ಜನತಾದರ್ಶನ ಮೊಟಕು

7

ಜನತಾದರ್ಶನ ಮೊಟಕು

Published:
Updated:

ಬೆಳಗಾವಿ: ಗೊಂದಲ‌ ಹಾಗೂ ಗದ್ದಲ ಉಂಟಾಗಿದ್ದರಿಂದ ಜನತಾ ದರ್ಶನವನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮೊಟಕುಗೊಳಿಸಿದರು.

ಸಂಜೆ 4.30ರಿಂದ ಆರಂಭವಾದ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು, ರಾತ್ರಿ 8.50ರವರೆಗೂ ನಡೆಸಿದರು. ಜನರು ತಮಗೆ ಮನವಿ  ಸಲ್ಲಿಸಲು ಅವಕಾಶ ಸಿಗುವುದಿಲ್ಲ ಎಂದು ಭಾವಿಸಿ ಘೋಷಣೆ ಕೂಗಲು ಆರಂಭಿಸಿದರು. ಸಿಎಂ ಮನವಿಗೆ ಅವರು ಸ್ಪಂದಿಸಲಿಲ್ಲ.

‘ಎಲ್ಲರ ಸಮಸ್ಯೆಗಳನ್ನೂ ಅಧಿಕಾರಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪರಿಹಾರ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದ ಸಿಎಂ ಅಲ್ಲಿಂದ ಹೊರಟರು.

ಮಧ್ಯಾಹ್ನ 3ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಸಿಎಂ ತಡವಾಗಿ ಬಂದರು. ಮೊದಲಿಗೆ ಅಂಗವಿಕಲರ ಮನವಿ ಸ್ವೀಕರಿಸಿದರು. ಸಿಎಂ ತಮ್ಮ ಬಳಿಗೆ ಬರಲಿಲ್ಲವೆಂದು ಸೆಂಟ್ರಲ್ ಹಾಲ್‌ನಲ್ಲಿದ್ದವರು ಘೋಷಣೆ ಕೂಗಿದರು. ‘ಬೆಳಿಗ್ಗೆಯೇ ಬಂದಿದ್ದೇವೆ. ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ. ಊಟವೂ ಇಲ್ಲ’ ಎಂದು ಪ್ರತಿಭಟಿಸಿದರು. ಅವರನ್ನು ಸಮಾಧಾನಪಡಿಸಲು ಪೊಲೀಸ್ ಅಧಿಕಾರಿಗಳು ಹರಸಾಹಸ ಪಡಬೇಕಾಯಿತು. ನಂತರ ಸರಬರಾಜು ಮಾಡಲಾದ ಲಸ್ಸಿ ಪಡೆಯಲು ನೂಕುನುಗ್ಗಲು ಉಂಟಾಯಿತು.

ಸಿಎಂ ಸಮ್ಮುಖದಲ್ಲಿ ಪ್ರತ್ಯೇಕ ರಾಜ್ಯದ ಕೂಗು

ಉತ್ತರ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಡಿವೇಶ ಇಟಗಿ ನೇತೃತ್ವದಲ್ಲಿ ಕೆಲವು ಮಂದಿ ಪ್ರತ್ಯೇಕ ರಾಜ್ಯದ ಘೋಷಣೆ ಕೂಗಿದರು. ಇದರಿಂದ ಕೆಂಡಾಮಂಡಲರಾದ ಮುಖ್ಯಮಂತ್ರಿ, ಅವರನ್ನು ಗದರಿದರು.

‘ನಿಮ್ಮಂಥ ಬಹಳ ಜನರನ್ನು ನೋಡಿದ್ದೇನೆ. ಪ್ರತ್ಯೇಕ ರಾಜ್ಯದ ಕೂಗು ಹಾಕಿದರೆ ಎಲ್ಲವೂ ಸರಿ ಹೋಗುತ್ತದೆಯೇ’ ಎಂದು ಕೇಳಿದರು. ಮನವಿ ಸ್ವೀಕರಿಸಿ ಸಮಾಧಾನಪಡಿಸಿದರು.

‘ಈವರೆಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಬೆಳಗಾವಿ ಜಿಲ್ಲೆ ವಿಭಜನೆ ಮಾಡಬೇಕು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು’ ಎಂದು ಕಾರ್ಯಕರ್ತರು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !