಮ ಪಂಚಾಯ್ತಿಯಾಗಿದ್ದಾಗ ₹1.65 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದಾಗಿ ಈ ಘಟಕದ ಕಾರ್ಯ ಸ್ಥಗಿತಗೊಂಡಿದೆ. ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದರೂ ಅಭಿವೃದ್ಧಿ ಕಾರ್ಯಗಳಲ್ಲಿ ಶೂನ್ಯ. ಹೀಗಾಗಿ ಜನ ಕಲುಷಿತ ನೀರನ್ನೇ ಕುಡಿಯುವ ಪರಿಸ್ಥಿತಿ ಇಲ್ಲಿ ಎದುರಾಗಿದೆ. ಸಮರ್ಪಕ ನಿರ್ವಹಣೆ ಮಾಡಬೇಕಾದವರು ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂಬುದು ಜನರ ಆರೋಪವಾಗಿದೆ.

ಕೆಲ ವರ್ಷಗಳ ಹಿಂದೆ ಧುಪದಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲು ₹ 1.25 ಕೋಟಿ ವೆಚ್ಚದಲ್ಲಿ ಜಲ ನಿರ್ಮಲ ಘಟಕ ಸ್ಥಾಪಿಸಲಾಗಿತ್ತು. ಅದು ಕೂಡ ಸಮರ್ಪಕ ನಿರ್ವಹಣೆ ಇಲ್ಲದೆ ನಿರ್ಲಕ್ಷ್ಯಕ್ಕೊಳಗಾಗಿದೆ. ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಕೋಟಿಗಟ್ಟಲೆ ಹಣ ವೆಚ್ಚ ಮಾಡಿ ಶುದ್ಧ ಕುಡಿಯುವ ನೀರು ಪೂರೈಸುವ ದೃಷ್ಟಿಯಿಂದ ಘಟಕಗಳನ್ನು ನಿರ್ಮಿಸಿದರೂ ಸಮರ್ಪಕ ನಿರ್ವಹಣೆ ಇಲ್ಲದೆ ಈ ಎರಡೂ ಘಟಕಗಳು ಈಗ ಸಂಪೂರ್ಣ ಹಾಳಾಗಿವೆ ಎಂದು ಜನ ಆರೋಪಿಸುತ್ತಿದ್ದಾರೆ.

ಧುಪದಾಳ ಗ್ರಾಮದ ಚರ್ಚ್‌ ಬಳಿ ಹಾಗೂ ಮಲ್ಲಾಪೂರ ಪಿ.ಜಿಯ ಗುಬ್ಬಲಗುಡ್ಡದ ಹಿಂದೆ ಜಲಶುದ್ಧೀಕರಣಕ್ಕಾಗಿ ನಿರ್ಮಿಸಿದ ಬೃಹತ್ ಆಕಾರದ ತೊಟ್ಟಿಗಳಲ್ಲಿ ಕಸಕಡ್ಡಿ ತುಂಬಿ ಗಿಡಗಳು ಬೆಳೆದಿವೆ. ಅಲ್ಲದೇ ಪಾಚಿ ಬೆಳೆದಿದೆ. ಇದರ ಬಗ್ಗೆ ಅಧಿಕಾರಿಗಳು ಲಕ್ಷ್ಯ ವಹಿಸುತ್ತಿಲ್ಲ. ಈ ಕುರಿತು ಅನೇಕ ಬಾರಿ ಸಾರ್ವಜನಿಕರು ಮೌಖಿಕವಾಗಿ ಅಧಿಕಾರಿಗಳಿಗೆ ತಿಳಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂಬ ದೂರು ಜನರದ್ದು.

ಧುಪದಾಳ ಗ್ರಾಮ ಪಂಚಾಯ್ತಿಯ ಶುದ್ಧ ಕುಡಿಯುವ ಜಲನಿರ್ಮಲ ಘಟಕದ ಟ್ಯಾಂಕ್ ಒಡೆದು ನಿರಂತರ ನೀರು ಪೋಲಾಗುತ್ತಿದೆ. ಘಟಪ್ರಭಾ ನದಿಯಿಂದ ನೇರವಾಗಿ ಗ್ರಾಮ ಹಾಗೂ ಪಟ್ಟಣಕ್ಕೆ  ನೀರು ಸರಬರಾಜು ಮಾಡಲಾಗುತ್ತಿದೆ. ಸದ್ಯ ಮಳೆಗಾಲ ಆರಂಭವಾಗಿದ್ದರಿಂದ ಕೆಂಪು ನೀರು ಗಬ್ಬು ವಾಸನೆಯಿಂದ ಕೂಡಿದ್ದು, ಸಂಪೂರ್ಣ ಕಲುಷಿತವಾಗಿದೆ. ಇದೇ ನೀರನ್ನು ನೇರವಾಗಿ ಮನೆ ಮನೆಗಳಿಗೆ ಪೂರೈಸಲಾಗುತ್ತಿದ್ದು, ಸಮಸ್ಯೆ ಗಂಭೀರ ರೂಪ ತಾಳಿದ್ದರಿಂದ ಅವಳಿ ಗ್ರಾಮಗಳ ಜನರು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದಾರೆ.

ಧುಪದಾಳ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಜಲ ನಿರ್ಮಲ ಘಟಕದ ಕಾರ್ಯ ಸ್ಥಗಿತಗೊಂಡ ಬಗ್ಗೆ ತಿಳಿದು ಬಂದಿದೆ. ಧ್ಯಕ್ಷರು ಹಾಗೂ ಸದಸ್ಯರ ಸಭೆ ಕರೆದು ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಬಗ್ಗೆ ಅತೀ ಶೀಘ್ರದಲ್ಲಿ ಕ್ರಮಕೊಳ್ಳಲಾಗುವುದು ಎಂದು ಧುಪದಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಬಿ ಸುಣಗಾರ ಹೇಳಿದರು.

ಮಲ್ಲಾಪೂರ ಪಿ.ಜಿ ಪಟ್ಟಣದ ಜಲ ನಿರ್ಮಲ ಘಟಕ ಚಿಕ್ಕದಾಗಿದ್ದು, ಪಟ್ಟಣದ ಜನಸಂಖ್ಯೆಗನುಗುಣವಾಗಿ ಕುಡಿಯುವ ನೀರನ್ನು ಸರಬರಾಜು ಮಾಡುವ ಬಗ್ಗೆ ಶೀಘ್ರದಲ್ಲಿ ಕ್ರಮಕೊಳ್ಳಲಾಗುವುದು
- ಕೆ.ಬಿ.ಪಾಟೀಲ, ಮುಖ್ಯಾಧಿಕಾರಿಗಳು ಮಲ್ಲಾಪುರ ಪಿ.ಜಿ ಪಟ್ಟಣ ಪಂಚಾಯ್ತಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !